ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದಕ್ಕೆ ಕೇಂದ್ರ ಪ್ರವೇಶ..? ಉಭಯ ರಾಜ್ಯಗಳ ಸಿಎಂ ನಡುವೆ ಅಮಿತ್ ಶಾ ಸಭೆ..!
ಗಡಿ ವಿವಾದ ವಿಚಾರದಲ್ಲಿ ಕರ್ನಾಟಕ, ಮಹಾರಾಷ್ಟ್ರ ಸಿಎಂ ಜತೆ ಅಮಿತ್ ಶಾ ಡಿಸೆಂಬರ್ 14 ರಂದು ಸಭೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಕೇಂದ್ರ ಗೃಹ ಸಚಿವರಿಗೆ ಮಹಾರಾಷ್ಟ್ರ ಸಂಸದರು ದೂರು ನೀಡಿದ್ದು, ಈ ವೇಳೆ 14ಕ್ಕೆ ಸಭೆ ಕರೆಯುವೆ ಎಂದು ಅಮಿತ್ ಶಾ ಹೇಳಿದ್ದಾರೆ ಎಂದು ಎನ್‌ಸಿಪಿ ಸಂಸದ ಹೇಳಿದ್ದಾರೆ. ಹಾಗೂ, ಸಭೆ ನಡೆಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ ಎಂದೂ ಸಂಸದರು ಹೇಳಿದ್ದಾರೆ.

ನವದೆಹಲಿ: ಕರ್ನಾಟಕ (Karnataka) ಹಾಗೂ ಮಹಾರಾಷ್ಟ್ರದ (Maharashtra) ನಡುವೆ ಉದ್ಭವಿಸಿರುವ ಗಡಿ ಸಂಘರ್ಷವನ್ನು (Border Row) ಬಗೆಹರಿಸಲು ಡಿಸೆಂಬರ್ 14ರಂದು ಕೇಂದ್ರ ಗೃಹ ಸಚಿವ (Union Home minister) ಅಮಿತ್ ಶಾ (Amit Shah) ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸುವ ಸಾಧ್ಯತೆಯಿದೆ. ಅಮಿತ್ ಶಾ ಅವರನ್ನು ಭೇಟಿ ಮಾಡಿ ಗಡಿ ಸಂಘರ್ಷದ ಬಗ್ಗೆ ದೂರು ನೀಡಿದ ಮಹಾರಾಷ್ಟ್ರದ ಎನ್‌ಸಿಪಿ ಸಂಸದರೊಬ್ಬರು ‘ಅಮಿತ್ ಶಾ ಡಿಸೆಂಬರ್ 14ರಂದು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಲಿದ್ದಾರೆ’ ಎಂದು ಹೇಳಿದ್ದಾರೆ.
ಗಡಿಯಲ್ಲಿ ಮರಾಠಿ ಭಾಷಿಕರ ಮೇಲೆ ಕರ್ನಾಟಕ ದೌರ್ಜನ್ಯ ನಡೆಸುತ್ತಿದೆ, ಕರ್ನಾಟಕದ ಮುಖ್ಯಮಂತ್ರಿಗಳು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಮಹಾರಾಷ್ಟ್ರದ ಶಿವಸೇನೆ (ಉದ್ಧವ್ ಬಣ), ಎನ್‌ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಮಹಾ ವಿಕಾಸ ಅಘಾಡಿ ಸಂಸದರು ಶುಕ್ರವಾರ ಸಚಿವ ಅಮಿತ್ ಶಾ ಅವರ ಬಳಿ ನಿಯೋಗದಲ್ಲಿ ತೆರಳಿ ದೂರಿತ್ತರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಸೇನೆ ಸಂಸದೆ ಪ್ರಿಯಾಂಕ ಚತುರ್ವೇದಿ ಹಾಗೂ ಎನ್‌ಸಿಪಿ ನಾಯಕ ಅಮೋಲ್ ಕೋಲೆ, ‘ಅಮಿತ್ ಶಾ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಡಿಸೆಂಬರ್ 14ರಂದು ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ಮಹಾರಾಷ್ಟ್ರದ ಹಿತ ರಕ್ಷಿಸುವ ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು. ಗುರುವಾರವಷ್ಟೇ ಕರ್ನಾಟಕದ ವಿರುದ್ಧ ಅಮಿತ್ ಶಾ ಅವರಿಗೆ ಮಹಾವಿಕಾಸ ಅಘಾಡಿ ಸಂಸದರು ಲಿಖಿತವಾಗಿಯೂ ದೂರು ಸಲ್ಲಿಸಿದ್ದರು.
ಇದನ್ನು ಓದಿ: ಸರ್ಕಾರ ಘೋಷಣೆಗೆ ಮಾತ್ರ ಸೀಮಿತ: ಬಿಜೆಪಿ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ
ಕೊಲ್ಹಾಪುರದಲ್ಲಿ ನಿಷೇಧಾಜ್ಞೆ
ಕೊಲ್ಹಾಪುರ (ಮಹಾರಾಷ್ಟ್ರ): ಕರ್ನಾಟಕ-ಮಹಾರಾಷ್ಟ್ರ ನಡುವೆ ನಡೆಯುತ್ತಿರುವ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಕೊಲ್ಲಾಪುರದಲ್ಲಿ ಮಹಾರಾಷ್ಟ್ರ ಸರ್ಕಾರ ನಿಷೇಧಾಜ್ಞೆ ಜಾರಿಗೊಳಿಸಿದೆ. ಕೊಲ್ಲಾಪುರ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯಲ್ಲಿ ಮಹಾರಾಷ್ಟ್ರ ಪೊಲೀಸ್ ಕಾಯ್ದೆಯ 37ನೇ ಕಲಂ ಜಾರಿಗೊಳಿಸಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಡಿಸೆಂಬರ್ 9 ರಿಂದ ಡಿಸೆಂಬರ್ 23ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದ್ದು, ಈ ಅವಧಿಯಲ್ಲಿ 5ಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವುದು ನಿಷಿದ್ಧವಾಗಿದೆ. ಮಹಾವಿಕಾಸ್ ಅಘಾಡಿ ಕಾರ್ಯಕರ್ತರು ಗುರುವಾರ ಬೃಹತ್ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ನಿಷೇಧಾಜ್ಞೆ ಜಾರಿಯಾಗಿದೆ.
ಇನ್ನೊಂದೆಡೆ, ಕರ್ನಾಟಕ ಸರ್ಕಾರದ ವಿರುದ್ಧ ಶನಿವಾರ ಮತ್ತೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಮಹಾವಿಕಾಸ್ ಅಘಾಡಿ ತಿಳಿಸಿದೆ. ಆದರೆ ಅದಕ್ಕೆ ಜಿಲ್ಲಾಡಳಿತ ಇನ್ನೂ ಅನುಮತಿ ನೀಡಿಲ್ಲ.
ಇದನ್ನೂ ಓದಿ: ಲೋಕಸಭೆಯಲ್ಲಿ ಪ್ರಸ್ತಾಪವಾದ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ
ನಾನೂ ಅಮಿತ್ ಶಾರನ್ನು ಭೇಟಿ ಆಗುವೆ: ಸಿಎಂ
ಬೆಂಗಳೂರು: ಗಡಿ ವಿಚಾರವಾಗಿ ಮಹಾರಾಷ್ಟ್ರದ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುವುದರಿಂದ ವ್ಯತ್ಯಾಸ ಆಗುವುದಿಲ್ಲ. ಶೀಘ್ರ ನಾನೂ ಅಮಿತ್ ಶಾ ಅವರನ್ನು ಭೇಟಿಯಾಗುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸೋಮವಾರ ಕರ್ನಾಟಕದ ಸಂಸದರು ಅಮಿತ್ ಶಾ ಅವರನ್ನು ಭೇಟಿ ಮಾಡಲು ತಿಳಿಸಿದ್ದೇನೆ. ಗಡಿ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಗಡಿ ಬಗ್ಗೆ ವರಿಷ್ಠರ ಜತೆ ಚರ್ಚಿಸುವೆ
ರಾಜ್ಯದ ಗಡಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ನೆಲ - ಜಲದ ವಿಷಯ ಬಂದಾಗ ರಾಜಿಯಾಗುವ ಮಾತೇ ಇಲ್ಲ. ಈ ಗಡಿ ವಿವಾದದ ಬಗ್ಗೆ ನಾನು ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸುವೆ. ನಮ್ಮ ರಾಜ್ಯದ ಹಿತ ಕಾಪಾಡುವುದು ಮುಖ್ಯ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಇದನ್ನೂ ಓದಿ: ಲೋಕಸಭೆಯಲ್ಲಿ ಬೆಳಗಾವಿ ಗಡಿ ವಿವಾದ, ಬೊಮ್ಮಾಯಿ ಮೇಲೆ ಪ್ರಚೋದನೆ ಆರೋಪ ಹೊರಿಸಿದ ಶಿವಸೇನೆ!