ಬೆಂಗಳೂರು (ಫೆ.14):  ಕೇರಳದಿಂದ ರಾಜ್ಯಕ್ಕೆ ಬರುವ ವಿದ್ಯಾರ್ಥಿಗಳು 72 ಗಂಟೆಯೊಳಗೆ ಆರ್‌ಟಿಪಿಸಿಆರ್‌ ಕೋವಿಡ್‌ ಪರೀಕ್ಷೆ ಮಾಡಿಸಿದ ನೆಗೆಟಿವ್‌ ವರದಿಯನ್ನು ಸಂಬಂಧಿಸಿದ ಕಾಲೇಜು ಅಥವಾ ಸಂಸ್ಥೆಗೆ ನೀಡಬೇಕು. ಒಂದು ವೇಳೆ ಪರೀಕ್ಷೆ ಮಾಡಿಸಿಕೊಂಡು ಬರದಿದ್ದರೆ, ಅವರು 14 ದಿನ ಕ್ವಾರಂಟೈನ್‌ನಲ್ಲಿದ್ದು, ನಂತರ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಿದ ನೆಗೆಟಿವ್‌ ಪ್ರಮಾಣಪತ್ರ ಕಾಲೇಜಿಗೆ ಸಲ್ಲಿಸಬೇಕು. ಯಾರಾದರೂ ನಿಯಮ ಉಲ್ಲಂಘಿಸಿದರೆ ಸಂಬಂಧಪಟ್ಟಸಂಸ್ಥೆಯ ಮುಖ್ಯಸ್ಥರ ಮೇಲೆ ಕಠಿಣ ಕ್ರಮ ಜರುಗಿಸುವುದಾಗಿ ಮಂಜುನಾಥ್‌ ಪ್ರಸಾದ್‌ ಎಚ್ಚರಿಕೆ ನೀಡಿದರು.

ಮಂಜುಶ್ರೀ ನರ್ಸಿಂಗ್‌ ಕಾಲೇಜು ಜ.25ರಿಂದ ಆರಂಭವಾಗಿದೆ. ಈ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವವರು ಬಹುತೇಕ ಕೇರಳ ಮೂಲದವರು.

ಕೇರಳದಿಂದ ಬರುವವರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯ ..

ಮೊದಲು ಪರೀಕ್ಷೆ ನಡೆಸಿದಾಗ ಇಬ್ಬರಲ್ಲಿ ಸೋಂಕು ದೃಢಪಟ್ಟಿತ್ತು. ಹೀಗಾಗಿ ಎಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷೆ ಮಾಡಲಾಯಿತು. ಆಗ 40 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ. ಸೋಂಕು ದೃಢಪಟ್ಟಎಲ್ಲ ವಿದ್ಯಾರ್ಥಿಗಳೂ ‘ಎ-ಸಿಂಪ್ಟಮ್ಯಾಟಿಕ್‌’ ಆಗಿದ್ದಾರೆ. ಈ ವಿದ್ಯಾರ್ಥಿಗಳನ್ನು ಕಾಲೇಜು ಪಕ್ಕದ ಪೇಯಿಂಗ್‌ ಗೆಸ್ಟ್‌ನಲ್ಲಿ (ಪಿಜಿ) ಕ್ವಾರಂಟೈನ್‌ ಮಾಡಲಾಗಿದೆ. ಸೋಂಕು ದೃಢಪಟ್ಟಹಿನ್ನೆಲೆಯಲ್ಲಿ ಸೋಂಕಿತ ವಿದ್ಯಾರ್ಥಿಗಳ ಗಂಟಲು ದ್ರವವನ್ನು ನಿಮ್ಹಾನ್ಸ್‌ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಳುಹಿಸಿ, ಮತ್ತೊಮ್ಮೆ ಪರೀಕ್ಷೆ ಮಾಡಿಸಲಾಗುತ್ತಿದೆ ಎಂದು ವಿವರಿಸಿದರು.

40 ನರ್ಸಿಂಗ್‌ ವಿದ್ಯಾರ್ಥಿಗಳಿಗೆ ಸೋಂಕು ದೃಢ

ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಕೇರಳ ಮೂಲದ 40 ನರ್ಸಿಂಗ್‌ ವಿದ್ಯಾರ್ಥಿಗಳಿಗೆ ಶನಿವಾರ ಕರೋನಾ ಸೋಂಕು ದೃಢಪಟ್ಟಿದೆ. ತನ್ಮೂಲಕ ಮಂಗಳೂರಿನ ನಂತರ ನಗರದಲ್ಲೂ ಕೇರಳದ ನರ್ಸಿಂಗ್‌ ವಿದ್ಯಾರ್ಥಿಗಳಿಂದ ಸೋಂಕು ಉಲ್ಬಣಗೊಳ್ಳುವ ಆತಂಕ ಶುರುವಾಗಿದೆ.

ನಗರದ ಕಾವಲ್‌ ಬೈರಸಂದ್ರದ ಮಂಜುಶ್ರೀ ನರ್ಸಿಂಗ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ 40 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಬಿಬಿಎಂಪಿಯು ನಗರದ ಎಲ್ಲ ನರ್ಸಿಂಗ್‌ ಕಾಲೇಜುಗಳ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಿದೆ.

ಸೋಂಕು ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಶನಿವಾರ ಮಂಜುಶ್ರೀ ನರ್ಸಿಂಗ್‌ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌ ಈ ವಿಷಯ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳದಲ್ಲಿ ಇಂದಿಗೂ ದಿನಕ್ಕೆ ಐದಾರು ಸಾವಿರ ಕೋವಿಡ್‌ ಪ್ರಕರಣ ಪತ್ತೆಯಾಗುತ್ತಿದ್ದು, ಅಲ್ಲಿಂದ ಬರುವವರಿಗೂ ಸೋಂಕಿರುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ, ನಗರದ ಬಹುತೇಕ ನರ್ಸಿಂಗ್‌ ಕಾಲೇಜುಗಳಲ್ಲಿ ಕೇರಳ ಮೂಲದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದರಿಂದ ಎಲ್ಲ ನರ್ಸಿಂಗ್‌ ಕಾಲೇಜುಗಳ ವಿದ್ಯಾರ್ಥಿಗಳಿಗೂ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ರಾಜ್ಯದಲ್ಲಿ ಕಾಲೇಜು ಪುನರಾರಂಭವಾದ ನಂತರ ಕೇರಳದಿಂದ ರಾಜ್ಯದಲ್ಲಿ ವ್ಯಾಸಂಗ ಮಾಡಲು ನೂರಾರು ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಈ ಪೈಕಿ ಮಂಗಳೂರಿನಲ್ಲಿ 200 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಇದೀಗ ಬೆಂಗಳೂರಿಗೂ ಕೇರಳಾತಂಕ ಮೂಡಿದಂತಾಗಿದೆ.

ಈ ವೇಳೆ ವಿಶೇಷ ಆಯುಕ್ತ (ಆರೋಗ್ಯ) ರಾಜೇಂದ್ರ ಚೋಳನ್‌, ಪೂರ್ವ ವಲಯ ಜಂಟಿ ಆಯುಕ್ತೆ ಕೆ.ಆರ್‌.ಪಲ್ಲವಿ, ಪೂರ್ವ ವಲಯ ಆರೋಗ್ಯಾಧಿಕಾರಿ ಸಿದ್ದಪ್ಪಾಜಿ ಸೇರಿದಂತೆ ಮೊದಲಾದ ಅಧಿಕಾರಿಗಳು ಉಪಸ್ಥಿತರಿದ್ದರು.