* ಭಾರೀ ವಿವಾದ ಸೃಷ್ಟಿಸಿದ್ದ ಹಿಜಾಬ್ ವಿವಾದ* ಹಿಜಾಬ್ ವಿವಾದ ಸಂಬಂಧ ಐತಿಹಾಸಿಕ ತೀರ್ಪು ಕೊಟ್ಟ ಕರ್ನಾಟಕ ಹೈಕೋರ್ಟ್‌* ತೀರ್ಪಿನ ಬೆನ್ನಲ್ಲೇ ತೀರ್ಪು ಕೊಟ್ಟ ಜಡ್ಜ್‌ಗಳಿಗೆ ಜೀವ ಬೆದರಿಕೆ* ಜಡ್ಜ್‌ಗಳಿಗೆ ಬೆದರಿಕೆ ಬೆನ್ನಲ್ಲೇ Y ಕ್ಯಾಟಗರಿ ಭದ್ರತೆ

ಬೆಂಗಳೂರು(ಮಾ.20): ಹಿಜಾಬ್ ಪ್ರಕರಣದಲ್ಲಿ ತೀರ್ಪು ನೀಡಿದ ಮೂವರು ನ್ಯಾಯಾಧೀಶರಿಗೆ ವೈ ಕೆಟಗರಿ ಭದ್ರತೆ ನೀಡಲಾಗಿದೆ. ತರಗತಿ ಕೊಠಡಿಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿರುವ ರಾಜ್ಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಕುರಿತು ತೀರ್ಪು ನೀಡಿದ ಕರ್ನಾಟಕ ಹೈಕೋರ್ಟ್‌ನ ಮೂವರು ನ್ಯಾಯಾಧೀಶರು ಸರ್ಕಾರದ ಆದೇಶಕ್ಕೆ ಮಾನ್ಯತೆ ನೀಡಿದ್ದರು. ಅಲ್ಲದೇ ಹಿಜಾಬ್ ಮುಸಲ್ಮಾನರ ಅವಿಭಾಜ್ಯ ಅಂಗ ಅಲ್ಲ ಎಂದೂ ಹೇಳಿದ್ದರು. ಇದಾದ ಬೆನ್ನಲ್ಲೇ ನ್ಯಾಯಮೂರ್ತಿಗಳಿಗೆ ಬೆದರಿಕೆ ಬಂದಿತ್ತು. ಹೀಗಿರುವಾಗಲೇ ಈ ಮೂವರೂ ಜಡ್ಜ್‌ಗಳು ವೈ-ಕೆಟಗರಿ ಭದ್ರತೆಯನ್ನು ಪಡೆಯಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಹೇಳಿದ್ದಾರೆ.

ನ್ಯಾಯಾಧೀಶರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಇಬ್ಬರನ್ನು ಬಂಧಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಹಿಜಾಬ್ ಕುರಿತು ತೀರ್ಪು ನೀಡಿದ ಮೂವರು ನ್ಯಾಯಾಧೀಶರಿಗೆ ವೈ ಕೆಟಗರಿ ಭದ್ರತೆ ನೀಡಲು ನಿರ್ಧರಿಸಿದ್ದೇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಕೆಲವರು ಅವರನ್ನು ಕೊಲ್ಲುವ ಬೆದರಿಕೆ ವಿಚಾರವಾಗಿ ಬಂದಿರುವ ದೂರಿನ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಎಂದೂ ಅವರು ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಒಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟಧ್ವಜ ಆಗಬಹುದು: ಕಲ್ಲಡ್ಕ ಪ್ರಭಾಕರ ಭಟ್

ಮೂವರ ವಿರುದ್ಧ ಪ್ರಕರಣ ದಾಖಲು

ರಾಷ್ಟ್ರ ಮಟ್ಟದಲ್ಲಿ ಚರ್ಚೆ ಹುಟ್ಟು ಹಾಕಿದ್ದ ಹಿಜಾಬ್‌ ಪ್ರಕರಣ ಸಂಬಂಧ ಹೈಕೋರ್ಟ್‌(High Court of Karnataka) ತೀರ್ಪು ನೀಡಿತ್ತು. ಈ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ತಮಿಳುನಾಡು ಮೂಲದ ತೌಹೀದ್‌ ಜಮಾತ್‌ ಸಂಘಟನೆಯ ಮುಖಂಡ ಆರ್‌.ರೆಹ್ಮತ್‌ವುಲ್ಲಾ ಎಂಬುವರು ಮಧುರೈನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹಿಜಾಬ್‌ ಉಲ್ಲೇಖಿಸಿ ಪರೋಕ್ಷವಾಗಿ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಈ ವಿಡಿಯೋ ಆಧಾರಿಸಿ ವಕೀಲ, ಸುಧಾ ಕಟ್ವ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರುತಿಳಿಸಿದ್ದಾರೆ. ಪ್ರಕರಣ ಸಂಬಂಧ ಐಪಿಸಿ ಸೆಕ್ಷನ್‌ 506(ಬೆದರಿಕೆ), 501(1)(ಮಾನಹಾನಿ), 503(ಕ್ರಿಮಿನಲ್‌ ಬೆದರಿಕೆ), 109(ಪ್ರಚೋದನೆ), 504(ಶಾಂತಿ ಭಂಗ), 505(ಸಾರ್ವಜನಿಕ ಕಿಡಿಗೇಡಿತನ) ಸೇರಿದಂತೆ ವಿವಿಧ ಸೆಕ್ಷನ್‌ಗಳಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಗಿರೀಶ್‌ ಪತ್ರದಲ್ಲಿ ಏನಿದೆ:

ಯಮೂರ್ತಿಗಳಿಗೆ ಬೆದರಿಕೆ ಸಂಬಂಧ ತನಿಖೆ ನಡೆಸುವಂತೆ ಒತ್ತಾಯಿಸಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಅವರಿಗೆ ಸಾಮಾಜಿಕ ಕಾರ್ಯಕರ್ತ ಗಿರೀಶ್‌ ಭಾರದ್ವಾಜ್‌ ಮನವಿ ಮಾಡಿದ್ದಾರೆ. ಅವರ ಪತ್ರದಲ್ಲಿ ತೌಹೀದ್‌ ಜಮಾತ್‌ ಸಂಘಟನೆಯ ಮುಖಂಡ ಆರ್‌.ರಹ್ಮತ್‌ವುಲ್ಲಾ ಅವರು, ಸಾರ್ವಜನಿಕ ಭಾಷಣದಲ್ಲಿ ಹಿಜಾಬ್‌ ಕುರಿತು ತೀರ್ಪು ನೀಡಿರುವ ‘ನ್ಯಾಯಾಮೂರ್ತಿಗಳು ಕೊಲೆಯಾದಲ್ಲಿ ಅವರೇ ನೇರಹೊಣೆಯಾಗಲಿದ್ದಾರೆ ಎಂದು ಹೇಳಿದ್ದಾರೆ. ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆ ಮುಖಂಡರು, ತೀರ್ಪು ಸಂವಿಧಾನಕ್ಕೆ ವಿರುದ್ಧವಾಗಿದೆ ಹೇಳಿದ್ದಾರೆ. ಅಮೀರ್‌- ಇ-ಶರಿತ್‌ ಎಂಬ ಸಂಘಟನೆ ತೀರ್ಪು ಖಂಡಿಸಿ ಬಂದ್‌ ಆಚರಣೆ ಮಾಡಿದೆ. ಹೊಸಪೇಟೆಯಲ್ಲಿ ಹಿಜಾಬ್‌ ಧರಿಸುವುದನ್ನು ಸಮರ್ಥಿಸಿ ಗೋಡೆಗಳ ಮೇಲೆ ಬರಹಗಳನ್ನು ಹಾಕಲಾಗಿದೆ. ಈ ಎಲ್ಲ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಅಲ್ಲದೆ, ಸ್ವಯಂಪ್ರೇರಿತ ನ್ಯಾಯಾಂಗ ನಿಂಧನೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

High Court of Karnataka: ಹಿಜಾಬ್‌ ತೀರ್ಪು ನೀಡಿದ ಜಡ್ಜ್‌ಗೆ ಬೆದರಿಕೆ

ಈ ವಾರದ ಆರಂಭದಲ್ಲಿ, "ಹಿಜಾಬ್ ಧರಿಸುವುದು ಇಸ್ಲಾಂನ ಅವಿಭಾಜ್ಯ ಅಂಗ ಅಲ್ಲ" ಎಂದು ಹೈಕೋರ್ಟ್ ತೀರ್ಪು ನೀಡಿತು. ‘ವಿದ್ಯಾರ್ಥಿನಿಯರಿಗೆ ವಸ್ತ್ರ ಸಂಹಿತೆ ಕಡ್ಡಾಯ’ ಎಂದು ನ್ಯಾಯಾಲಯ ಘೋಷಿಸಿತ್ತು. ಈ ಆದೇಶವನ್ನು ಈಗ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದು, ಹೋಳಿ ರಜೆಯ ನಂತರ ಅರ್ಜಿಗಳ ವಿಚಾರಣೆ ನಡೆಯುವ ಸಾಧ್ಯತೆಯಿದೆ. ‘ಸ್ವಲ್ಪ ಸಮಯ ಕೊಡಿ. ಹೋಳಿ ರಜೆ ನಂತರ ನೋಡೋಣ’ ಎಂದು ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದರು.