ಬೆಂಗಳೂರು(ಏ.22): ರಾಜ್ಯದಲ್ಲಿ ಒಂದು ಕಡೆ ಕೊರೋನಾ ಸೋಂಕು ತಡೆಗೆ ಹತ್ತಾರು ಬಿಗಿ ಕ್ರಮ ಕೈಗೊಂಡಿರುವ ಮಧ್ಯೆಯೇ ಮತ್ತೊಂದು ಕಡೆ ‘ಪ್ಲಾಸ್ಮಾ ಚಿಕಿತ್ಸೆ’ ಮೂಲಕ ಸೋಂಕು ಗುಣಪಡಿಸುವ ವೈದ್ಯಕೀಯ ಪ್ರಯೋಗ ರಾಜಧಾನಿಯಲ್ಲಿ ಆರಂಭವಾಗಲಿದೆ.

ಪ್ಲಾಸ್ಮಾ ಚಿಕಿತ್ಸೆ ಮೂಲಕ ಸೋಂಕು ಗುಣಪಡಿಸುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಕ್ಯಾನ್ಸರ್‌ ತಜ್ಞ ಡಾ.ಯು.ಎಸ್‌. ವಿಶಾಲ್‌ ರಾವ್‌ ನೇತೃತ್ವದಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿರುವ ಕೊರೋನಾ ಸೋಂಕಿತರ ಮೇಲೆ ವೈದ್ಯಕೀಯ ಪ್ರಯೋಗ ಪ್ರಾರಂಭವಾಗಲಿದೆ.

ಈಗಾಗಲೇ ದಿಲ್ಲಿಯಲ್ಲಿ ಪ್ಲಾಸ್ಮಾ ಥೆರಪಿ ಮೂಲಕ ಕೊರೋನಾಗೆ ಚಿಕಿತ್ಸೆ ನೀಡುವ ಪದ್ಧತಿ ಯಶಸ್ಸು ಕಂಡಿದೆ. ಈ ಹಿಂದೆಯೇ ಎಚ್‌ಸಿಜಿ ಕ್ಯಾನ್ಸರ್‌ ಆಸ್ಪತ್ರೆಯ ಕ್ಯಾನ್ಸರ್‌ ತಜ್ಞ ಡಾ.ಯು.ಎಸ್‌. ವಿಶಾಲ್‌ ರಾವ್‌ ನೇತೃತ್ವದ ತಂಡ ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿಗೆ ಅವಕಾಶ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಪ್ಲಾಸ್ಮಾ ಥೆರಪಿ ಯಶಸ್ವಿ: ದೆಹಲಿ ರೋಗಿ ಚೇತರಿಕೆ!

ಪ್ರಸ್ತಾವನೆ ಆಧರಿಸಿ ರಾಜ್ಯ ಸರ್ಕಾರ ಐಸಿಎಂಆರ್‌ ಹಾಗೂ ಕೇಂದ್ರ ಡ್ರಗ್‌ ಕಂಟ್ರೋಲರ್‌ ಸಂಸ್ಥೆಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ಅನುಮತಿ ನೀಡುವಂತೆ ಮನವಿ ಮಾಡಿತ್ತು. ಈಗ ಕೇಂದ್ರ ಆರೋಗ್ಯ ಇಲಾಖೆಯ ಔಷಧ ನಿಯಂತ್ರಣ ಸಂಸ್ಥೆಯು ಬೆಂಗಳೂರಿನ ಇನ್ಸಿ$್ಟಟ್ಯೂಟ್‌ ಆಫ್‌ ಆಂಕಾಲಜಿ ಮುಖ್ಯಸ್ಥರೂ ಆದ ಡಾ.ವಿಶಾಲ್‌ ರಾವ್‌ ಅವರಿಗೆ ನ್ಯೂ ಡ್ರಗ್ಸ್‌ ಅಂಡ್‌ ಕ್ಲಿನಿಕಲ್‌ ಟ್ರಯಲ್‌ ರೂಲ್ಸ್‌-2019ರ ಅನ್ವಯ ಅನುಮತಿ ನೀಡಿ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಐಸಿಯುನಲ್ಲಿರುವ ಸೋಂಕಿತರ ಮೇಲೆ ಪ್ರಯೋಗ ನಡೆಸಬೇಕು ಎಂದು ಹೇಳಿದೆ. ಇದರ ಬೆನ್ನಲ್ಲೇ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ- ವಿಕ್ಟೋರಿಯಾ) ನೈತಿಕ ಸಮಿತಿಯೂ ಅನುಮತಿ ನೀಡಿದೆ. ಹೀಗಾಗಿ ತಕ್ಷಣ ಪ್ರಯೋಗ ಪ್ರಾರಂಭವಾಗಲಿದೆ.

ರಕ್ತದಾನಿಗಳ ಮನವೊಲಿಕೆ ಸವಾಲು:

ಈ ಬಗ್ಗೆ ‘ಕನ್ನಡಪ್ರಭ’ ಜೊತೆ ಮಾತನಾಡಿದ ಡಾ.ಯು.ಎಸ್‌. ವಿಶಾಲ್‌ ರಾವ್‌, ಸೋಂಕಿತರಿಗೆ ಪ್ಲಾಸ್ಮಾ ಮೂಲಕ ಚಿಕಿತ್ಸೆ ನೀಡಲು ಅಗತ್ಯವಾದ ರಕ್ತವನ್ನು ನೀಡುವಂತೆ ಸೋಂಕು ಗುಣಮುಖರಾದವರ ಮನವೊಲಿಸಲಾಗುತ್ತಿದೆ. ಇದನ್ನು ನಾವು ನೇರವಾಗಿ ಮಾಡಲು ಬರುವುದಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ನೆರವಿನಿಂದ ಈ ಪ್ರಯತ್ನ ನಡೆಸಿದ್ದು, ರಕ್ತದಾನಿಗಳು ಮುಂದೆ ಬಂದ ತಕ್ಷಣ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಮೇಲೆ ಪ್ರಯೋಗ ನಡೆಸಲಾಗುವುದು ಎಂದು ಹೇಳಿದರು.

ನಮ್ಮ ತಂಡದಲ್ಲಿರುವ ಡಾ.ಅನಿಶ್‌ ಧೂತ್‌, ಡಾ.ರಮೇಶ್‌ ರೇವಣ್ಣ ಸೇರಿ ನಾಲ್ಕು ಮಂದಿ ಸಲಹೆ-ಮಾರ್ಗದರ್ಶನ ನೀಡುತ್ತೇವೆ. ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಇದನ್ನು ನಿಭಾಯಿಸಲಿದ್ದಾರೆ. ಈ ಪ್ರಯತ್ನದಲ್ಲಿ ನಾವು ಯಶಸ್ವಿಯಾಗುವ ವಿಶ್ವಾಸವಿದೆ ಎಂದರು.

ಅಮೆರಿಕದಲ್ಲಿ ಭಾರತೀಯರ ಮೇಲೆ ಪ್ಲಾಸ್ಮಾ ಥೆರಪಿ ಯಶಸ್ವಿ!

ಎಲ್ಲ ಆಸ್ಪತ್ರೆಗಳಿಗೂ ಪ್ರಸ್ತಾವನೆಗೆ ಸೂಚನೆ

ರಾಜ್ಯದ ಕೊರೊನಾ ವೈರಸ್‌ ಸೋಂಕಿತರಿಗೆ ಫ್ಲಾಸ್ಮಾ ಥೆರಪಿ ಚಿಕಿತ್ಸಾ ಪ್ರಯೋಗ ಆರಂಭಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ವೈದ್ಯಕೀಯ ಮಹಾವಿದ್ಯಾಲಯಗಳು ಕೂಡ ಈ ಕುರಿತಂತೆ ಕೂಡಲೇ ಪ್ರಸ್ತಾವನೆ ಸಲ್ಲಿಸಲು ಆರೋಗ್ಯ ಇಲಾಖೆ ನಿರ್ದೇಶನ ನೀಡಿದೆ ಎಂದು ಸಚಿವ ಎಸ್‌. ಸುರೇಶ ಕುಮಾರ್‌ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಡಾ.ವಿಶಾಲ್‌ ರಾವ್‌ ನೇತೃತ್ವದ ತಂಡ ಕೋವಿಡ್‌ ಸೋಂಕಿತರು ಚಿಕಿತ್ಸೆ ಪಡೆಯುತ್ತಿರುವ ವಿಕ್ಟೋರಿಯಾ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಂಡು ಕೆಲವು ಸೋಂಕಿತರ ಮೇಲೆ ಅಧ್ಯಯನ ಮಾಡಲಿದೆ ಎಂದರು.

ಎರಡೇ ತಿಂಗಳಲ್ಲಿ ಸಿದ್ಧವಾಗಲಿದೆ ಕೊರೋನಾ ಆಸ್ಪತ್ರೆ..! ಟಾಟಾ ಗ್ರೂಪ್‌ನಿಂದ ಕೆಲಸ ಸ್ಟಾರ್ಟ್

ಏನಿದು ಪ್ಲಾಸ್ಮಾ ಥೆರಪಿ?

ಕೊರೋನಾ ವೈರಸ್‌ನಿಂದ ಚೇತರಿಸಿಕೊಂಡವರ ದೇಹದಿಂದ ರಕ್ತ ಪಡೆದು ಅದರಲ್ಲಿನ ರೋಗ ನಿರೋಧಕ ಕಣಗಳನ್ನು (ಪ್ಲಾಸ್ಮಾ) ಬೇರ್ಪಡಿಸಿ ಅದನ್ನು ಮತ್ತೊಬ್ಬ ಸೋಂಕಿತ ರೋಗಿಯ ದೇಹಕ್ಕೆ ಸೇರಿಸುವ ಚಿಕಿತ್ಸೆಗೆ ಪ್ಲಾಸ್ಮಾ ಥೆರಪಿ ಎನ್ನುತ್ತಾರೆ. ಒಬ್ಬ ವ್ಯಕ್ತಿಯ ದೇಹದಿಂದ ಎರಡು ಡೋಸ್‌ನಷ್ಟುಪ್ರತಿರೋಧಕ ಕಣಗಳನ್ನು ತೆಗೆದು, ಒಂದು ಡೋಸ್‌ನಂತೆ ಇಬ್ಬರು ರೋಗಿಗಳಿಗೆ ನೀಡಬಹುದಾಗಿದೆ. ಈ ರೀತಿ ಕೊರೋನಾದಿಂದ ಚೇತರಿಸಿಕೊಂಡವರ ದೇಹದಲ್ಲಿ ವೈರಾಣು ವಿರುದ್ಧ ಹೋರಾಡಿದ್ದ ಕಣಗಳು, ಇನ್ನೊಬ್ಬರ ದೇಹ ಸೇರಿದಾಗಲೂ ಇದೇ ಹೋರಾಟವನ್ನು ಮುಂದುವರಿಸುತ್ತವೆ. ಹೊಸ ರೋಗಿಯ ದೇಹದಲ್ಲಿ ಇವು ಕೆಲವೇ ಕಾಲ ಸಕ್ರಿಯವಾಗಿರುವುದಾದರೂ, ಅಷ್ಟರೊಳಗೆ ಆ ರೋಗಿಯ ದೇಹದಲ್ಲೂ ಪ್ರತಿರೋಧ ಕಣಗಳು ಸಕ್ರಿಯವಾಗುತ್ತವೆ. ಆಗ ಆ ರೋಗಿ ಕೂಡ ಸೋಂಕಿನಿಂದ ಚೇತರಿಸಿಕೊಳ್ಳಬಹುದು.

"