ಮಳೆ ಕೊರತೆಯಿಂದ ಕಂಗೆಟ್ಟಿರುವ ಕರ್ನಾಟಕಕ್ಕೆ ಕೇಂದ್ರ ಬರ ಅಧ್ಯಯನ ತಂಡ ಅ.3ರಂದು ಭೇಟಿ ನೀಡಲಿದೆ. ಬರ ಪರಿಸ್ಥಿತಿಯ ಕುರಿತು ಅವಲೋಕನ ನಡೆಸಲಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ನವದೆಹಲಿ (ಸೆ.28): ಮಳೆ ಕೊರತೆಯಿಂದ ಕಂಗೆಟ್ಟಿರುವ ಕರ್ನಾಟಕಕ್ಕೆ ಕೇಂದ್ರ ಬರ ಅಧ್ಯಯನ ತಂಡ ಅ.3ರಂದು ಭೇಟಿ ನೀಡಲಿದೆ. ಬರ ಪರಿಸ್ಥಿತಿಯ ಕುರಿತು ಅವಲೋಕನ ನಡೆಸಲಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ತೀವ್ರ ಬರದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಬರ ಅಧ್ಯಯನ ತಂಡವನ್ನು ಕಳುಹಿಸಿಕೊಡಲಿದೆ ಎಂದು ಹಿಂಗಾರು ಬೆಳೆ ಸಿದ್ಧತೆ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮಾವೇಶದಲ್ಲಿ ತಿಳಿಸಿದರು. ಹವಾಮಾನ ಬದಲಾವಣೆಯ ಪರಿಣಾಮ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈಚೆಗೆ ಮುಕ್ತಾಯಗೊಂಡ ಮುಂಗಾರು ಬೆಳೆ ಮೇಲೆ ಇದರ ಪರಿಣಾಮ ಆಗಿದೆ ಎಂದರು.
ಕರ್ನಾಟಕದಲ್ಲಿನ ಬರ ಪರಿಸ್ಥಿತಿ ಕುರಿತು ಅಧ್ಯಯನಕ್ಕೆ ನಾವು ಅ.3ರಂದು ಕೇಂದ್ರ ತಂಡವನ್ನು ಕಳುಹಿಸಿಕೊಡಲಿದ್ದೇವೆ. ಈಗಾಗಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಜತೆಗೂ ಮಾತುಕತೆ ನಡೆಸಿದ್ದು, ಅವರು ಕೂಡ ರಾಜ್ಯದ ಬರ ಪರಿಸ್ಥಿತಿ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ನಾವು ಅಲ್ಲಿಗೂ ಕೇಂದ್ರ ತಂಡವನ್ನು ಕಳುಹಿಸಿಕೊಡಲಿದ್ದೇವೆ ಎಂದ ಅವರು, ಬರದ ಬಿಕ್ಕಟ್ಟು ಎದುರಿಸುತ್ತಿರುವ ರಾಜ್ಯಗಳಿಗೆ ನನ್ನ ತಂಡದ ಜತೆಗೆ ವೈಯಕ್ತಿಕವಾಗಿ ನಾನೂ ಭೇಟಿ ನೀಡಲಿದ್ದೇನೆ ಎಂದು ಹೇಳಿದರು.
ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳು ತೀವ್ರ ಬರದಿಂದ ತತ್ತರಿಸುತ್ತಿವೆ ಎಂದ ಅವರು, ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿ ಬರಪೀಡಿತ ರಾಜ್ಯಗಳ ಅಧಿಕಾರಿಗಳು ಮುಂಗಾರು ಬೆಳೆಗಳಿಗೆ ಎದುರಾಗಿರುವ ಆತಂಕ ಪರಿಹರಿಸಲು ಆದ್ಯತೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಜತೆಗೆ, ಬರಪೀಡಿತ ರಾಜ್ಯಗಳ ಜತೆಗೆ ಕೇಂದ್ರ ಸರ್ಕಾರ ಗಟ್ಟಿಯಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದ್ದಾರೆ.
ಬರ, ನೀರಿನ ಅಭಾವದ ಅಪಾಯ
ಎಲ್ಲಾ ಕಡೆ ಬೆಳೆ ವೈಫಲ್ಯ ಆಗಿಲ್ಲದಿದ್ದರೂ ಬೆಳೆಗಳ ಮೇಲೆ ಬರ ಗಂಭೀರ ಪರಿಣಾಮ ಬೀರಿದೆ. ಕೆಲವು ಕಡೆ ಉತ್ತಮ ಬೆಳೆ ಬಂದಿದೆ. ಆದರೆ, ಕೆಲ ಪ್ರದೇಶಗಳಲ್ಲಿ ಬರ, ನೀರಿನ ಅಭಾವದ ಅಪಾಯ ಎದುರಾಗಿದೆ ಎಂದರು. ಎಲ್ ನಿನೋದ ಅಡ್ಡ ಪರಿಣಾಮದ ಆತಂಕದ ಕುರಿತು ವರದಿಗಳಿದ್ದರೂ ಮುಂಗಾರು ಬೆಳೆ ಅವಧಿಯಲ್ಲಿ ಅಧಿಕಾರಿಗಳು ಹಾಗೂ ತಮ್ಮ ತಂಡ ಕೈಗೊಂಡ ಕೈಗೊಂಡ ಕ್ರಮಗಳ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು. ಜತೆಗೆ, ಹಿಂಗಾರು ಬೆಳೆ ಅವಧಿಗೆ ಸಿದ್ಧತೆ ನಡೆಸುವ ಜತೆ ಜತೆಗೇ ನಾವು ಈ ಸವಾಲುಗಳನ್ನು ಜತೆಯಾಗಿ ಎದುರಿಸಬೇಕಿದೆ ಎಂದು ತಿಳಿಸಿದರು.


