ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ನಡುವೆಯೂ ಯುಎಇ ಭಾರತದಲ್ಲಿ ಹೆಚ್ಚುವರಿಯಾಗಿ 25 ಶತಕೋಟಿ ಡಾಲರ್ ಹೂಡಿಕೆ ಮಾಡಲು ಮುಂದಾಗಿದೆ. ತೈಲ ಸಂಗ್ರಹಾಗಾರಗಳು, ಎಲ್‌ಪಿಜಿ, ಎಲ್‌ಎನ್‌ಜಿ ಮತ್ತು ಸಮುದ್ರದಡಿಯ ಅನಿಲ ಪೈಪ್‌ಲೈನ್‌ಗಳಂತಹ ಇಂಧನ ಕ್ಷೇತ್ರಗಳಲ್ಲಿ ಈ ಹೂಡಿಕೆ ನಡೆಯಲಿದೆ. 2032ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು 200 ಶತಕೋಟಿ ಡಾಲರ್‌ಗೆ ಏರಿಸುವ ಗುರಿಯನ್ನು ಹೊಂದಲಾಗಿದೆ.

ಮುಂಬೈ: ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನ ನಡುವೆಯೂ, UAE ಭಾರತದಲ್ಲಿ ಇನ್ನೂ 25 ಶತಕೋಟಿ ಡಾಲರ್ ಹೂಡಿಕೆ ಮಾಡಲು ಯೋಜಿಸುತ್ತಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಇಂದು ಮುಂಬೈನಲ್ಲಿ ತಿಳಿಸಿದ್ದಾರೆ.

14ನೇ ಭಾರತ-UEA ಹೂಡಿಕೆ ಕಾರ್ಯಪಡೆಯ ಸಭೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, UAE ಈಗಾಗಲೇ ಭಾರತದಲ್ಲಿ 25 ಶತಕೋಟಿ ಡಾಲರ್ ಹೂಡಿಕೆ ಮಾಡಿದೆ. ಭಾರತದಲ್ಲಿ ತೈಲ ಸಂಗ್ರಹಾಗಾರಗಳು, LPG, LNG ಮತ್ತು ಸಮುದ್ರದಡಿಯ ಅನಿಲ ಪೈಪ್‌ಲೈನ್‌ಗಳಂತಹ ಕ್ಷೇತ್ರಗಳಲ್ಲಿ ಆಳವಾದ ಇಂಧನ ಸಹಕಾರವನ್ನು ಅನ್ವೇಷಿಸುತ್ತಿರುವಾಗಲೇ, ಇದು ಇಂಥದ್ದೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಎಂದರು. ಭಾರತ ಮತ್ತು ಯುಎಇ ತಮ್ಮ ದ್ವಿಪಕ್ಷೀಯ ವ್ಯಾಪಾರವನ್ನು 100 ಶತಕೋಟಿ ಡಾಲರ್‌ಗೆ ದ್ವಿಗುಣಗೊಳಿಸಿವೆ ಮತ್ತು 2032ರ ವೇಳೆಗೆ ಅದನ್ನು 200 ಶತಕೋಟಿ ಡಾಲರ್‌ಗೆ ಏರಿಸುವ ಗುರಿಯನ್ನು ಹೊಂದಿವೆ ಎಂದರು.

ತೈಲ ಸಂಗ್ರಹಾಗಾರಗಳಲ್ಲಿ ಹೂಡಿಕೆ

ಭಾರತದಲ್ಲಿನ ತೈಲ ಸಂಗ್ರಹಾಗಾರಗಳಲ್ಲಿ UAE ಯ ಹೆಚ್ಚಿನ ಹೂಡಿಕೆಯ ಸಾಧ್ಯತೆಯನ್ನು ಎರಡೂ ದೇಶಗಳು ಪರಿಶೀಲಿಸುತ್ತಿವೆ. ಜೊತೆಗೆ ದೇಶದಲ್ಲಿ ಅನಿಲವನ್ನು ಸಾಗಿಸಲು ಮತ್ತು ಸಂಗ್ರಹಿಸಲು ಸಮುದ್ರದಡಿಯ ಪೈಪ್‌ಲೈನ್‌ಗಳ ಸಾಧ್ಯತೆಯನ್ನೂ ಅನ್ವೇಷಿಸುತ್ತಿವೆ ಎಂದು ಸಚಿವರು ಮಾಹಿತಿ ನೀಡಿದರು.

UAE ಒಂದು ವಿಶ್ವಾಸಾರ್ಹ ಪಾಲುದಾರ ದೇಶವಾಗಿದೆ. ಇಂಧನ ಭದ್ರತೆಗಾಗಿ ಸಂಪರ್ಕ ಸೇತುವೆಗಳನ್ನು ನಿರ್ಮಿಸಲು ನಾವು ಅವರೊಂದಿಗೆ ಕೆಲಸ ಮಾಡುತ್ತಿದ್ದೇವೆ. ಭಾರತದಲ್ಲಿ ತೈಲ ಸಂಗ್ರಹಾಗಾರಗಳನ್ನು ವಿಸ್ತರಿಸುವ ಕುರಿತು ಅಧ್ಯಯನಗಳು ನಡೆಯುತ್ತಿವೆ ಮತ್ತು ಈ ಕ್ಷೇತ್ರದಲ್ಲಿ UAE ಯಿಂದ ಗಮನಾರ್ಹ ಹೂಡಿಕೆ ಹೆಚ್ಚಳವನ್ನು ನಾವು ನಿರೀಕ್ಷಿಸುತ್ತಿದ್ದೇವೆ ಎಂದರು.

ಇಂಧನ ಕ್ಷೇತ್ರದಲ್ಲಿ ಭದ್ರತೆ

ಇಂಧನ ಕ್ಷೇತ್ರದಲ್ಲಿನ ಸ್ಥಿತಿಸ್ಥಾಪಕತ್ವ ಮತ್ತು ಭದ್ರತೆಯನ್ನು ಬಲಪಡಿಸುವ ಪ್ರಯತ್ನದ ಭಾಗವಾಗಿ, ಭಾರತವು UAE ಯನ್ನು ಎಲ್‌ಪಿಜಿ ಮತ್ತು ಎಲ್‌ಎನ್‌ಜಿಯ ಪ್ರಮುಖ ಮೂಲವನ್ನಾಗಿ ಪರಿಗಣಿಸುತ್ತಿದೆ ಹಾಗೂ ಸಮುದ್ರದಡಿಯ ಪೈಪ್‌ಲೈನ್‌ಗಳ ಸಾಧ್ಯತೆಯನ್ನೂ ಅಧ್ಯಯನ ಮಾಡುತ್ತಿದೆ. ನಮಗೆ ಅಗತ್ಯವಿರುವ ಎಲ್‌ಪಿಜಿ, ಎಲ್‌ಎನ್‌ಜಿ ಮತ್ತು ಇತರ ಅನಿಲಗಳಿಗೆ ಯುಎಇ ಪ್ರಮುಖ ಮೂಲವಾಗುವ ಸಾಧ್ಯತೆಯನ್ನು ನಾವು ಪರಿಶೀಲಿಸುತ್ತಿದ್ದೇವೆ ಮತ್ತು ಈ ಕುರಿತು ಅಧ್ಯಯನವೂ ನಡೆಯುತ್ತಿದೆ. ಸಮುದ್ರದಡಿಯ ಪೈಪ್‌ಲೈನ್‌ಗಳ ಮೂಲಕ ಅನಿಲವನ್ನು ಸಾಗಿಸಿ ಭಾರತದಲ್ಲಿ ಸಂಗ್ರಹಿಸುವ ಮೂಲಕ ಇಂಧನ ಕ್ಷೇತ್ರದಲ್ಲಿ ಹೆಚ್ಚಿನ ಸ್ಥಿತಿಸ್ಥಾಪಕತ್ವ ಮತ್ತು ಭದ್ರತೆಯನ್ನು ಸಾಧಿಸಲು ಸಾಧ್ಯವೇ ಎಂಬುದನ್ನು ನಾವು ನೋಡುತ್ತಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದರು.