Asianet Suvarna News Asianet Suvarna News

Karnataka Omicron case ಆಫ್ರಿಕಾಗೂ ಮೊದಲೇ ಕರ್ನಾಟಕದಲ್ಲಿ ಓಮಿಕ್ರಾನ್ ಪತ್ತೆ, ಸಮುದಾಯಕ್ಕೆ ಹಬ್ಬಿದ ಆತಂಕ!

  • ಆಫ್ರಿಕಾದಲ್ಲಿ ನ.23ಕ್ಕೆ ಓಮಿಕ್ರಾನ್ ಪತ್ತೆ, ರಾಜ್ಯದಲ್ಲಿ ನ.21ಕ್ಕೆ ಪತ್ತೆ
  • ನಿನ್ನೆ ಸೋಂಕು ದೃಢಪಟ್ಟಯುವತಿಯರ ಟೆಸ್ಟ್‌ ನಡೆದಿದ್ದು ನ.21ಕ್ಕೆ
  • ರಾಜ್ಯದಲ್ಲಿ ಒಮಿಕ್ರೋನ್‌ ಸಮುದಾಯಕ್ಕೆ ಹಬ್ಬಿರಬಹುದು: ತಜ್ಞರು
Karnataka detect omicron case on november 21st samples before south afrirca fear of community spread ckm
Author
Bengaluru, First Published Dec 19, 2021, 3:38 AM IST | Last Updated Dec 19, 2021, 3:38 AM IST

ಬೆಂಗಳೂರು(ಡಿ.19): ಬೋಟ್ಸ್‌ವಾನಾದಲ್ಲಿ(Botswana) ಮೊದಲ ಬಾರಿಗೆ ಒಮಿಕ್ರೋನ್‌(Omicron variant) ತಳಿ ಪತ್ತೆಯಾದ ಸಮಯದಲ್ಲೇ ಭಾರತಕ್ಕೂ(India) ಒಮಿಕ್ರೋನ್‌ ಕಾಲಿಟ್ಟಿತ್ತೆ? ಒಮಿಕ್ರೋನ್‌ ರಾಜ್ಯದಲ್ಲಿ(Karnataka) ಈಗಾಗಲೇ ಸಮುದಾಯಕ್ಕೂ ಹಬ್ಬಿರಬಹುದೇ?ಇಂತಹ ಸಾಧ್ಯತೆಯಿದ್ದು, ಇದು ಮೂರನೇ ಅಲೆಯ(3rd wave) ಮುನ್ಸೂಚನೆ ಎಂದು ಕೋವಿಡ್‌(Covid) ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಶನಿವಾರ ಒಮಿಕ್ರೋನ್‌ ಪತ್ತೆಯಾದ ನಾಲ್ವರು ವಿದ್ಯಾರ್ಥಿನಿಯರ(Students) ಕೋವಿಡ್‌ ಪರೀಕ್ಷೆ ನ.21ಕ್ಕೆ ನಡೆದಿತ್ತು. ಅದರ ಮರುದಿನ ಕೋವಿಡ್‌ ಪಾಸಿಟಿವ್‌ ವರದಿ ಬಂದಿತ್ತು. ಇದೇ ವೇಳೆಗೆ ಅಂದರೆ ನ.23ಕ್ಕೆ ಆಫ್ರಿಕಾದ(Africa) ಬೋಟ್ಸ್‌ವಾನಾದಲ್ಲಿ ವಿಶ್ವದ ಮೊತ್ತಮೊದಲ ಒಮಿಕ್ರೋನ್‌ ಪ್ರಕರಣ ಬಹಿರಂಗಗೊಂಡಿತ್ತು. ಆದರೆ, ರಾಜ್ಯದ ನಾಲ್ವರು ವಿದ್ಯಾರ್ಥಿಗಳಲ್ಲಿ ನ.22ಕ್ಕೆ ಕೋವಿಡ್‌ ದೃಢಪಟ್ಟಿದ್ದರೂ, ಒಮಿಕ್ರೋನ್‌ ದೃಢಪಟ್ಟಿರುವುದು ಡಿ.18ಕ್ಕೆ. ಹೀಗಾಗಿ ಬೋಟ್ಸ್‌ವಾನಾದಲ್ಲಿ ಒಮಿಕ್ರೋನ್‌ ಪತ್ತೆಯಾದ ಸಮಯದಲ್ಲೇ ರಾಜ್ಯದಲ್ಲೂ ಒಮಿಕ್ರೋನ್‌ ಹಬ್ಬಿರಬಹುದೇ ಎಂಬ ಗುಮಾನಿ ಹುಟ್ಟಿಕೊಂಡಿದೆ.

Omicron lockdown ಕ್ರಿಸ್ಮಸ್ ಬಳಿಕ 2 ವಾರ ಲಾಕ್‌ಡೌನ್, ಬ್ರಿಟನ್‌ನಲ್ಲಿ ಕಠಿಣ ಜಾರಿ ಸಾಧ್ಯತೆ!

ರಾಜ್ಯದಲ್ಲಿ ಪತ್ತೆಯಾದ ಮೊದಲ ಒಮಿಕ್ರೋನ್‌ ಸೋಂಕಿತ ವೈದ್ಯರಿಗೂ ಸೋಂಕು ತಗಲಿದ್ದು ಎಲ್ಲಿ ಎಂಬುದು ಇನ್ನೂ ಪತ್ತೆಯಾಗಿಲ್ಲ. ಬೆಂಗಳೂರಿನ(Bengaluru) ಖಾಸಗಿ ಹೋಟೆಲ್‌ನಲ್ಲಿ ನವೆಂಬರ್‌ ಮೂರನೇ ವಾರದಲ್ಲಿ ಬೆಂಗಳೂರಿನ ವೈದ್ಯರ ಸಮಾವೇಶದಲ್ಲಿ ಭಾಗಿಯಾದಾಗ ಸೋಂಕು ಬಂದಿರಬಹುದು ಎಂಬ ಸಂಶಯ ವ್ಯಕ್ತವಾಗಿತ್ತು. ಅಂದರೆ ಬೋಟ್ಸ್‌ವಾನಾದಲ್ಲಿ ಒಮಿಕ್ರೋನ್‌ ಹಬ್ಬುತ್ತಿದ್ದ ಅವಧಿಯಲ್ಲೇ ಅದಕ್ಕೆ ಸಂವಾದಿಯಾಗಿ ರಾಜ್ಯದಲ್ಲಿ ಒಮಿಕ್ರೋನ್‌ ಇದ್ದಿರಬಹುದು ಎಂಬುದಕ್ಕೆ ಇದೂ ಕೂಡ ನಿದರ್ಶನ ಎಂದು ತಜ್ಞರು ಹೇಳುತ್ತಾರೆ.

ರಾಜ್ಯದ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌ ಅವರ ಪ್ರಕಾರ ಇದು ಮೂರನೇ ಅಲೆಯ ಮುನ್ಸೂಚನೆ. ಇನ್ನು ಎರಡರಿಂದ ನಾಲ್ಕು ವಾರದಲ್ಲಿ ಈ ಬಗ್ಗೆ ಸ್ಪಷ್ಟಚಿತ್ರಣ ಲಭಿಸಲಿದ್ದು, ಜನರು ಸಾಮಾಜಿಕ ಅಂತರ ಪಾಲನೆ, ಮಾಸ್ಕ್‌ ಧಾರಣೆ, ಹ್ಯಾಂಡ್‌ ಸ್ಯಾನಿಟೈಜೆಷನ್‌, ಎರಡು ಡೋಸ್‌ ಲಸಿಕೆ ಪಡೆಯುವುದು ಮತ್ತು ಗುಂಪುಗೂಡದಿರುವುದನ್ನು ಮರೆಯಬಾರದು ಎಂದು ಎಚ್ಚರಿಸುತ್ತಾರೆ.

Covid 19 Variant: ಕ್ರಿಸ್‌ಮಸ್‌, ಹೊಸ ವರ್ಷಾಚರಣೆಗೆ ಬೀಳುತ್ತಾ ಬ್ರೇಕ್‌?

ದ.ಆಫ್ರಿಕಾದಲ್ಲಿ ಒಮಿಕ್ರೋನ್‌ ಹಾನಿ ಬಹಳ ಕಮ್ಮಿ
ಜಗತ್ತಿನಲ್ಲೇ ಮೊದಲು ಒಮಿಕ್ರೋನ್‌ ಕೊರೋನಾ ವೈರಸ್‌ ತಳಿ ಪತ್ತೆಯಾದ ದಕ್ಷಿಣ ಆಫ್ರಿಕಾ ಖಂಡದಿಂದ ಜಗತ್ತಿಗೊಂದು ಸಿಹಿಸುದ್ದಿ ಬಂದಿದೆ. ಆಫ್ರಿಕಾದಲ್ಲಿ ಕೊರೋನಾದ 4ನೇ ಅಲೆ (ಒಮಿಕ್ರೋನ್‌ ಅಲೆ) ಬಹುತೇಕ ತುತ್ತತುದಿ ತಲುಪಿದ್ದು, ಆದರೂ ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಸಂಖ್ಯೆ ಶೇ.1.7ರಷ್ಟುಮಾತ್ರ ಇದೆ. ಅಂತೆಯೇ ಒಮಿಕ್ರೋನ್‌ ಸೋಂಕಿತರ ಸಾವಿನ ಸಂಖ್ಯೆ ಕೂಡ ಬಹಳ ಕಡಿಮೆ ಇದೆ.

ಈ ಕುರಿತು ದಕ್ಷಿಣ ಆಫ್ರಿಕಾದ ಆರೋಗ್ಯ ಸಚಿವ ಜೋ ಫಾಹ್ಲಾ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದಾರೆ. ಅವರ ಪ್ರಕಾರ, ದೇಶದಲ್ಲಿ ಕೋವಿಡ್‌ನ 3ನೇ ಅಲೆ (ಡೆಲ್ಟಾಅಲೆ)ಯಲ್ಲಿ ಸೋಂಕಿತರ ಪೈಕಿ ಶೇ.19 ಜನ ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಆದರೆ, ಈಗಿನ ಒಮಿಕ್ರೋನ್‌ ಅಲೆಯಲ್ಲಿ ಸೋಂಕಿತರ ಪೈಕಿ ಶೇ.1.7ರಷ್ಟುಜನರಿಗೆ ಮಾತ್ರ ಆಸ್ಪತ್ರೆಯ ಅಗತ್ಯ ಬೀಳುತ್ತಿದೆ. ಸೋಂಕಿನ ಲಕ್ಷಣಗಳು ಸೌಮ್ಯವಾಗಿರುವ ಕಾರಣ ಆಕ್ಸಿಜನ್‌ ಅಗತ್ಯವೂ ಹೆಚ್ಚಿಲ್ಲ. ಇನ್ನು, ಸಾವಿನ ಸಂಖ್ಯೆ ಇಡೀ ದೇಶದಲ್ಲಿ ಒಂದು ವಾರಕ್ಕೆ 2000 ಮಾತ್ರ ಇದೆ. ಇದು ಡೆಲ್ಟಾಅಲೆ ಗರಿಷ್ಠಕ್ಕೆ ಹೋದ ಸಮಯದಲ್ಲಿ ಸಂಭವಿಸುತ್ತಿದ್ದ ಸಾವಿನ ಎಂಟನೇ ಒಂದು ಭಾಗ ಮಾತ್ರ.

Omicron Variant: ಸೋಂಕಿತರಿಗೆ ತಾತ್ಕಾಲಿಕ ಆಸ್ಪತ್ರೆಯಲ್ಲಿ ಒಮಿಕ್ರೋನ್‌ ಚಿಕಿತ್ಸೆ

ಲಸಿಕೆ ಪಡೆದವರಲ್ಲಿ ಸಾವು ಕಮ್ಮಿ:
ದೇಶದಲ್ಲಿ ಸದ್ಯ ಆಸ್ಪತ್ರೆಗಳಲ್ಲಿ 7600 ಒಮಿಕ್ರೋನ್‌ ಸೋಂಕಿತರು ಮಾತ್ರ ಇದ್ದಾರೆ. ಇದು 3ನೇ ಅಲೆಯಲ್ಲಿ ಇದೇ ಸಮಯದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದವರ ಸಂಖ್ಯೆಯ ಶೇ.40 ಮಾತ್ರ. ಆಸ್ಪತ್ರೆಯಲ್ಲಿ ಸಾವನ್ನಪ್ಪಿದವರ ಪೈಕಿ ಶೇ.90ಕ್ಕಿಂತ ಹೆಚ್ಚು ಸೋಂಕಿತರು ಲಸಿಕೆ ಪಡೆದವರಲ್ಲ ಅಥವಾ ಒಂದೇ ಡೋಸ್‌ ಪಡೆದವರಾಗಿದ್ದಾರೆ. ಹೀಗಾಗಿ ಜಗತ್ತಿನಲ್ಲಿ ಸದ್ಯ ಬಳಕೆಯಲ್ಲಿರುವ ಕೋವಿಡ್‌ ಲಸಿಕೆಗಳು ಕೂಡ ಒಮಿಕ್ರೋನ್‌ ವಿರುದ್ಧ ಕೆಲಸ ಮಾಡುತ್ತವೆ ಎಂದು ಹೇಳಲಾಗುತ್ತಿದೆ. ಇನ್ನು, ಆಸ್ಪತ್ರೆಗೆ ದಾಖಲಾಗಿರುವವರೆಲ್ಲ ನಿಜಕ್ಕೂ ಆಸ್ಪತ್ರೆಯ ಚಿಕಿತ್ಸೆ ಅಗತ್ಯವಿದ್ದೇ ದಾಖಲಾದವರಲ್ಲ. ಬೆಡ್‌ಗಳು ಸಾಕಷ್ಟಿವೆ ಎಂಬ ಕಾರಣಕ್ಕೆ ಹೆಚ್ಚಿನ ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗಿದೆ.

ಸೋಂಕು ಹೆಚ್ಚು, ತೀವ್ರತೆ ಕಡಿಮೆ:
ದಕ್ಷಿಣ ಆಫ್ರಿಕಾದಲ್ಲಿ ಈಗ ನಿತ್ಯ ಸುಮಾರು 20,000 ಒಮಿಕ್ರೋನ್‌ ಸೋಂಕಿತರು ಪತ್ತೆಯಾಗುತ್ತಿದ್ದಾರೆ. 3ನೇ ಅಲೆಯಲ್ಲಿ ನಿತ್ಯ 4,400 ಪ್ರಕರಣ ಮಾತ್ರ ಪತ್ತೆಯಾಗುತ್ತಿತ್ತು. ಅಂದರೆ ಒಮಿಕ್ರೋನ್‌ ಬಹಳ ವೇಗವಾಗಿ ಮತ್ತು ಹೆಚ್ಚು ಜನರಿಗೆ ಹರಡುತ್ತಿದೆ. ಬ್ರಿಟನ್‌ನಲ್ಲೂ ಹೀಗೇ ಆಗುತ್ತಿದೆ. ಆದರೆ, ಆಸ್ಪತ್ರೆಗೆ ದಾಖಲಾಗುವವರು, ಸಾವನ್ನಪ್ಪುವವರು, ಆಕ್ಸಿಜನ್‌ನ ಅಗತ್ಯವಿರುವವರ ಸಂಖ್ಯೆ ಕಡಿಮೆಯಿರುವುದರಿಂದ ಆರೋಗ್ಯ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತಿಲ್ಲ. ಹಾಗಂತ ಬೇರೆ ದೇಶಗಳಲ್ಲೂ ಹೀಗೇ ಆಗಬೇಕಿಲ್ಲ, ಅಲ್ಲಿನ ಪರಿಸ್ಥಿತಿಗೆ ತಕ್ಕಂತೆ ಒಮಿಕ್ರೋನ್‌ನ ಪರಿಣಾಮ ಬೇರೆ ರೀತಿಯಿರಬಹುದು ಎಂದು ತಜ್ಞರು ಹೇಳಿದ್ದಾರೆ.

ಆಫ್ರಿಕಾದ ಬೋಟ್ಸಾವಾನದಲ್ಲಿ ಜಗತ್ತಿನಲ್ಲೇ ಮೊದಲು ನ.25ರಂದು ಪ್ರಥಮ ಒಮಿಕ್ರೋನ್‌ ಸೋಂಕು ಪತ್ತೆಯಾಗಿತ್ತು. ಹೀಗಾಗಿ ಒಮಿಕ್ರೋನ್‌ ರೂಪಾಂತರಿ ತಳಿ ಹೇಗೆ ವರ್ತಿಸುತ್ತದೆ ಎಂಬ ಬಗ್ಗೆ ದಕ್ಷಿಣ ಆಫ್ರಿಕಾದ ಅನುಭವವನ್ನು ಜಗತ್ತು ಸೂಕ್ಷ್ಮವಾಗಿ ಗಮನಿಸುತ್ತಿದೆ.

Latest Videos
Follow Us:
Download App:
  • android
  • ios