2019ರ ಮಹಾ ಪ್ರವಾಹಕ್ಕೆ ಆಲಮಟ್ಟಿ ಕಾರಣ ಅಲ್ಲ, ಮಹಾರಾಷ್ಟ್ರದ ಕ್ಲೀನ್‌ಚಿಟ್!
2019ರ ಮಹಾ ಪ್ರವಾಹಕ್ಕೆ ಆಲಮಟ್ಟಿ ಕಾರಣ ಅಲ್ಲ| ಮಹಾರಾಷ್ಟ್ರ ಸರ್ಕಾರ ರಚಿಸಿದ್ದ ಸಮಿತಿಯಿಂದ ಕ್ಲೀನ್‌ಚಿಟ್| ರಾಜ್ಯದಲ್ಲಿನ ನದಿಗಳ ಸಂಗಮವೇ ನೆರೆಗೆ ಕಾರಣ
ಮುಂಬೈ(ಜೂ.20): ಕಳೆದ ವರ್ಷ ಸಾಂಗ್ಲಿ, ಕೊಲ್ಹಾಪುರದಂಥ ಪಶ್ಚಿಮ ಮಹಾರಾಷ್ಟ್ರದ ಪ್ರದೇಶಗಳು ತತ್ತರಗೊಳ್ಳುವಂತೆ ಮಾಡಿದ ಪ್ರವಾಹ ಪರಿಸ್ಥಿತಿಯ ಕಾರಣ ಅವಲೋಕಿಸಲು ರಚನೆಯಾಗಿದ್ದ ಮಹಾರಾಷ್ಟ್ರ ಸರ್ಕಾರದ ಸಮಿತಿಯೊಂದು, ಕರ್ನಾಟಕದ ಆಲಮಟ್ಟಿಅಣೆಕಟ್ಟೆಗೆ ‘ಕ್ಲೀನ್‌ಚಿಟ್’ ನೀಡಿದೆ. ಮಹಾರಾಷ್ಟ್ರದ ಪ್ರವಾಹಕ್ಕೆ ಆಲಮಟ್ಟಿಅಣೆಕಟ್ಟು ಕಾರಣವಲ್ಲ ಎಂದು ಸರ್ಕಾರಕ್ಕೆ ವರದಿ ನೀಡಿದೆ.
ಇತ್ತೀಚೆಗೆ ವಡ್ನೇರೆ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ‘ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಜಂಟಿ ಮಂಡಳಿಯೊಂದನ್ನು ಸರ್ಕಾರ ರಚಿಸಬೇಕು. ಇದರಲ್ಲಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ಜಲಸಂಪನ್ಮೂಲ ಅಧಿಕಾರಿಗಳು ಇರಬೇಕು’ ಎಂದು ಶಿಫಾರಸು ಮಾಡಿದೆ.
‘ಕೊಲ್ಹಾಪುರ ಹಾಗೂ ಸಾಂಗ್ಲಿ ಪ್ರವಾಹಕ್ಕೆ ಆಲಮಟ್ಟಿಅಣೆಕಟ್ಟು ಕಾರಣ ಎಂದು ಸಮಿತಿ ಹೇಳಿಲ್ಲ. ಕರಾಡ್, ಸಾಂಗ್ಲಿ ಹಾಗೂ ಕೊಲ್ಹಾಪುರ ನಡುವೆ ಕಡಿಮೆ ಅಂತರದಲ್ಲಿ ಅನೇಕ ನದಿಗಳು ಸಂಗಮಗೊಳ್ಳುತ್ತವೆ. ಹೀಗಾಗಿ ಕೃಷ್ಣಾ ನದಿಯಲ್ಲಿ ಏಕಾಏಕಿ ನೀರು ಉಕ್ಕೇರುತ್ತದೆ ಎಂದು ಶಿಫಾರಸಿನಲ್ಲಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರವಾಹ ನಿರ್ವಹಣೆಗೆ ಉಭಯ ರಾಜ್ಯಗಳ ಜಂಟಿ ಸಮಿತಿ ರಚನೆ ಆಗಬೇಕು ಎಂಬ ಶಿಫಾರಸು ಸ್ವಾಗತಾರ್ಹವಾಗಿದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕವು ಆಲಮಟ್ಟಿಅಣೆಕಟ್ಟೆಯ ಕ್ರೆಸ್ಟ್‌ಗೇಟ್‌ಗಳನ್ನು ತೆರೆಯದೇ ನೀರನ್ನು ಹಿಡಿದಿಟ್ಟುಕೊಂಡಿತು. ಹೀಗಾಗಿ ಹಿನ್ನೀರು ಪ್ರದೇಶವಾದ ಮಹಾರಾಷ್ಟ್ರದಲ್ಲಿ ಪ್ರವಾಹ ಉಂಟಾಯಿತು ಎಂದು ಆರೋಪಿಸಲಾಗಿತ್ತು.
ಒಪ್ಪಂದಕ್ಕೆ ಫಡ್ನವೀಸ್ ಆಗ್ರಹ:
ಪದೇ ಪದೇ ಮಹಾರಾಷ್ಟ್ರದಲ್ಲಿ ಪ್ರವಾಹ ಉಂಟಾಗುವುದನ್ನು ತಪ್ಪಿಸಲು ಕರ್ನಾಟಕದ ಜತೆ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರು ಸಹಿ ಹಾಕಬೇಕು. ತುರ್ತಾಗಿ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜತೆ ಮಾತುಕತೆ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆಗ್ರಹಿಸಿದ್ದಾರೆ. ಆಲಮಟ್ಟಿಅಣೆಕಟ್ಟೆಯಿಂದ ನೀರನ್ನು ಹೊರಬಿಡುವ ಸಂಬಂಧ ಒಪ್ಪಂದಕ್ಕೆ ಬರಬೇಕು. ಇದರಿಂದ ಉಭಯ ರಾಜ್ಯಗಳಿಗೆ ನೀರಿನ ಮಟ್ಟನಿಯಂತ್ರಿಸಲು ನೆರವಾಗಲಿದೆ ಎಂದು ಫಡ್ನವೀಸ್ ಹೇಳಿದ್ದಾರೆ.