* ಅಮೆರಿಕಗಿಂತ ಉತ್ತರಪ್ರದೇಶದಲ್ಲೇ ಹೆಚ್ಚು ಲಸಿಕೆ* ಶ್ರೀಮಂತ ದೇಶವನ್ನೇ ಹಿಂದಿಕ್ಕಿದ ಕರುನಾಡು* ರಾಜ್ಯದಲ್ಲಿ ಲಸಿಕೆ ರಷ್ಯಾಗಿಂತ ವೇಗ* ಮ.ಪ್ರದೇಶ, ಹರ್ಯಾಣ, ಗುಜರಾತಲ್ಲೂ ಸಾಧನೆ

ನವದೆಹಲಿ(ಸೆ.12): ಕರ್ನಾ​ಟಕ​ದಲ್ಲಿ ನೀಡುವ ದೈನಂದಿನ ಲಸಿಕೆ ಪ್ರಮಾಣ ರಷ್ಯಾ​ಗಿಂತಲೂ ಅಧಿಕ. ಸೆಪ್ಟೆಂಬ​ರ್‌​ನ​ಲ್ಲಿ ನೀಡಲಾದ ಲಸಿ​ಕೆಯ ಅಂಕಿ-ಅಂಶ​ಗಳೇ ಇದನ್ನು ಸಾಬೀ​ತು​ಪ​ಡಿ​ಸಿ​ವೆ.

ಹೌದು. ‘ಕರ್ನಾಟಕ, ಉತ್ತರಪ್ರದೇಶ, ಮಧ್ಯಪ್ರದೇಶ, ಹರ್ಯಾಣ, ಗುಜರಾತ್‌ ರಾಜ್ಯಗಳಲ್ಲಿ ನಿತ್ಯ ವಿತರಿಸುತ್ತಿರುವ ಕೋವಿಡ್‌ ಲಸಿಕೆ ಪ್ರಮಾಣವು, ಹಲವು ದೇಶಗಳಲ್ಲಿ ವಿತರಿಸುತ್ತಿರುವ ಲಸಿಕೆ ಪ್ರಮಾಣಕ್ಕಿಂತಲೂ ಅಧಿಕವಾಗಿದೆ. ಈ ಮೂಲಕ ಈ ರಾಜ್ಯಗಳು ಅಮೆರಿಕ ಸೇರಿದಂತೆ ಸಿರಿವಂತ ದೇಶಗಳಿಗಿಂತಲೂ ಲಸಿಕೆ ವಿತರಣೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿವೆ’ ಎಂದು ಸ್ವತಃ ಕೇಂದ್ರ ಸರ್ಕಾರ ಗ್ರಾಫ್‌ ಬಿಡು​ಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದೆ.

ಉ.ಪ್ರ. ನಂ.1, ಕರ್ನಾ​ಟಕ ನಂ.3:

ಸೆಪ್ಟೆಂಬರ್‌ ಅಂಕಿ-ಅಂಶ ಆಧ​ರಿ​ಸಿದ ಗ್ರಾಫ್‌ ಅನ್ವಯ, ಸರಾಸರಿ ನಿತ್ಯ 11.73 ಲಕ್ಷ ಡೋಸ್‌ ವಿತರಣೆಯೊಂದಿಗೆ ಉತ್ತರಪ್ರದೇಶ ದೇಶದಲ್ಲೇ ಮುಂಚೂಣಿಯಲ್ಲಿದೆ. ನಂತರದ ಸ್ಥಾನದಲ್ಲಿ ಗುಜರಾತ್‌, ಕರ್ನಾಟಕ, ಮಧ್ಯಪ್ರದೇಶ, ಹರ್ಯಾಣ ರಾಜ್ಯಗಳಿವೆ.

ಉತ್ತರಪ್ರದೇಶದಲ್ಲಿ ಲಸಿಕೆ ವಿತರಣೆಯ ವೇಗವು ಅಮೆರಿಕಕ್ಕಿಂತ ಹೆಚ್ಚಾಗಿದೆ. ಅಮೆರಿಕದಲ್ಲಿ ನಿತ್ಯ ಸರಾಸರಿ 8.07 ಲಕ್ಷ ಜನರಿಗೆ ಲಸಿಕೆ ನೀಡುತ್ತಿದ್ದರೆ, ಉತ್ತರಪ್ರದೇಶದಲ್ಲಿ 11.73 ಲಕ್ಷ ಜನರಿಗೆ ನೀಡಲಾಗುತ್ತಿದೆ.

ಇನ್ನು ಗುಜರಾತ್‌ನಲ್ಲಿ ನಿತ್ಯ 4.80 ಲಕ್ಷ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಇದು ಮೆಕ್ಸಿಕೋದ ಪ್ರಮಾಣವಾದ 4.56 ಲಕ್ಷಕ್ಕಿಂತ ಹೆಚ್ಚು.

ಕರ್ನಾಟಕದಲ್ಲಿ ಸರಾಸರಿ ನಿತ್ಯ 3.82 ಲಕ್ಷ ಜನರಿಗೆ ಲಸಿಕೆ ನೀಡಲಾಗುತ್ತಿದ್ದು, ಇದು ರಷ್ಯಾದ ಪ್ರಮಾಣವಾದ 3.68 ಲಕ್ಷಕ್ಕಿಂತ ಹೆಚ್ಚು.

ಮಧ್ಯಪ್ರದೇಶದ ಸರಾಸರಿ ಪ್ರಮಾಣವಾದ 3.71 ಲಕ್ಷ ಡೋಸ್‌, ಫ್ರಾನ್ಸ್‌ನ 2.84 ಲಕ್ಷಕ್ಕಿಂತ ಹೆಚ್ಚು.

ಅದೇ ರೀತಿ ಹರ್ಯಾಣದ 1.52 ಲಕ್ಷ ಡೋಸ್‌, ಕೆನಡಾದ ಪ್ರಮಾಣವಾದ 85000ಕ್ಕಿಂತ ಹೆಚ್ಚು ಎಂದು ಸರ್ಕಾರದ ಗ್ರಾಫ್‌ನಲ್ಲಿ ತೋರಿಸಲಾಗಿದೆ.

ಉತ್ತಮ ಸಾಧ​ನೆ:

ಈ ಪಟ್ಟಿನೋಡಿ ಹೇಳುವುದಾದರೆ ವಿಶ್ವದ ಶ್ರೀಮಂತ ಮತ್ತು ಜಿ8 ಒಕ್ಕೂಟದ ಭಾಗವಾಗಿರುವ ಅಮೆರಿಕ, ರಷ್ಯಾ, ಫ್ರಾನ್ಸ್‌, ಕೆನಡಾಗಳಿಗಿಂತಲೂ ಭಾರತದ ದೊಡ್ಡ ಮತ್ತು ಸಣ್ಣ ರಾಜ್ಯಗಳೇ ಅತ್ಯುತ್ತಮ ಸಾಧನೆ ಮಾಡಿರುವುದು ಕಂಡುಬರುತ್ತದೆ. ಇನ್ನೊಂದು ವಿಶೇಷವೆಂದರೆ ಲಸಿಕೆ ವಿತರಣೆಯಲ್ಲಿ ಉತ್ತಮ ಸಾಧನೆ ಮಾಡಿರುವ ಎಲ್ಲಾ ಟಾಪ್‌ 5 ರಾಜ್ಯಗಳಲೂ ಬಿಜೆಪಿ ಸರ್ಕಾರಗಳೇ ಅಧಿಕಾರ ನಡೆಸುತ್ತಿವೆ.

‘2021ರ ಅಂತ್ಯದೊಳಗೆ ದೇಶದ ಎಲ್ಲಾ ಅರ್ಹರಿಗೆ ಲಸಿಕೆ ವಿತರಣೆಯ ಗುರಿಯೊಂದಿಗೆ, ಭಾರತ ಲಸಿಕೆ ನೀಡಿಕೆಯ ವೇಗದಲ್ಲಿ ವಿಶ್ವದಲ್ಲೇ ಮುಂಚೂಣಿ ದೇಶವಾಗಿ ಹೊರಹೊಮ್ಮಿದೆ. ನೀವು ಕೂಡ ಲಸಿಕೆ ಪಡೆಯುವ ಮೂಲಕ, ಕೊರೋನಾ ವಿರುದ್ಧ ಹೋರಾಟದ ದೇಶದ ಅಭಿಯಾನವನ್ನು ಇನ್ನಷ್ಟು ಬಲಪಡಿಸಬಹುದು’ ಎಂದು ಕೇಂದ್ರ ಆರೋಗ್ಯ ಸಚಿ​ವಾ​ಲಯ ಟ್ವೀಟ್‌ ಮಾಡಿದೆ.