ಕಾರ್ಗಿಲ್ ವೀರರನ್ನು 5 ವರ್ಷ ಮರೆತಿದ್ದ ಯುಪಿಎ ಸರ್ಕಾರ, ಮತ್ತೆ ವಿಜಯ್ ದಿವಸ್ ಜಾರಿಗೆ ಬಂದಿದ್ದು ಹೀಗೆ!
ಕಾರ್ಗಿಲ್ ವೀರರನ್ನು 5 ವರ್ಷ ಮರೆತಿದ್ದ ಯುಪಿಎ ಸರ್ಕಾರ| ಹುತಾತ್ಮರಿಗೆ ಗೌರವ ಸಲ್ಲಿಸುವ ಸಂಪ್ರದಾಯವನ್ನೇ ಮೂಲೆಗೆ ತಳ್ಳಿದ್ದ ಸರ್ಕಾರ| ಪತ್ರ ಬರೆದು ಹುತಾತ್ಮರಿಗೆ ಗೌರವ ಸಲ್ಲಿಸಲು ಮನವಿ ಮಾಡಿದ್ದ ಸಂಸದ ರಾಜೀವ್ ಚಂದ್ರಶೇಖರ್
ನವದೆಹಲಿ(ಜು.26): ಜುಲೈ 26 ಭಾರತದ ಪಾಲಿಗೆ ಇದು ಐತಿಹಾಸಿಕ ದಿನ, ಬೆನ್ನ ಹಿಂದೆ ಚೂರಿ ಹಾಕಲು ಸಜ್ಜಾಗಿದ್ದ ಪಾಕಿಸ್ತಾನಕ್ಕೆ ನಮ್ಮ ಯೋಧರು ತಕ್ಕ ಉತ್ತರ ನೀಡಿ ಹಿಮ್ಮೆಟ್ಟಿಸಿದ ದಿನವಿದು. ಕಾರ್ಗಿಲ್ ಕಣಿವೆಯ ಎತ್ತರ ಪ್ರದೇಶದಿಂದ ದಾಳಿ ಮಾಡುತ್ತಿದ್ದ ಶತ್ರುಗಳನ್ನು ಧೈರ್ಯದಿಂದ ಎದುರಿಸಿ ಬಗ್ಗು ಬಡಿದ ದಿನ. ಹೀಗಾಗಿ ಕಾರ್ಗಿಲ್ ವಿಜಯ್ ದಿವಸ್ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ದಿನ. 1999ರಲ್ಲಿ ಪಾಕ್ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನೇ ಬಲಿದಾನಗೈದ ಹುತಾತ್ಮರ ತ್ಯಾಗವನ್ನು ಈ ದಿನ ಸ್ಮರಿಸಲಾಗುತ್ತದೆ. ಆದರೆ ನಿಮಗೆ ಗೊತ್ತಾ 2009ರವರೆಗೆ ಈ ದಿನದ ಆಚರಣೆಯನ್ನೇ ಮಾಡುತ್ತಿರಲಿಲ್ಲ.
'ವೀರಯೋಧನ ಛಿದ್ರ ದೇಹ ನನ್ನಲ್ಲಿ ಕಿಚ್ಚು ಹಚ್ಚಿತು'; ಯುದ್ಧದ ಮೆಲುಕು ಹಾಕಿದ ದಕ್ಷಿಣ ಕನ್ನಡದ ಯೋಧ
ಹೌದು ಭಾರತ ಹಾಗೂ ಪಾಕಿಸ್ತಾನ ನಡುವಿನ ಕಾರ್ಗಿಲ್ ಯುದ್ಧ 1999ರಲ್ಲಿ ಕೊನೆಯಾಗಿತ್ತು. ಆದರೆ ಅಂದಿನ ಕಾಂಗ್ರೆಸ್ ನಾಯಕತ್ವದ ಸರ್ಕಾರ ಹುತಾತ್ಮರ ಬಲಿದಾನವನ್ನು ಸ್ಮರಿಸಿಕೊಳ್ಳಲು ವಿಫಲವಾಗಿತ್ತು. ಆದರೆ 2009ರ ಜುಲೈನಲ್ಲಿ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಈ ವಿಚಾರದ ಕುರಿತು ಧ್ವನಿ ಎತ್ತಿದ್ದು, ಇದಾದ ಬಳಿಕ ಮತ್ತೆ ಕಾರ್ಗಿಲ್ ವಿಜಯ್ ದಿವಸ್ ಆಚರಣೆಗೆ ಬಂತು.
ಜುಲೈ 25ರಂದು ಸಂಸದ ರಾಜೀವ್ ಚಂದ್ರಶೇಖರ್ ಈ ಬಗ್ಗೆ ಟ್ವೀಟ್ ಮಾಡಿದ್ದು, ತಾವು ಅಂದಿನ ರಕ್ಷಣಾ ಸಚಿವ ಎ. ಕೆ. ಆಂಟನಿಗೆ ಬರೆದ ಪತ್ರವನ್ನೂ ಇದರ ಜೊತೆ ಶೇರ್ ಮಾಡಿಕೊಂಡಿದ್ದಾರೆ. ಈ ಟ್ವೀಟ್‌ನಲ್ಲಿ 'ನಿಮಗೆ ಗೊತ್ತಾ? ನಾನು ಸಂಸತ್ತಿನಲ್ಲಿ ಈ ಬಗ್ಗೆ ಧ್ವನಿ ಎತ್ತಿವವರೆಗೆ, 2004 ರಿಂದ 2009ರವರೆಗೆ ಯುಪಿಎ ನೇತೃತ್ವದ ಸರ್ಕಾರ #KargilVijayDiwasನ್ನು ಆಚರಿಸಿರಲಿಲ್ಲ. ಹುತಾತ್ಮರಿಗೆ ಗೌರವವನ್ನೂ ಸಲ್ಲಿಸಿರಲಿಲ್ಲ' ಎಂದು ಬರೆದಿದ್ದಾರೆ.
ಸಂಸದ ರಾಜೀವ್ ಚಂದ್ರಶೇಖರ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಕಾರ್ಗಿಲ್ ವಿಜಯ್ ದಿವಸ್ ಆಚರಣೆಗೆ ದಿನಾಂಕ ನಿಗಧಿಪಡಿಸುವವರೆಗೂ ಈ ಬಗ್ಗೆ ನಿರಂತರವಾಗಿ ಶ್ರಮಿಸಿದರು . ಇದರ ಫಲವಾಗಿ ಅಂದಿನ ರಕ್ಷಣಾ ಸಚಿವರಾಗಿದ್ದ ಎ. ಕೆ. ಆಂಟನಿ ಜುಲೈ 26ನ್ನು ಕಾರ್ಗಿಲ್ ವಿಜಯ್ ದಿವಸ್ ಆಗಿ ಆಚರಿಸಲು ನಿಗಧಿಪಡಿಸಿದರು. ಅಲ್ಲದೇ ಕಾರ್ಗಿಲ್ ವಿಜಯ್ ದಿವಸ್‌ನಂದು ದೆಹಲಿಯ ಇಂಡಿಯಾ ಗೇಟ್ ಬಳಿ ಇರುವ ಅಮರ್ ಜವಾನ್ ಜ್ಯೋತಿ ಸ್ಮಾರಕಕ್ಕೂ ರಕ್ಷಣಾ ಸಚಿವರು ಭೇಟಿ ನೀಡಿ ಹುತಾತ್ಮರಿಗೆ ಗೌರವ ಸಲ್ಲಿಸುವ ಸಂಪ್ರದಾಯ ಹುಟ್ಟಿಕೊಂಡಿತು.
21ನೇ ಕಾರ್ಗಿಲ್ ವಿಜಯ ದಿವಸ: ಪಾಕ್ ಕುತಂತ್ರದಿಂದ ಆರಂಭವಾಗಿದ್ದ ಯುದ್ಧ!
ಯುಪಿಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಐದು ವರ್ಷಗಳ ಬಳಿಕ ಅಂದರೆ 2009ರಲ್ಲಿ ಮೊದಲ ಬಾರಿ ಈ ದಿನದ ಆಚರಣೆ ಆರಂಭವಾಯ್ತು. ಇನ್ನು ದಾಖಲೆಗಳನ್ನು ಗಮನಿಸಿದರೆ ಅಟಲ್ ಬಿಹಾರಿ ವಾಜಪೇಯಿ ತಮ್ಮ ಅಧಿಕಾರವಧಿಯಲ್ಲಿ ವಿಜಯ್ ದಿವಸ್ ಆಚರಿಸಿದ್ದರು. ಇಂಡಿಯಾ ಗೇಟ್‌ಗೆ ಭೇಟಿ ನೀಡಿ ದೇಶಕ್ಕಾಗಿ ಪ್ರಾಣ ತ್ಯಾಗಗೈದ ಯೋಧರಿಗೆ ಗೌರವ ಸಲ್ಲಿಸುವ ಸಂಪ್ರದಾಯವನ್ನಾಚರಿಸಿದ್ದರು. ಆದರೆ ಯುಪಿಎ ಸರ್ಕಾರ ಅಧಿಕಾರಕ್ಕೇರಿದ ಬಳಿಕ ಈ ಸಂಪ್ರದಾಯವನ್ನು ಕಡೆಗಣಿಸಿದರು. ಅಲ್ಲದೇ ಇದನ್ನು ಮರು ಜಾರಿಗೊಳಿಸಲು ಐದು ವರ್ಷಗಳೇ ಬೇಕಾಯ್ತು.
ಇನ್ನು ಸಂಸದ ರಾಜೀವ್ ಚಂದ್ರಶೇಖರ್ ಅಂದಿನ ರಕ್ಷಣಾ ಸಚಿವರಿಗೆ ಬರೆದ ಪತ್ರ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
"