Asianet Suvarna News Asianet Suvarna News

21ನೇ ಕಾರ್ಗಿಲ್‌ ವಿಜಯ ದಿವಸ: ಪಾಕ್‌ ಕುತಂತ್ರದಿಂದ ಆರಂಭವಾಗಿದ್ದ ಯುದ್ಧ!

ಇಂದು 21ನೇ ಕಾರ್ಗಿಲ್‌ ವಿಜಯ ದಿವಸ| 1999 ಮೇ 3ರಿಂದ ಪಾಕಿಸ್ತಾನದ ಜತೆ ಸಂಘರ್ಷ ಆರಂಭ| 1999 ಜು.26ರಂದು ‘ಆಪರೇಷನ್‌ ವಿಜಯ್‌’ ಅಂತ್ಯ

India celebrates 21st anniversary of Kargil Vijay Diwas
Author
Bangalore, First Published Jul 26, 2020, 10:40 AM IST

ಪಾಕಿಸ್ತಾನದ ವಿರುದ್ಧ 1999ರಲ್ಲಿ ನಡೆದ ಯುದ್ಧದಲ್ಲಿ ಗೆಲುವು ಸಾಧಿಸಿದ ದಿನವನ್ನು ‘ಕಾರ್ಗಿಲ… ವಿಜಯ ದಿವಸ್‌’ ಎಂದು ಪ್ರತಿ ವರ್ಷ ಸ್ಮರಣೆ ಮಾಡಿಕೊಳ್ಳಲಾಗುತ್ತಿದೆ. ಕಾರ್ಗಿಲ್‌ ಯುದ್ಧದಲ್ಲಿ ಭಾರತ ಜಯಿಸಿ ಭಾನುವಾರಕ್ಕೆ 21 ವರ್ಷ. ಈ ಯುದ್ಧಕ್ಕೆ ಕಾರಣ ಏನು? ಯುದ್ಧದಲ್ಲಿ ಏನಾಯಿತು? ಪಾಕ್‌ ಕಿತಾಪತಿಯ ಉದ್ದೇಶವೇನು ಎಂಬುದನ್ನು ಇಲ್ಲಿ ಸವಿಸ್ತಾರವಾಗಿ ಕೀಡಲಾಗಿದೆ.

"

ಕಾರ್ಗಿಲ್‌ ಎಲ್ಲಿದೆ?

ಕಾರ್ಗಿಲ್‌ ಜಮ್ಮು-ಕಾಶ್ಮೀರದ ಶ್ರೀನಗರದಿಂದ 205 ಕಿ.ಮೀ ದೂರದಲ್ಲಿದೆ. ಗಡಿನಿಯಂತ್ರಣ ರೇಖೆಯ ಸನಿಹದ ಪ್ರದೇಶ. ಬೇಸಿಗೆಯಲ್ಲೂ ತಂಪು ಹವೆ ಮತ್ತು ರಾತ್ರಿ ಕಡುಶೀತ ವಾತಾವರಣ, ಚಳಿಗಾಲಗಳು ಸುದೀರ್ಘ, ಮೈಕೊರೆಯುವ ವಾತಾವರಣವಿದ್ದು, ಉಷ್ಣಾಂಶ ಆಗಾಗ್ಗೆ -48 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯುತ್ತದೆ. ಯುದ್ಧ ನಡೆದ ಪ್ರದೇಶ ಸುಮಾರು 160 ಕಿ.ಮೀ ವಿಸ್ತರಿಸಿರುವ ಹಿಮಚ್ಛಾದಿತ ಪರ್ವತ ಶ್ರೇಣಿಯಾಗಿದೆ.

ಕಾರ್ಗಿಲ್ ವೀರರನ್ನು 5 ವರ್ಷ ಮರೆತಿದ್ದ ಯುಪಿಎ ಸರ್ಕಾರ, ಮತ್ತೆ ವಿಜಯ್ ದಿವಸ್ ಜಾರಿಗೆ ಬಂದಿದ್ದು ಹೀಗೆ!

ಅತಿಕ್ರಮಣಕ್ಕೆ ಪಾಕಿಸ್ತಾನ ಕಾರ್ಗಿಲ್ಲನ್ನೇ ಆಯ್ದುಕೊಂಡಿದ್ದೇಕೆ?

ಪಾಕಿಸ್ತಾನ ಸೇನೆ ಅತಿಕ್ರಮಣ ಮಾಡಲು ಕಾರ್ಗಿಲ್‌ ಅನ್ನೇ ಆಯ್ದುಕೊಂಡಿದ್ದಕ್ಕೆ ಕಾರಣವಿದೆ. ಶ್ರೀನಗರದಿಂದ ಲಡಾಖ್‌ನ ಲೇಹ್‌ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ‘ಎನ್‌ಎಚ್‌1ಡಿ’ ರಸ್ತೆಯು ಕಾರ್ಗಿಲ್‌ ಮೂಲಕ ಹಾದುಹೋಗುತ್ತದೆ. ಕಾರ್ಗಿಲ್‌ ಪರ್ವತ ಶ್ರೇಣಿ ಮೇಲೆ ಹಿಡಿತ ಸಾಧಿಸಿದರೆ ಎನ್‌ಎಚ್‌1ಡಿ ಮೇಲೆ ಹಿಡಿತ ಸಾಧಿಸಿ, ಭಾರತೀಯ ಸೇನೆ ಲೇಹ್‌ ಜೊತೆಗೆ ಸಂಪರ್ಕ ಕಡಿದುಕೊಳ್ಳುವಂತೆ ಮಾಡಬಹುದು. ಹೀಗೆ ಮಾಡಿದರೆ ಸಿಯಾಚಿನ್‌ ನೀರ್ಗಲ್ಲು ಪ್ರದೇಶದಿಂದ ಭಾರತೀಯ ಸೈನಿಕರು ಕಾಲ್ಕೀಳುವಂತೆ ಮಾಡಬಹುದು ಎಂಬುದು ಪಾಕ್‌ನ ಯೋಜನೆಯಾಗಿತ್ತು.

ಪಾಕ್‌ ಕುತಂತ್ರದಿಂದ ಯುದ್ಧದ ಆರಂಭ

ಚಳಿಗಾಲದ ಋುತುವಿನಲ್ಲಿ, ಕಾಶ್ಮೀರದ ಹಿಮಾಚ್ಛಾದಿತ ಪರ್ವತ ಪ್ರದೇಶಗಳಲ್ಲಿ ಮೈಕೊರೆಯುವ ಚಳಿಯ ಕಾರಣದಿಂದ, ಗಡಿ ನಿಯಂತ್ರಣ ರೇಖೆಯ ಆಯಾ ಬದಿಗಳಲ್ಲಿರುವ ಕೆಲವು ಮುಂಚೂಣಿ ಶಿಬಿರಗಳನ್ನು ತ್ಯಜಿಸುವುದು ಮತ್ತು ಅತಿಕ್ರಮಣಕ್ಕೆ ದಾರಿಯಾಗಬಹುದಾದ ಪ್ರದೇಶಗಳ ಗಸ್ತನ್ನು ಕುಂಠಿತಗೊಳಿಸುವುದು ಭಾರತ ಮತ್ತು ಪಾಕಿಸ್ತಾನದ ಎರಡೂ ಸೇನೆಗಳ ಸಾಮಾನ್ಯ ವಾಡಿಕೆ. ಚಳಿಯ ತೀವ್ರತೆ ಕಡಿಮೆಯಾದ ಬಳಿಕ, ಮುಂಚೂಣಿ ಪ್ರದೇಶಗಳನ್ನು ಮರುವಶಕ್ಕೆ ತೆಗೆದುಕೊಂಡು ಪಹರೆ ಆರಂಭಿಸಲಾಗುತ್ತದೆ. 1999ರ ಫೆಬ್ರವರಿ ತಿಂಗಳಲ್ಲಿ, ಪಾಕಿಸ್ತಾನ ಸೇನೆಯು ಕಾರ್ಗಿಲ… ಪ್ರದೇಶದ ಗಡಿ ನಿಯಂತ್ರಣ ರೇಖೆಯ ತನ್ನ ಬದಿಯಲ್ಲಿ ತ್ಯಜಿಸಿದ್ದ ಶಿಬಿರಗಳನ್ನು ಮರು ಆಕ್ರಮಿಸಿಕೊಳ್ಳಲು ಆರಂಭಿಸಿತು. ಇದರ ಜೊತೆಗೆ ಗಡಿ ನಿಯಂತ್ರಣ ರೇಖೆಯ ಭಾರತದ ಬದಿಯಲ್ಲಿರುವ ಶಿಬಿರಗಳ ಮೇಲೆ ಆಕ್ರಮಣಕ್ಕೆ ತನ್ನ ಪಡೆಗಳನ್ನು ಕಳಿಸಿತು. ಇಲ್ಲಿಂದ ಭಾರತ-ಪಾಕ್‌ ಯುದ್ಧ ಆರಂಭವಾಯಿತು.

ಮನ್‌ ಕೀ ಬಾತ್: ಕಾರ್ಗಿಲ್ ವೀರರು, ಅವರನ್ನು ಹೆತ್ತ ತಾಯಂದಿರಿಗೆ ಮೋದಿ ನಮನ!

ಪಾಕ್‌ ಉಗ್ರರ ಒಳನುಸುಳುವಿಕೆ ಮಾಹಿತಿ ನೀಡಿದ್ದು ಸ್ಥಳೀಯರು

ಪಾಕಿಸ್ತಾನ ತನ್ನ ಷಡ್ಯಂತ್ರದ ಮೂಲಕ ಅಲ್ಲಿನ ಸ್ಥಳೀಯರನ್ನು, ಸೈನಿಕರನ್ನು ಬೆಟಾಲಿಕ್‌ ಸೆಕ್ಟರ್‌, ದ್ರಾಸ್‌ ಮತ್ತು ಕಾಸ್ಕಾರ್‌ ಸೆಕ್ಟರ್‌ ಮೂಲಕ ಭಾರತದ ಗಡಿಯೊಳಕ್ಕೆ ನುಸುಳುವಂತೆ ಕಳುಹಿಸಿತ್ತು. ಪಾಕಿಸ್ತಾನವು ಭಾರತದ ಗಡಿಯೊಳಗೆ ಸೈನಿಕರನ್ನು ನುಸುಳಿಸಿದ್ದರೂ ಭಾರತದ ಅರಿವಿಗೇ ಬಂದಿರಲಿಲ್ಲ. ಆದರೆ ಆದರೆ ಕಾಶ್ಮೀರದಲ್ಲಿರುವ ಸ್ಥಳೀಯರು ಭಾರತ ಸೇನೆಗೆ ವಿಷಯ ತಿಳಿಸಿದರು. ಆಗ ಭಾರತ ಸೇನೆ 5 ಯೋಧರನ್ನು ಗಸ್ತಿಗೆ ಕಳುಹಿಸಿತು. ಆದರೆ ಆ ಐವರನ್ನೂ ಪಾಕ್‌ ಚಿತ್ರ ಹಿಂಸೆ ನೀಡಿ ಕೊಂದು​ಹಾಕಿತು. ಇದರಿಂದ ಎಚ್ಚೆತ್ತ ಭಾರತ ಪಾಕ್‌ಗೆ ಪ್ರತ್ಯುತ್ತರ ನೀಡಲು ತನ್ನ ಪಡೆಗಳನ್ನು ಸಜ್ಜುಗೊಳಿ​ಸಿತು. ಭಾರತ ಸರ್ಕಾರ 20,000 ಭಾರತೀಯ ಪಡೆಗಳನ್ನು ಸಜ್ಜುಗೊಳಿಸಿ ಮೇ 3ರಿಂದ ‘ಆಪರೇಷನ್‌ ವಿಜಯ’ ಹೆಸರಿನಲ್ಲಿ ಕಾರಾರ‍ಯಚರಣೆ ಆರಂಭಿಸಿತು. ಭಾರತದ ಮೇಲೆ ಆಕ್ರಮಣಕ್ಕೆ ಪಾಕ್‌ 5000 ಯೋಧರನ್ನು ಕಳುಹಿಸಿತ್ತು.

ಮಿಗ್‌-27, ಬೊಫೋಸ್‌್ರ್ಸ ಅಬ್ಬರ

ಭಾರತಕ್ಕೆ ಕಾರ್ಗಿಲ್‌ ಯುದ್ಧ ಒಂದು ಅಚ್ಚರಿಯಾಗಿದ್ದರೂ, ಎತ್ತರದ ಪ್ರದೇಶದ ಅನಾನುುಕೂಲ ಇದ್ದರೂ ಶೆಲ್‌ ದಾಳಿ ಮುಖಾಂತರ ಭಾರತ ಸೇನೆ ಪಾಕಿಸ್ತಾನ ಬಂಕರ್‌ಗಳ ಮೇಲೆಯೇ ಕಣ್ಣಿಟ್ಟಿತ್ತು. ಪಾಕ್‌ ದಾಳಿಯನ್ನು ಹುಟ್ಟಡಗಿಸುವಲ್ಲಿ ಬೋಫೋ​ರ್‍ಸ್ ಫಿರಂಗಿಗಳು ಭಾರತಕ್ಕೆ ನೆರವಾಗಿದ್ದವು. ಪಾಕ್‌ನ ದುಷ್ಟತನಕ್ಕೆ ಸರಿಯಾದ ಬುದ್ಧಿ ಕಲಿಸಲು ‘ಆಪರೇಷನ್‌ ಸೇಫ್‌ ಸಾಗರ್‌’ ಹೆಸರಿನಲ್ಲಿ ಭೂ ಸೇನೆಯೊಂದಿಗೆ ವಾಯುಪಡೆಯೂ ಕಾರಾರ‍ಯಚರಣೆ ಆರಂಭಿಸಿತು. ಈ ವೇಳೆ ವಾಯುಪಡೆಗೆ ಶಕ್ತಿಯಾಗಿದ್ದು ಮಿಗ್‌-27, ಮಿಗ್‌-29 ಯುದ್ಧ ವಿಮಾನ. ಇದರಿಂದಾಗಿ ಪಾಕ್‌ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಭಾರತ ಯಶಸ್ವಿಯಾಯಿತು. 2ನೇ ವಿಶ್ವಯುದ್ಧದ ಬಳಿಕ ಅಪಾರ ಪ್ರಮಾಣದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಿದ ಮೊದಲ ಯುದ್ಧ ಇದು ಎಂಬ ಖ್ಯಾತಿ ಪಡೆಯಿತು.

ಪಾಕ್‌ನ ಉಸಿರುಗಟ್ಟಿಸಿದ ನೌಕಾಪಡೆ

ಪಾಕಿಸ್ತಾನದ ಬಂದರುಗಳಿಗೆ (ಮುಖ್ಯವಾಗಿ ಕರಾಚಿ ಬಂದರಿಗೆ) ತಡೆ ವಿಧಿಸುವ ಪ್ರಯತ್ನದ ಮೂಲಕ ಸರಬರಾಜು ಮಾರ್ಗಗಳನ್ನು ಕಡಿತಗೊಳಿಸಿ ಭಾರತೀಯ ನೌಕಾಪಡೆ ಕೂಡ ಯುದ್ಧ ಸಿದ್ಧತೆ ಮಾಡಿಕೊಂಡಿತು. ಬಳಿಕ, ಪೂರ್ಣ ಸ್ವರೂಪದ ಯುದ್ಧ ಭುಗಿಲೆದ್ದರೆ ಪಾಕಿಸ್ತಾನದಲ್ಲಿ ಕೇವಲ 6 ದಿನಗಳಿಗೆ ಸಾಕಾಗುವಷ್ಟುಇಂಧನ ದಾಸ್ತಾನು ಉಳಿದುಕೊಂಡಿ ದೆಯೆಂದು ಆಗಿನ ಪ್ರಧಾನಮಂತ್ರಿ ನವಾಜ್‌ ಷರೀಫ್‌ ಬಹಿರಂಗಪಡಿಸಿದ್ದರು.

'ವೀರಯೋಧನ ಛಿದ್ರ ದೇಹ ನನ್ನಲ್ಲಿ ಕಿಚ್ಚು ಹಚ್ಚಿತು'; ಯುದ್ಧದ ಮೆಲುಕು ಹಾಕಿದ ದಕ್ಷಿಣ ಕನ್ನಡದ ಯೋಧ

ಮುಷರ್ರಫ್‌ ಮಾಸ್ಟರ್‌ ಮೈಂಡ್‌

ಭಾರತದ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಶಾಂತಿ ಮಂತ್ರದ ಪ್ರಸ್ತಾಪವನ್ನು ಧಿಕ್ಕರಿಸಿ, ಅಂದಿನ ಪಾಕಿಸ್ತಾನದ ಜನರಲ್‌ ಪರ್ವೇಜ್‌ ಮುಷರ್ರಫ್‌ ಕಾರ್ಗಿಲ್‌ ಯುದ್ಧ ಪ್ರಾರಂಭಕ್ಕೆ ಕಾರಣಕರ್ತರಾದರು. ಮುಷರ್ರಫ್‌ ಕಾರ್ಗಿಲ್‌ ಯುದ್ಧ ‘ಮಾಸ್ಟರ್‌ ಮೈಂಡ್‌’ ಎಂದು ನಂತರ ಗೊತ್ತಾಯಿತು. ಕಾಶ್ಮಿರದಲ್ಲಿ ಒಳನುಗ್ಗುವ ಯೋಜನೆಯನ್ನು ತುಂಬ ನಾಜೂಕಾಗಿ ಮುಷರ್ರಫ್‌ ಯೋಜಿಸಿದ್ದರು. ವಿಶೇಷ ಎಂದರೆ ಅಂದಿನ ಪಾಕ್‌ ಪ್ರಧಾನಿ ನವಾಜ್‌ ಷರೀಫ್‌ ಅವರಿಗೂ ಈ ಬಗ್ಗೆ ಮಾಹಿತಿ ಇರಲಿಲ್ಲ.

2 ಪರಮಾಣು ರಾಷ್ಟ್ರಗಳ ನಡುವಣ ಯುದ್ಧ

ಪಾಕಿಸ್ತಾನ ಮತ್ತು ಭಾರತ ಎರಡೂ ರಾಷ್ಟ್ರಗಳು ಸಮೂಹ ವಿನಾಶಕ ಅಸ್ತ್ರಗಳನ್ನು ಹೊಂದಿರುವುದರಿಂದ ಕಾರ್ಗಿಲ… ಸಂಘರ್ಷ ತೀವ್ರ ಸ್ವರೂಪ ತಾಳಿದರೆ ಅಣ್ವಸ್ತ್ರ ಯುದ್ಧಕ್ಕೆ ತಿರುಗಬಹುದೆಂದು ಅಂತಾರಾಷ್ಟ್ರೀಯ ಸಮುದಾಯದಲ್ಲಿ ಅನೇಕ ಮಂದಿ ಕಳವಳ ವ್ಯಕ್ತಪಡಿಸಿದ್ದರು. ಬಾರತ ಅಣ್ವಸ್ತ್ರ ಪರೀಕ್ಷೆ ನಡೆದ ಒಂದು ವರ್ಷದಲ್ಲೇ ಕಾರ್ಗಿಲ… ಸಂಘರ್ಷ ಆರಂಭಗೊಂಡಿದ್ದರಿಂದ, ಅದು ತೀವ್ರ ಸ್ವರೂಪ ಪಡೆಯುವ ಮುನ್ನ ಅಂತ್ಯಗೊಳಿಸಲು ಅನೇಕ ರಾಷ್ಟ್ರಗಳು ಇಚ್ಛಿಸಿದ್ದವು.

ಸೋತು ಶರಣಾದ ಪಾಕ್‌

ಸತತ ಹೋರಾಟದ ಫಲವಾಗಿ ಟೋಲೊಲಿಂಗ್‌ ಭಾರತದ ವಶವಾಯಿತು. ಈ ವೇಳೆಗಾಗಲೇ ಟೈಗರ್‌ಹಿಲ್ಸ್‌ನಲ್ಲಿ ಪಾಕ್‌ ಪಡೆಗಳು ಭದ್ರವಾಗಿ ಬೇರೂರಿದ್ದವು. ಇಲ್ಲಿ ನಡೆದ ಹೋರಾಟದಲ್ಲಿ ಎರಡೂ ಪಡೆಗಳು ಸಾಕಷ್ಟುಸಾವುನೋವು ಅನುಭವಿಸಿದವು. ಟೈಗರ್‌ ಹಿಲ್‌ ಮೇಲೆ ನಡೆದ ಅಂತಿಮ ಪ್ರಹಾರದಲ್ಲಿ 10 ಪಾಕಿಸ್ತಾನಿ ಸೈನಿಕರು ಹತರಾಗಿ ಟೈಗರ್‌ ಹಿಲ… ಭಾರತದ ಕೈವಶವಾಯಿತು. ಈ ಕಾರ್ಯಾಚರಣೆಯಲ್ಲಿ ಭಾರತ ಕೂಡ ತನ್ನ ಐವರು ಯೋಧರನ್ನು ಕಳೆದುಕೊಂಡಿತು. ಸಂಘರ್ಷದ 2 ತಿಂಗಳ ಬಳಿಕ ಅತಿಕ್ರಮಣಕಾರರು ಆಕ್ರಮಿಸಿಕೊಂಡ ಅನೇಕ ಶಿಖರಗಳನ್ನು ಭಾರತದ ಪಡೆಗಳು ಮರುವಶಕ್ಕೆ ತೆಗೆದುಕೊಂಡವು. ಆಕ್ರಮಿತ ಪ್ರದೇಶದ ಶೇ.75-ಶೇ.80 ಮತ್ತು ಬಹುತೇಕ ಎಲ್ಲ ಎತ್ತರದ ಪ್ರದೇಶಗಳು ಮತ್ತೆ ಭಾರತದ ಸ್ವಾಧೀನವಾದವು. ತರುವಾಯ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ ಯಾಚೆಗೆ ತನ್ನ ಪಡೆಗಳನ್ನು ಹಿಂತೆಗೆದುಕೊಂಡಿತು. ಈ ವೇಳೆಗಾಗಲೇ ಪಾಕಿಸ್ತಾನದ ಆರ್ಥಿಕ ಸ್ಥಿತಿ ತೀರಾ ಕುಸಿದುಹೋಗಿತ್ತು. ತನ್ನ ಮೃತ ಯೋಧರ ಹೆಣವನ್ನು ಸ್ವೀಕರಿಸಲೂ ಪಾಕ್‌ ನಿರಾಕರಿಸಿತು. ಕೊನೆಗೂ 1999ರ ಜುಲೈ 26ರಂದು ಭಾರತ ಜಯಶಾಲಿ ಎಂದು ಘೋಷಿಸಲಾಯಿತು.

ಭಾರತದ 527 ಯೋಧರು ಹುತಾತ್ಮ

ಭಾರತದ ಕಡೆಯಿಂದ ಅಧಿಕೃತ ದಾಖಲೆಗಳ ಪ್ರಕಾದ 527 ಮಂದಿ ಯೋಧರು ಹುತಾತ್ಮರಾದರೆ, 1363 ಯೋಧರು ಗಾಯಗೊಂಡಿದ್ದರು. ಪಾಕಿಸ್ತಾನ ದಾಖಲೆಗಳ ಪ್ರಕಾರ ಅಲ್ಲಿ 453 ಸೈನಿಕರು ಮೃತಪಟ್ಟಿದ್ದರು. ಆದರೆ ಪಾಕಿಸ್ತಾನ ಸೈನಿಕರ ಸಾವಿನ ಲೆಕ್ಕವನ್ನು ಸರಿಯಾಗಿ ನೀಡಿಲ್ಲ, ಪಾಕಿಸ್ತಾನದಲ್ಲಿ 700ಕ್ಕೂ ಹೆಚ್ಚು ಸೈನಿಕರು ಮೃತಪಟ್ಟು, 1000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು ಎಂದು ಭಾರತ ಪ್ರತಿಪಾದಿಸಿದೆ.

ಟೀವಿಯಲ್ಲಿ ಪ್ರಸಾರವಾದ ಮೊದಲ ಯುದ್ಧ

ಕಾರ್ಗಿಲ್‌ ಯುದ್ಧದ ದೃಶ್ಯಗಳು ಟೀವಿಯಲ್ಲಿ ಪ್ರಸಾರಗೊಂಡವು. ಭಾರತ ಇತಿಹಾಸದಲ್ಲಿ ಎಮೆರ್ಜೆಂಟ್‌ ಬ್ರಾಡ್‌ಕಾಸ್ಟ್‌ ಜರ್ನಲಿಸಂ ಮೂಲಕ ದೂರದರ್ಶನದಲ್ಲಿ ಪ್ರಸಾರವಾದ ಮೊದಲ ಯುದ್ಧ ಇದು.

ಕಾರ್ಗಿಲ್‌ ಯುದ್ಧ ವೀರರು

1.ಸಂಜಯ್‌ ಕುಮಾರ್‌, ರೈಫಲ್‌ ಮ್ಯಾನ್‌ (ಪರಮವೀರ ಚಕ್ರ)

ಇವರ ತಂಡಲ್ಲಿದ್ದ ಸೈನಿಕರೆಲ್ಲಾ ನೆಲಕ್ಕುಳಿದ್ದರು. ಸ್ವತಃ ಇವರಿಗೆ ಕಾಲು, ಸೊಂಟಕ್ಕೆ ಗುಂಡೇಟು ಬಿದ್ದಿತ್ತು. ಆದರೂ ಪಾಕ್‌ನ ಬಂಕರನ್ನು ಹೊಡೆದಿದ್ದರು.

2. ಯೋಗೇಂದ್ರ ಯಾದವ್‌, ಗ್ರೆನೇಡಿಯರ್‌ (ಪರಮವೀರ ಚಕ್ರ)

ಟೈಗರ್‌ ಹಿಲ್‌ ಪ್ರದೇಶಕ್ಕೆ ತೆರಳಿದ್ದ ಇವರ ತಂಡದ 6 ಜನ ಸೈನಿಕರು ಹುತಾತ್ಮರಾಗಿದ್ದರು. ಏಕಾಂಗಿಯಾದ ಇವರು ಪಾಕ್‌ನ 2 ಬಂಕರ್‌ಗಳನ್ನು ಹೊಡೆದುರುಳಿಸಿದ್ದರು.

3.ಮನೋಜ್‌ ಕುಮಾರ್‌ ಪಾಂಡೆ (ಪರಮವೀರ ಚಕ್ರ)

ಪಾಕಿಗಳ ಗುಂಡು ತಮ್ಮ ದೇಹವನ್ನು ಸೀಳುತ್ತಿದ್ದರೂ ಲೆಕ್ಕಿಸದೆ ಅವರ ಬಂಕರ್‌ಗಳನ್ನು ನಾಶಪಡಿಸಿ ಯುದ್ಧ ಭೂಮಿಯಲ್ಲಿಯೇ ಮಡಿದರು.

4. ಕೈಶಿಂಗ್‌ ಕ್ಲಿಫರ್ಡ್‌ ನಂಗ್ರುಮ್‌ (ಪರಮವೀರ ಚಕ್ರ)

ಕಾರ್ಗಿಲ್‌ ಯುದ್ಧದ ವೇಳೆ ಸೈನ್ಯವನ್ನು ಮುನ್ನಡೆಸುತ್ತಿದ್ದ ನುಂಗ್ರುಮ್‌ ಏಕಾಂಗಿಯಾಗಿ ಪಾಕ್‌ ಬಂಕರನ್ನು ನಾಶ ಮಾಡಿ ನಂತರ ಯುದ್ಧ ಭೂಮಿಯಲ್ಲೇ ಮೃತರಾದರು.

5. ವಿಕ್ರಮ್‌ ಬಾತ್ರಾ ಕ್ಯಾಪ್ಟನ್‌ (ಪರಮವೀರ ಚಕ್ರ)

ಪಾಕಿಸ್ತಾನಿ ಸೈನಿಕರು ಇವರ ಮೇಲೆ ಸತತ ದಾಳಿ ನಡೆಸಿದ್ದರು. ಆದರೂ ಜಗ್ಗದೆ ಪ್ರತಿದಾಳಿ ನಡೆಸಿ ಯುದ್ಧ ಭೂಮಿಯಲ್ಲೇ ವೀರ ಮರಣ ಹೊಂದಿದರು.

7. ಕ್ಯಾಪ್ಟನ್‌ ಎನ್‌. ಕೆಂಗುರುಸೆ (ಪರಮವೀರ ಚಕ್ರ)

ತನ್ನ ಜೊತೆಗಿದ್ದ ಸೈನಿರನ್ನು ರಕ್ಷಿಸಲೆಂದು ತಾವೇ ಪಾಕ್‌ ಸೈನಿಕರ ಗುಂಡೇಟಿಗೆ ಬಲಿಯಾದರು.

ಮಹಾವೀರ ಚಕ್ರ ಪಶಸ್ತಿ ಪಡೆದ ಇತರರು

ಮೇಜರ್‌ ಸೋನಂ ವಾಂಗ್‌ಚುಕ್‌

ಮೇಜರ್‌ ವಿವೇಕ್‌ ಗುಪ್ತಾ

ಮೇಜರ್‌ ರಾಜೇಶ್‌ ಅಧಿಕಾರಿ

ಮೇಜರ್‌ ಪದ್ಮಪಾಣಿ ಆಚಾರ್ಯ

ಕ್ಯಾಪ್ಟನ್‌ ಅನೂಜ್‌ ನಯ್ಯರ್‌

ನಾಯ್‌್ಕ ದಿಗೇಂದ್ರ ಕುಮಾರ್‌

ಕಡಿದಾದ ಪರ್ವತ, ಹಿಮಚ್ಛಾದಿತ ಪ್ರದೇಶದಲ್ಲಿ ನಡೆದ ಯುದ್ಧ

ಜಮ್ಮು ಕಾಶ್ಮೀರದ ಕಾರ್ಗಿಲ… ಪಟ್ಟಣದ ದ್ರಾಸ್‌, ಶ್ರೀನಗರ, ಲೇಹ್‌ ಮತ್ತು ಈಶಾನ್ಯಕ್ಕಿರುವ ಬಟಾಲಿಕ್‌ ಪ್ರದೇಶಗಳ 160 ಕಿ.ಮೀ. ಪ್ರದೇಶವು ಕಾರ್ಗಿಲ್‌ ಯುದ್ಧದಲ್ಲಿ ಮುಂಚೂಣಿಯಲ್ಲಿದ್ದವು. ಶ್ರೀನಗರ ಮತ್ತು ಲೇಹ್‌ -40 ಡಿಗ್ರಿ ಸೆಲ್ಷಿಯಸ್‌ ಉಷ್ಣಾಂಶವಿರುವ ಪ್ರದೇಶ. ಇಲ್ಲಿನ ಸುಮಾರು 16,000 ಅಡಿ ಎತ್ತರದ ಪರ್ವತ ಶ್ರೇಣಿ, ಕಡಿದಾದ ಕಣಿವೆ ಪ್ರದೇಶದಲ್ಲಿ 1999ರ ಕಾರ್ಗಿಲ್‌ ಯುದ್ಧ ನಡೆದಿತ್ತು. ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ಇಲ್ಲಿಗೆ ಸಾಗಿಸುವುದೇ ಪ್ರಯಾಸದ ಕೆಲಸವಾಗಿತ್ತು. ಯುದ್ಧ ನಡೆದ ಮತ್ತೊಂದು ದುರ್ಗಮ ಪ್ರದೇಶ ಸಿಯಾಚಿನ್‌. ಸಮುದ್ರ ಮಟ್ಟಕ್ಕಿಂತ 6000ಕ್ಕೂ ಹೆಚ್ಚು ಮೀಟರ್‌ ಎತ್ತರದಲ್ಲಿರುವ ಸಿಯಾಚಿನ್‌, ವಿಶ್ವದ ಅತಿ ಎತ್ತರದ ಯುದ್ಧ ಭೂಮಿ. ಚಳಿಗಾಲದಲ್ಲಿ ಇಲ್ಲಿನ ವಾತಾವರಣ -70 ಡಿಗ್ರಿಯವರೆಗೂ ಕುಸಿಯುತ್ತದೆ. ಕಾರ್ಗಿಲ್‌ ಯುದ್ಧ ನಡೆದ ಇನ್ನೊಂದು ಭೂಭಾಗ ಜೋಜಿ ಲಾ ಪಾಸ್‌. ಇದು ಅತ್ಯಂತ ಕಡಿದಾದ, ಕಠಿಣವಾದ ಕೊರಕಲು ಪ್ರಪಾತಗಳಿಂದ ಕೂಡಿರುವ ಪ್ರದೇಶ. ಇಲ್ಲಿ ಮೇ ತಿಂಗಳ ಕೊನೆಯವರೆಗೂ ಬೆಟ್ಟವನ್ನು ಮಂಜು ಸಂಪೂರ್ಣವಾಗಿ ಆವರಿಸಿಕೊಂಡಿರುತ್ತದೆ. ಈ ಅವಧಿಯಲ್ಲಿ ಇಲ್ಲಿ ಸೈನಿಕರನ್ನು ನಿಯೋಜಿಸಲು ಸಾಧ್ಯವೇ ಇಲ್ಲವಾದ್ದರಿಂದ ಸೈನಿಕರು ಇರುವುದಿಲ್ಲ. ಆದರೆ ಪಾಕ್‌ ಪ್ರಾಯೋಜಿತ ಉಗ್ರಗಾಮಿಗಳು ಏಪ್ರಿlf ಕೊನೆಕೊನೆಯಲ್ಲಿ ಕಾರ್ಗಿಲ್‌ನ ಪೂರ್ವ ಬಟಾಲಿಕ್‌ನ ಮತ್ತು ಡ್ರಾಸ್‌ನ ಉತ್ತರ ದಿಕ್ಕಿನ ಬೆಟ್ಟಗಳನ್ನು ಏರಿ ಗಟ್ಟಿಮುಟ್ಟಾದ ಬಂಕರ್‌ಗಳನ್ನು ಕಟ್ಟಿಕೊಂಡರು. ವಿಷಯ ತಿಳಿದ ಭಾರತೀಯ ಯೋಧರು ಪ್ರಾಣವನ್ನೂ ಲೆಕ್ಕಿಸದೆ ಹೋರಾಡಿ ದೇಶದ ವಿಜಯ ಪತಾಕೆ ಹಾರಿಸುವಲ್ಲಿ ಸಫಲವಾದರು.

Follow Us:
Download App:
  • android
  • ios