* ಕಾಂಡೋಮ್‌ ಉತ್ಪಾದಕ ಸಂಸ್ಥೆಗೂ ಕೊರೋನಾ ಲಾಕ್‌ಡೌನ್‌ ಹೊಡೆತ* 2 ವರ್ಷಗಳಲ್ಲಿ ಕಾಂಡೋಮ್‌ ಮಾರಾಟ ಶೇ.40ರಷ್ಟುಕುಸಿತ

ನ್ಯೂಯಾರ್ಕ್(ಜ.11): ಇಡೀ ವಿಶ್ವವನ್ನೇ ಹೈರಾಣಾಗಿಸಿರುವ ಕೊರೋನಾ ಹಾವಳಿಯ ಬಿಸಿ ಗರ್ಭನಿರೋಧಕ ಮತ್ತು ಸುರಕ್ಷತೆ ಲೈಂಗಿಕತೆಗಾಗಿ ಬಳಸುವ ಕಾಂಡೋಮ್‌ ಉದ್ಯಮಕ್ಕೂ ತಟ್ಟಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕಾಂಡೋಮ್‌ ಮಾರಾಟ ಶೇ.40ರಷ್ಟುಕುಸಿದಿದೆ ಎಂದು ಜಗತ್ತಿನ ಅತಿದೊಡ್ಡ ಕಾಂಡೋಮ್‌ ಉತ್ಪಾದನಾ ಕಂಪನಿಯಾದ ಕಾರೆಕ್ಸ್‌ ಬಿಎಚ್‌ಡಿಯ ಸಿಇಒ ಗೋಹ್‌ ಮಿಯಾ ಕಿಯಾಟ್‌ ಹೇಳಿದ್ದಾರೆ.

ಹೀಗಾಗಿ ವರ್ಷಕ್ಕೆ 500 ಕೋಟಿ ಕಾಂಡೋಮ್‌ ಉತ್ಪಾದಿಸಿ, 140ಕ್ಕೂ ಹೆಚ್ಚು ದೇಶಗಳಿಗೆ ರವಾನಿಸುತ್ತಿದ್ದ ಮಲೇಷಿಯಾ ಮೂಲದ ಕಾರೆಕ್ಸ್‌, ಇದೀಗ ಹೆಚ್ಚು ಬೇಡಿಕೆ ವ್ಯಕ್ತವಾಗುತ್ತಿರುವ ವೈದ್ಯಕೀಯ ಕೈಗವಸು ಉತ್ಪಾದನೆ ವಲಯಕ್ಕೆ ಜಿಗಿಯಲು ಮುಂದಾಗಿದೆ.

ಮೊದಲ ಲಾಕ್‌ಡೌನ್‌ ವೇಳೆ ಭಾರತದಲ್ಲಿ ಕಾಂಡೋಮ್‌ ಬಳಕೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿತ್ತು. ಅದೇ ರೀತಿ ಸೋಂಕು ನಿಯಂತ್ರಣಕ್ಕಾಗಿ ವಿಶ್ವಾದ್ಯಂತ ಲಾಕ್‌ಡೌನ್‌ ರೀತಿಯ ನಿರ್ಬಂಧದ ಕ್ರಮಗಳನ್ನು ಹೇರಲಾಗಿದೆ. ಹೀಗಾಗಿ ಮನೆಯಲ್ಲೇ ಉಳಿದುಕೊಳ್ಳುವ ಜನರು ಸುರಕ್ಷತೆಯ ಲೈಂಗಿಕತೆಗಾಗಿ ಕಾಂಡೋಮ್‌ಗಳ ಮೊರೆ ಹೋಗಲಿದ್ದು, ಕಾಂಡೋಮ್‌ಗಳ ಬೇಡಿಕೆ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಉಲ್ಟಾಆಗಿದೆ.

ಹೋಟೆಲ್‌ಗಳು, ಅಗತ್ಯವಲ್ಲದ ಆಸ್ಪತ್ರೆಗಳು ಮತ್ತು ಲೈಂಗಿಕ ಸುರಕ್ಷತೆಯ ಕೇಂದ್ರಗಳು ಬಂದ್‌ ಆಗಿರುವ ಮತ್ತು ಸರ್ಕಾರಗಳು ಕಾಂಡೋಮ್‌ ಜಾಗೃತಿಯ ಕಾರ‍್ಯಕ್ರಮಗಳನ್ನು ರದ್ದುಗೊಳಿಸಿರುವ ಕಾರಣಗಳಿಂದಾಗಿ ತಮ್ಮ ಉದ್ಯಮಕ್ಕೆ ಪೆಟ್ಟು ಬಿದ್ದಿದೆ ಎದು ಕಾರೆಕ್ಸ್‌ ಹೇಳಿಕೊಂಡಿದೆ.