ನೂಪರ್ ಶರ್ಮಾ ವಿರುದ್ಧ ಪ್ರವಾದಿ ಮೊಹಮ್ಮದ್ ಟೀಕಿಸಿದ ಆರೋಪ ನೂಪುರ್ ಹೇಳಿಕೆಯಿಂದ ಕಾನ್ಪುರದಲ್ಲಿ ಕೋಮು ಸಂಘರ್ಷ ಗಲಭೆ ಸೃಷ್ಟಿಸಿದ 18 ಮಂದಿ ಬಂಧನ, 500 ಮಂದಿ ವಿರುದ್ಧ ಕೇಸ್
ನವದೆಹಲಿ(ಜೂ.05) ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ಬಿಜೆಪಿ ವಕ್ತಾರೆ ನೂಪುರ್ ಶರ್ಮಾರನ್ನು ಅಮಾನತು ಮಾಡಲಾಗಿದೆ. ಕಾನ್ಪುರ ಹಿಂಸಾಚಾರ ಪ್ರಕರಣದ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಈ ಮಹತ್ವದ ನಿರ್ಧಾರ ಘೋಷಿಸಿದೆ. ಪ್ರವಾದಿ ಮೊಹಮ್ಮದ್ ಪೈಗಂಬರ್ ನಿಂದಿಸಿದ್ದಾರೆ ಎಂದು ಕಾನ್ಪುರದಲ್ಲಿ ಗಲಭೆ ಆರಂಭಗೊಂಡು ಹಿಂಸಾಚಾರ ರೂಪ ಪಡೆದಿತ್ತು.
ಸೌಹಾರ್ಧತೆಗೆ ಧಕ್ಕೆಯಾಗಿರುವ ಕಾರಣ ಈ ತಕ್ಷಣದಿಂದಲೇ ಬಿಜೆಪಿ ವಕ್ತಾರ ನೂಪುರ್ ಶರ್ಮಾರನ್ನು ಅಮಾನತುಗೊಳಿಸುವುದಾಗಿ ಬಿಜೆಪಿ ಹೇಳಿದೆ. ನೂಪುರ್ ಶರ್ಮಾ ಪಕ್ಷದ ಶಿಸ್ತು ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ಶಿಸ್ತು ಸಮಿತಿ ಹೇಳಿದೆ. ಈ ಪ್ರಕರಣ ಕುರಿತು ಬಿಜೆಪಿ ಶಿಸ್ತು ಸಮಿತಿ ತನಿಖೆ ನಡೆಸಲಿದೆ. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಾಗುವುದು ಎಂದು ಬಿಜೆಪಿ ಹೇಳಿದೆ.
ಕಾನ್ಪುರ ಗಲಭೆಕೋರರ ಆಸ್ತಿಗೆ ಬುಲ್ಡೋಜರ್ ಟ್ರೀಟ್ಮೆಂಟ್: ಎಸ್ಪಿ
ಯಾವುದೇ ಧರ್ಮ, ಸಮುದಾಯ, ಜಾತಿಯನ್ನು ನಿಂದಿಸುವುದು, ಅವಹೇಳನ ಮಾಡುವುದು ಬಿಜೆಪಿ ಸಹಿಸುವುದಿಲ್ಲ. ಬಿಜೆಪಿ ನಾಯಕರು ಶಿಸ್ತು ಮೀರಿದರೆ ಕ್ರಮ ಕೈಗೊಳ್ಳಲಾಗುವುದು. ನೂಪುರ್ ಶರ್ಮಾ ಮೇಲೆ ಪ್ರವಾದಿ ನಿಂದಿಸಿದ ಆರೋಪವಿದೆ. ನೂಪುರ್ ಶರ್ಮಾ ಹೇಳಿಕೆ ಹಾಗೂ ಇತರ ಮಾಹಿತಿಗಳನ್ನು ಕಲೆ ಹಾಕಲಾಗುತ್ತದೆ ಎಂದು ಬಿಜೆಪಿ ಹೇಳಿದೆ.
ಬಿಜೆಪಿ ಪಕ್ಷ ಕೋಮು ಸಂಘರ್ಷ ಸೃಷ್ಟಿಸುವ ಹೇಳಿಕೆಗಳನ್ನು ಬೆಂಬಲಿಸುವುದಿಲ್ಲ. ಇದಕ್ಕೆ ಎಲ್ಲರೂ ಬದ್ಧರಾಗಿರಬೇಕು. ಪಕ್ಷದ ಶಿಸ್ತು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಎಚ್ಚರಿಸಿದ್ದಾರೆ.
ಕಾನ್ಪುರದಲ್ಲಿ ಭುಗಿಲೆದ್ದ ಘರ್ಷಣೆ
ಇತ್ತೀಚೆಗೆ ಟೀವಿ ಚರ್ಚೆಯ ವೇಳೆ ಬಿಜೆಪಿ ವಕ್ತಾರ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ಅವರಿಗೆ ಅವಮಾನ ಮಾಡಿದ್ದಾರೆ ಎಂಬ ವಿಷಯ ಶುಕ್ರವಾರ ಕಾನ್ಪುರದಲ್ಲಿ ಘರ್ಷಣೆಗೆ ಕಾರಣವಾಗಿದೆ. ಶುಕ್ರವಾರದ ಪ್ರಾರ್ಥನೆಯ ನಂತರ ಕೆಲ ಸ್ಥಳೀಯ ಮುಸ್ಲಿಂ ನಾಯಕರು ಪರೇಧ್, ನಯೀ ಸಡಕ್ ಮತ್ತು ಯತೀಮ್‌ಖಾನಾ ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟು ಮುಚ್ಚುವಂತೆ ಕರೆ ನೀಡಿದ್ದಾರೆ. ಜೊತೆಗೆ ಬಲವಂತವಾಗಿ ಅಂಗಡಿ ಮುಚ್ಚುವ ಯತ್ನ ನಡೆಸಿದ್ದಾರೆ. ಈ ವೇಳೆ ಎರಡೂ ಸಮುದಾಯದವರು ಪರಸ್ಪರ ಕಲ್ಲು, ಇಟ್ಟಿಗೆ ತೂರಾಡಿದ್ದಾರೆ. ಈ ವೇಳೆ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾಜ್‌ರ್ ಮಾಡಿದ ಘಟನೆಯೂ ಜರುಗಿದೆ.
ಸಿಎಎ ವಿರೋಧಿ, ಮುಸ್ಲಿಂ ನಾಯಕ ಹಯಾತ್ ಜಫಾರಿ ಹಶ್ಮಿ ಬಂಧನ
ಶನಿವಾರ ವಿಡಿಯೋ ದೃಶ್ಯಗಳ ಆಧಾರದ ಮೇಲೆ ಗಲಭೆಕೋರರನ್ನು ಬಂಧಿಸಿ, ಇನ್ನಷ್ಟುಜನರ ಮೇಲೆ ಗೂಂಡಾ ಕಾಯ್ದೆಯಡಿ ಕೇಸು ದಾಖಲಿಸಾಗಿದೆ. ಬೀದಿಗಿಳಿದು ದಾಂಧಲೆ ನಡೆಸುವವರ ಆಸ್ತಿ ಜಪ್ತಿ ಮಾಡುವ ಅಥವಾ ಸದರಿ ಪ್ರದೇಶದ ಅಕ್ರಮ ಮನೆಗಳನ್ನು ಬುಲ್ಡೋಜರ್ ಹರಿಸಿ ನೆಲಸಮಗೊಳಿಸುವ ಕಠಿಣ ಕ್ರಮವನ್ನೇ ಇವರ ಮೇಲೂ ಪ್ರಯೋಗಿಸಲು ನಿರ್ಧರಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಹಿಂಸಾಚಾರ ಸಂಬಂಧ ಈಗಾಗಲೇ 18 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 500 ಕ್ಕೂ ಹೆಚ್ಚು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ತಪ್ಪತಸ್ತರ ಆಸ್ತಿಗಳ ವಶಪಡಿಸಿಕೊಳ್ಳಲು ಖಡಕ್ ಸೂಚನೆ ನೀಡಲಾಗಿದೆ. ಇದೀಗ ಬುಲ್ಡೋಜರ್ ಸದ್ದು ಮಾಡುವ ಸಾಧ್ಯತೆ ಇದೆ.
