ಸಿಎಎ ವಿರೋಧಿ ಹಾಗೂ ಸ್ಥಳೀಯ ಮುಸ್ಲಿಂ ನಾಯಕ ಹಯಾತ್ ಜಫರ್ ಹಶ್ಮಿ,  ಕಾನ್ಪುರದಲ್ಲಿ ನಡೆದ ಹಿಂಸಾಚಾರದ ಹಿಂದಿನ ಪ್ರಮುಖ ಸಂಚುಕೋರ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೊಂದೆಡೆ ಬಿಜೆಪಿ ನಾಯಕ ಮೊಹ್ಸಿನ್ ರಾಜಾ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಕಾನ್ಪುರ ಭೇಟಿಗೆ ತೊಂದರೆ ನೀಡುವ ಉದ್ದೇಶದಿಂದ ಈ ಹಿಂಸಾಚಾರದ ಯೋಜನೆ ರೂಪಿಸಲಾಗಿತ್ತು ಎಂದಿದ್ದಾರೆ.

ಕಾನ್ಪುರ (ಜೂನ್ 4): ಪರೇಡ್ ಚೌಕ್ ಪ್ರದೇಶದಲ್ಲಿ (Parade Chowk ) ಶುಕ್ರವಾರ ನಡೆದ ಹಿಂಸಾಚಾರಕ್ಕೆ (violence) ಸಂಬಂಧಪಟ್ಟಂತೆ, ಇಡೀ ಘಟನೆಯ ಹಿಂದೆ ಪ್ರಮುಖ ಸಂಚುಕೋರನಾಗಿದ್ದ ಮುಸ್ಲಿಂ ನಾಯಕ ಹಯಾತ್ ಜಫರ್ ಹಶ್ಮಿ (Muslim leader Hayat Zafar Hashmi ) ಅವರನ್ನು ಕಾನ್ಪುರ ಪೊಲೀಸರು ಬಂಧಿಸಿದ್ದಾರೆ. ಈವರೆಗೂ 40 ಜನರನ್ನು ಬಂಧಿಸಿ ಅವರ ವಿರುದ್ಧ ಎಫ್ಐಆರ್ (FIR) ದಾಖಲಿಸಲಾಗಿದ್ದು ಅದರಲ್ಲಿ ಜಫರ್ ಹಶ್ಮಿ ಹೆಸರೂ ಕೂಡ ಸೇರಿದೆ.

ಮೌಲಾನಾ ಮುಹಮ್ಮದ್ ಜೌಹರ್ ಅಲಿ ಅಭಿಮಾನಿಗಳ ಸಂಘದ (Maulana Muhammad Jauhar Ali Fans Association) ರಾಷ್ಟ್ರೀಯ ಅಧ್ಯಕ್ಷರಾದ ಹಯಾತ್ ಜಾಫರ್ ಹಶ್ಮಿ ಅವರು ಟಿವಿ ಸುದ್ದಿ ಚರ್ಚೆಯ ವೇಳೆ ಬಿಜೆಪಿ ವಕ್ತಾರೆಯಾಗಿದ್ದ ನೂಪುರ್ ಶರ್ಮಾ (Nupur Sharma) ಅವರು ಪ್ರವಾದಿ ಮೊಹಮ್ಮದ್ ಅವರ ವಿವಾದಾತ್ಮಕ ಹೇಳಿಕೆಗಳನ್ನು ವಿರೋಧಿಸಿ ಮಾರುಕಟ್ಟೆ ಬಂದ್‌ಗೆ ಕರೆ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹಶ್ಮಿ ಅವರು ಜನರಿಗೆ ಪ್ರಚೋದನೆ ನೀಡಿದ್ದರು ಎಂದು ಆರೋಪಿಸಲಾಗಿದೆ, ಇದು ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ಮತ್ತು ಘರ್ಷಣೆಗೆ ಕಾರಣವಾಯಿತು, ಇದರಿಂದಾಗಿ ಹಲವಾರು ಪೊಲೀಸ್ ಸಿಬ್ಬಂದಿ ಸೇರಿದಂತೆ 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.

ಈ ಹಿಂದೆ, ಕಾನ್ಪುರದಲ್ಲಿ ಉದ್ದೇಶಿತ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ ವಿರುದ್ಧ ಹಿಂಸಾತ್ಮಕ ಪ್ರದರ್ಶನಗಳಲ್ಲಿ ಹಶ್ಮಿ ಭಾಗಿಯಾಗಿದ್ದರು. ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಅವರು ಕಟ್ಟುನಿಟ್ಟಿನ ದರೋಡೆಕೋರರ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಮತ್ತು ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗುವುದು ಅಥವಾ ನೆಲಸಮಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ. 

ಎಫ್‌ಐಆರ್‌ನಲ್ಲಿ ಹೆಸರಿಸಲಾದ ಇತರ ಆರೋಪಿಗಳೆಂದರೆ ಎಹಿತ್‌ಶಾಮ್ ಕಬಾಡಿ, ಜೀಶಾನ್, ಆಕಿಬ್, ನಿಜಾಮ್, ಅಜೀಜುರ್, ಅಮೀರ್ ಜಾವೇದ್, ಇಮ್ರಾನ್ ಕಾಳೆ, ಯೂಸುಫ್ ಮನ್ಸೂರಿ. ಗಲಭೆ ಮತ್ತು ಹಿಂಸಾಚಾರದ ಕುರಿತು ಮೂರು ಎಫ್‌ಐಆರ್‌ಗಳನ್ನು 1,000 ಕ್ಕೂ ಹೆಚ್ಚು ಅಪರಿಚಿತ ವ್ಯಕ್ತಿಗಳ ವಿರುದ್ಧ ದಾಖಲಿಸಲಾಗಿದೆ.

ರಾತ್ರೋರಾತ್ರಿ ನಡೆದ ದಾಳಿಯಿಂದ ಈವರೆಗೂ 35ಕ್ಕೂ ಅಧಿಕ ಬಂಧನಗಳನ್ನು ಮಾಡಲಾಗಿತ್ತು. ಇನ್ನು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನೂ ಕೂಡ ಪರಿಶೀಲನೆ ಮಾಡಲಾಗುತ್ತದೆ. ಹಿಂಸಾಚಾರದಲ್ಲಿ ಭಾಗಿಯಾದ ಇತರರ ಪತ್ತೆಗೆ ಪೊಲೀಸರು ಇನ್ನಷ್ಟು ತೀವ್ರ ಶೋಧ ಆರಂಭಿಸಿದ್ದಾರೆ. ಅದರೊಂದಿಗೆ ಪ್ರಕರಣದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಪಾತ್ರದ ಬಗ್ಗೆಯೂ ತನಿಖೆ ಮಾಡಲಾಗುತ್ತಿದೆ.

ಮಸೀದಿಯಿಂದ ತೆಗೆದ ಧ್ವನಿವರ್ಧಕಗಳೆಲ್ಲಾ ಶಾಲೆ, ಆಸ್ಪತ್ರೆಗಳಿಗೆ ದಾನ: ಯೋಗಿ ಆದಿತ್ಯನಾಥ್!

ಎಂಎಂಎ ಜೌಹರ್ ಅಭಿಮಾನಿಗಳ ಸಂಘದ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ನಾವು ಈಗಾಗಲೇ ಹಲವಾರು ಜನರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದೇವೆ. ಯಾವುದೇ ಅಪರಾಧಿಗಳನ್ನು ಬಿಡುವ ಪ್ರಶ್ನೆಯೇ ಇಲ್ಲ. ನಾವು ಎಲ್ಲವನ್ನೂ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಎಂದು ಜಂಟಿ ಪೊಲೀಸ್ ಆಯುಕ್ತ ಆನಂದ್ ಪ್ರಕಾಶ್ ತಿವಾರಿ ಹೇಳಿದ್ದಾರೆ.

ಹೊಸ ಮದರಸಾಗಳಿಗೆ ಅನುದಾನ ನಿಲ್ಲಿಸುವ ಪ್ರಸ್ತಾಪಕ್ಕೆ ಯೋಗಿ ಕ್ಯಾಬಿನೆಟ್ ಅಂಗೀಕಾರ!

ಪ್ರಸ್ತುತ, ಹಿಂಸಾಚಾರ ಪೀಡಿತ ಪ್ರದೇಶವು ಶಾಂತಿಯುತವಾಗಿದೆ ಎಂದು ತಿವಾರಿ ತಿಳಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು 12 ಪೊಲೀಸ್ ಠಾಣೆಗಳ ಪಿಎಸಿ ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದೇ ವೇಳೆ ಆರೋಪಿಗಳನ್ನು ಕೂಡ ಬಂಧಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಒಂದು ಗುಂಪು ಅಂಗಡಿಕಾರರನ್ನು ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಲು ಮುಂದಾದಾಗ ಘರ್ಷಣೆ ಉಂಟಾಗಿದ್ದು, ಇನ್ನೊಂದು ಗುಂಪು ವಿರೋಧಿಸಿದೆ. ಕಲ್ಲು ತೂರಾಟ ನಡೆದಿದ್ದು ಮಾತ್ರವಲ್ಲದೆ, ಕಚ್ಚಾ ಬಾಂಬ್‌ಗಳನ್ನು ಎಸೆಯಲಾಯಿತು, ಮತ್ತು ಆಕ್ರೋಶಗೊಂಡ ಗುಂಪನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮತ್ತು ಅಶ್ರುವಾಯು ಶೆಲ್‌ ಗಳನ್ನು ಬಳಸಿದ್ದಾರೆ ಎಂದರು.