ಹವಾಲಾ ಹಗರಣದಿಂದ ತಿಹಾರ್ ಜೈಲು ಸೇರಿದ್ದ ಆಮ್ ಆದ್ಮಿ ಪಾರ್ಟಿ ಮಾಜಿ ಸಚಿವ ಸತ್ಯೇಂದ್ರ ಜೈನ್‌ಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. ಕಳೆದ ಒಂದು ವರ್ಷದಿಂದ ಜೈಲಿನಲ್ಲಿದ್ದ ಜೈನ್‌ಗೆ ಆರೋಗ್ಯ ಕಾರಣದಿಂದ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ನವದೆಹಲಿ(ಮೇ.26): ಆಮ್ ಆದ್ಮಿ ಪಾರ್ಟಿ ನಾಯಕ, ಮಾಜಿ ಸಚಿವ ಸತ್ಯೇಂದ್ರ ಜೈನ್ ಕೊನೆಗೂ ಜೈಲಿನಿಂದ ಬಿಡುಗಡೆಯಾಗುತ್ತಿದ್ದಾರೆ. ಕಳೆದೊಂದು ವರ್ಷದಿಂದ ಜೈಲು ಶಿಕ್ಷೆ ಅನುಭವಿಸಿತ್ತಿರುವ ಸತ್ಯೇಂದ್ರ ಜೈನ್ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ. ಇದನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜೈಲಿನ ಬಾತ್‌ರೂಂನಲ್ಲಿ ಕುಸಿದು ಬಿದ್ದ ಸತ್ಯೇಂದ್ರ ಜೈನ್ ಅವರನ್ನು ಆಸ್ಪತ್ರೆಯಲ್ಲಿ ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದೊಂದು ವರ್ಷದಿಂದ ಜಾಮೀನಿಗಾಗಿ ಹೋರಾಟ ನಡೆಸಿದ್ದ ಸತ್ಯೇಂದ್ರ ಜೈನ್‌ಗೆ ಇದೀಗ ಕೋರ್ಟ್ ಬೇಲ್ ನೀಡಿದೆ.
ಜೈಲಿನಲ್ಲಿ ಕುಸಿದು ಬಿದ್ದ ಸತ್ಯೇಂದ್ರ ಜೈನ್‌ರನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಕಾರಣ ನಂತರ ಲೋಕ ನಾಯಕ ಜೈ ಪ್ರಕಾಶ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಇದೀಗ ಕೃತಕ ಆಕ್ಸಿಜನ್ ಮೂಸಕ ಉಸಿರಾಡುತ್ತಿದ್ದಾರೆ. ‘7ನೇ ನಂಬರ್ ಜೈಲಿನ ಕೊಠಡಿಯ ಸ್ನಾನಗೃಹದಲ್ಲಿ ಮುಂಜಾನೆ ಜೈನ್ ಅವರು ತಲೆಸುತ್ತಿ ಬಿದ್ದರು. ಅವರು ದೈಹಿಕವಾಗಿ ದುರ್ಬಲರಾಗಿದ್ದರು.ದ ಅವರ ಮೇಲೆ ನಿಗಾ ಇರಿಸಲಾಗಿತ್ತು’ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದರು.
ಮಾಜಿ ಆರೋಗ್ಯ ಸಚಿವರಿಗೆ ತೀವ್ರ ಅನಾರೋಗ್ಯ: ಶೌಚಾಲಯದಲ್ಲಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲು
ಸತ್ಯೇಂದ್ರ ಜೈನ್ ಆರೋಗ್ಯ ಹದಗೆಟ್ಟಿರುವ ಪೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೇ ಫೋಟೋ ಬಳಿಸಿಕೊಂಡ ಆಮ್ ಆದ್ಮಿ ಪಾರ್ಟಿ, ಕೇಂದ್ರ ಬಿಜೆಪಿ ಹಾಗೂ ಮೋದಿ ವಿರುದ್ಧ ವಾಗ್ದಾಳಿ ನಡೆಸಿತ್ತು. ಸಾರ್ವಜನಿಕರಿಗೆ ಉತ್ತಮ ಚಿಕಿತ್ಸೆ ಮತ್ತು ಆರೋಗ್ಯ ಒದಗಿಸಲು ಹಗಲಿರುಳು ಶ್ರಮಿಸಿದ ವ್ಯಕ್ತಿಯನ್ನು ಶಿಕ್ಷಿಸಲು ಸರ್ವಾಧಿಕಾರಿ ಹಟ ಹಿಡಿದಿದ್ದಾನೆ. ದೇವರು ಎಲ್ಲವನ್ನೂ ನೋಡುತ್ತಿದ್ದಾನೆ ಮತ್ತು ಎಲ್ಲರಿಗೂ ನ್ಯಾಯ ಒದಗಿಸುತ್ತಾನೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದರು.
ಸತ್ಯೇಂದ್ರ ಜೈನ್ ಜೀವಂತ ಅಸ್ಥಿ ಪಂಜರದಂತೆ ಆಗಿದ್ದಾರೆ ಎಂದು ಆಪ್ ಕಳವಳ ವ್ಯಕ್ತಪಡಿಸಿತ್ತು. ಬೆನ್ನು ನೋವಿನ ಸಲುವಾಗಿ ಜೈನ್ ಇತ್ತೀಚೆಗೆ ಆಸ್ಪತ್ರೆಗೆ ಹಾಜರಾಗಿದ್ದರು. ಈ ವೇಳೆಯ ಚಿತ್ರವನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡು, ‘ದೇವರು ಉತ್ತಮ ಆರೋಗ್ಯವನ್ನು ನೀಡಲಿ. ದೆಹಲಿ ಜನರು ಬಿಜೆಪಿ ಸರ್ಕಾರದ ಅಹಂಕಾರ ಹಾಗೂ ಅಧಿಕಾರ ಶಾಹಿತ್ವವನ್ನು ನೋಡುತ್ತಿದ್ದಾರೆ. ಜನರು ಎಂದಿಗೂ ಕ್ಷಮಿಸುವುದಿಲ್ಲ’ ಎಂದಿದ್ದರು. ಆಪ್ ಸಂಸದ ಸಂಜಯ್ ಸಿಂಗ್ ಟ್ವೀಟ್ ಮಾಡಿ,‘ಜೈಲಿನಲ್ಲಿ ಜೈನ್ ಅವರು ಜೀವಂತ ಅಸ್ಥಿಪಂಜರದಂತಾಗಿದ್ದಾರೆ. ಬಿಜೆಪಿ ಅವರನ್ನು ಕೊಲ್ಲಲು ಇಚ್ಛಿಸುತ್ತಿದೆ’ ಎಂದು ಕಿಡಿಕಾರಿದ್ದರು.
35 ಕೆಜಿ ಕಳೆದುಕೊಂಡು ಅಸ್ತಿಪಂಜರವಾಗಿದ್ದೇನೆ, ಜಾಮೀನಿಗಾಗಿ ಹೊಸ ವಾದ ಮುಂದಿಟ್ಟ ಸತ್ಯೇಂದರ್ ಜೈನ್!
ಜೈಲು ಸೇರಿರುವ ಆಮ್ ಆದ್ಮಿ ಪಾರ್ಟಿಯ ಪ್ರಮುಖ ಇಬ್ಬರು ನಾಯಕರ ಪೈಕಿ ಸತ್ಯೇಂದ್ರ ಜೈನ್‌ಗೆ ಜಾಮೀನು ಸಿಕ್ಕಿದೆ. ಆದರೆ ಜೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಅಬಕಾರಿ ಹಗರಣದಲ್ಲಿ ಜೈಲು ಸೇರಿರುವ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ಇನ್ನೂ ಜಾಮೀನು ಸಿಕ್ಕಿಲ್ಲ.
