ಚೆನ್ನೈ [ಡಿ.22]:  ವಿವಾದಿತ ಧರ್ಮಗುರು ಕಲ್ಕಿ ಭಗವಾನ್‌ ಅವರಿಗೆ ಸೇರಿದ 900 ಎಕರೆ ಜಮೀನನ್ನು ಆದಾಯ ತೆರಿಗೆ ಇಲಾಖೆ ತಾತ್ಕಾಲಿಕ ಮುಟ್ಟುಗೋಲು ಹಾಕಿಕೊಂಡಿದೆ. ಕಳೆದ ತಿಂಗಳು ಕಲ್ಕಿ ಆಸ್ತಿಪಾಸ್ತಿಗಳ ಮೇಲೆ ನಡೆದ ದಾಳಿಯಲ್ಲಿ ಸುಮಾರು 500 ಕೋಟಿ ರು. ಮೌಲ್ಯದ ಅಕ್ರಮ ಹಣ, ಆಭರಣ ಹಾಗೂ ಆಸ್ತಿ ಪತ್ತೆಯಾಗಿದ್ದವು. ಇದರ ಬೆನ್ನಲ್ಲೇ ಜಮೀನು ಮುಟ್ಟುಗೋಲು ಪ್ರಕ್ರಿಯೆ ನಡೆದಿದೆ.

ಈ 900 ಎಕರೆ ಜಮೀನಿನ ಪೈಕಿ 400 ಎಕರೆಯನ್ನು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಸತ್ಯೇವೇಡು ಎಂಬಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಉಳಿದ ಜಮೀನನ್ನು ಕರ್ನಾಟಕದ ಬೆಳಗಾವಿ, ತಮಿಳುನಾಡಿನ ಊಟಿ, ಮದುರೈ ಹಾಗೂ ಕೊಯಮತ್ತೂರಿನಲ್ಲಿ ವಶಪಡಿಸಿಕೊಳ್ಳಲಾಗಿದೆ. 90 ದಿನಗಳವರೆಗೆ ಜಮೀನನ್ನು ಜಪ್ತಿ ಮಾಡಲಾಗಿದೆ ಎಂದು ಆದಾಯ ತೆರಿಗೆ (ಐಟಿ) ಮೂಲಗಳು ಹೇಳಿವೆ.

ಎಲ್‌ಐಸಿ ಕ್ಲರ್ಕ್ ಕಲ್ಕಿ: ದೇವರಾಗಲು ಹೊರಟಾಗಲೇ ಅಡ್ಡ ಬಂತು ಐಟಿ...

ಇದಲ್ಲದೆ, ಕಲ್ಕಿಯ ಸೊಸೆ (ಮಗ ಎನ್‌ಕೆವಿ ಕೃಷ್ಣ ಪತ್ನಿ) ಪ್ರೀತಾ ಕೃಷ್ಣಗಾಗಿ ಐಟಿ ಇಲಾಖೆ ‘ಲುಕ್‌ಔಟ್‌ ನೋಟಿಸ್‌’ ಜಾರಿ ಮಾಡಿದೆ. ಪ್ರೀತಾಗೆ ಸೇರಿದ ಆಸ್ತಿಪಾಸ್ತಿಗಳ ಮೇಲೆ ದಾಳಿ ಮಾಡಿದಾಗ ಅಕ್ರಮ ನಗದು, ವಿದೇಶೀ ಹಣ, 1.68 ಕೋಟಿ ರು. ಮೌಲ್ಯದ ಚಿನ್ನಾಭರಣ, 1.7 ಕೋಟಿ ರು. ಮೌಲ್ಯದ ವಜ್ರ ಹಾಗೂ ಅಘೋಷಿತ ಆಸ್ತಿ ಪತ್ತೆಯಾಗಿದ್ದವು. ಇದರ ನಡುವೆಯೇ ಆಕೆ ‘ನನಗೆ ವಿದೇಶಕ್ಕೆ ಹೋಗಲು ಅನುಮತಿ ಪ್ರಮಾಣಪತ್ರ ಕೊಡಿ’ ಎಂದು ಆದಾಯ ತೆರಿಗೆ ಇಲಾಖೆಯ ಮೊರೆ ಹೋಗಿದ್ದಳು.

ಇದಕ್ಕೆ ಉತ್ತರಿಸಿರುವ ಐಟಿ ಇಲಾಖೆ, ‘ನಿಮ್ಮ ವಿಚಾರಣೆ ಅಗತ್ಯವಾಗಿದೆ. ಈ ಕಾರಣ ನಿಮ್ಮ ವಿರುದ್ಧ ಲುಕೌಟ್‌ ನೋಟಿಸ್‌ ಜಾರಿ ಮಾಡಲಾಗಿದೆ. ಹೀಗಾಗಿ ನಿಮಗೆ ಅಮೆರಿಕ ಮತ್ತು ಉಕ್ರೇನ್‌ ಪ್ರವಾಸಕ್ಕೆ ಅನುಮತಿ ನೀಡಲಾಗದು’ ಎಂದು ಸ್ಪಷ್ಟಪಡಿಸಿದೆ.