Indian Army: ಉಗ್ರರ ವಿರುದ್ಧ ಹೋರಾಡಿ ಹುತಾತ್ಮರಾದ ಮೇಜರ್ ದೀಪಕ್ ನೈನ್ವಾಲ್ ಪತ್ನಿ ಸೇನೆ ಸೇರ್ಪಡೆ!
- ಸೇನೆ ಸೇರಿದ ಹುತಾತ್ಮ ಮೇಜರ್ ದೀಪಕ್ ನೈನ್ವಾಲ್ ಪತ್ನಿ ಜ್ಯೋತಿ
- ವಿಶ್ವದ ಅತ್ಯುತ್ತಮ ತಾಯಿ ಎಂದ ಮಗಳು ಲಾವಣ್ಯ ನೈನ್ವಾಲ್
- ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾಗಿದ್ದ ಮೇ. ದೀಪಕ್
ನವದೆಹಲಿ(ನ.20): ಉಗ್ರರ ಜೊತೆ ಹೋರಾಡಿ ವೀರ ಮರಣವನ್ನಪ್ಪಿದ ಮೇಜರ್ ದೀಪಕ್ ನೈನ್ವಾಲ್(Major Late Deepak Nainwal) ಪತ್ನಿ ಜ್ಯೋತಿ ನೈನ್ವಾಲ್(Jyoti Nainwal) ಇದೀಗ ಭಾರತೀಯ ಸೇನೆ ಸೇರಿಕೊಂಡಿದ್ದಾರೆ. ಹುತಾತ್ಮ ದೀಪಕ್ ನೈನ್ವಾಲ್ ಮುಂದೆ ಮಾಡಿದ ಶಪಥವನ್ನು ಈಡೇರಿಸಿದ್ದಾರೆ. ಜ್ಯೂತಿ ನೈನ್ವಾಲ್ ಭಾರತೀಯ ಸೇನೆಯ ಲೆಫ್ಟಿನೆಂಟ್ ಶ್ರೇಣಿ ಅಧಿಕಾರಿಯಾಗಿ (Lieutenant-rank officer) ನೇಮಕಗೊಂಡಿದ್ದಾರೆ.
ತಾಯಿ ಭಾರತೀಯ ಸೇನೆ(Indian Army) ಸೇರಿಕೊಂಡ ಕ್ಷಣಗಳನ್ನು ಪುತ್ರಿ ಲಾವಣ್ಯ ಅತೀವ ಸಂತಸ ಹಾಗೂ ಹೆಮ್ಮೆ ಪಟ್ಟಿದ್ದಾರೆ. ಈ ವೇಳೆ ಪ್ರತಿಕ್ರಿಯೆ ನೀಡಿರುವ ಲಾವಣ್ಯ ನೈನ್ವಾಲ್, ನನಗೆ ತಾಯಿ ಬಗ್ಗೆ ಅತೀವ ಹೆಮ್ಮೆಯಾಗುತ್ತಿದೆ. ಒಂದು ದಿನ ಭಾರತೀಯ ಸೇನೆಯ ಅಧಿಕಾರಿಯಾಗುತ್ತೇನೆ ಎಂದು ತಾಯಿ ಯಾವತ್ತು ಹೇಳುತ್ತಿದ್ದರು. ಆ ದಿನ ಬಂದೇ ಬಿಟ್ಟಿದೆ. ಇಂದು ತಾಯಿ ಕನಸು ಸಾಕಾರಗೊಳಿಸಿದ್ದಾರೆ. ತಾಯಿಯನ್ನು ಅತೀಯಾಗಿ ಪ್ರೀತಿಸುತ್ತೇನೆ ಎಂದು 11ವರ್ಷದ ಪುತ್ರಿ ಲಾವಣ್ಯ ಹೇಳಿದ್ದಾಳೆ.
ಕೂಲಿ ಕಾರ್ಮಿಕನ ಮಗ ಸೇನಾಧಿಕಾರಿಯಾಗಿ ನೇಮಕ; ದಶಕದ ಹಿಂದಿನ ಕಣ್ಣೀರ ಕತೆ ನೆನೆದ ತಂದೆ!
ಇದೇ ವೇಳೆ ತಾನು ಭಾರತೀಯ ಸೇನೆಯ ವೈದ್ಯೆಯಾಗಬೇಕು ಎಂದಿದ್ದಾಳೆ. ವೈದ್ಯೆಯಾಗಬೇಕು ಅನ್ನೋದು ನನ್ನ ಕನಸಾಗಿದೆ. ಆದರೆ ನನ್ನ ತಂದೆ ಹುತಾತ್ಮರಾದ ಬಳಿಕ ನಾನೂ ಕೂಡ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕು. ಹೀಗಾಗಿ ಸೇನೆಯ ವೈದ್ಯಳಾಗಲು ನಾನು ಇಚ್ಚೆಪಡತ್ತೇನೆ ಎಂದು ಲಾವಣ್ಯ ಹೇಳಿದ್ದಾಳೆ. ಸೇನಾ ಅಧಿಕಾರಿ ಸಮವಸ್ತ್ರದಲ್ಲಿ ಕಾಣಿಸಿಕೊಂಡ ಲಾವಣ್ಯ ಹಾಗೂ 7 ವರ್ಷದ ತಮ್ಮ ರೆತಾನ್ಶ್ ಕೂಡ ಅಷ್ಟೆ ಸಂತಸಪಟ್ಟಿದ್ದಾನೆ.
ತಾನು ಕೂಡ ಸೇನೆ ಸೇರಿ ಸೇವೆ ಸಲ್ಲಿಸಬೇಕು. ಶತ್ರುಗಳ ಹಾಗೂ ಭಯತ್ಪಾದಕರ ವಿರುದ್ದ ಹೋರಾಡುತ್ತಿರುವ ಭಾರತೀಯ ಸೇನೆ ಸೇರಬೇಕು ಎಂದು ದೀಪಕ್ ಪತ್ನಿ ಜ್ಯೋತಿ ಪ್ರತಿಜ್ಞೆ ಮಾಡಿದ್ದರು. ಪತಿ ಮೇಜರ್ ದೀಪಕ್ ನೈನ್ವಾಲ್ ನಿಧನದ ಬಳಿಕ ಚೆನ್ನೈ ಆರ್ಮಿ ಆಫೀಸರ್ಸ್ ತರಬೇತಿ ಅಕಾಡಮೆಯಲ್ಲಿ 11 ತಿಂಗಳು ಟ್ರೈನಿಂಗ್ ಪೂರ್ಣಗೊಳಿಸಿದ್ದಾರೆ. ಇದೀಗ ಭಾರತೀಯ ಸೇನೆಯ ಲೆಫ್ಟೆನೆಂಟ್ ಶ್ರೇಣಿ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಕುಲ್ಗಾಮ್ ಕಾರ್ಯಾಚರಣೆ:
ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್(Kulgam) ಜಿಲ್ಲೆಯಲ್ಲಿ ಉಗ್ರರ ಉಪಟಳ ಸದಾ ಹೆಚ್ಚು. ಇಂದು(ನ.20) ಭಾರತೀಯ ಸೇನೆ ಹಿಜ್ಬುಲ್ ಉಗ್ರ ಸಂಘಟನೆ ಕಮಾಂಡರ್‌ನನ್ನು ಹತ್ಯೆ ಮಾಡಿದೆ. ಇದೇ ಕುಲ್ಗಾಮ್‌ನಲ್ಲಿ ನಡೆದ ಉಗ್ರರ ವಿರುದ್ಧದ(Terror Attack) ಹೋರಾಟದಲ್ಲಿ ಮೇಜರ್ ದೀಪಕ್ ನೈನ್ವಾಲ್ ಹುತಾತ್ಮರಾಗಿದ್ದರು. ಎಪ್ರಿಲ್ 10, 2018ರಲ್ಲಿ ಕುಲ್ಗಾಮದಲ್ಲಿ ಉಗ್ರರು ಅಡಗಿರುವ ಮಾಹಿತಿ ಪಡೆದ ಸೇನೆ, ಮೇಜರ್ ದೀಪಕ್ ನೈನ್ವಾಲ್ ನೇತೃತ್ವದಲ್ಲಿ ಬೆಟಾಲಿಯನ್ ಮೂಲಕ ಕಾರ್ಯಾಚರಣೆಗೆ ಇಳಿದಿತ್ತು.
ನಿನಗೇನೂ ಆಗಲ್ಲ ಕಂದ: ಶರಣಾಗುವಂತೆ ಉಗ್ರನ ಮನವೊಲಿಸಿದ ಭಾರತೀಯ ಸೇನೆ ಯೋಧ!
ಕುಲ್ಗಾಮದಲ್ಲಿ ಭಾರಿ ಉಗ್ರರು ಅಡಗಿಕುಳಿತಿದ್ದರು. ಹೀಗಾಗಿ ಸತತ 12 ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆದಿದೆ. ಎಪ್ರಿಲ್ 11ರ ಬೆಳಗಿನ ಜಾವ ಭಾರತೀಯ ಸೇನೆ ಇಡೀ ಪ್ರದೇಶವನ್ನು ಸುತ್ತುವರಿದು ಉಗ್ರರ ಮೇಲೆ ಗುಂಡಿನ ಸುರಿಮಳೆಗೈದಿದೆ. ಈ ವೇಳೆ ಅಡಗಿ ಕುಳಿತ ಉಗ್ರರು ಸೇನೆ ಮೇಲೆ ಪ್ರತಿ ದಾಳಿ ನಡೆಸಿದ್ದಾರೆ. ಈ ಗುಂಡಿನ ಚಕಮಕಿಯಲ್ಲಿ ಮೇಜರ್ ದೀಪಕ್ ನೈನ್ವಾಲ್ ತೀವ್ರವಾಗಿ ಗಾಯಗೊಂಡಿದ್ದರು.
ತಕ್ಷಣ ದೀಪಕ್ ನೈನ್ವಾಲ್ ಅವರನ್ನು ಜಮ್ಮು ಮತ್ತು ಕಾಶ್ಮೀರ ಮಿಲಿಟರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತಿಸೆ ನೀಡಲಾಯಿತು. ಬಳಿಕ ದೆಹಲಿಯ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯಿಂದ ಮತ್ತೆ ಪುಣೆ ಮಿಲಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸರಿಸುಮಾರು ಒಂದು ತಿಂಗಳು ಸತತ ಚಿಕಿತ್ಸೆ ನೀಡಿದರೂ ಮೇಜರ್ ದೀಪಕ್ ಬದುಕಿ ಉಳಿಯಲಿಲ್ಲ. ಮೇ 20, 2018 ರಂದು ಮೇಜರ್ ದೀಪಕ್ ನೈನ್ವಾಲ್ ವೀರ ಮರಣವನ್ನಪ್ಪಿದರು.