ಬದ್ಗಾಮ್(ಅ.17): ಭಾರತೀಯ ಸೇನೆಯೊಂದು ವಿಡಿಯೋ ಬಹಿರಂಗಪಡಿಸಿದ್ದು, ಇದರಲ್ಲಿ ಜಮ್ಮು ಕಾಶ್ಮೀರದ ಬದ್ಗಾಮ್‌ನಲ್ಲಿ ಉಗ್ರರ ವಿರುದ್ಧ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರನೊಬ್ಬ ಭಾರತೀಯ ಸೇನೆ ಎದುರು ಶರಣಾಗುವ ರೋಚಕ ದೃಶ್ಯಗಳಿವೆ. 

ಶರಣಾದ ಉಗ್ರನನ್ನು ಜಹಾಂಗೀರ್ ಭಟ್ ಎಂದು ಗುರುತಿಸಲಾಗಿದೆ. 20 ವರ್ಷ ವಯಸ್ಸಿನ ಈತ ಕೆಲ ದಿನಗಳ ಹಿಂದಷ್ಟೇ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದು, ಸೇನೆ ಆತನಿಂದ AK-47 ಗನ್ ವಶಪಡಿಸಿಕೊಂಡಿದೆ. 

ಇನ್ನು ಸೇನೆ ಶುಕ್ರವಾರದಂದು ಶೇರ್ ಮಾಡಿಕೊಂಡಿರುವ ಈ ವಿಡಿಯೋದಲ್ಲಿ ಭಾರತೀಯ ಸೇನೆಯ ಯೋಧನೊಬ್ಬ ಆ ಉಗ್ರನನ್ನು ಸಮಾಧಾನಪಡಿಸಿ ಶರಣಾಗತಿಯಾಗಲು ಹೇಗೆ ಮನವೊಲಿಸುತ್ತಾನೆಂದು ನೋಡಬಹುದಾಗಿದೆ. ಇನ್ನು ಯೋಧ ಉಗ್ರನನ್ನು ಮನವೊಲಿಸುವ ವೇಳೆ ಬಹಳ ಶಾಂತನಾಗಿ ನೀನು ಸುರಕ್ಷಿತವಾಗಿದ್ದೀ, ಮುಂದೆ ಬಾ ಎನ್ನುವ ಮಾತುಗಳನ್ನೂ ಈ ವಿಡಿಯೋದಲ್ಲಿ ಆಲಿಸಬಹುದಾಗಿದೆ.

ಭಗವಂತನ ಹೆಸರಲ್ಲಿ, ನಿಮ್ಮ ಕುಟುಂಬಕ್ಕಾಗಿಯಾದರೂ ಶರಣಾಗು ಎಂದು ಸೈನಿಕನೊಬ್ಬ ಆರಂಭದಲ್ಲಿ ಉಗ್ರನ ಮನವಿಒಲಿಸಲು ಯತ್ನಿಸುತ್ತಾನೆ. ಇನ್ನು ಆ ಉಗ್ರ  ಜಹಾಂಗೀರ್ ಭಟ್ ಎಂದು ತಿಳಿಯುತ್ತಿದ್ದಂತೆಯೇ ಯೋಧರು ಪರಸ್ಪರ ಯಾರೂ ಫೈರಿಂಗ್ ಮಾಡಬೇಡಿ ಎನ್ನುವುದನ್ನೂ ಕೇಳಿಸಿಕೊಳ್ಳಬಹುದಾಗಿದೆ.

ಇನ್ನು ಆ ಕಾಶ್ಮೀರಿ ಯುವಕನನ್ನು ಶರಣಾಗಲು ಮನವೊಲಿಸಿದ ಸೈನಿಕ ಅಂತಿಮವಾಗಿ ನಿನಗೇನೂ ಆಗುವುದಿಲ್ಲ ಕಂದ ಎಂದ ಮಾತುಗಳು ಸದ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಆ ಯುವಕ ಶರಣಾಗುತ್ತಿದ್ದಂತೆಯೇ ಸೈನಿಕನೊಬ್ಬ ಆತನಿಗೆ ನೀರು ನೀಡಿ ಉಪಚರಿಸಿದ್ದಾನೆ.