ಭಾರತೀಯ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಪಾಕಿಸ್ತಾನದ ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಶಂಕಿತ ಐಎಸ್ಐ ಏಜೆಂಟ್ ನಾಸಿರ್ ಧಿಲ್ಲೋನ್ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಭದ್ರತಾ ಸಂಸ್ಥೆಗಳು ಬಹಿರಂಗಪಡಿಸಿವೆ. 

ಭಾರತೀಯ ಭದ್ರತಾ ಸಂಸ್ಥೆಗಳು ತನಿಖೆ ವೇಳೆ ಆಘಾತಕಾರಿ ಸುದ್ದಿಯೊಂದನ್ನು ಬಯಲು ಮಾಡಿದ್ದಾರೆ. ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವಳೊಂದಿಗೆ ಪಾಕಿಸ್ತಾನದ ನಿವೃತ್ತ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ನಾಸಿರ್ ಧಿಲ್ಲೋನ್‌ನೊಂದಿಗಿನ ಸಂಪರ್ಕವನ್ನು ದೃಢಪಡಿಸಿದೆ. ಮೂಲಗಳ ಪ್ರಕಾರ, ಜ್ಯೋತಿ ಮಲ್ಹೋತ್ರಾ ಪಾಕಿಸ್ತಾನದಲ್ಲಿ ಧಿಲ್ಲೋನ್ ಜೊತೆ ಸಂಪರ್ಕದಲ್ಲಿದ್ದು, ಅವನೊಂದಿಗೆ ಪಾಡ್‌ಕ್ಯಾಸ್ಟ್ ಸಂದರ್ಶನವನ್ನು ಸಹ ನಡೆಸಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.

ಯಾರು ಈ ನಾಸಿರ್ ಧಿಲ್ಲೋನ್? ಯೂಟ್ಯೂಬ್‌ನಲ್ಲಿ ಸಕ್ರಿಯ ಐಎಸ್‌ಐ ಏಜೆಂಟ್?

ಪಾಕಿಸ್ತಾನ ಪೊಲೀಸ್‌ನಿಂದ ನಿವೃತ್ತನಾದ ಬಳಿಕ ನಾಸಿರ್ ಧಿಲ್ಲೋನ್, ಯೂಟ್ಯೂಬ್‌ನಲ್ಲಿ ಸಕ್ರಿಯವಾಗಿದ್ದ. ಅವನದೇ ಚಾನೆಲ್ ಪಾಕಿಸ್ತಾನದಲ್ಲಿ ಜನಪ್ರಿಯವಾಗಿತ್ತು. ಅವನು ಭಾರತೀಯ ಯೂಟ್ಯೂಬರ್‌ಗಳೊಂದಿಗೆ ಪರಿಚಯ ಬಳಿಕ ಸಂಬಂಧ ಬೆಳೆಸಿ, ಪಾಕಿಸ್ತಾನದ ಐಎಸ್‌ಐ ಮತ್ತು ಸೈನ್ಯಕ್ಕಾಗಿ ಗುಪ್ತಚರ ಮಾಹಿತಿ ಸಂಗ್ರಹಿಸುತ್ತಿದ್ದನೆಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಸ್ನೇಹದಿಂದ ಬೇಹುಗಾರಿಕೆಗೆ

ನಾಸಿರ್ ಧಿಲ್ಲೋನ್ ಭಾರತೀಯ ಯೂಟ್ಯೂಬರ್‌ಗಳೊಂದಿಗೆ ಸ್ನೇಹ ಬೆಳೆಸಿ, ಅವರನ್ನು ಐಎಸ್‌ಐ ಏಜೆಂಟ್‌ಗಳಿಗೆ ಪರಿಚಯಿಸುತ್ತಿದ್ದರು. ನಂತರ, ಭಾರತೀಯ ಸೇನೆ ಮತ್ತು ಭದ್ರತಾ ಸಂಸ್ಥೆಗಳಿಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಸಂಗ್ರಹಿಸಲು ಈ ಯೂಟ್ಯೂಬರ್‌ಗಳನ್ನು ಬಳಸಿಕೊಳ್ಳಲಾಗುತ್ತಿತ್ತು. ಈ ಪ್ರಕ್ರಿಯೆಯನ್ನು ಅನುಮಾನ ಬಾರದಂತೆ ಎಚ್ಚರಿಕೆಯಿಂದ ನಡೆಸಲಾಗಿತ್ತು. ಜ್ಯೋತಿ ಮಲ್ಹೋತ್ರಾ ಜೊತೆಗೆ ಡ್ಯಾನಿಶ್ ಎಂಬ ವ್ಯಕ್ತಿಯ ಸಂಪರ್ಕದ ಪುರಾವೆಗಳನ್ನೂ ತನಿಖಾ ಸಂಸ್ಥೆಗಳು ಪಡೆದಿವೆ. ಈಗ ಈ ಸಂಬಂಧಗಳ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳು ಈ ಯೂಟ್ಯೂಬರ್‌ಗಳ ಮೂಲಕ ಪಾಕಿಸ್ತಾನಕ್ಕೆ ರವಾನಿಸಲಾಗಿದೆಯೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ.

ನೂರಾರು ಪಾಕಿಸ್ತಾನಿ ಮಾಜಿ ಪೊಲೀಸರು ಬೇಹುಗಾರಿಕೆ ದಂಧೆಯಲ್ಲಿ!

ಪಾಕಿಸ್ತಾನದ ನೂರಾರು ನಿವೃತ್ತ ಪೊಲೀಸ್ ಅಧಿಕಾರಿಗಳು ಭಾರತದ ಯೂಟ್ಯೂಬರ್‌ಗಳನ್ನು ಗುರಿಯಾಗಿಸಿಕೊಂಡು ಗುಪ್ತಚರ ಸಂಗ್ರಹಿಸುವಲ್ಲಿ ನಿರತರಾಗಿರುವ ಸಂಘಟಿತ ಬೇಹುಗಾರಿಕೆ ಜಾಲದ ಭಾಗವಾಗಿದ್ದಾರೆ ಎಂದು ಭಾರತೀಯ ಭದ್ರತಾ ಸಂಸ್ಥೆಗಳು ಶಂಕಿಸಿವೆ. ಈ ಸಂಬಂಧ, ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸಿದ ಆರೋಪ ಎದುರಿಸುತ್ತಿರುವ ಜ್ಯೋತಿ ಮಲ್ಹೋತ್ರಾ ಅವರನ್ನು ಜೂನ್ 9 ರಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ರಾಷ್ಟ್ರೀಯ ಭದ್ರತೆಗೆ ಕಂಟಕ

ಈ ಘಟನೆಯನ್ನು ಭಾರತದ ರಾಷ್ಟ್ರೀಯ ಭದ್ರತೆಗೆ ಗಂಭೀರ ಬೆದರಿಕೆ ಎಂದು ಪರಿಗಣಿಸಲಾಗಿದೆ. ಜ್ಯೋತಿ ಮಲ್ಹೋತ್ರಾ ಜೊತೆಗಿನ ಸಂಪರ್ಕಗಳ ಬಗ್ಗೆ ಇನ್ನಷ್ಟು ಆಳವಾಗಿ ಪರಿಶೀಲಿಸಲು ತನಿಖಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ, ಪಾಕಿಸ್ತಾನಿ ಸಂಪರ್ಕ ಹೊಂದಿರುವ ಶಂಕಿತ ಇತರ ಭಾರತೀಯ ಯುಟ್ಯೂಬರ್‌ಗಳ ಚಟುವಟಿಕೆಗಳ ಮೇಲೂ ಈಗ ಹದ್ದಿನ ಕಣ್ಣಿಟ್ಟಿದೆ.