ಲೈಂಗಿಕ ಶೋಷಣೆ ಬಗ್ಗೆ ವಿವಾದಿತ ತೀರ್ಪು ನೀಡಿದ್ದ ಜಡ್ಜ್‌ಗೆ ‘ಶಿಕ್ಷೆ’!

ಲೈಂಗಿಕ ಶೋಷಣೆ ಬಗ್ಗೆ ವಿವಾದಿತ ತೀರ್ಪು ನೀಡಿದ್ದ ಜಡ್ಜ್‌ಗೆ ‘ಶಿಕ್ಷೆ’| ಹುದ್ದೆ ಕಾಯಂ ಶಿಫಾರಸು ಹಿಂಪಡೆದ ಕೊಲಿಜಿಯಂ| ಬಾಂಬೆ ಹೈಕೋರ್ಟ್‌ ನ್ಯಾ| ಪುಷ್ಪಾಗೆ ಭಾರಿ ಹಿನ್ನಡೆ

Justice Pushpa Ganediwala Bombay HC Judge behind the controversial POCSO rulings pod

ನವದೆಹಲಿ(ಜ.31): ಬಟ್ಟೆಮೇಲಿಂದ ಅಪ್ರಾಪ್ತೆಯ ಅಂಗಾಂಗ ಮುಟ್ಟುವುದು, ಅಪ್ರಾಪ್ತೆ ಕೈಯಿಂದ ವಯಸ್ಕ ವ್ಯಕ್ತಿ ಜಿಪ್‌ ಬಿಚ್ಚಿಸಿಕೊಳ್ಳುವುದು ಲೈಂಗಿಕ ಕಿರುಕುಳವಲ್ಲ ಎಂಬ ಎರಡು ವಿವಾದಾತ್ಮಕ ತೀರ್ಪುಗಳನ್ನು ನೀಡಿದ್ದ ಬಾಂಬೆ ಹೈಕೋರ್ಟ್‌ ಹೆಚ್ಚುವರಿ ನ್ಯಾಯಾಧೀಶೆ ನ್ಯಾ| ಪುಷ್ಪಾ ಗನೇಡಿವಾಲಾ ಅವರಿಗೆ ಭಾರಿ ಹಿನ್ನಡೆಯಾಗಿದೆ. ಗನೇಡಿವಾಲಾ ಅವರನ್ನು ಬಾಂಬೆ ಹೈಕೋರ್ಟ್‌ ಕಾಯಂ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದ ಕೊಲಿಜಿಯಂ, ಪುಷ್ಪಾ ಅವರ ವಿವಾದಾತ್ಮಕ ತೀರ್ಪುಗಳ ಬೆನ್ನಲ್ಲೇ ತನ್ನ ಶಿಫಾರಸನ್ನು ವಾಪಸ್‌ ಪಡೆದಿದೆ.

‘ನ್ಯಾ| ಪುಷ್ಪಾ ಅವರು ಇಂತಹ ಪ್ರಕರಣಗಳನ್ನು ಇನ್ನಷ್ಟು ಎದುರಿಸಬೇಕಾಗಿದೆ. ವಕೀಲರಾಗಿದ್ದಾಗ ಪ್ರಾಯಶಃ ಅವರು ಇಂತಹ ಪ್ರಕರಣಗಳನ್ನು ನಿರ್ವಹಿಸಿಲ್ಲ. ಹೀಗಾಗಿ ಅವರಿಗೆ ತರಬೇತಿ ಬೇಕಾಗಿದೆ ಎಂಬುದು ಕೊಲಿಜಿಯಂ ಅನಿಸಿಕೆಯಾಗಿದೆ’ ಎಂದು ಸುಪ್ರೀಂ ಕೋರ್ಟ್‌ ಮೂಲಗಳು ಟೀವಿ ಚಾನೆಲ್‌ ಒಂದಕ್ಕೆ ತಿಳಿಸಿವೆ.

ನ್ಯಾ.ಪುಷ್ಪಾಗೆ ಭಾರೀ ಹಿನ್ನಡೆ

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಾಧೀಶ ನ್ಯಾ| ಎಸ್‌.ಎ. ಬೋಬ್ಡೆ ನೇತೃತ್ವದ ಕೊಲಿಜಿಯಂ, ನ್ಯಾ| ಪುಷ್ಪಾ ಅವರನ್ನು ಬಾಂಬೆ ಹೈಕೋರ್ಟ್‌ನ ನಾಗಪುರದ ಕಾಯಂ ನ್ಯಾಯಮೂರ್ತಿಯಾಗಿ ನೇಮಕ ಮಾಡುವುದಕ್ಕೆ ಜ.20ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ, ಬಟ್ಟೆಯ ಮೇಲಿಂದ ಬಾಲಕಿಯ ಅಂಗಾಂಗ ಮುಟ್ಟುವುದು ಪೋಸ್ಕೋ ಕಾಯ್ದೆಯಡಿ ಅಪರಾಧವಾಗುವುದಿಲ್ಲ. ಚರ್ಮ- ಚರ್ಮದ ನಡುವೆ ಸಂಪರ್ಕ ಏರ್ಪಟ್ಟಿರಬೇಕು ಎಂದು ಕಾಯ್ದೆಯ ಬಗ್ಗೆ ವ್ಯಾಖ್ಯಾನ ನೀಡಿ ಜ.19ರಂದು ಅವರು ಪ್ರಕರಣವೊಂದರಲ್ಲಿ ತೀರ್ಪು ನೀಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು.

ಈ ನಡುವೆ, ಐದು ವರ್ಷದ ಬಾಲಕಿಯ ಕೈ ಹಿಡಿದು ಆಕೆಯಿಂದ 51 ವರ್ಷದ ವ್ಯಕ್ತಿಯೊಬ್ಬ ತನ್ನ ಪ್ಯಾಂಟ್‌ ಜಿಪ್‌ ಬಿಚ್ಚಿಸಿಕೊಂಡದ್ದು ಕೂಡ ಪೋಸ್ಕೋದಡಿ ಲೈಂಗಿಕ ದೌರ್ಜನ್ಯ ಎನಿಸಿಕೊಳ್ಳುವುದಿಲ್ಲ ಎಂದು ತೀರ್ಪು ನೀಡಿ, ಆರೋಪಿಯೊಬ್ಬನನ್ನು ಖುಲಾಸೆಗೊಳಿಸಿದ್ದರು. ಇಂತಹ ತೀರ್ಪುಗಳು ಅಪಾಯಕಾರಿ ಇತಿಹಾಸ ಸೃಷ್ಟಿಸುತ್ತವೆ ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ವಾದಿಸಿದ ಹಿನ್ನೆಲೆಯಲ್ಲಿ ಜ.27ರಂದು ಪುಷ್ಪಾ ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್‌ ತಡೆ ನೀಡಿತ್ತು.

Latest Videos
Follow Us:
Download App:
  • android
  • ios