ನವದೆಹಲಿ(ಏ.06): ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಹಿರಿಯ ನ್ಯಾಯಾಧೀಶ ಎನ್ ವಿ ರಮಣ ಅವರ ಹೆಸರು ಅಂತಿಮಗೊಂಡಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈ ಶಿಫಾರಸ್ಸಿಗೆ ಅಂಕಿತ ಹಾಕಿದ್ದಾರೆ.

ಸುಪ್ರೀಂ ಸಿಜೆ: ನ್ಯಾ| ರಮಣ ಹೆಸರು ಶಿಫಾರಸು!

ಹಾಲಿ ಮುಖ್ಯ ನ್ಯಾಯಮೂರ್ತಿ ಎಸ್ಎ ಬೋಬ್ಡೆ ಅವರ ಶಿಫಾರಸ್ಸಿನಂತೆ ಸಿಜೆಐ ಆಗಿ ಎನ್ ವಿ ರಮಣ ಅವರನ್ನು ಆಯ್ಕೆ ಮಾಡಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಹಾಕಿದ್ದಾರೆ. ಏಪ್ರಿಲ್​ 24ರಂದು ರಮಣ ಅವರು ಸಿಜೆಐ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹಾಲಿ ಮುಖ್ಯನ್ಯಾಯಮೂರ್ತಿ ಎಸ್​.ಎ.ಬೊಬ್ಡೆ ಏಪ್ರಿಲ್​ 23ರಂದು ನಿವೃತ್ತರಾಗಲಿದ್ದಾರೆ.

ಎನ್​.ವಿ.ರಮಣ 1957ರ ಆಗಸ್ಟ್​ 27ರಂದು ಆಂಧ್ರಪ್ರದೇಶದ ಪೊನ್ನಾವರಂ ಗ್ರಾಮದಲ್ಲಿ ಜನಿಸಿದ್ದಾರೆ. 1983ರ ಫೆಬ್ರವರಿ 10ರಿಂದ ವಕೀಲಿ ವೃತ್ತಿ ಪ್ರಾರಂಭಿಸಿದ ರಮಣರವರು 2000ರ ಜೂನ್​ 27ರಂದು ಆಂಧ್ರಪ್ರದೇಶ ಹೈಕೋರ್ಟ್​​ನ ಮುಖ್ಯನ್ಯಾಯಾಧೀಶರಾಗಿ ನೇಮಕಗೊಂಡರು. 

2014ರ ಫೆಬ್ರವರಿ 17ರಂದು ಸುಪ್ರಿಂಕೋರ್ಟ್ ಜಡ್ಜ್​ ಆಗಿ ನೇಮಕಗೊಂಡಿದ್ದಾರೆ. ಕಳೆದ ವರ್ಷ ಅಕ್ಟೋಬರ್​ನಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್​.ಜಗನ್​ ಮೋಹನ್​ ರೆಡ್ಡಿ ಮತ್ತು ಎನ್​.ವಿ.ರಮಣ ಮಧ್ಯೆ ವಿವಾದವೊಂದು ಎದ್ದಿತ್ತು. ಜಗನ್​ ಮೋಹನ್​ ರೆಡ್ಡಿಯವರು ರಮಣ ವಿರುದ್ಧ ಗಂಭೀರ ಆರೋಪ ಮಾಡಿ, ಸಿಜೆಐ ಬೋಬ್ಡೆಯವರಿಗೆ ಪತ್ರ ಬರೆದಿದ್ದರು. ಇತ್ತೀಚೆಗಷ್ಟೇ ಈ ಆರೋಪದಿಂದ ಇವರಿಗೆ ಕ್ಲೀನ್​ಚಿಟ್​ ಪಡೆದಿದ್ದಾರೆ.