ನವದೆಹಲಿ(ಮಾ.25): ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ ಏ.23ರಂದು ನಿವೃತ್ತರಾಗಲಿರುವ ನ್ಯಾ| ಎಸ್‌.ಎ. ಬೋಬ್ಡೆ ಅವರು ತಮ್ಮಿಂದ ತೆರವಾಗುವ ಸ್ಥಾನಕ್ಕೆ ಸರ್ವೋಚ್ಚ ನ್ಯಾಯಾಲಯದ ಅತಿ ಹಿರಿಯ ನ್ಯಾಯಾಧೀಶರಾಗಿರುವ ನ್ಯಾಯಮೂರ್ತಿ ಎನ್‌.ವಿ. ರಮಣ ಅವನ್ನು ನೇಮಕ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ.

ಒಂದು ವೇಳೆ, ಈ ಶಿಫಾರಸಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದರೆ ಏ.24ರಂದು ನ್ಯಾ| ರಮಣ ಅವರು ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 2022ರ ಆ.26ರವರೆಗೂ ಅವರೂ ಕಾರ್ಯನಿರ್ವಹಿಸಲಿದ್ದಾರೆ.

ನಿಯಮಗಳ ಪ್ರಕಾರ, ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ತಾವು ನಿವೃತ್ತರಾಗುವ ಒಂದು ತಿಂಗಳು ಮೊದಲೇ ತಮ್ಮ ಉತ್ತರಾಧಿಕಾರಿಯನ್ನು ಸೂಚಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕಾಗುತ್ತದೆ.

ಆಂಧ್ರದವರು ರಮಣ:

ನ್ಯಾ| ರಮಣ ಮೂಲತಃ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೊನ್ನಾವರಂ ಗ್ರಾಮದವರು. 1957ರ ಆ.27ರಂದು ಜನಿಸಿದ ಅವರು 1983ರ ಫೆ.10ರಂದು ವಕೀಲರಾಗಿ ನೋಂದಾಯಿಸಿಕೊಂಡರು. 2000ನೇ ಇಸ್ವಿಯ ಜೂ.27ರಂದು ಆಂಧ್ರಪ್ರದೇಶ ಹೈಕೋರ್ಟ್‌ನ ಕಾಯಂ ನ್ಯಾಯಮೂರ್ತಿಯಾದರು. 2013ರ ಮಾ.10ರಿಂದ ಮೇ 20ರವರೆಗೆ ಆಂಧ್ರ ಹೈಕೋರ್ಟ್‌ನ ಹಂಗಾಮಿ ನ್ಯಾಯಮೂರ್ತಿಯಾಗಿದ್ದರು. 2013ರ ಸೆ.2ರಂದು ದೆಹಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದ ಅವರು, 2014ರ ಫೆ.17ರಿಂದ ಸುಪ್ರೀಂಕೋರ್ಟ್‌ ನ್ಯಾಯಾಧೀಶರಾಗಿದ್ದಾರೆ.