Jayalalithaa Poes Garden: ಪೋಯಸ್ ಗಾರ್ಡನ್ ಕೀ ಪಡೆದ ಜಯಲಲಿತಾರ ಸೊಸೆ ದೀಪಾ ಜಯಕುಮಾರ್
- ಪೋಯಸ್ ಗಾರ್ಡನ್ ನಿವಾಸದ ಕೀಗಳು ಜಯಲಲಿತಾ ಅವರ ಸೊಸೆ ದೀಪಾ ಜಯಕುಮಾರ್ ಗೆ ಹಸ್ತಾಂತರ
- ಜಯಾರ ‘ವೇದ ನಿಲಯಂ’ ನಲ್ಲಿ ಸಂಬಂಧಿಕರಿಗೆ ಮಾತ್ರ ಹಕ್ಕು ಎಂದ ಮದ್ರಾಸ್ ಹೈಕೋರ್ಟ್
- ಅಣ್ಣ ದೀಪಕ್ ಜಯಕುಮಾರ್ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಎಂದ ದೀಪಾ
ಚೆನ್ನೈ(ಡಿ.11): ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ಪೋಯಸ್ ಗಾರ್ಡನ್ ನಿವಾಸದ ಕೀಗಳನ್ನು ಜಯಲಲಿತಾ ಅವರ ಸೊಸೆ ದೀಪಾ ಜಯಕುಮಾರ್ (Deepa Jayakumar) ಹಾಗೂ ಅಳಿಯ ದೀಪಕ್ ಜಯಕುಮಾರ್‌ಗೆ ಹಸ್ತಾಂತರಿಸಲು ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ. ನ್ಯಾಯಾಲಯದ ಈ ಸೂಚನೆ ಹಿನ್ನೆಲೆಯಲ್ಲಿ ಪೋಯಸ್ ಗಾರ್ಡನ್ ಕೀಗಳನ್ನು ಅವರಿಗೆ ಹಸ್ತಾಂತರ ಮಾಡಲಾಗಿದೆ. ಜೆ.ಜಯಲಲಿತಾ (J. Jayalalithaa) ಅವರ ‘ವೇದ ನಿಲಯಂ’ (Veda Nilayam) ನಿವಾಸವನ್ನು ಸ್ಮಾರಕವಾಗಿ ಪರಿವರ್ತಿಸುವ ಈ ಹಿಂದಿನ ಎಐಎಡಿಎಂಕೆ (AIADMK) ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ (Madras High Court) ನವೆಂಬರ್ 24ರಂದು ರದ್ದುಗೊಳಿಸಿತ್ತು. ಮತ್ತು ಪೋಯಸ್ ಗಾರ್ಡನ್ ನಿವಾಸ ಜಯಲಲಿತಾರ ಸಂಬಂಧಿಗಳಿಗೆ ಸೇರಿದ್ದು ಎಂದು ಹೇಳಿತ್ತು. ಅಲ್ಲದೆ ಸ್ವಾಧೀನ ಪಡಿಸಿಕೊಂಡಿರುವ ವೇದ ನಿಲಯಂ ನಿವಾಸವನ್ನು ಜಯಲಲಿತಾರ ಏಕೈಕ ಸಹೋದರ ಜಯಕುಮಾರ್ ಮಕ್ಕಳಾದ ದೀಪಾ (Deepa) ಮತ್ತು ಸೋದರಳಿಯ ದೀಪಕ್ ಜಯಕುಮಾರ್ (Deepak Jayakumar) ಅವರಿಗೆ ಹಸ್ತಾಂತರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.
ಚೆನ್ನೈನ ಜಿಲ್ಲಾಧಿಕಾರಿ ಜೆ.ವಿಜಯ ರಾಣಿ ಅವರು ಶುಕ್ರವಾರ ಪೋಯಸ್ ಗಾರ್ಡನ್ ನ ಕೀಗಳನ್ನು ಹಸ್ತಾಂತರಿಸಿದರು. ಕೀ ಪಡೆದ ಬಳಿಕ ಮಾತನಾಡಿದ ದೀಪಾ " ಇದು ಬಹುದೊಡ್ಡ ಗೆಲುವು, ಸಾಮಾನ್ಯ ಗೆಲುವು ಅಲ್ಲವೇ ಅಲ್ಲ. ನನಗೆ ತುಂಬಾ ಸಂತೋಷವಾಗಿದೆ. ಅತ್ತೆ ನಿಧನರಾದ ಬಳಿಕ ಅವರ ಮನೆಗೆ ಮೊದಲ ಬಾರಿ ಕಾಲಿಡುತ್ತಿದ್ದೇನೆ. ನಾನು ತುಂಬಾ ಭಾವುಕಳಾಗಿದ್ದೇನೆ. ಇದು ನನ್ನ ಜನ್ಮಸ್ಥಳ, ನಾನು ನನ್ನ ಅತ್ತೆಯೊಂದಿಗೆ ಕಳೆದ ದಿನಗಳನ್ನು ಮೆಲುಕು ಹಾಕಿಕೊಳ್ಳುತ್ತಿದ್ದೇನೆ ಎಂದು ದೀಪಾ ಸುದ್ದಿಗಾರರಿಗೆ ತಿಳಿಸಿದರು. ಕೀ ಪಡೆದ ಬಳಿಕ ಜಯಲಲಿತಾ ಅವರ ಫೋಟೋಗೆ ದೀಪಾ ಮತ್ತು ಆಕೆಯ ಪತಿ ಮಾಧವನ್ ಮತ್ತು ಸಂಬಂಧಿಕರು ಪುಷ್ಪ ನಮನ ಸಲ್ಲಿಸಿದರು.
ಜಯಲಲಿತಾ ಅವರ ಮನೆಯ ಸ್ಥಿತಿಗತಿ ಕುರಿತು ಮಾತನಾಡಿದ "ಜಯಲಲಿತಾ ಅವರು ಬದುಕಿದ್ದಾಗ ಈ ಮನೆ ಬಹಳ ಸುಂದರವಾಗಿತ್ತು. ಆದರೆ, ಈಗ ಮನೆಯ ಅಂದವೇ ಹಾಳಾಗಿದೆ. ಮನೆಯಲ್ಲಿದ್ದ ಹಲವಾರು ವಸ್ತುಗಳು ಕಾಣೆಯಾಗಿದ್ದು, ಮನೆ ಖಾಲಿ ಬಿದ್ದಿದೆ. ನಾವು ಬಂದಾಗ ಮನೆಯಲ್ಲಿ ವಿದ್ಯುತ್ ಕೂಡ ಇರಲಿಲ್ಲ. ದೀಪಕ್ ಮತ್ತು ನಾನು ಚರ್ಚಿಸಿ ಮನೆಯನ್ನು ನವೀಕರಿಸುವ ಬಗ್ಗೆ ಮತ್ತು ಇಲ್ಲಿ ಉಳಿದಿರುವ ವಸ್ತುಗಳನ್ನು ಏನು ಮಾಡಬೇಕೆಂಬ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ನಾವು ಮನೆಯನ್ನು ಬಳಸಬೇಕಾದರೆ ಬಹಳಷ್ಟು ವ್ಯವಸ್ಥೆಗಳನ್ನು ಮಾಡಬೇಕಿದೆ. ಜತೆಗೆ ನಮ್ಮ ಮತ್ತು ಶಶಿಕಲಾ ಕುಟುಂಬದ ನಡುವೆ ಸಾಕಷ್ಟು ಘರ್ಷಣೆಗಳು ನಡೆಯುತ್ತಿದ್ದವು. ಈಗ ನಾನು ಅವಳ ಪರವೂ ಅಲ್ಲ, ವಿರೋಧವೂ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Veda Nilayam: ಮಾಜಿ ಸಿಎಂ ಜಯಲಲಿತಾ ನಿವಾಸ ಸ್ಮಾರಕ ಮಾಡಿದ್ದ ಆದೇಶ ವಜಾ!
2016ರಲ್ಲಿ ಜಯಾ ನಿಧನರಾದ ಬಳಿಕ ಪೋಯಾಸ್ ಗಾರ್ಡನ್‌ನಲ್ಲಿರುವ "ವೇದ ನಿಲಯಂ" ನಿವಾಸವನ್ನು ಹಿಂದಿನ ಎಐಎಡಿಎಂಕೆ ಸರ್ಕಾರ ಸ್ಮಾರಕವನ್ನಾಗಿ (Memorial) ಪರಿವರ್ತಿಸಿ ಕಳೆದ ಜನವರಿ 2021ರಲ್ಲಿ ಉದ್ಘಾಟಿಸಿತ್ತು. ಸರ್ಕಾರದ ಈ ನಿರ್ಧಾರದ ವಿರುದ್ಧ ದೀಪಾ ಮತ್ತು ಸಹೋದರ ದೀಪಕ್ ಕೋರ್ಟ್ ಮೆಟ್ಟಿಲೇರಿದ್ದರು. ಜಯಲಲಿತಾ ಅವರು ವಿವಿಧ ಕಾರಣಗಳಿಂದ ಉಯಿಲು ಬರೆಯಲು ಸಾಧ್ಯವಾಗದೆ ಮೃತಪಟ್ಟಿದ್ದಾರೆ. ಬಹುಶಃ ಅವರ ವಿರುದ್ಧ ಇದ್ದ ಪ್ರಕರಣಗಳು, ಇಕ್ಕಟ್ಟಿನ ರಾಜಕೀಯ ಸನ್ನಿವೇಶದ ಕಾರಣಗಳಿಂದ ವಿಲ್ ಬರೆದಿರಲಿಲ್ಲ ಎಂದು ಅರ್ಜಿಯಲ್ಲಿ ಹೇಳಿದ್ದರು.
Sashikala meets Talaiva: ಸೂಪರ್‌ಸ್ಟಾರ್ ರಜನಿಕಾಂತ್ ಭೇಟಿ ಮಾಡಿದ ಜಯಾ ಆಪ್ತೆ ಶಶಿಕಲಾ
ಈ ವಾದ ಒಪ್ಪಿದ ಕೋರ್ಟ್ ಈಗಾಗಲೇ ಜಯಾ ಹೆಸರಲ್ಲಿ ಒಂದು ಸ್ಮಾರಕ ಇದೆ. ಇನ್ನೊಂದು ಸ್ಮಾರಕದ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿ, ಮನೆ ಹಸ್ತಾಂತಕ್ಕೆ ಸೂಚಿಸಿತು. 1967ರಲ್ಲಿ ಜಯಾ ಅವರ ತಾಯಿ ಸಂಧ್ಯಾ (Sandhya) ಈ ಮನೆಯನ್ನು 1.32 ಲಕ್ಷಕ್ಕೆ ಖರೀದಿಸಿದ್ದರು. ಬಳಿಕ ಅಕ್ಕಪಕ್ಕದ ಜಾಗವನ್ನು ಖರೀದಿಸಿದ್ದ ಜಯಾ, ಅದನ್ನು ದೊಡ್ಡ ಬಂಗಲೆಯನ್ನಾಗಿಸಿದ್ದರು (Bungalow). ಈ ಮನೆ ಇದೀಗ 100 ಕೋಟಿ ರು. ಬೆಲೆ ಬಾಳುತ್ತದೆ.
ಆಸ್ತಿಯ ಮೇಲೆ ಬಾಕಿ ಇರುವ ತೆರಿಗೆಯನ್ನು ಸಂಗ್ರಹಿಸಲು ಆದಾಯ ತೆರಿಗೆ ಇಲಾಖೆ (Income tax department) ತನ್ನ ಪ್ರಕ್ರಿಯೆಗಳನ್ನು ಪ್ರಾರಂಭಿಸಬಹುದು ಎಂದು ನ್ಯಾಯಾಲಯ ಹೇಳಿತ್ತು. ನಿವಾಸದ ಖರೀದಿ ಬೆಲೆಯಾಗಿ ಸರ್ಕಾರವು ಠೇವಣಿ (deposite) ಇರಿಸಿದ್ದ 67.9 ಕೋಟಿ ರೂ. ಗಳನ್ನು ಹಿಂಪಡೆಯಬಹುದು ಎಂದು ನ್ಯಾಯಾಲಯ ತಿಳಿಸಿದೆ.