Asianet Suvarna News Asianet Suvarna News

Sashikala meets Talaiva: ಸೂಪರ್‌ಸ್ಟಾರ್‌ ರಜನಿಕಾಂತ್‌ ಭೇಟಿ ಮಾಡಿದ ಜಯಾ ಆಪ್ತೆ ಶಶಿಕಲಾ

ಸೂಪರ್‌ಸ್ಟಾರ್‌ ರಜನಿಕಾಂತ್‌ ಭೇಟಿ ಮಾಡಿದ ಶಶಿಕಲಾ
ತಲೈವಾ ಆರೋಗ್ಯ ವಿಚಾರಿಸಿದ ಜಯಲಲಿತಾ ಆಪ್ತೆ
ಚೆನ್ನೈನ ಪೋಯಸ್‌ ಗಾರ್ಡನ್‌ನ ಮನೆಯಲ್ಲಿ ಭೇಟಿ

Shashikala meets superstar Rajinikanth  akb
Author
Bangalore, First Published Dec 7, 2021, 5:39 PM IST

ಚೆನ್ನೈ(ಡಿ.7): ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ(Jayalalithaa) ಆಪ್ತೆ ವಿ.ಕೆ.ಶಶಿಕಲಾ ಅವರಿಂದು ತಮಿಳು ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರನ್ನು ಭೇಟಿಯಾಗಿ ಅವರ ಆರೋಗ್ಯ ಕ್ಷೇಮ ವಿಚಾರಿಸಿದರು. ಚೆನ್ನೈನ ಪೋಯಸ್ ಗಾರ್ಡನ್‌(Poes Garden)ನಲ್ಲಿರುವ ನಟ ರಜನಿಕಾಂತ್(Rajinikanth) ಅವರ ಮನೆಗೆ ಭೇಟಿ ನೀಡಿದ ಶಶಿಕಲಾ, ತಲೈವಾ ಆರೋಗ್ಯದ ಬಗ್ಗೆ ವಿಚಾರಿಸಿದರು. ಇತ್ತೀಚೆಗೆ  ವಿ.ಕೆ.ಶಶಿಕಲಾ ಅವರನ್ನು ಪಕ್ಷದಿಂದ ಹೊರಗಿಡಲು ಎಐಎಡಿಎಂಕೆ ನಾಯಕರು ಪಕ್ಷದ ಬೈಲಾವನ್ನೇ ತಿದ್ದುಪಡಿ ಮಾಡಿದ್ದರು. ಇದರಿಂದ ಶಶಿಕಲಾಗೆ ಪಕ್ಷದ ಬಾಗಿಲು ಬಹುತೇಕ ಮುಚ್ಚಿದಂತಾಗಿದೆ. ಹೀಗಾಗಿ ತಮಿಳುನಾಡು ರಾಜಕೀಯಕ್ಕೆ ಮರಳಲು ಶಶಿಕಲಾ(Sashikala) ಬೇರೆ ದಾರಿ ಹುಡುಕುವ ಯೋಚನೆಯಲ್ಲಿದ್ದಾರೆ. ಈ ಮಧ್ಯೆ ಅವರು ತಮಿಳು ಚಿತ್ರರಂಗದ ಹಾಗೂ ತಮಿಳುನಾಡಿನ ಪ್ರಭಾವಶಾಲಿ ವ್ಯಕ್ತಿ ಎನಿಸಿರುವ ಸೂಪರ್ ಸ್ಟಾರ್ ರಜನಿಕಾಂತ್‌ ಅವರನ್ನು ಭೇಟಿಯಾಗಿದ್ದು, ಇದು ತಮಿಳುನಾಡು ರಾಜಕೀಯದ ಪಡಶಾಲೆಯಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ತಮಿಳುನಾಡು(Tamil Nadu) ರಾಜಕೀಯದಲ್ಲಿ ಹೊಸದೊಂದು ಅಲೆ ಎಬ್ಬಿಸಲು ಸಿದ್ಧರಾಗಿ  ಹೊಸ ಪಕ್ಷವೊಂದನ್ನು ಕಟ್ಟಿದ ತಲೈವಾ ರಜನಿಕಾಂತ್‌ ಆರೋಗ್ಯದ ಸಮಸ್ಯೆಯ ಕಾರಣದಿಂದ ರಾಜಕೀಯ ಸೇರುವ ನಿರ್ಧಾರವನ್ನು ಕೈ ಬಿಟ್ಟಿದ್ದರು. ಅಲ್ಲದೇ ತಾವು ಸ್ಥಾಪಿಸಿದ 'ರಜನಿ ಮಕ್ಕಳ್ ಮಂಡ್ರಂ ಪಕ್ಷವನ್ನು ವಿಸರ್ಜಿಸಿದ್ದರು. ಇನ್ನು ಶಶಿಕಲಾ ರಜನಿ ಭೇಟಿಯ ನಿಜವಾದ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಭೇಟಿ ವೇಳೆ ಶಶಿಕಲಾ ಅವರು ರಜನಿಕಾಂತ್ ಅವರ ಆರೋಗ್ಯವನ್ನು ವಿಚಾರಿಸಿದರು. ಹಾಗೂ ದಾದಾಸಾಹೇಬ್ ಫಾಲ್ಕೆ(Dadasaheb Phalke) ಪ್ರಶಸ್ತಿಗೆ ಭಾಜನರಾದ ರಜನಿಕಾಂತ್‌ಗೆ ಶಶಿಕಲಾ ಅಭಿನಂದಿಸಿದರು. ತಮಿಳುನಾಡು ಮಾತ್ರವಲ್ಲದೇ ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ರಜನಿಕಾಂತ್‌ ಅವರೊಂದಿಗಿನ ಶಶಿಕಲಾ ಭೇಟಿಯ ಬಗ್ಗೆ ತಮಿಳುನಾಡು ಜನರ ಅಭಿಪ್ರಾಯ ಏನಾಗಿರಬಹುದು ಎಂಬ ಕುತೂಹಲವಿದೆ. 

AIADMK shuts door to Sasikala: ಜಯಾ ಆಪ್ತೆ ಶಶಿಕಲಾಗೆ ಎಐಎಡಿಎಂಕೆ ಬಾಗಿಲು ಬಂದ್‌

ಇತ್ತ ಶಶಿಕಲಾ ಅವರಿಗೆ ಎಐಎಡಿಎಂಕೆ(AIADMK)ಬಾಗಿಲು ಬಹುತೇಕ ಮುಚ್ಚಿದಂತಾಗಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲುಶಿಕ್ಷೆ ಮುಗಿಸಿ ಬಿಡುಗಡೆಯಾದ ಶಶಿಕಲಾ ತಾವು ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿ (ನಂ.1 ನಾಯಕಿ) ಎಂದು ಹೇಳಿಕೊಂಡಿದ್ದರು. ಆದರೆ, 2017ರಲ್ಲೇ ಬೈಲಾ ತಿದ್ದುಪಡಿ ಮಾಡಿದ ಪಕ್ಷದ ನಾಯಕರು, ಸಮನ್ವಯಕಾರ (ಪನ್ನೀರ್‌ಸೆಲ್ವಂ) ಹಾಗೂ ಜಂಟಿ ಸಮನ್ವಯಕಾರ (ಪಳನಿಸ್ವಾಮಿ) ಇವೆರಡು ಮಾತ್ರ  ಪಕ್ಷದ ನಂ.1 ಹುದ್ದೆಗಳು ಎಂದು ಹೇಳಿತ್ತು. ನಂತರ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿಯಮವನ್ನು ಇನ್ನಷ್ಟುಬಲಗೊಳಿಸಿ ತಿದ್ದುಪಡಿ ಮಾಡಲಾಗಿದೆ. ಹೊಸ ತಿದ್ದುಪಡಿಯ ಅನ್ವಯ ಪ್ರಾಥಮಿಕ ಸದಸ್ಯರಿಗೆ ಪಕ್ಷದ ಅತ್ಯುನ್ನತ ಸ್ಥಾನಗಳಾದ ಸಮನ್ವಯಕಾರ ಮತ್ತು ಜಂಟಿ ಸಮನ್ವಯಕಾರರನ್ನು ಆಯ್ಕೆ ಮಾಡಲು ಒಂದು ಮತದ ಅವಕಾಶ ಮಾತ್ರ ಇರುತ್ತದೆ. ಹುದ್ದೆ ಎರಡು ಇದ್ದರೂ, ಒಂದೇ ಮತ ಇರುವ ಕಾರಣ, ಚಲಾಯಿಸುವ ಪ್ರತಿ ಮತವು, ಇಬ್ಬರ ಆಯ್ಕೆಗೆ ಕಾರಣವಾಗಲಿದೆ.

ಹೀಗಾಗಿ ಪನ್ನೀರ್‌ಸೆಲ್ವಂ(Panneerselvam) ಹಾಗೂ ಪಳನಿಸ್ವಾಮಿ(Palaniswami) ಕೈಗೆ ಎಲ್ಲಾ ಅಧಿಕಾರ ಸಿಕ್ಕಿದ್ದು, ಶಶಿಕಲಾ ಯಾವುದೇ ಅಧಿಕಾರ ಚಲಾಯಿಸಲು ಸಾಧ್ಯವಿಲ್ಲದಂತಾಗಿದೆ. ಅಲ್ಲದೆ, ಶಶಿಕಲಾ ಎಐಎಡಿಎಂಕೆಯ ಪ್ರಾಥಮಿಕ ಸದಸ್ಯೆಯೇ ಅಲ್ಲ ಎಂದೂ ಪಕ್ಷ ತಿಳಿಸಿದೆ. 2017 ರಲ್ಲಿ ಪರಿಚಯಿಸಲಾದ ಬದಲಾವಣೆಗಳು ಪ್ರಧಾನ ಕಾರ್ಯದರ್ಶಿಯ ಉನ್ನತ ಸ್ಥಾನದೊಂದಿಗೆ ಹೊಸದಾಗಿ ರಚಿಸಲಾದ ಪಕ್ಷದ ಸಂಯೋಜಕ  ಮತ್ತು ಜಂಟಿ ಸಂಯೋಜಕ ಸ್ಥಾನಗಳಿಗೆ ಎಲ್ಲಾ ಅಧಿಕಾರಗಳನ್ನು ನೀಡಿದ್ದರೂ, ಪ್ರಸ್ತುತ ತಿದ್ದುಪಡಿ ಇದನ್ನೇ  ಇನ್ನಷ್ಟು ಬಲಪಡಿಸಿತ್ತು. 

ಚೇತರಿಸಿಕೊಂಡು ಮನೆಗೆ ಮರಳಿದ ಸೂಪರ್ ಸ್ಟಾರ್ ರಜನಿಕಾಂತ್‌

ಇತ್ತ ಕೆಲ ವರ್ಷಗಳ ಹಿಂದೆ ರಜನಿಕಾಂತ್ ರಾಜಕೀಯಕ್ಕೆ ಎಂಟ್ರಿ ನೀಡುತ್ತಾರೆ ಎಂದಾಗ ತಮಿಳುನಾಡು ರಾಜಕಾರಣದಲ್ಲಿ ದೊಡ್ಡ ಸಂಚಲನವೇ ಸೃಷ್ಟಿಯಾಗಿತ್ತು. ಒಂದು ವೇಳೆ 2021ರ ತಮಿಳುನಾಡು ವಿಧಾನ ಸಭೆ ಚುನಾವಣೆಗೆ ರಜನಿಕಾಂತ್ ಪಕ್ಷ ಅಖಾಡಕ್ಕೆ ಇಳಿದಿದ್ದರೆ, ನಟರನ್ನೇ ನಾಯಕ ದೇವರು ಎನ್ನುವಷ್ಟು ಆಳವಾಗಿ ಸಿನಿಮಾ ನಟರನ್ನು ಪ್ರೀತಿಸುವ ತಮಿಳು ನಾಡು ರಾಜಕಾರಣದಲ್ಲಿ ಚುನಾವಣಾ ಫಲಿತಾಂಶದಲ್ಲಿ ಭಾರಿ ಬದಲಾವಣೆ ಆಗುತ್ತಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. 

Follow Us:
Download App:
  • android
  • ios