ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ, ಪೊಲೀಸರ ಲಾಠಿ ಪ್ರಹಾರಕ್ಕೆ ನಿರಪರಾಧಿ ಯುವಕನೊಬ್ಬ ಬಲಿಯಾಗಿದ್ದಾನೆ. ತಾನು ಶಾಂತಿಯುತವಾಗಿ ಹೊರಡುತ್ತಿದ್ದರೂ ಪೊಲೀಸರು ಹಲ್ಲೆ ನಡೆಸಿ ಮೊಬೈಲ್ ಒಡೆದು ಹಾಕಿದ್ದಾರೆಂದು ಆತ ಕಣ್ಣೀರಿಟ್ಟಿದ್ದು, ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ನವದೆಹಲಿ: ದೇಶದ ರಾಜಧಾನಿಯ ಜಂತರ್ ಮಂತರ್ ಎಂದರೆ ಅದು ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ ಧ್ವನಿ ಎತ್ತುವ ಜಾಗ. ಆದರೆ, ಅದೇ ಜಂತರ್ ಮಂತರ್‌ನಲ್ಲಿ ನಡೆದ ಲಾಠಿ ಪ್ರಹಾರದ ಘಟನೆಯೊಂದು ಇಡೀ ದೇಶದ ಸಾಕ್ಷಿಪ್ರಜ್ಞೆಯನ್ನು ಕಲಕುವಂತಿದೆ. ಪೋಲಿಸರ ದೌರ್ಜನ್ಯಕ್ಕೆ ಒಳಗಾದ ಯುವಕನೊಬ್ಬ ತನಗಾದ ಅನ್ಯಾಯವನ್ನು ವಿವರಿಸುತ್ತಾ, ಗಂಟಲು ಕಟ್ಟಿ ಬಂದು ಕಣ್ಣೀರಿಟ್ಟ ದೃಶ್ಯ ಪ್ರತಿಯೊಬ್ಬರ ಹೃದಯ ಹಿಂಡುವಂತಿದೆ.
ಅಷ್ಟಕ್ಕೂ ಆಗಿದ್ದೇನು?
ಪ್ರತಿಭಟನೆಯ ಕಾವು ಏರುತ್ತಿದ್ದಂತೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ನಡೆಸಿದ ಲಾಠಿಚಾರ್ಜ್ ಸರಿ-ತಪ್ಪುಗಳ ನಡುವಿನ ವ್ಯತ್ಯಾಸವನ್ನೇ ಮರೆತಂತಿತ್ತು. ಘಟನಾ ಸ್ಥಳದಲ್ಲಿದ್ದ ಈ ಯುವಕ ಯಾವುದೇ ಹಿಂಸಾಚಾರದಲ್ಲಿ ಭಾಗಿಯಾಗಿರಲಿಲ್ಲ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಆತ ಶಾಂತಿಯುತವಾಗಿ ಅಲ್ಲಿಂದ ಕಾಲ್ತೆಗೆಯಲು ಯತ್ನಿಸಿದ್ದ. ಆದರೆ, ಆತನ ಮಾತುಗಳನ್ನು ಕೇಳುವ ತಾಳ್ಮೆ ಪೊಲೀಸರಿಗಿರಲಿಲ್ಲ. ನಾನು ಯಾವುದೇ ಗಲಾಟೆ ಮಾಡುತ್ತಿರಲಿಲ್ಲ, ಸುಮ್ಮನೆ ಅಲ್ಲಿಂದ ಮನೆಗೆ ಹೊರಡುತ್ತಿದ್ದೆ. ಆದರೆ ಪೊಲೀಸರು ಬಂದು ನಮಗೆ ಬೇಕಾಬಿಟ್ಟಿ ನಿಂದಿಸಿದರು. ಅಷ್ಟಕ್ಕೇ ನಿಲ್ಲಿಸದೆ ಲಾಠಿಯಿಂದ ಹಲ್ಲೆ ನಡೆಸಿ, ನನ್ನ ಬಳಿಯಿದ್ದ ಮೊಬೈಲ್ ಫೋನ್ ಅನ್ನು ನೆಲಕ್ಕೆ ಎಸೆದು ಒಡೆದು ಹಾಕಿದರು ಎಂದು ಯುವಕ ಅಳುತ್ತಾ ತನ್ನ ನೋವನ್ನು ತೋಡಿಕೊಂಡಿದ್ದಾನೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ!
ಯುವಕ ಕಣ್ಣೀರಿಡುತ್ತಾ ತನಗಾದ ನೋವನ್ನು ಹಂಚಿಕೊಳ್ಳುತ್ತಿರುವ ವಿಡಿಯೋ ಈಗ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. 'ಸಾರ್ವಜನಿಕರ ರಕ್ಷಣೆಗೆ ಇರಬೇಕಾದ ಪೊಲೀಸರೇ ಈ ರೀತಿ ನಿರಪರಾಧಿಗಳ ಮೇಲೆ ದೌರ್ಜನ್ಯ ಎಸಗಿದರೆ ಸಾಧಾರಣ ಪ್ರಜೆಗಳು ಎಲ್ಲಿಗೆ ಹೋಗಬೇಕು?' ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಒಂದು ಫೋನ್ ಒಡೆದು ಹೋಗಿರುವುದು ಬರಿ ಆಸ್ತಿಯ ನಷ್ಟವಲ್ಲ, ಬದಲಿಗೆ ಒಬ್ಬ ಸಾಮಾನ್ಯ ಪ್ರಜೆಗೆ ಈ ವ್ಯವಸ್ಥೆಯ ಮೇಲಿದ್ದ ಭರವಸೆಯೇ ಒಡೆದು ಹೋಗಿದೆ ಎಂಬುದಕ್ಕೆ ಈ ಯುವಕನ ಕಣ್ಣೀರು ಸಾಕ್ಷಿಯಾಗಿದೆ.
ಸಾಮಾನ್ಯ ಪ್ರಜೆ ಕಥೆ ಏನು?
ಪ್ರತಿಭಟನಾಕಾರರು ತಮ್ಮ ಹಕ್ಕಿಗಾಗಿ ರಸ್ತೆಗೆ ಇಳಿಯುತ್ತಾರೆ, ಪೊಲೀಸರು ತಮ್ಮ ಕರ್ತವ್ಯದ ಹೆಸರಿನಲ್ಲಿ ಲಾಠಿ ಬೀಸುತ್ತಾರೆ. ಆದರೆ, ಈ ಇಬ್ಬರ ಪವರ್ ಗೇಮ್ ಹಾಗೂ ಜಗಳದ ಮಧ್ಯೆ ಸದಾ ಬಲಿಯಾಗುವುದು ಮಾತ್ರ ಯಾವುದೇ ಗದ್ದಲ ಬೇಡವೆಂದು ಶಾಂತಿಯುತವಾಗಿ ಹೊರಟುಹೋಗುವ 'ಸಾಮಾನ್ಯ ಪ್ರಜೆ.
ಅಸಹಾಯಕತೆಗೆ ಸಾಕ್ಷಿಯಾಯ್ತಾ ಈ ಘಟನೆ!
ಜನರ ರಕ್ಷಣೆಗೆ ಇರಬೇಕಾದ ಕಾನೂನು ಮತ್ತು ವ್ಯವಸ್ಥೆ, ಈ ರೀತಿ ಕಣ್ಣು ಮುಚ್ಚಿಕೊಂಡು ನಿರಪರಾಧಿಗಳ ಮೇಲೆ ದೌರ್ಜನ್ಯ ಎಸಗಿದರೆ ಸಾಮಾನ್ಯ ಜನರಿಗೆ ಭರವಸೆ ಎಲ್ಲಿದೆ? ಜಂತರ್ ಮಂತರ್‌ನಲ್ಲಿ ಅಳುತ್ತಾ ನಿಂತಿದ್ದ ಆ ಯುವಕನ ಕಣ್ಣೀರು ಬರಿ ಒಂದು ಒಡೆದ ಫೋನ್‌ಗಾಗಿ ಅಲ್ಲ, ಬದಲಿಗೆ ಈ ವ್ಯವಸ್ಥೆಯಲ್ಲಿ ತನ್ನಂತಹ ನಿರಪರಾಧಿಯ ಮಾತಿಗೆ ಬೆಲೆಯೇ ಇಲ್ಲವಲ್ಲ ಎಂಬ ಅಸಹಾಯಕತೆಗೆ ಸಾಕ್ಷಿ. ಈ ರೀತಿಯ ಮನಸೋಇಚ್ಛೆ ಖಾಕಿ ದೌರ್ಜನ್ಯಕ್ಕೆ ಬ್ರೇಕ್ ಬೀಳದಿದ್ದರೆ, ಪ್ರಜಾಪ್ರಭುತ್ವದ ಮೇಲಿದ್ದ ಸಾಮಾನ್ಯನ ನಂಬಿಕೆಯೂ ಸಂಪೂರ್ಣವಾಗಿ ಧೂಳಿಪಟವಾಗುವುದರಲ್ಲಿ ಸಂಶಯವಿಲ್ಲ!

