ಹನಿಮೂನ್ ಮರ್ಡರ್ ಕೇಸ್‌ನ ಆರೋಪಿ ಸೋನಂ ರಘುವಂಶಿಗೆ ನೀಡಲಾಗಿದ್ದ ಜಾಮೀನನ್ನು ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಇದರ ವಿಚಾರಣೆ ನಡೆಸಿದ ನ್ಯಾಯಪೀಠ, ಜಾಮೀನು ರದ್ದತಿ ಅರ್ಜಿಯ ವಿಚಾರಣೆ ಎದುರಿಸುವುದು ಅಥವಾ ಸಾಕ್ಷಿಗಳ ವಿಚಾರಣೆ ಮುಗಿಯುವವರೆಗೆ ಶರಣಾಗುವುದು ಎಂಬ ಎರಡು ಆಯ್ಕೆಗಳನ್ನು ಸೋನಂಗೆ ನೀಡಿದೆ. ಪೊಲೀಸರ ತನಿಖಾ ವೈಫಲ್ಯದಿಂದಾಗಿ ಈ ಹಿಂದೆ ಆಕೆಗೆ ಜಾಮೀನು ಸಿಕ್ಕಿತ್ತು.

ದೆಹಲಿ: ಅಕ್ರಮ ಸಂಬಂಧ ಇದ್ದರೂ ಮದುವೆ ಬೇಡ ಎನ್ನದೇ ಮದುವೆಯೂ ಆಗಿ ಹನಿಮೂನ್​ನಲ್ಲಿ ಅಮಾಯಕ ಪತಿಯ ಜೀವ ತೆಗೆದು ಇಡೀ ಹೆಣ್ಣುಕುಲಕ್ಕೆ ಅವಮಾನ ಮಾಡಿದ ಹಂತಕಿ, ಹನಿಮೂನ್​ ಮರ್ಡರರ್​ (Honeymoon Murder Case) ಎಂದೇ ಕುಖ್ಯಾತಿ ಗಳಿಸಿರುವ ಸೋನಂ ರಘುವಂಶಿಗೆ ಸುಪ್ರೀಂಕೋರ್ಟ್​ ಇಂದು ಎರಡು ಆಯ್ಕೆಗಳನ್ನು ನೀಡಿದೆ. ಈಕೆಗೆ ಸಿಕ್ಕ ಜಾಮೀನಿಗೆ ಜಾಲತಾಣದಲ್ಲಿ ಭಾರೀ ಅಸಮಾಧಾನ ಉಂಟಾಗಿತ್ತು. ಹಲವರು ನಮ್ಮ ಕಾನೂನನ್ನೇ ಪ್ರಶ್ನೆ ಮಾಡುತ್ತಿದ್ದರು. ಇಂಥ ಪಾಪಿಗಳಿಗೆ ಹೇಗೆ ಕೋರ್ಟ್​ಗಳು ಜಾಮೀನು ಕೊಡುತ್ತವೆ ಎನ್ನುವ ಬಗ್ಗೆ ಚರ್ಚೆ ನಡೆದಿತ್ತು.

ಆದರೆ, ಇಲ್ಲಿ ಎಡವಟ್ಟು ಮಾಡಿದ್ದು ಪೊಲೀಸರು. ತನಿಖೆಯ ಸಮಯದಲ್ಲಿ ಮಾಡುವ ಇಂಥ ಎಡವಟ್ಟುಗಳು ಹೇಗೆ ಸಂತ್ರಸ್ತ ಕುಟುಂಬಗಳಿಗೆ ಅನ್ಯಾಯ ಆಗುತ್ತಿದೆ ಎನ್ನುವುದಕ್ಕೆ ಈ ಕೇಸ್​ ಕೂಡ ಸದ್ಯಕ್ಕೆ ಒಂದು ಸಾಕ್ಷಿಯಾಗಿದೆ. ಈ ಕೇಸ್​​ನಲ್ಲಿ ಪೊಲೀಸರು ಅಂತಿಮ ದಾಖಲೆಗಳನ್ನು ಸಿದ್ಧಪಡಿಸುವಾಗ ಯಾವುದೇ ವಿವೇಚನೆ ಬಳಸಿರಲಿಲ್ಲ. ಬಂಧನದ ವಾರಂಟ್‌ನಲ್ಲಿ ಸೋನಮ್ ಮೇಲಿರುವ ನೈಜ ಆರೋಪಗಳು ಅಥವಾ ಸೆಕ್ಷನ್‌ಗಳನ್ನು ಸರಿಯಾಗಿ ಉಲ್ಲೇಖಿಸದೇ ನಿರ್ಲಕ್ಷ್ಯ ವಹಿಸಲಾಗಿತ್ತು. ಈ ಬಗ್ಗೆ ಪೊಲೀಸರು ಹಿಗ್ಗಾಮುಗ್ಗ ಕೋರ್ಟ್​ ತರಾಟೆಗೆ ತೆಗೆದುಕೊಂಡು, ಜಾಮೀನು ಮಂಜೂರು ಮಾಡಿತ್ತು.

ಇವಳಿಗೆ ಸೆಷನ್ಸ್ ಕೋರ್ಟ್​ ನೀಡಿದ್ದ ಜಾಮೀನನ್ನು ಹೈಕೋರ್ಟ್​ ಮಾನ್ಯ ಮಾಡಿತ್ತು. ಇವಳಿಗೆ ಜಾಮೀನು ನೀಡಿದ್ದು ಸರಿಯಲ್ಲ ಎಂದು ಸರ್ಕಾರ ಸುಪ್ರೀಂಕೋರ್ಟ್​ ಮೊರೆ ಹೋಗಿದೆ. ಇದರ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ.ಎಂ. ಸುಂದ್ರೇಶ್ ಮತ್ತು ನ್ಯಾಯಮೂರ್ತಿ ಪಿ.ಬಿ. ವರಾಲೆ ಅವರನ್ನೊಳಗೊಂಡ ಪೀಠ ಸೋನಂಗೆ ಎರಡು ಆಯ್ಕೆಗಳನ್ನು ನೀಡಿದೆ. ಅವೆಂದರೆ, ಸರ್ಕಾರ ಸಲ್ಲಿಸಿರುವ ಜಾಮೀನು ರದ್ದತಿ ಅರ್ಜಿಯ ವಿಚಾರಣೆಯನ್ನು ನಡೆಸಿ, ಅರ್ಹತೆಯ ಆಧಾರದ ಮೇಲೆ ಈ ಕೇಸ್​ನಲ್ಲಿ ಆದೇಶ ಹೊರಡಿಸುವುದು, ಇಲ್ಲವೇ, ಸಾಕ್ಷಿಗಳನ್ನು ವಿಚಾರಣೆ ಮಾಡುವವರೆಗೆ ಆಕೆ ಶರಣಾಗುವುದು ಈ ಎರಡು ಆಪ್ಷನ್ಸ್​ ನೀಡಿದೆ.

ಕೋರ್ಟ್​ ಹೇಳಿದ್ದೇನು?

ಇದೇ ವೇಳೆ ಎರಡನೆಯ ಆಯ್ಕೆಯನ್ನು ಒಪ್ಪಿಕೊಂಡು ವಿಚಾರಣೆ ನಡೆಸುವವರೆಗೆ ಶರಣಾಗುವುದು ಒಳಿತು ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. 'ನಾವು ಎರಡೂ ಕಡೆಯವರಿಗೂ ನ್ಯಾಯಯುತವಾಗಿರಲು ಬಯಸುತ್ತೇವೆ. ಎರಡನೇ ಆಯ್ಕೆಯನ್ನು ತೆಗೆದುಕೊಂಡರೆ (ಶರಣಾಗುವುದು), ಸಾರ್ವಜನಿಕ ಸಾಕ್ಷಿಗಳ ವಿಚಾರಣೆಯನ್ನು ತ್ವರಿತಗೊಳಿಸಲು ನಾವು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡುತ್ತೇವೆ, ಅದರ ಬಳಿಕ ಜಾಮೀನು ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳುತ್ತೇವೆ. ಇಲ್ಲದೇ ಹೋದರೆ, ಈ ಜಾಮೀನು ಅರ್ಜಿಯ ವಿಚಾರಣೆ ನಡೆಸಿ ಅರ್ಹತೆಯ ಆಧಾರದ ಮೇಲೆ ತೀರ್ಪು ನೀಡಬೇಕಾಗುತ್ತದೆ" ಎಂದು ಕೋರ್ಟ್​ ಹೇಳಿದೆ.

ವಿಚಾರಣಾ ನ್ಯಾಯಾಲಯವು ಶಿಲ್ಲಾಂಗ್‌ನಲ್ಲಿಯೇ ಇದ್ದು ಪ್ರತಿದಿನ ವಿಚಾರಣೆಗೆ ಹಾಜರಾಗುವಂತೆ ಕಠಿಣ ಷರತ್ತುಗಳನ್ನು ಕೋರ್ಟ್​ ವಿಧಿಸಿದೆ ಎಂದು ಸೋನಮ್‌ ಪರ ವಕೀಲರು ಪೀಠದ ಗಮನಕ್ಕೆ ತಂದರು. ಈ ವಿಚಾರವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಪೀಠ ಹೇಳಿತು. ಜುಲೈ 23ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.

ಘಟನೆ ಹಿನ್ನೆಲೆ

2025ರ ಮೇ 23ರಂದು ಮೇಘಾಲಯದ ಸೋಹ್ರಾ ಪ್ರದೇಶಕ್ಕೆ ಹನಿಮೂನ್‌ಗೆ ಹೋಗಿದ್ದ ಮಧ್ಯಪ್ರದೇಶದ ಇಂದೋರ್ ನಿವಾಸಿಯಾದ ಸೋನಂ ರಘುವಂಶಿ ಮತ್ತು ರಾಜಾ ರಘುವಂಶಿ ಪ್ರಕರಣ ಇದಾಗಿದೆ. ಹನಿಮೂನ್‌ಗೆ ಹೋಗಿದ್ದ ಈ ದಂಪತಿ ನಾಪತ್ತೆಯಾಗಿದ್ದರು. ತದನಂತರ ಜೂನ್ 2ರಂದು ರಾಜಾ ರಘುವಂಶಿ ಅವರ ಮೃತದೇಹ ಆಳವಾದ ಕಂದಕದಲ್ಲಿ ಪತ್ತೆಯಾಗಿತ್ತು. ಆರ್ಥಿಕ ಲಾಭಕ್ಕಾಗಿ ಸೋನಂ ಬಾಡಿಗೆ ಹಂತಕರೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂದು ಮೇಘಾಲಯ ಪೊಲೀಸರು ಆರೋಪಿಸಿದ್ದಾರೆ.