26/11 ಮಾದರಿ ‘ದೊಡ್ಡ ದಾಳಿ’ಗೆ ಪಾಕ್ ಸಂಚು?: ಉಗ್ರರ ಹತ್ಯೆಯಿಂದ ಪ್ಲಾನ್ ಬಹಿರಂಗ!
26/11 ಮಾದರಿ ‘ದೊಡ್ಡ ದಾಳಿ’ಗೆ ಪಾಕ್ ಸಂಚು?| ಕಾಶ್ಮೀರದಲ್ಲಿ 4 ಉಗ್ರರ ಹತ್ಯೆಯಿಂದ ಬೆಳಕಿಗೆ| ಕೇಂದ್ರ ಸರ್ಕಾರದ ಮೂಲಗಳಿಂದ ಮಾಹಿತಿ| ಬೆನ್ನಲ್ಲೇ ಮೋದಿ, ಅಮಿತ್ ಶಾ ತುರ್ತು ಸಭೆ
ನವದೆಹಲಿ(ನ.21): 174 ಜನರ ಬಲಿ ಪಡೆದ 2008ರ 26/11 ಮುಂಬೈ ಸರಣಿ ಭಯೋತ್ಪಾದಕ ದಾಳಿಗೆ 12 ವರ್ಷ ತುಂಬುತ್ತಿರುವ ಹೊತ್ತಿನಲ್ಲೇ ಮತ್ತೊಂದು ಬೃಹತ್ ಭಯೋತ್ಪಾದಕ ದಾಳಿ ನಡೆಸಲು ಪಾಕ್ ಪ್ರಾಯೋಜಿತ ಉಗ್ರರು ಸಂಚು ನಡೆಸಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.
ಗುರುವಾರವಷ್ಟೇ ಜಮ್ಮು-ಕಾಶ್ಮೀರದ ನಗ್ರೋಟಾದಲ್ಲಿ ನಡೆದ ಭೀಕರ ಚಕಮಕಿಯಲ್ಲಿ ಜೈಷ್-ಎ-ಮೊಹಮ್ಮದ್ ಸಂಘಟನೆಯ ನಾಲ್ವರು ಉಗ್ರರನ್ನು ಹತ್ಯೆಗೈದಿರುವ ಭದ್ರತಾ ಸಿಬ್ಬಂದಿ, ಟ್ರಕ್‌ವೊಂದರಿಂದ ಅಪಾರ ಪ್ರಮಾಣದ ಸ್ಫೋಟಕಗಳು ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು. ಇದರ ಹಿನ್ನೆಲೆಯನ್ನು ಬೆನ್ನತ್ತಿದ ಗುಪ್ತಚರ ವಿಭಾಗಕ್ಕೆ ‘ದೊಡ್ಡ ದಾಳಿ’ಯೊಂದನ್ನು ನಡೆಸಲು ಭಯೋತ್ಪಾದಕರು ಸಂಚು ಹೂಡಿರುವ ಮಾಹಿತಿ ಲಭ್ಯವಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಪಾಕ್ ಮೂಲದ ಉಗ್ರರ ಹೊಡೆದುರುಳಿಸಿದ ಸೇನೆಗೆ ಮೋದಿ ಸಲಾಂ!
ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಉನ್ನತ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ.
ಉಗ್ರ ಸಂಚು:
2008ರಲ್ಲಿ ಮುಂಬೈನ 10 ಸ್ಥಳಗಳ ಮೇಲೆ ದಾಳಿ ನಡೆಸಿದ್ದ ಉಗ್ರರು ಭಾರತೀಯರೂ ಸೇರಿದಂತೆ ವಿವಿಧ ದೇಶಗಳ 174 ಜನರನ್ನು ಬಲಿ ಪಡೆದಿದ್ದರು. ದಾಳಿಯಲ್ಲಿ 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ದಾಳಿಗೆ ಇದೇ ನ.26ರಂದು 12 ವರ್ಷ ತುಂಬುತ್ತದೆ. ಈ ಹಿನ್ನೆಲೆಯಲ್ಲಿ ಅದೇ ಸಮಯದಲ್ಲಿ ಭಾರತದಲ್ಲಿ ಅಂದಿಗಿಂತಲೂ ಬೃಹತ್ ಮತ್ತು ವಿನಾಶಕಾರಿ ದಾಳಿ ನಡೆಸಲು ಪಾಕಿಸ್ತಾನ ಸಂಚು ರೂಪಿಸಿತ್ತು ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ಕಲೆಹಾಕಿದೆ. ಇದೇ ಕಾರಣಕ್ಕಾಗಿಯೇ ನಾಲ್ವರು ಜೈಷ್ ಉಗ್ರರನ್ನು 11 ಎಕೆ ರೈಫಲ್‌ಗಳು, 3 ಪಿಸ್ತೂಲ್‌ಗಳು, 29 ಗ್ರೆನೇಡ್‌ಗಳು ಹಾಗೂ 6 ಯುಬಿಜಿಎಲ್ ಗ್ರೆನೇಡ್ ಮತ್ತಿತರೆ ಸ್ಫೋಟಕ ಪದಾರ್ಥಗಳೊಂದಿಗೆ ಭಾರತದೊಳಕ್ಕೆ ಕಳುಹಿಸಿಕೊಡಲಾಗಿತ್ತು ಎನ್ನಲಾಗಿದೆ.
ಫ್ರಾನ್ಸ್ ವಿರುದ್ಧ ಕತ್ತಿ ಮಸೆದ ಪಾಕಿಸ್ತಾನಕ್ಕೆ ಆಘಾತ, ಮಿರಾಜ್, ಸಬ್‌ಮರೀನ್‌ಗೆ ತಾಂತ್ರಿಕ ನೆರವು ಕಟ್!
ತುರ್ತು ಸಭೆ:
ಪಾಕಿಸ್ತಾನದ ಇಂತದ್ದೊಂದು ಕುತಂತ್ರ ಬೆಳಕಿಗೆ ಬಂದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ದೇಶದ ಭದ್ರತೆಯ ಕುರಿತು ಉನ್ನತ ಮಟ್ಟದ ಸಭೆ ನಡೆಸಿದರು. ಸಭೆಯ ನಂತರ ಈ ಕುರಿತು ಟ್ವೀಟ್ ಮಾಡಿದ ಮೋದಿ, ಭದ್ರತಾ ಪಡೆಗಳು ಪಾಕಿಸ್ತಾನ ಮೂಲದ ಜೈಷ್ ಸಂಘಟನೆಯ 4 ಉಗ್ರರನ್ನು ಹತ್ಯೆಗೈದಿರುವುದು ಹಾಗೂ ಅವರ ಬಳಿ ಭಾರಿ ಪ್ರಮಾಣದ ಸ್ಫೋಟಕಗಳು ದೊರೆತಿರುವುದನ್ನು ನೋಡಿದರೆ ದೇಶದಲ್ಲಿ ದೊಡ್ಡ ವಿಧ್ವಂಸಕ ಕೃತ್ಯ ಎಸಗುವ ಯೋಜನೆಯೊಂದು ವಿಫಲವಾಗಿರುವುದು ಸ್ಪಷ್ಟವಾಗಿದೆ. ನಮ್ಮ ಭದ್ರತಾ ಪಡೆಗಳು ಮತ್ತೊಮ್ಮೆ ಶೌರ್ಯ ಹಾಗೂ ವೃತ್ತಿಪರತೆಯನ್ನು ಮೆರೆದಿವೆ. ಯೋಧರ ಕಟ್ಟೆಚ್ಚರಕ್ಕೆ ಧನ್ಯವಾದಗಳು. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ನಮ್ಮ ಪ್ರಯತ್ನವನ್ನು ವಿಫಲಗೊಳಿಸುವ ವಿಚ್ಛಿದ್ರಕಾರಿ ಶಕ್ತಿಗಳ ಸಂಚೇ ಈಗ ವಿಫಲವಾಗಿದೆ ಎಂದು ಹೇಳಿದರು.