ಸ್ವಾತಂತ್ರ್ಯ ದಿನಾಚರಣೆಯಂದು ವಂದೇ ಮಾತರಂ ಗಾಯನವನ್ನು ಸೋನಿಯಾ ಗಾಂಧಿ ತಡೆದಿದ್ದಾರೆ ಎಂಬ ಬಿಜೆಪಿ ಆರೋಪವನ್ನು ಕಾಂಗ್ರೆಸ್ ತಳ್ಳಿಹಾಕಿದೆ. ಪಕ್ಷದ ಅಧ್ಯಕ್ಷರಿಗೆ ಕುರ್ಚಿ ತರಲು ಸೂಚಿಸಿದ್ದನ್ನೇ ತಪ್ಪಾಗಿ ಬಿಂಬಿಸಲಾಗಿದೆ ಎಂದು ಜೈರಾಮ್ ರಮೇಶ್ ಸ್ಪಷ್ಟಪಡಿಸಿದ್ದಾರೆ.

ನವದೆಹಲಿ (ಆ.15): ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣದ ವೇಳೆ 'ವಂದೇ ಮಾತರಂ' ಗೀತೆ ಗಾಯನವನ್ನು ಸೋನಿಯಾ ಗಾಂಧಿ ತಡೆದಿದ್ದಾರೆ ಎಂಬ ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಆರೋಪವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದ್ದು, ಇದು ಸಂಪೂರ್ಣ ಸುಳ್ಳು ಎಂದು ಸ್ಪಷ್ಟನೆ ನೀಡಿದೆ. ನೂತನ ಕಾಯ್ದೆಯ ನಿಯಮಾವಳಿಗಳಿಗೆ ಅನುಗುಣವಾಗಿಯೇ ಸಂಪೂರ್ಣ ವಂದೇ ಮಾತರಂ ಗೀತೆಯನ್ನು ಹಾಡಲಾಗಿದ್ದು, ಯಾರೂ ಕೂಡ ಗಾಯನಕ್ಕೆ ಅಡ್ಡಿಪಡಿಸಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ.

ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಕಾರ್ಯಕ್ರಮದ ವೇಳೆ ಸಂಪೂರ್ಣ ವಂದೇ ಮಾತರಂ ಹಾಡುವುದನ್ನು ಪ್ರಶ್ನಿಸಿ, ಅದನ್ನು ತಡೆಯಲು ಯತ್ನಿಸಿದರು ಎಂದು ಬಿಜೆಪಿ ಆರೋಪಿಸಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಜೈರಾಮ್ ರಮೇಶ್, "ಸೋನಿಯಾ ಗಾಂಧಿ ಅವರು ವಂದೇ ಮಾತರಂ ಗಾಯನವನ್ನು ತಡೆಯಲಿಲ್ಲ. ಬದಲಾಗಿ, ಬಹಳ ಹೊತ್ತಿನಿಂದ ನಿಂತುಕೊಂಡಿದ್ದ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗಾಗಿ ಕುರ್ಚಿ ತಂದುಕೊಡುವಂತೆ ಸೂಚಿಸುತ್ತಿದ್ದರು. ಬಿಜೆಪಿಯ ಈ ಆರೋಪ ಸಂಪೂರ್ಣ ನಿರಾಧಾರ. ಕಾರ್ಯಕ್ರಮದಲ್ಲಿ ನೂತನ ಕಾನೂನಿನ ಪ್ರಕಾರವೇ ಸಂಪೂರ್ಣ ವಂದೇ ಮಾತರಂ ಹಾಡಲಾಗಿದೆ" ಎಂದು ವಿವರಿಸಿದ್ದಾರೆ. ಕಾಂಗ್ರೆಸ್ ನಾಯಕ ಪವನ್ ಖೇಡ ಕೂಡ ಸ್ಪಷ್ಟನೆ ನೀಡಿ, ಕಾಂಗ್ರೆಸ್ ಕಚೇರಿಯಲ್ಲಿ ವಂದೇ ಮಾತರಂ ಗಾಯನದ ವೇಳೆ ಯಾವುದೇ ಅಡಚಣೆ ಉಂಟಾಗಿಲ್ಲ ಎಂದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ದುರುದ್ದೇಶಪೂರಿತವಾಗಿ ವೀಡಿಯೊದ ಒಂದು ಸಣ್ಣ ಭಾಗವನ್ನು ಹಂಚಿಕೊಂಡು ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ ಅವರ ಮೇಲೆ ಆರೋಪ ಹೊರಿಸುವುದು ಸರಿಯಲ್ಲ ಎಂದು ಕಾಂಗ್ರೆಸ್ ಹೇಳಿದೆ.

ಏನಿದು ವಂದೇ ಮಾತರಂಗೆ ಸಂಬಂಧಿಸಿದ ಹೊಸ ಕಾನೂನು?

ಸಂಸತ್ತಿನ ಪ್ರಸ್ತುತ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರವು 'ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ (ತಿದ್ದುಪಡಿ) ವಿಧೇಯಕ 2026' (Prevention of Insult to National Honour Amendment Bill 2026) ಅನ್ನು ಜುಲೈ 29 ರಂದು ರಾಜ್ಯಸಭೆಯಲ್ಲಿ ಹಾಗೂ ಜುಲೈ 30 ರಂದು ಲೋಕಸಭೆಯಲ್ಲಿ ಅಂಗೀಕರಿಸಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಂಕಿತದ ಬಳಿಕ ಈ ಕಾಯ್ದೆ ಜಾರಿಗೆ ಬಂದಿದ್ದು, ರಾಷ್ಟ್ರಗೀತೆಗೆ ಇರುವಂತೆಯೇ ರಾಷ್ಟ್ರಗೀತೆ 'ವಂದೇ ಮಾತರಂ'ಗೂ ಕಾನೂನುಬದ್ಧ ಗೌರವ ಮತ್ತು ರಕ್ಷಣೆ ಲಭಿಸಿದೆ. ನೂತನ ನಿಬಂಧನೆಗಳ ಪ್ರಕಾರ, ವಂದೇ ಮಾತರಂ ಗಾಯನಕ್ಕೆ ಜಾನಪೂರ್ವಕವಾಗಿ ಅಪಮಾನ ಮಾಡುವುದು ಅಥವಾ ಅಡ್ಡಿಪಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ.

ಸಂಪೂರ್ಣ ವಂದೇ ಮಾತರಂ ಗಾಯನದ ಹೊಸ ಪ್ರೋಟೋಕಾಲ್

ಕೇಂದ್ರ ಗೃಹ ಸಚಿವಾಲಯದ ನೂತನ ನಿರ್ದೇಶನಗಳ ಪ್ರಕಾರ, ಅಧಿಕೃತ ಸರ್ಕಾರಿ ಕಾರ್ಯಕ್ರಮಗಳು ಹಾಗೂ ಶಾಲೆಗಳಲ್ಲಿ ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳ ಬದಲಿಗೆ, ಎಲ್ಲಾ 6 ಚರಣಗಳನ್ನು ಒಳಗೊಂಡ ಸಂಪೂರ್ಣ ಆವೃತ್ತಿಯನ್ನು (ಅಂದಾಜು 3 ನಿಮಿಷ 10 ಸೆಕೆಂಡುಗಳು) ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಕೆಲವು ಅಧಿಕೃತ ಸರ್ಕಾರಿ ಸಮಾರಂಭಗಳಲ್ಲಿ ರಾಷ್ಟ್ರಗೀತೆಗಿಂತ ಮೊದಲು ಅಥವಾ ನಂತರ ಪ್ರೋಟೋಕಾಲ್ ಪ್ರಕಾರ ವಂದೇ ಮಾತರಂ ಗಾಯನ/ವಾದನಕ್ಕೆ ವ್ಯವಸ್ಥೆ ಮಾಡಲು ನಿರ್ದೇಶಿಸಲಾಗಿದೆ.

ಇನ್ನೊಂದೆಡೆ, ವಂದೇ ಮಾತರಂ ಸಂಪೂರ್ಣ ಗಾಯನವನ್ನು ಕಡ್ಡಾಯಗೊಳಿಸಿರುವುದಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. "ಯಾವುದೇ ಗೀತೆಯ ಮೇಲಿನ ಗೌರವವನ್ನು ಕಾನೂನು ಮಾಡುವ ಮೂಲಕ ತರಲು ಸಾಧ್ಯವಿಲ್ಲ. ಸುದೀರ್ಘ ಕಾರ್ಯಕ್ರಮಗಳಲ್ಲಿ ಜನರು ಸುಮ್ಮನೆ ದೀರ್ಘಕಾಲ ನಿಂತುಕೊಳ್ಳುವುದು ಪ್ರಾಯೋಗಿಕವಾಗಿ ಕಷ್ಟಕರವಾಗುತ್ತದೆ" ಎಂದು ತರೂರ್ ವಾದಿಸಿದ್ದಾರೆ.