ಜೈಪುರದ ಪ್ರತಿಷ್ಠಿತ ಶಾಲೆಯೊಂದರಲ್ಲಿ 4ನೇ ತರಗತಿ ಓದ್ತಿದ್ದ ಬಾಲಕಿ ಅಮೈರಾ ಈ ತಿಂಗಳ 1ರಂದು ಶಾಲಾ ಕಟ್ಟಡದಿಂದಲೇ ಕೆಳಗೆ ಹಾರಿ ಸಾವಿಗೆ ಶರಣಾಗಿದ್ದಳು. ಆದರೆ ವರ್ಷದ ಹಿಂದಿನ ಆಕೆಯ ವಾಯ್ಸ್ ರೆಕಾರ್ಡರ್ ಈಗ ಆಕೆಯ ಪೋಷಕರನ್ನು ಜೀವನ ಪೂರ್ತಿ ಕೊರಗುವಂತೆ ಮಾಡಿದೆ.

ನಾನು ಶಾಲೆಗೆ ಹೋಗುವುದಿಲ್ಲ, ನನ್ನನ್ನು ನೀನು ಶಾಲೆಗೆ ಕಳುಹಿಸಬೇಡ

ಜೈಪುರ: ಆ ಮನೆಯ ಒಬ್ಬಳೇ ಒಬ್ಬಳು ಮಗಳು ಹೊರಟು ಹೋಗಿದ್ದಳು. ಆಕೆ ಸಾವಿನ ನಂತರ ಸ್ಮಶಾನ ಮೌನ ಆವರಿಸಿದ ಆ ಮನೆಯಲ್ಲಿ 9 ವರ್ಷದ ಮಗಳು ಅಮೈರಾ ಧ್ವನಿ ಇರುವ ವರ್ಷದ ಹಿಂದಿನ ವಾಯ್ಸ್ ರೆಕಾರ್ಡರ್ ಒಂದು ಪ್ರತಿಧ್ವನಿಸುತ್ತಿತ್ತು. ಆ ಧ್ವನಿ ಮುದ್ರಿಕೆಯಲ್ಲಿ 4ನೇ ಕ್ಲಾಸ್‌ನಲ್ಲಿ ಓದುತ್ತಿದ್ದ ಅಮೈರಾ ಅಳುತ್ತಾ ನಾನು ಶಾಲೆಗೆ ಹೋಗುವುದಿಲ್ಲ, ನನ್ನನ್ನು ನೀನು ಶಾಲೆಗೆ ಕಳುಹಿಸಬೇಡ ಎಂದು ಹೇಳುತ್ತಿರುವುದು ಕೇಳುತ್ತಿತ್ತು.

ವರ್ಷದ ಬಳಿಕ ಶಾಲಾ ಕಟ್ಟಡದಿಂದ ಕೆಳಗೆ ಹಾರಿದ ಅಮೈರಾ

ಆಕೆಯ ತಾಯಿ ಶಿವಾನಿ ಮೀನಾ ಮಗಳ ಈ ವಾಯ್ಸ್ ರೆಕಾರ್ಡ್‌ರನ್ನು ಮಗಳ ಕ್ಲಾಸ್ ಟೀಚರ್‌ಗೆ ಕಳುಹಿಸಿದ್ದರು. ಬಹುಶಃ ಹೀಗೆ ಕಳುಹಿಸಿದರೆ ಶಾಲೆಯ ಶಿಕ್ಷಕರು ಈ ಬಗ್ಗೆ ಎಚ್ಚರ ಗೊಳ್ಳುತ್ತಾರೆ ತಮ್ಮ ಮಗಳ ಕಷ್ಟ ಏನು ಎಂದು ಕೇಳುತ್ತಾರೆ ಎಂಬುದು ಆ ತಾಯಿಯ ಆಶಯವಾಗಿತ್ತು. ಆದರೆ ಆಗಿದ್ದೇ ಬೇರೆ. ವರ್ಷಗಳ ಕಾಲ ಏನಾಯ್ತೋ ಏನೋ ನವಂಬರ್‌ ಒಂದರಂದು ಶಾಲಾ ಕಟ್ಟಡದಿಂದ ಹಾರಿ ಅಮೈರಾ ಸಾವಿಗೆ ಶರಣಾಗಿದ್ದಳು. ಈ ಮೂಲಕ ಒಬ್ಬಳೇ ಒಬ್ಬಳು ಮಗಳನ್ನು ಹೊಂದಿದ್ದ ಪೋಷಕರಿಗೆ ಉಸಿರಿರುವವರೆಗೆ ನೋವಿನಿಂದ ಕೊರಗುವಂತ ಶಿಕ್ಷೆ ಕೊಟ್ಟಿದ್ದಾಳೆ ಅಮೈರಾ.

ಪ್ರತಿಷ್ಠಿತ ನೀರಜ್ ಮೋದಿ ಶಾಲೆಯಲ್ಲಿ ಅವಾಂತರ

ಹೌದು ಈ ತಿಂಗಳ ಮೊದಲ ದಿನವೇ ರಾಜಸ್ಥಾನದ ಜೈಪುರದ ಪ್ರತಿಷ್ಠಿತ ನೀರಜ್ ಮೋದಿ ಶಾಲೆಯಲ್ಲಿ ಬಾಲಕಿಯೊಬ್ಬಳು ಸಾವಿಗೆ ಶರಣಾಗಿದ್ದಳು. 4ನೇ ಕ್ಲಾಸ್‌ನಲ್ಲಿ ಓದುತ್ತಿದ್ದ ಅಮೈರಾ ಶಾಲಾ ಕಟ್ಟಡದ 4ನೇ ಮಹಡಿಯಿಂದ ಹಾರಿ ಸಾವಿಗೆ ಶರಣಾಗಿದ್ದಳು. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರ ಜೊತೆಗೆ ಶಾಲೆಯ ವಿರುದ್ಧ ತೀವ್ರ ಆಕ್ರೋಶಗಳು ಕೇಳಿ ಬಂದಿದ್ದವು. ಆದರೆ ಈಗ ಮಗಳ ಸಾವಿನ ನಂತರ ತಾಯಿ ಶಾಲಾ ಆಡಳಿತ ಮಂಡಳಿ ವಿರುದ್ಧ ವಿವಿಧ ಆರೋಪಗಳನ್ನು ಮಾಡಿದ್ದಾರೆ.

ಕಳೆದೊಂದು ವರ್ಷದಲ್ಲಿ ನಾನು ಆಕೆಯ ಕ್ಲಾಸ್ ಟೀಚರ್ ಜೊತೆ ಮಾತನಾಡಿದೆ. ಕ್ಲಾಸ್ ಕೋ ಆರ್ಡಿನೇಟರ್ ಜೊತೆ ಮಾತನಾಡಿದೆ. ಒಂದು ಬಾರಿ ಅಲ್ಲ ಹಲವು ಬಾರಿ ಮಾತನಾಡಿದ್ದೇನೆ. ಆದರೆ ನನ್ನ ಮಾತನ್ನು ಅವರು ನಿರ್ಲಕ್ಷಿಸಿದ್ದರು ಎಂದು ಅಮೈರಾಳ ತಾಯಿ ಶಿವಾನಿ ಮೀನಾ ಮಗಳ ಸಾವಿನ ನಂತರ ಕಣ್ಣೀರಿಟ್ಟಿದ್ದಾರೆ. ಕೀಟಲೆ, ಬೆದರಿಕೆ, ನಿಂದನೆಗಳ ಬಗ್ಗೆ ಪದೇ ಪದೇ ದೂರು ನೀಡಿದರು ಶಾಲಾ ಅಧಿಕಾರಿಗಳು ಗಮನಹರಿಸಲಿಲ್ಲ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.

ಇದೇ ವೇಳೆ ಶಿಕ್ಷಕರು ಹಾಗೂ ಪೋಷಕರ ನಡುವಿನ ಪಿಟಿಎಂ ಸಭೆಯನ್ನು ನೆನಪು ಮಾಡಿಕೊಂಡ ಅವರು, ಮಕ್ಕಳ ಗುಂಪೊಂದು ಅಮೈರಾ ಹಾಗೂ ಮತ್ತೊಬ್ಬ ಹುಡುಗನ ಕಡೆ ಬೋಟು ಮಾಡಿ ತೋರಿಸಿದರು. ಈ ವೇಳೆ ಮುಜುಗರಕ್ಕೊಳಗಾದ ಅಮೈರಾ ತನ್ನ ಹಿಂದೆ ಅಡಗಿದಳು ಇದೇ ವಿಚಾರವನ್ನು ಪೋಷಕರ ಸಭೆಯಲ್ಲಿ ಗಮನಕ್ಕೆ ತಂದಿದೆ. ಈ ವೇಳೆ ಶಿಕ್ಷಕರು ಇದು ಸಹ ಶಿಕ್ಷಣ ಇರುವ ಶಾಲೆ ಆಮೈರಾ ಎಲ್ಲಾ ಮಕ್ಕಳ ಜೊತೆ ಮಾತನಾಡುವುದನ್ನು ಕಲಿಯಬೇಕು ಆಕೆ ಹುಡುಗರ ಜೊತೆಗೂ ಮಾತನಾಡಬೇಕು ಎಂದು ಹೇಳಿದರು. ಆಗ ನಾನು ನನ್ನ ಮಗಳು ಹುಡುಗರ ಜೊತೆ ಮಾತನಾಡಬೇಕೋ ಬೇಡವೋ ಎಂಬುದು ನನ್ನ ಮಗಳ ಆಯ್ಕೆ ಎಂದು ಹೇಳಿದ್ದೆ ಎಂದು ವಿಜಯ್ ಹೇಳಿದ್ದಾರೆ.

ಸಿಬಿಎಸ್‌ಇ ಮಾರ್ಗಸೂಚಿಗಳ ಉಲ್ಲಂಘಿಸಿರುವ ಶಾಲೆ

ತನಿಖಾಧಿಕಾರಿಗಳು ಪರಿಶೀಲಿಸಿದ ತರಗತಿಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಅಮೈರಾ ಶಾಲಾ ಕಟ್ಟಡದ ಕಬ್ಬಿಣ ರೇಲಿಂಗ್ ಹತ್ತಿ ಜಿಗಿಯುವ ಮೊದಲು ಎರಡು ಬಾರಿ ತನ್ನ ಶಿಕ್ಷಕಿಯ ಬಳಿಗೆ ನಡೆದುಕೊಂಡು ಹೋಗುವುದನ್ನು ತೋರಿಸಲಾಗಿದೆ. ಅವರು ಏನು ಹೇಳಿದರು ಎಂಬುದು ತಿಳಿದಿಲ್ಲ ಏಕೆಂದರೆ, ತರಗತಿಯ ಸಿಸಿಟಿವಿಯಲ್ಲಿ ಆಡಿಯೊ ರೆಕಾರ್ಡಿಂಗ್ ಅನ್ನು ಸಿಬಿಎಸ್‌ಇ ತನ್ನ ಮಾರ್ಗಸೂಚಿಗಳ ಅಡಿ ಕಡ್ಡಾಯಗೊಳಿಸಿದ್ದರೂ ಆ ಸಿಸಿಟಿವಿ ದೃಶ್ಯಾವಳಿಯಲ್ಲಿ ಯಾವುದೇ ಧ್ವನಿ ಇರಲಿಲ್ಲ.

ನಮಗೆ ಉತ್ತರಗಳು ಬೇಕು, 5,000 ಕ್ಕೂ ಹೆಚ್ಚು ಮಕ್ಕಳು ಮತ್ತು ಆರು ಅಂತಸ್ತಿನ ಕಟ್ಟಡವಿರುವಾಗ ಶಾಲಾ ಆಡಳಿತ ಮಂಡಳಿ ಸುರಕ್ಷತೆಗಾಗಿ ಗ್ರಿಲ್ ಅಥವಾ ನೆಟ್ ಇಲ್ಲದೆ ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಲು ಹೇಗೆ ಅನುಮತಿ ಪಡೆದರು? ಇದು ಅತ್ಯಂತ ಮೂಲಭೂತ ವಿಷಯ. ಸುತ್ತಲೂ ಇಷ್ಟೊಂದು ಮಕ್ಕಳಿರುವಾಗ ನೀವು ತೆರೆದ ಮಹಡಿಗಳನ್ನು ಹೇಗೆ ಹೊಂದಲು ಸಾಧ್ಯ? ಸಿಬಿಎಸ್‌ಇ ಮಾರ್ಗಸೂಚಿಗಳ ಪ್ರಕಾರ ಸಿಸಿಟಿವಿಯಲ್ಲಿ ಇರಬೇಕಾದ ಆಡಿಯೊ ಏಕೆ ಲಭ್ಯವಿಲ್ಲ? ನಿಜವಾಗಿ 15 ದಿನಗಳ ಸಿಸಿಟಿವಿ ದೃಶ್ಯಾವಳಿಗಳು ಶಾಲೆಲ್ಲಿ ಲಭ್ಯವಿರಬೇಕು. ಇದು ಜೈಪುರದ ಪ್ರತಿಷ್ಠಿತ ಶಾಲೆ. ಅವರು ಮಕ್ಕಳ ಶಿಕ್ಷಣಕ್ಕೆ ಗಣನೀಯ ಶುಲ್ಕವನ್ನು ವಿಧಿಸುತ್ತಾರೆ, ಆದರೆ ಹೊಣೆಗಾರಿಕೆ ಎಲ್ಲಿದೆ? ಎಂದು ಅಮೈರಾ ಅವರ ಚಿಕ್ಕಪ್ಪ ಸಾಹಿಲ್ ಪ್ರಶ್ನಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಜೈಪುರದ ಡಿಸಿಪಿ ರಾಜಶ್ರೀ ರಾಜ್ ವರ್ಮಾ ಮಾತನಾಡಿದ್ದು, ಪೊಲೀಸರು ಪೋಷಕರ ಹೇಳಿಕೆಯನ್ನು ಪಡೆದಿದ್ದು, ಎಲ್ಲಾ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ. ನಾವು ಎಲ್ಲವನ್ನು ದಾಖಲೆಯೊಂದಿಗೆ ತೆಗೆದುಕೊಂಡು ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಏನೂ ಮಾಡಿದರೆ ಏನು ಪ್ರಯೋಜನ ಜೀವ ಬಿಟ್ಟ ಪುಟ್ಟ ಬಾಲಕಿ ವಾಪಸ್ ಬರುವುದಿಲ್ಲ. ಪೋಷಕರ ಕೊರಗು ಜೀವ ಇರುವವರೆಗೂ ಹೋಗುವುದಿಲ್ಲ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಗರದ ಪ್ರತಿಷ್ಠಿತ ಶಾಲೆಗೆ ಮಗಳನ್ನು ಓದಲು ಸೇರಿಸಿದವರಿಗೆ ಈಗ ಮಗಳೇ ಇಲ್ಲವಾಗಿದ್ದು, ಶೂನ್ಯ ಅವರಿಸಿದೆ. ಪೋಷಕರ ನೋವಿಗೆ ಕಾಲವೇ ಉತ್ತರ ಹೇಳಬೇಕಷ್ಟೆ?

ಇದನ್ನೂ ಓದಿ: ಕೋಲ್ಹಾಪುರಿ ಚಪ್ಪಲ್ ಬಳಿಕ ಐಷಾರಾಮಿ ಬ್ರಾಂಡ್ ಪ್ರಾಡಾದ ಮತ್ತೊಂದು ಫ್ರಾಡ್: ಈ ಹೊಸ ಪಿನ್‌ ಬೆಲೆ ಎಷ್ಟು ಹೇಳಿ?

ಇದನ್ನೂ ಓದಿ: ಖಾರದ ಪುಡಿ ಹಿಡಿದು ದರೋಡೆಗೆ ಬಂದ ಸುಕುಮಾರಿ: ಜ್ಯುವೆಲ್ಲರಿ ಶಾಪ್ ಮಾಲೀಕನ ಕೈಗೆ ಸಿಕ್ಕಿ ಬೆನ್ನು ಪುಡಿಪುಡಿ