ಜೈಪುರ (ಜು. 24):  ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಉರುಳಿಸುವ ಪ್ರಕ್ರಿಯೆಯಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ಗೆ ಮತ್ತೊಂದು ಸಂಕಷ್ಟಎದುರಾಗಿದೆ. 884 ಕೋಟಿ ರು. ಅವ್ಯವಹಾರ ನಡೆದಿದೆ ಎನ್ನಲಾದ ಸಂಜೀವಿನಿ ಕ್ರೆಡಿಟ್‌ ಕೋಆಪರೇಟಿವ್‌ ಹಗರಣದಲ್ಲಿ ಶೆಖಾವತ್‌ ಪಾತ್ರದ ಕುರಿತಂತೆ ತನಿಖೆ ನಡೆಸಲು ಇಲ್ಲಿನ ಸ್ಥಳೀಯ ನ್ಯಾಯಾಲಯವೊಂದು ವಿಶೇಷ ತನಿಖಾ ತಂಡ(ಎಸ್‌ಒಜಿ)ಕ್ಕೆ ಸೂಚಿಸಿದೆ.

2008ರಲ್ಲಿ ಠೇವಣಿದಾರರಿಗೆ ಹೆಚ್ಚಿನ ಬಡ್ಡಿ ನೀಡುವುದಾಗಿ ಹುಸಿ ಭರವಸೆಯೊಂದಿಗೆ ಗ್ರಾಹಕರಿಗೆ ಸಂಜೀವಿನಿ ಸೊಸೈಟಿ ವಂಚಿಸಿತ್ತು. ಜೊತೆಗೆ ಇದರಲ್ಲಿ ಒಂದಷ್ಟುಪ್ರಮಾಣದ ಹಣವು ಶೆಖಾವತ್‌, ಅವರ ಪತ್ನಿ ಹಾಗೂ ಇತರರ ಕಂಪನಿಗಳಿಗೆ ವರ್ಗಾವಣೆಗೊಂಡಿತ್ತು ಎಂಬುದನ್ನು ಎಸ್‌ಒಜಿ ಪತ್ತೆ ಹಚ್ಚಿತ್ತು ಎನ್ನಲಾಗಿದೆ.

ರಾಜಸ್ಥಾನ ರಾಜಕೀಯಕ್ಕೆ ದೊಡ್ಡ ಟ್ವಿಸ್ಟ್, ಕೈ ಬ್ರಹ್ಮಾಸ್ತ್ರಕ್ಕೆ ಪೈಲಟ್ ಪಡೆ ಕಕ್ಕಾಬಿಕ್ಕಿ

ತಮ್ಮ ನೇತೃತ್ವದ ಸರ್ಕಾರದ ಪತನಕ್ಕಾಗಿ ಕೇಂದ್ರ ಸಚಿವ ಶೆಖಾವತ್‌ ಮತ್ತು ಇತರ ಬಿಜೆಪಿ ಮುಖಂಡರು ಕುದುರೆ ವ್ಯಾಪಾರದಲ್ಲಿ ನಿರತರಾಗಿದ್ದರು ಎಂದು ದೂರಿ ರಾಜಸ್ಥಾನ ಮುಖ್ಯಮಂತ್ರಿ ಗೆಹ್ಲೋಟ್‌ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ, ಸ್ಥಳೀಯ ಕೋರ್ಟ್‌ ಶೆಖಾವತ್‌ ವಿರುದ್ಧ ತನಿಖೆಗೆ ನಿರ್ದೇಶಿಸಿದೆ.