ಜಹಾಂಗೀರ್‌ಪುರ ಪ್ರದೇಶದಲ್ಲಿ ನಡೆದ ಹಿಂಸಾಚಾರ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲು ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದ ಅಮಿತ್ ಶಾ
ನವದೆಹಲಿ(ಏ.20): ಕಳೆದ ಶನಿವಾರ ಜಹಾಂಗೀರ್‌ಪುರ ಪ್ರದೇಶದಲ್ಲಿ ಹನುಮ ಜಯಂತಿ ಶೋಭಾಯಾತ್ರೆ ಮೇಲೆ ಕಲ್ಲೆಸೆದು, ಹಿಂಸಾಚಾರ ನಡೆಸಿದ್ದ 5 ಜನರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ದಾಳಿಕೋರರ ವಿರುದ್ಧ ಕಠಿಣ ಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ಬೆನ್ನಲ್ಲೇ, ಪೊಲೀಸರು ಮತ್ತು ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ್ದ ಸೋನು ಸೇರಿದಂತೆ 5 ಜನರ ವಿರುದ್ಧ ಕಠಿಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಹನುಮ ಜಯಂತಿ ವೇಳೆ ದಿಲ್ಲಿಯ ಜಹಾಂಗೀರ್‌ಪುರಿಯಲ್ಲಿ ಶನಿವಾರ ನಡೆದ ಕೋಮುಗಲಭೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಘಟನೆಯ ‘ಸೂತ್ರಧಾರಿ’ ಎಂದು ಹೇಳಲಾಗಿರುವ ಅನ್ಸಾರ್ ಹಾಗೂ ಪೊಲೀಸರು, ಹನುಮ ಭಕ್ತರು ಮತ್ತು ಜನರ ಮೇಲೆ 7-8 ಸುತ್ತು ಗುಂಡು ಹಾರಿಸಿದ್ದ ಮೊಹಮ್ಮದ್ ಅಸ್ಲಾಂ ಸೇರಿದಂತೆ 20 ಮಂದಿಯನ್ನು ಭಾನುವಾರ ಬಂಧಿಸಿದ್ದಾರೆ.
ಜಹಾಂಗೀರಪುರಿ ಹಿಂಸಾಚಾರ: ಭಯಾನಕ ಚಿತ್ರಣ ಬಿಚ್ಚಿಟ್ಟ ಪೊಲೀಸ್ ಅಧಿಕಾರಿ
ಅನ್ಸಾರ್ (35) ಎಂಬಾತ ಈ ಘಟನೆಯ ಸೂತ್ರಧಾರ ಎಂದು ತನಿಖೆಯ ವೇಳೆ ಗೊತ್ತಾಗಿದೆ. ಈತ ಈ ಹಿಂದೆ 2 ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಾಗೂ ಜೂಜಾಟ ಪ್ರಕರಣಗಳಲ್ಲಿ ಅನೇಕ ಬಾರಿ ಬಂಧಿತನಾಗಿದ್ದ. ತನಿಖೆಯ ವೇಳೆ ಈತನೇ ಸೂತ್ರಧಾರಿ ಎಂದು ತಿಳಿದುಬಂದಿದೆ. ಹೀಗಾಗಿ ಈತನನ್ನು ಬಂಧಿಸಲಾಗಿದೆ ಎಂದು ದಿಲ್ಲಿ ಡಿಸಿಪಿ ಉಷಾ ರಂಗ್ನಾನಿ ತಿಳಿಸಿದ್ದಾರೆ.
ಕಲ್ಲು ತೂರಾಟದಲ್ಲಿ ಮಕ್ಕಳೂ ಭಾಗಿ
ಶನಿವಾರ ಶೋಭಾಯಾತ್ರೆ ವೇಳೆ ನಡೆದ ಕಲ್ಲುತೂರಾಟದಲ್ಲಿ ಹಲವು ಚಿಕ್ಕ ಮಕ್ಕಳು ಕೂಡಾ ಭಾಗಿಯಾಗಿದ್ದ ವಿಷಯ ಬೆಳಕಿಗೆ ಬಂದಿದೆ. ಘಟನಾ ಸ್ಥಳದಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆಹಿಡಿದ ದೃಶ್ಯಗಳಲ್ಲಿ ಮಕ್ಕಳು ಕೂಡಾ ಕಲ್ಲು ತೂರಾಟದಲ್ಲಿ ಭಾಗಿಯಾಗಿದ್ದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ಇಂಥ ಕೃತ್ಯಕ್ಕೆ ಬಳಸಿಕೊಂಡವರ ವಿರುದ್ಧ ಸೂಕ್ತ ಪ್ರಕರಣ ದಾಖಲಿಸುವಂತೆ ಮಕ್ಕಳ ಹಕ್ಕುಗಳ ಕುರಿತ ರಾಷ್ಟ್ರೀಯ ಆಯೋಗ ಪೊಲೀಸರಿಗೆ ಸೂಚಿಸಿದೆ.
ಜಹಾಂಗೀರ್‌ಪುರಿ ಹಿಂಸಾಚಾರ ಪ್ರಕರಣ: ಗುಂಡೇಟಿಗೊಳಗಾದ ಎಸ್ಐ ಹೇಳಿದ್ದೇನು?
ಶನಿವಾರ ಏನಾಗಿತ್ತು?
ಶನಿವಾರ ಹನುಮ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಜಹಾಂಗೀರ್‌ಪುರಿಯಲ್ಲಿ ಮಸೀದಿಯೊಂದರ ಮುಂದೆ ಕೋಮುಗಲಭೆ ಸಂಭವಿಸಿತ್ತು. ಮುಸ್ಲಿಂ ಸಮುದಾಯದವರು ಹಾಗೂ ಹನುಮ ಭಕ್ತರ ನಡುವೆ ಕಲ್ಲು ತೂರಾಟ ನಡೆದಿತ್ತು. ಎರಡೂ ಗುಂಪಿನ ನಡುವಿನ ಘರ್ಷಣೆಯಲ್ಲಿ ಪೊಲೀಸರು ಸಿಕ್ಕಿಬಿದ್ದಿದ್ದರು ಹಾಗೂ 8 ಪೊಲೀಸರು ಸೇರಿ 9 ಮಂದಿಗೆ ಗಾಯಗಳಾಗಿದ್ದವು. ಹಲವು ವಾಹನಗಳಿಗೆ ಕೂಡ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು.
ಹನುಮಾನ್ ಜಯಂತಿಯ ದಿನ ನಗರದ ಜಹಾಂಗೀರ್‌ಪುರಿಯಲ್ಲಿ ಶೋಭಾಯಾತ್ರೆಯ ಸ್ಥಳದಲ್ಲಿ ಹಿಂಸಾಚಾರ ನಡೆದ ಎರಡು ದಿನಗಳ ನಂತರ ಸೋಮವಾರ ಮತ್ತೆ ಕಲ್ಲು ತೂರಾಟ ನಡೆದಿದೆ. ಇದೇ ವೇಳೆ, ಶೋಭಾಯಾತ್ರೆಯ ಮೇಲೆ ಗುಂಡು ಹಾರಿಸಿದ್ದ ವ್ಯಕ್ತಿಯ ಮನೆಗೆ ಪೊಲೀಸ್ ತಂಡ ತನಿಖೆಗೆ ತೆರಳಿದಾಗ ಆತನ ಮನೆಯವರು ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ.
ಶೋಭಾಯಾತ್ರೆ ನಡೆದ ಸ್ಥಳಕ್ಕೆ ಸಮೀಪದಲ್ಲಿ ಸೋಮವಾರ ಮಧ್ಯಾಹ್ನ ಮನೆಯೊಂದರ ಮೇಲಿನಿಂದ ಇಟ್ಟಿಗೆ ಹಾಗೂ ಕಲ್ಲುಗಳನ್ನು ಎಸೆಯಲಾಗಿದೆ. ತಕ್ಷಣ ಪೊಲೀಸ್ ತುಕಡಿಗಳು ತೆರಳಿ ಸ್ಥಳದ ಸುತ್ತ ಬಂದೋಬಸ್‌್ತ ಕೈಗೊಂಡಿವೆ. ಅದರ ನಡುವೆಯೇ, ತನಿಖೆಗೆಂದು ಆರೋಪಿಯ ಮನೆಗೆ ಪೊಲೀಸರು ತೆರಳಿದ್ದಾಗ ಅವರ ಮೇಲೆ ಮನೆಯವರು ಕಲ್ಲು ಎಸೆದಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ವಶಕ್ಕೆ ಪಡೆಯಲಾಗಿದೆ.
ಈ ನಡುವೆ ಗಲಭೆ ಕೋರರರಿಗೆ ದಾಳಿ ನಡೆಸಲು ಬಾಟಲ್ ಹಾಗೂ ಇತರೆ ಕೆಲ ಸಾಮಗ್ರಿಗಳನ್ನು ನೀಡಿದ್ದ ಗುಜರಿ ಅಂಗಡಿ ಮಾಲೀಕನೊಬ್ಬನನ್ನು ಸೋಮವಾರ ಬಂಧಿಸಲಾಗಿದೆ.
