ಪ್ರಧಾನಿ ನರೇಂದ್ರ ಮೋದಿ ಹೆಂಗೆಳೆಯರ ಜೊತೆ ಗಾರ್ಭ ನೃತ್ಯ ಮಾಡುತ್ತಿದ್ದಾರೆ ಎನ್ನಲಾದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಆದರೆ ಅದು ಪ್ರಧಾನಿ ಮಾಡಿದ ಡಾನ್ಸ್ ವೀಡಿಯೋ ಅಲ್ಲ ಹಾಗಂತ ಅದು ಡೀಪ್ಫೇಕ್ ವೀಡಿಯೋ ಕೂಡ ಅಲ್ಲ, ಹಾಗಿದ್ದರೆ ಆ ವೀಡಿಯೋದಲ್ಲಿ ಇರೋದ್ಯಾರು?
ಮುಂಬೈ: ಡಿಜಿಟಲ್ ಯುಗದಲ್ಲಿ ಜನರ ಸೆಲೆಬ್ರಿಟಿಗಳ ರಾಜಕಾರಣಿಗಳಲ್ಲ ಬದುಕಲ್ಲಿ ತಲ್ಲಣಕ್ಕೆ ಕಾರಣವಾಗಿರುವ ಡೀಫ್ ಫೇಕ್ ತಂತ್ರಜ್ಞಾನದ ಬಗ್ಗೆ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದರು. ಅದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಹೆಂಗೆಳೆಯರ ಜೊತೆ ಗಾರ್ಭ ನೃತ್ಯ ಮಾಡುತ್ತಿದ್ದಾರೆ ಎನ್ನಲಾದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ ನಾನು ಗರ್ಭಾ ನೃತ್ಯ ಮಾಡಿದ್ದು ಕೊನೆಯದಾಗಿ ಶಾಲೆಯಲ್ಲಿ ಶಾಲೆ ತೊರೆದ ನಂತರ ನಾನು ಯಾವತ್ತೂ ಗಾರ್ಭ ನೃತ್ಯ ಮಾಡಿಲ್ಲ, ಆದರೆ ಇಲ್ಲಿ ನಾನು ಗಾರ್ಭ ನೃತ್ಯ ಮಾಡಿದ್ದೇನೆ ಎಂದು ತೋರಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಕೂಡ ಡೀಪ್ ಫೇಕ್ ತಂತ್ರಜ್ಞಾನದ ಪರಿಣಾಮವಾಗಿದೆ. ನಾನು ಈ ತಂತ್ರಜ್ಞಾನದ ಬಲಿಪಶುವಾಗಿದ್ದೇನೆ ಎಂದು ಪ್ರಧಾನಿ ಹೇಳಿಕೊಂಡಿದ್ದರು.
ಪ್ರಧಾನಿ ಹೇಳಿದ್ದು, ಸರಿಯೇ, ಆ ವೀಡಿಯೋದಲ್ಲಿ ನೃತ್ಯ ಮಾಡಿರುವುದು ಪ್ರಧಾನಿ ಅಂತೂ ಅಲ್ಲ, ಹಾಗಂತ ಅದು ಡೀಪ್ ಫೇಕ್ ತಂತ್ರಜ್ಞಾನದ ಮೂಲಕ ಎಡಿಟ್ ಮಾಡಲಾದ ವೀಡಿಯೋ ಕೂಡ ಅಲ್ಲ ಹಾಗಾದರೆ ಮೋದಿಯಂತೆ ಅಲ್ಲಿ ನೃತ್ಯ ಮಾಡಿದ್ದು ಯಾರು? ಈವಿಚಾರಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ತದ್ರೂಪಿ ಎಂದೇ ಖ್ಯಾತಿ ಪಡೆದಿರುವ ವಿಕಾಸ್ ಮಹಂತೆ ಇದು ನೀವಲ್ಲ ನಿಜ ಹಾಗಂತ ಇದು ಡೀಪ್ ಪೇಕ್ ವೀಡಿಯೋ ಕೂಡ ಅಲ್ಲ, ಇದು ನಾನು, ನಿಮ್ಮಂತೆ ಕಾಣುವ ನಾನು ಮಹಿಳೆಯರೊಂದಿಗೆ ಗಾರ್ಭ ನೃತ್ಯ ಮಾಡಿದ ವೀಡಿಯೋ ಇದಾಗಿದೆ ಎಂದು ಹೇಳಿಕೊಂಡಿದ್ದಾರೆ.
ಡೀಪ್‌ಫೇಕ್ ಬಗ್ಗೆ ಪ್ರಧಾನಿ ಮೋದಿ ಕಳವಳ: ಕೃತಕ ಬುದ್ಧಿಮತ್ತೆಯ ದುರ್ಬಳಕೆ ಬಗ್ಗೆ ಅತಂಕ
ಉದ್ಯಮಿ ಆಗಿರುವ ವಿಕಾಸ್ ಮಹಂತೆ ಮುಂಬೈನಲ್ಲಿ ಈ ವಿಚಾರದ ಬಗ್ಗೆ ಸ್ವಲ್ಪ ಸಂಕೋಚ ಸ್ವಲ್ಪ ಹೆಮ್ಮೆಯಿಂದ ಇದು ನಾನೇ ಎಂದು ಹೇಳಿಕೊಂಡರು. ನೋಡಲು ಪ್ರಧಾನಿ ಮೋದಿಯಂತೆ ಕಾಣುವ ಮಹಂತೆ ಮುಂಬೈನ ಮಲದ್‌ನಲ್ಲಿ ಸ್ಟೀಲ್ ಉದ್ಯಮವನ್ನು ನಡೆಸುತ್ತಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಪ್ರಧಾನಿ ಮೋದಿ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ ವಿಕಾಸ್ ಮಹತೆ ಅವರ ಅದೃಷ್ಟವೂ ಬದಲಾಗಿದ್ದು, ಮೋದಿಯನ್ನು ತಮ್ಮ ಕಾರ್ಯಕ್ರಮಕ್ಕೆ ಕರೆಯಲಾಗದ ಕೆಲ ಮೋದಿ ಅಭಿಮಾನಿಗಳು ಇವರನ್ನು ಕರೆಯುತ್ತಾರೆ. ಹೀಗಾಗಿ ಮೋದಿಯಂತೆಯೇ ಇವರು ದೇಶ ವಿದೇಶಗಳಲ್ಲೂ ಜನಪ್ರಿಯತೆ ಗಳಿಸಿದ್ದು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುತ್ತಾರೆ.
ಅದರಂತೆ ಯುಕೆ ಮೂಲದ ಪಂಕಜ್ ಸೋಧ ಎಂಬುವವರು ಕೂಡ ವಿಕಾಸ್ ಮಹಂತೆ ಅವರ ಮೋದಿಲುಕ್‌ನಿಂದ ಪ್ರಭಾವಿತರಾಗಿದ್ದು, ಅವರನ್ನು ಲಂಡನ್‌ನಲ್ಲಿರುವ ತಮ್ಮ ಕುಟುಂಬದ ದೀಪಾವಳಿ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಕರೆದಿದ್ದರು. ಇದೇ ಕಾರ್ಯಕ್ರಮದಲ್ಲಿ ಮಹಂತೆ, ಪಂಕಜ್ ಸೋಧ ಕುಟುಂಬದ ಹೆಣ್ಣು ಮಕ್ಕಳೊಂದಿಗೆ ಗಾರ್ಭ ನೃತ್ಯದಲ್ಲಿ ಭಾಗವಹಿಸಿದ್ದು ಇದೇ ವೀಡಿಯೋ ಮುಂದೆ ಮೋದಿ ಹೆಂಗೆಳೆಯರ ಜೊತೆ ನೃತ್ಯ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ವಿಕಾಸ್ ಮಹಂತೆ ಅವರು ಪ್ರಧಾನಿ ನರೇಂದ್ರ ಮೋದಿಯವರಿಗಿಂತ 10 ವರ್ಷ ಕಿರಿಯರಾಗಿದ್ದು, ಇವರು ಈಗ ವೀಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಮೋದಿಯಂತೆ ಕಾಣುತ್ತಿರುವುದರಿಂದ ಭಾರತದೆ ಹಲವು ಪ್ರದೇಶಗಳಿಂದ ಮಾತ್ರವಲ್ಲದೇ ವಿದೇಶಗಳಿಂದಲೂ ನನಗೆ ಕರೆಗಳು ಬರುತ್ತಿವೆ. ಅಲ್ಲಿನ ಕಾರ್ಯಕ್ರಮಗಳಿಗೆ ತೆರಳುವ ನಾನು ಮೋದಿಯವರ ಯೋಚನೆ ಚಿಂತನೆ ಸಿದ್ದಾಂತಗಳ ಬಗ್ಗೆ ಪ್ರಚಾರ ಮಾಡುತ್ತೇನೆ. ನಾನೀಗ ಪ್ರಧಾನಿ ಮೋದಿಯವರು ಗಾರ್ಭ ನೃತ್ಯ ಮಡುತ್ತಿರುವ ಡೀಪ್‌ಪೇಕ್ ವೀಡಿಯೋ ವೈರಲ್ ಆಗಿದೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡಲು ಬಯಸಿದ್ದು, ಇದೊಂದು ಡೀಪ್‌ಫೇಕ್ ವೀಡಿಯೋ ಅಲ್ಲ, ಇದು ನಾನು ನೃತ್ಯ ಮಾಡಿದ ವೀಡಿಯೋ ನಾನೊಬ್ಬ ಉದ್ಯಮಿಯೂ ಕಲಾವಿದನೂ ಆಗಿದ್ದೇನೆ ಎಂದು ಅವರು ಈ ವೀಡಿಯೋಗೆ ಸ್ಪಷ್ಟನೆ ನೀಡಿದ್ದಾರೆ.
