Asianet Suvarna News Asianet Suvarna News

ಭೇಟಿಯಾಗಿದ್ದು ಡೇಟಿಂಗ್ ಆಪ್‌ನಲ್ಲಿ ವಿವಾಹ ವೇದಿಕೆಯಲ್ಲಲ್ಲಾ: ರೇಪ್ ಆರೋಪಿಗೆ ಜಾಮೀನು ನೀಡಿದ ಹೈಕೋರ್ಟ್‌

ಡೇಟಿಂಗ್ ಆಪ್‌ನಲ್ಲಿ ಭೇಟಿಯಾಗಿ ಪರಸ್ಪರ ದೈಹಿಕ ಸಂಬಂಧ ಬೆಳೆಸಿದ ಬಳಿಕ ಯುವತಿಯೊಬ್ಬಳು ಯುವಕ ತನ್ನನ್ನು ಮದುವೆಯಾಗುವುದಾಗಿ ಹೇಳಿ ಅತ್ಯಾಚಾರವೆಸಗಿದ್ದಾನೆ ಎಂದು ದೂರು ನೀಡಿದ್ದಳು. ಪರಿಣಾಮ ಯುವಕ ಬಂಧಿತನಾಗಿದ್ದ. ಈ ಪ್ರಕರಣದಲ್ಲಿ ಈಗ ನ್ಯಾಯಾಲಯವೂ ಅತ್ಯಾಚಾರ ಆರೋಪ ಹೊಂದಿದ್ದ ಯುವಕನಿಗೆ ಜಾಮೀನು ನೀಡಿದೆ.

Its consensual Relationship Met on dating app, not matrimonial site delhi High Court grants bail to rape accused akb
Author
First Published Jan 4, 2024, 1:56 PM IST

ಡೇಟಿಂಗ್ ಆಪ್‌ನಲ್ಲಿ ಭೇಟಿಯಾಗಿ ಪರಸ್ಪರ ದೈಹಿಕ ಸಂಬಂಧ ಬೆಳೆಸಿದ ಬಳಿಕ ಯುವತಿಯೊಬ್ಬಳು ಯುವಕ ತನ್ನನ್ನು ಮದುವೆಯಾಗುವುದಾಗಿ ಹೇಳಿ ಅತ್ಯಾಚಾರವೆಸಗಿದ್ದಾನೆ ಎಂದು ದೂರು ನೀಡಿದ್ದಳು. ಪರಿಣಾಮ ಯುವಕ ಬಂಧಿತನಾಗಿದ್ದ. ಈ ಪ್ರಕರಣದಲ್ಲಿ ಈಗ ನ್ಯಾಯಾಲಯವೂ ಅತ್ಯಾಚಾರ ಆರೋಪ ಹೊಂದಿದ್ದ ಯುವಕನಿಗೆ ಜಾಮೀನು ನೀಡಿದೆ. ಯುವತಿ ಯುವಕನನ್ನು ಭೇಟಿಯಾಗಿದ್ದು, ಡೇಟಿಂಗ್ ಆಪ್‌ನಲ್ಲಿ ಮ್ಯಾಟ್ರಿಮೋನಿಯಲ್(ಆನ್‌ಲೈನ್ ವಿವಾಹ ವೇದಿಕೆ) ಸೈಟ್‌ನಲ್ಲಿ ಅಲ್ಲ, ಅಲ್ಲಿ ಯುವಕನಿಂದ ವಿವಾಹದ ಯಾವುದೇ ಆಮಿಷ ಇರಲಿಲ್ಲ ಎಂದು  ದೆಹಲಿ ಹೈಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.

ಯುವತಿ ಯುವಕನ ವಿರುದ್ಧ ಆತ ಮದುವೆಯಾಗುವ ನೆಪದಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿದ್ದಳು. ಆರೋಪಿ ಹಾಗೂ ದೂರುದಾರ ಮಹಿಳೆ ಇಬ್ಬರೂ ಡೇಟಿಂಗ್ ಆಪ್‌ನಲ್ಲಿ ಭೇಟಿಯಾಗಿದ್ದಾರೆಯೇ ಹೊರತು ವಿವಾಹ ವೇದಿಕೆಯಲ್ಲಿ ಅಲ್ಲ ಎಂಬುದನ್ನು ಗಮನಿಸುವುದರ  ಜೊತೆಗೆ ಅವರ ನಡುವೆ ನಡೆದ ಮೊಬೈಲ್ ಚಾಟಿಂಗ್‌ನಲ್ಲೂ ಆರೋಪಿ ಮದ್ವೆ ಪ್ರಸ್ತಾಪ ಮಾಡಿಲ್ಲ ಎಂಬುದನ್ನು ಗಮನಿಸಿ ಆರೋಪಿಗೆ ಜಾಮೀನು ನೀಡಿದೆ. ಬುಧವಾರ ದೆಹಲಿ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆದು ಆರೋಪಿ ಯುವಕನಿಗೆ ಜಾಮೀನು ಮಂಜೂರಾಗಿದೆ. 

ಪಾಕ್ ಡೇಟಿಂಗ್ ಆ್ಯಪ್ ಜಾಹೀರಾತು ಮಾಡುತ್ತಿದೆ ಸದ್ದು! ಕಸಿನ್ ಬಿಡಿ, ಬೇರೆಯವರ ಕಟ್ಕೊಳ್ಳಿ

ಯುವಕ ಮದುವೆಯ ಆಮಿಷ ಒಡ್ಡಿಲ್ಲ, ಎರಡನೇಯದಾಗಿ ಇವರಿಬ್ಬರೂ ಭೇಟಿಯಾಗಿದ್ದು ಡೇಟಿಂಗ್ ಆಪ್‌ನಲ್ಲಿ ಎಂಬುದನ್ನು ಗಮನಿಸಿದ ನ್ಯಾಯಾಧೀಶರಾದ ವಿಕಾಸ್ ಮಹಾಜನ್, ಯುವಕನಿಗೆ ಜಾಮೀನು ಮಂಜೂರು ಮಾಡಿದ್ದಾರೆ. ದೂರುದಾರರು ಹಾಗೂ ಜಾಮೀನಿಗೆ ಅರ್ಜಿ ಸಲ್ಲಿಸಿದವರು ಈ ಇಬ್ಬರೂ ಡೇಟಿಂಗ್ ಆಪ್ ಹಿಂಜ್‌ನಲ್ಲಿ (Hinge) ಪರಸ್ಪರ ಸಂಪರ್ಕಕ್ಕೆ ಬಂದಿದ್ದಾರೆ. ಇದು ವಿವಾಹ ವೇದಿಕೆ ಅಲ್ಲ (matrimonial App), ಇವರ ಮಧ್ಯೆ ಹಲವಾರು ವಾಟ್ಸಾಪ್ ಸಂದೇಶಗಳ ವಿನಿಮಯವಾಗಿದೆ. ಅದರಲ್ಲಿ ಎಲ್ಲೂ ವಿವಾಹವಾಗುವುದಾಗಿ ಅರ್ಜಿದಾರರು ಪ್ರಸ್ತಾಪ ಮಾಡಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿತು. 

ಅರ್ಜಿದಾರರು (ಆರೋಪಿ) ತಮ್ಮ ಶೈಕ್ಷಣಿಕ ಅರ್ಹತೆಯ ಬಗ್ಗೆ ಸುಳ್ಳು ಹೇಳಿದ್ದಾರೆ ಎಂದು ತಿಳಿದ ನಂತರವೂ, ನಾಲ್ಕು ದಿನಗಳ ಕಾಲ ದೂರುದಾರ ಮಹಿಳೆ ಆತನೊಂದಿಗೆ ಏರ್‌ಬಿಎನ್‌ಬಿಯಲ್ಲಿ (ಏರ್‌ಬಿಎನ್‌ಬಿ ಹೊಟೇಲ್‌ ವಸತಿ ನೀಡುವ ಸಂಸ್ಥೆ) ತಂಗಿದ್ದರು ಮತ್ತು ಹಲವು ಬಾರಿ ದೈಹಿಕ ಸಂಬಂಧವನ್ನು ಬೆಳೆಸಿದ್ದರು ಎಂಬುದನ್ನು ಮಹಿಳೆಯೇ ತನ್ನ ತಪಾಸಣೆ ವೇಳೆ ಹೇಳಿದ್ದಾರೆ ಎಂಬುದನ್ನು ನ್ಯಾಯಾಲಯವು ಗಮನಿಸಿತ್ತು.

ಟಿಂಡರ್ ಡೇಟಿಂಗ್ ಆ್ಯಪ್ ಕಡೆಗೆ ಯುವಜನರ ಆಕರ್ಷಣೆ ಏಕೆ? ಆ ಕಾರಣಕ್ಕಾ?

ಅಲ್ಲದೇ  ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಅರ್ಜಿದಾರರ ಮೊಬೈಲ್ ಫೋನ್‌ನಿಂದ ವಶಪಡಿಸಿಕೊಡ ಅಶ್ಲೀಲ ಛಾಯಾಚಿತ್ರಗಳನ್ನು ಮತ್ತು ವೀಡಿಯೋಗಳನ್ನು ದೂರುದಾರರ ಒಪ್ಪಿಗೆಯ ಮೇರೆಗೆಯೇ ತೆಗೆದುಕೊಳ್ಳಲಾಗಿದೆ ಎಂಬುದನ್ನು ದೂರುದಾರರು ಒಪ್ಪಿಕೊಂಡಿದ್ದಾರೆ. ಈ ಎಲ್ಲಾ ಕಾರಣಗಳಿಂದ ಇದೊಂದು ಸಮ್ಮತಿಯ ಲೈಂಗಿಕ ಕ್ರಿಯೆ ಎಂಬುದು ಸಾಬೀತಾಗಿದ್ದು, ಜೊತೆಗೆ ಅರ್ಜಿದಾರರು ದೂರುದಾರರಿಗೆ ಮದುವೆಯ ಯಾವುದೇ ಸುಳ್ಳು ಭರವಸೆ ಯನ್ನು ನೀಡಿಲ್ಲ ಎಂಬುದು ಕಂಡುಬರುತ್ತಿದೆ ಎಂದು ನ್ಯಾಯಮೂರ್ತಿ ಮಹಾಜನ್ ಅವರು ಆರೋಪಿಗೆ ಜಾಮೀನು ನೀಡುವ ವೇಳೆ ಹೇಳಿದ್ದಾರೆ. 

ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 376 ಮತ್ತು 420 ರ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ತೀರ್ಪು ನೀಡಿದೆ.  ಈ ದೂರಿನಲ್ಲಿ ಅರ್ಜಿದಾರರು ಮತ್ತು ದೂರುದಾರರು ಡೇಟಿಂಗ್ ಆಪ್‌ ಹೀಂಜ್‌ನಲ್ಲಿ ಭೇಟಿಯಾಗಿ ನಂತರ ಪ್ರೀತಿಸಲು ಶುರು ಮಾಡಿದ್ದರು. ಅರ್ಜಿದಾರರು ಆರಂಭದಲ್ಲಿ ತಾನು ಐಐಟಿ ಖರಗ್‌ಪುರದಿಂದ ಎಂಜಿನಿಯರಿಂಗ್ ಪದವಿ, ಯುಕೆ ಮತ್ತು ನ್ಯೂಜಿಲೆಂಡ್‌ನಿಂದ ಡಬಲ್ ಮಾಸ್ಟರ್ಸ್ ಮತ್ತು ಲಂಡನ್‌ನ ಕಿಂಗ್ಸ್ ಕಾಲೇಜಿನಿಂದ ಪಿಎಚ್‌ಡಿ ಪಡೆದಿರುವುದಾಗಿ ಯುವತಿಗೆ ತಿಳಿಸಿದ್ದರು. ಆದರೆ ನಂತರ ಅವರು ಕೇವಲ ಬಿಎಸ್‌ಸಿ ಪದವೀಧರರಾಗಿದ್ದರು ಎಂಬುದು ತಿಳಿದು ಬಂದಿತ್ತು. 

ಇತ್ತ ಮಹಿಳಾ ದೂರುದಾರರು ತಾನು ಆತನಿಗೆ ವೈದ್ಯಕೀಯ ಚಿಕಿತ್ಸೆಗಾಗಿ 1. 2 ಕೋಟಿ ವೆಚ್ಚ ಮಾಡಿರುವುದಾಗಿ ತಿಳಿಸಿದ್ದರು. ನ್ಯಾಯಾಲಯವೂ ಇಬ್ಬರ ವಾದವನ್ನು ಪರಿಗಣಿಸಿತ್ತು. ಅಲ್ಲದೇ 2021 ರ ಜನವರಿಯಲ್ಲಿ ಆರೋಪಿಗೆ ಮಹಿಳೆ ಮೊದಲ ಬಾರಿ 25,000 ರೂಪಾಯಿಯನ್ನು ನೀಡಿದ್ದಳು. ಅದನ್ನು ಆತ ಹಿಂದಿರುಗಿಸದೇ ಇದ್ದರೂ, ಮಹಿಳೆ ಅವನಿಗೆ ಮತ್ತೆ ದೊಡ್ಡ ಮೊತ್ತದ ಹಣವನ್ನು ನೀಡಿದ್ದಳು ಎಂಬುದನ್ನು ಇಲ್ಲಿ ನ್ಯಾಯಾಲಯ ಗಮನಿಸಿತ್ತು. 

ಒಟ್ಟಾರೆ ಪ್ರಕರಣದ ಸತ್ಯಾಸತ್ಯತೆ ಹಾಗೂ ಸಂದರ್ಭಗಳನ್ನು ಗಮನಿಸಿ ಅರ್ಜಿದಾರರು ನಿಯಮಿತ ಜಾಮೀನು ಮಂಜೂರು ಮಾಡಲು ಅರ್ಜಿ ಸಲ್ಲಿಸಿದ್ದರು. ಅದರಂತೆ  25 ಸಾವಿರ ಮೊತ್ತದ ವೈಯಕ್ತಿಕ ಬಾಂಡ್ ಅಷ್ಟೇ ಮೊತ್ತದ ಜಾಮೀನು ಬಾಂಡ್ ನೀಡಿ ಆತನಿಗೆ ಜಾಮೀನು ಮಂಜೂರು ಮಾಡಲಾಗಿದೆ. 

ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಆರೋಪಿ ಪರ ವಕೀಲರಾದ ಎಲ್‌ಎಸ್ ಚೌಧರಿ, ಕರಣ್‌ವೀರ್ ಸಿಂಗ್ ವಾದ ಮಂಡಿಸಿದ್ದರು. ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಹೇಮಂತ್ ಮೆಹ್ಲಾ ಸರ್ಕಾರವನ್ನು ಪ್ರತಿನಿಧಿಸಿದ್ದರು. ಹಾಗೆಯೇ ಮಹಿಳಾ ದೂರುದಾರಲ ಪರವಾಗಿ ವಕೀಲರಾದ ವೈಭವ್ ದುಬೆ, ಪ್ರದ್ಯಮ್ನ ಕೈಸ್ಥಾ ಹಾಗೂ ಶುಭಂ ಜೈನ್ ಹಾಜರಾಗಿದ್ದರು. 

Follow Us:
Download App:
  • android
  • ios