ಭಾರತ-ಚೀನಾ ಗಡಿಯ ಎಲ್ಎಸಿಯಲ್ಲಿ ಚೀನಾದ ಕುತಂತ್ರಕ್ಕೆ ಚೆಕ್ಮೇಟ್ ನೀಡಲು 'ಶೌರ್ಯ ಕಮಾಂಡೋಗಳನ್ನು' ನಿಯೋಜಿಸಲಾಗಿದೆ. ಮೈನಸ್ 40 ಡಿಗ್ರಿ ಚಳಿ, ಆಮ್ಲಜನಕ ಕೊರತೆಯಲ್ಲೂ ಶತ್ರುಗಳಿಗೆ ಸಿಂಹಸ್ವಪ್ನವಾಗುವ ಕಮಾಂಡೋಗಳು, ಇದನ್ನು ಹಿಮ್ಮಟ್ಟಿಸುವುದು ಸುಲಭದ ಮಾತಲ್ಲ. ಈ ಕುರಿತು ಸಂಪೂರ್ಣ ವರದಿ ಇಲ್ಲಿದೆ.
ನವದೆಹಲಿ: ಭಾರತ-ಚೀನಾ ಗಡಿಯ ವಾಸ್ತವ ನಿಯಂತ್ರಣ ರೇಖೆಯಲ್ಲಿ ಚೀನಾದ ಅತಿಕ್ರಮಣ ಮತ್ತು ಕುತಂತ್ರಗಳಿಗೆ ತಕ್ಕ ಉತ್ತರ ನೀಡಲು ಭಾರತೀಯ ಪಡೆಗಳು ಬಲಿಷ್ಠ ತಡೆಗೋಡೆಯನ್ನು ನಿರ್ಮಿಸಿವೆ. ಲಡಾಖ್ನಿಂದ ಅರುಣಾಚಲ ಪ್ರದೇಶದವರೆಗಿನ ದುರ್ಗಮ ಪರ್ವತ ಪ್ರದೇಶಗಳಲ್ಲಿ ಚೀನಾದ ಗರ್ವಭಂಗ ಮಾಡಲು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಪಡೆಯ ಅತ್ಯಂತ ಗಣ್ಯ ಹಾಗೂ ಸಾಹಸಿ ವಿಭಾಗವಾದ 'ಶೌರ್ಯ ಕಮಾಂಡೋಗಳ' ಪಡೆ ಗಡಿಯಲ್ಲಿ ನಿಯೋಜಿಸಲಾಗಿದೆ.
ಮೈನಸ್ 40 ಡಿಗ್ರಿ ಚಳಿಯಲ್ಲೂ ಸೈ ಎನ್ನುವ ಕಮಾಂಡೋಗಳು!
ಶೌರ್ಯ ಕಮಾಂಡೋಗಳು ಐಟಿಬಿಪಿಯ ಅತ್ಯಂತ ನುರಿತ, ದೈಹಿಕವಾಗಿ ಸಮರ್ಥ ಮತ್ತು ಮಾನಸಿಕವಾಗಿ ಗಟ್ಟಿಮುಟ್ಟಾದ ಸಿಬ್ಬಂದಿಯಿಂದ ಆಯ್ಕೆಯಾದ ವಿಶೇಷ ಪಡೆಯಾಗಿದೆ. 10,000 ದಿಂದ 18,000 ಅಡಿಗಳಷ್ಟು ಎತ್ತರದ ಪ್ರದೇಶಗಳಲ್ಲಿ, ಗಾಳಿಯಲ್ಲಿ ಆಮ್ಲಜನಕದ ಮಟ್ಟ ತೀವ್ರ ಕಡಿಮೆಯಿರುವ ವಾತಾವರಣದಲ್ಲೂ ದಣಿವರಿಯದೆ ಗಸ್ತು ತಿರುಗಲು ಇವರಿಗೆ ತರಬೇತಿ ನೀಡಲಾಗಿದೆ. ಮೈನಸ್ 40 ಡಿಗ್ರಿ ಸೆಲ್ಸಿಯಸ್ನಷ್ಟು ಮೂಳೆ ಕೊರೆವ ಚಳಿಯಲ್ಲೂ ಆಕ್ರಮಣಕಾರಿ ಕಾರ್ಯಾಚರಣೆ ನಡೆಸಬಲ್ಲ ಈ ಪಡೆ, 3,488 ಕಿ.ಮೀ ಉದ್ದದ ಭಾರತ-ಚೀನಾ ಗಡಿ ಭದ್ರತೆಯ ಹೊಸ ಸ್ತಂಭವಾಗಿ ಹೊರಹೊಮ್ಮಿದೆ.
ಗಾಲ್ವಾನ್ ಘಟನೆಯ ಬಳಿಕ ನಿರಾಯುಧ ಕಾಳಗದ ತರಬೇತಿ!
ಎಲ್ಎಸಿ ಉದ್ದಕ್ಕೂ ಎರಡೂ ದೇಶಗಳ ನಡುವೆ ಗುಂಡಿನ ದಾಳಿ ನಡೆಸದಿರುವ ಶಿಷ್ಟಾಚಾರವಿರುವುದರಿಂದ, ಚೀನಾದ ಸೈನಿಕರು ಆಗಾಗ್ಗೆ ಕುತಂತ್ರ ಮತ್ತು ಕೈಕೈ ಮಿಲಾಯಿಸುವ ತಂತ್ರಗಳನ್ನು ಆಶ್ರಯಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಚೀನಾಕ್ಕೆ ತಕ್ಕ ಶಾಸ್ತಿ ಮಾಡಲು 2020ರ ಗಾಲ್ವಾನ್ ಕಣಿವೆ ಹಿಂಸಾತ್ಮಕ ಘರ್ಷಣೆ ನಂತರ ಈ ಕಮಾಂಡೋಗಳಿಗೆ ಶಸ್ತ್ರಾಸ್ತ್ರಗಳಿಲ್ಲದೆ ಮುಖಾಮುಖಿ ಯುದ್ಧ ಮಾಡುವ ತರಬೇತಿಯನ್ನು ಕಡ್ಡಾಯಗೊಳಿಸಲಾಗಿದೆ.
ಅತ್ಯಾಧುನಿಕ ಶಸ್ತ್ರಾಸ್ತ್ರ ಮತ್ತು ಸಾಮರ್ಥ್ಯ!
ಈ ಕಮಾಂಡೋಗಳು ಕೇವಲ ಮುಖಾಮುಖಿ ಕಾಳಗದಲ್ಲಷ್ಟೇ ಅಲ್ಲದೆ, ಅತ್ಯಾಧುನಿಕ ಆಕ್ರಮಣಕಾರಿ ರೈಫಲ್ಗಳು, ಸ್ನೈಪರ್ ಗನ್, ರಾತ್ರಿ-ದೃಷ್ಟಿ ಗೇರ್ ಕಾರ್ಯಾಚರಣೆಯಲ್ಲಿ ಬಳಸಲಿದ್ದಾರೆ. ಜತೆಗೆ ರಾಸಾಯನಿಕ, ಜೈವಿಕ, ವಿಕಿರಣಶೀಲ ಮತ್ತು ಪರಮಾಣು ತುರ್ತು ಸಂದರ್ಭ ನಿರ್ವಹಿಸುವ ವಿಶೇಷ ಪರಿಣತಿಯನ್ನೂ ಇವರು ಹೊಂದಿದ್ದಾರೆ. ಸಾಮಾನ್ಯ ಸೈನಿಕರಿಗಿಂತ ಹೆಚ್ಚು ಆಕ್ರಮಣಕಾರಿ ಮತ್ತು ಸುದೀರ್ಘ ಕಾಳಗಕ್ಕೆ ಸಾಮರ್ಥ್ಯ ಹೊಂದಿರುವ ಈ 'ಶೌರ್ಯ ಪಡೆ', ಗಡಿಯಲ್ಲಿ ಎದುರಾಗುವ ಯಾವುದೇ ತುರ್ತು ಪರಿಸ್ಥಿತಿಗೆ ತಕ್ಷಣ ಸ್ಪಂದಿಸುವ ಭಾರತದ ಅತ್ಯಂತ ಪ್ರಬಲ ಅಸ್ತ್ರವಾಗಿದೆ.






