ಬ್ಲಾಕ್‌ಬಸ್ಟರ್‌ ಚಿತ್ರ ಪುಷ್ಪಾವನ್ನು ನಿರ್ಮಾಣ ಮಾಡಿದ್ದ ನಿರ್ಮಾಣ ಸಂಸ್ಥೆಯ ಮೇಲೆ ಸೋಮವಾರ ಐಟಿ ರೈಡ್‌ ಆಗಿದೆ. ನಿರ್ಮಾಣ ಸಂಸ್ಥೆಗೆ ಸೇರಿದ 15 ಪ್ರದೇಶಗಳ ಮೇಲೆ ಆದಾಯ ತೆರಿಗೆ ಇಲಾಖೆ ಏಕಕಾಲದಲ್ಲಿ ದಾಳಿ ನಡೆಸಿದೆ.

ಹೈದರಾಬಾದ್‌ (ಡಿ.12): ತೆಲುಗು ಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀಸ್‌ನ ನಿರ್ಮಾಪಕರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸುತ್ತಿದೆ. ಯಲಮಂಚಿಲಿ ರವಿಶಂಕರ್, ನವೀನ್ ಅರ್ನೇನಿ, ಚೆರುಕುರಿ ಅವರ ಕಚೇರಿ, ಮನೆ ಸೇರಿದಂತೆ 15 ಸ್ಥಳಗಳಲ್ಲಿ ಕಳೆದ ಹಲವು ಗಂಟೆಗಳಿಂದ ದಾಳಿ ನಡೆದಿದೆ. ಈ ಸಂಸ್ಥೆಯು ಪುಷ್ಪ, ರಂಗಸ್ಥಳಂ, ಶ್ರೀಮಂತುಡು ಮುಂತಾದ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಅವರ ಮುಂಬರುವ ಚಿತ್ರ ಉಸ್ತಾದ್ ಭಗತ್ ಸಿಂಗ್ ಕೂಡ ಈ ಕಂಪನಿಯ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿದೆ, ಇದು 2023 ರಲ್ಲಿ ಬಿಡುಗಡೆಯಾಗಲಿದೆ.ಬೇರೆ ರಾಜ್ಯಗಳಿಂದ ಹೈದರಾಬಾದ್‌ಗೆ ಬಂದಿಳಿದ ಕೆಲವು ಆದಾಯ ತೆರಿಗೆ ತಜ್ಞರು ಬೆಳ್ಳಂಬೆಳಗ್ಗೆಯೇ ಮೈತ್ರಿ ಕಚೇರಿಗೆ ಆಗಮಿಸಿ ದಾಳಿ ಆರಂಭಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮೈತ್ರಿ ಮೂವಿ ಮೇಕರ್ಸ್‌, ಚಿರಂಜೀವಿ, ಬಾಲಕೃಷ್ಣ, ಪವನ್‌ ಕಲ್ಯಾಣ್‌ ಮತ್ತು ವಿಜಯ್‌ ದೇವರಕೊಂಡ ಅವರಂಥ ನಟರಿಗೆ ಭಾರಿ ಮೊತ್ತವನ್ನು ಪಾವತಿ ಮಾಡುವ ಮೂಲಕ, ಭಾರಿ ಬಜೆಟ್‌ನ ಚಿತ್ರಗಳನ್ನು ಘೋಷಣೆ ಮಾಡಿದೆ. ಅದಲ್ಲದೆ, ಹಲವಾರು ಹೊಸ ಯೋಜನೆಗಳು ಕೂಡ ಜಾರಿಯಲ್ಲಿವೆ.

Pushpa2: ಪುಷ್ಪ-2 ಸಿನಿಮಾದಲ್ಲಿ 'ವಿಶೇಷ' ಪಾತ್ರದಲ್ಲಿ ರಾಮ್ ಚರಣ್ ತೇಜ!

ಚಿತ್ರ ನಿರ್ಮಾಣವಲ್ಲದೆ, ಕೆಲ ವರ್ಷಗಳ ಹಿಂದಿನಿಂದ ಚಿತ್ರ ವಿತರಣೆಗೂ ಮೈತ್ರಿ ಮೂವಿ ಮೇಕರ್ಸ್‌ ಇಳಿದಿದ್ದರು. ದೊಡ್ಡ ಎನ್‌ಆರ್‌ಐ ಅವರ ಹೂಡಿಕೆ ಈ ನಿರ್ಮಾಣ ಸಂಸ್ಥೆಯ ಮೇಲಿದೆ ಎಂದು ಈಗಾಗಲೇ ಚರ್ಚೆಯಲ್ಲಿದೆ. ಮೈತ್ರಿ ಮೇಲೆ ನಡೆದ ಐಟಿ ದಾಳಿ ಹೈದರಾಬಾದಿನ ಫಿಲಂನಗರದಲ್ಲಿ ಆತಂಕ ಮೂಡಿಸಿದೆ.

ಯುಟ್ಯೂಬ್‌ನಲ್ಲೂ 'ಶ್ರೀವಲ್ಲಿ' ಹವಾ; ಅತೀ ಹೆಚ್ಚು ವೀಕ್ಷಿಸಿದ ಹಾಡುಗಳ ಲಿಸ್ಟ್‌ನಲ್ಲಿ ಪುಷ್ಪ ನಂ.1

ಬೇರೆ ರಾಜ್ಯದ ಅಧಿಕಾರಿಗಳು ಇಲ್ಲಿಗೆ ಬಂದಿರುವುದೇಕೆ ಎಂಬ ಚರ್ಚೆ ನಡೆಯುತ್ತಿದೆ. ಎಲ್ಲವೂ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅನೇಕ ಇತರ ಚಲನಚಿತ್ರ ಬ್ಯಾನರ್‌ಗಳು ತಮ್ಮ ಆಡಿಟರ್‌ಗಳೊಂದಿಗೆ ಮಾತುಕತೆ ನಡೆಸುತ್ತಿವೆ.