* ಐಟಿ ನಿಯಮ, ಟ್ವಿಟರ್ ಹಾಗೂ ಕೇಂದ್ರದ ಮಧ್ಯೆ ಸಮರ* ಐಟಿ ಸಚಿವರ ಖಾತೆಯನ್ನೇ ಬ್ಲಾಕ್‌ ಮಾಡಿದ Twitter* ಒಂದು ತಾಸಿನ ಬಳಿಕ ಖಾತೆ ಸಕ್ರಿಯಗೊಳಿಸಿದ ಟ್ವಿಟರ್

ನವದೆಹಲಿ(ಜೂ.25): ಕೇಂದ್ರ ಸರ್ಕಾರ ಹಾಗೂ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರಂ ಟ್ವಿಟರ್‌ ನಡುವಿನ ವಿವಾದ ದಿನಗಳೆದಂತೆ ಹೆಚ್ಚುತ್ತಲೇ ಇದೆ. ನೂತನ ಐಟಿ ನಿಯಮಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಸಂಘರ್ಷದ ಮಧ್ಯೆ ಟ್ವಿಟರ್, ಕೇಂದ್ರ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್‌ರವರ ಖಾತೆಯನ್ನೇ ಸ್ಥಗಿತಗೊಳಿಸಿದೆ. ಖುದ್ದು ಸಚಿವರೇ ಈ ಮಾಹಿತಿಯನ್ನು ನೀಡಿದ್ದು, ಸುಮಾರು ಒಂದು ತಾಸು ತನ್ನ ಟ್ವಿಟರ್ ಖಾತೆ ಬಳಸಲು ಆಗಲಿಲ್ಲ. ಖಾತೆ ಬಳಸಲು ಪ್ರಯತ್ನಿಸಿದಾಗ ಅವರ ಖಾತೆಯಿಂದ ಅಮೆರಿಕದ ಡಿಜಿಟಲ್ ಮಿಲೇನಿಯಂ ಕಾಪಿರೈಟ್ ಕಾಯ್ದೆ ಉಲ್ಲಂಘನೆಯಾಗಿದೆ ಎಂಬ ಮಾಃಇತಿ ನೀಡಲಾಗಿದೆ. ಆದರೆ ಒಂದು ತಾಸಿನ ಬಳಿಕ ಅವರ ಟ್ವಿಟರ್ ಖಾತೆ ಮತ್ತೆ ಸಕ್ರಿಯಗೊಂಡಿದೆ.

ಟ್ವಿಟರ್ ನಿಯಮ ಉಲ್ಲಂಘಿಸಿದೆ ಎಂದ ಸಚಿವರು

ಟ್ವಿಟರ್‌ಗೆ ಉತ್ತರಿಸಿರುವ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಸೋಶಿಯಲ್ ಮೀಡಿಯಾ ಕಂಪನಿ ಟ್ವಿಟರ್ ಐಟಿ ರೂಲ್ಸ್‌ನ 4 (8) ನಿಯಮವನ್ನು ಉಲ್ಲಂಘಿಸಿದೆ. ನನ್ನ ಟ್ವಿಟರ್ ಖಾತೆ ಬ್ಲಾಜಕ್ ಮಾಡುವ ಮೊದಲು ಯಾವುದೇ ಬಗೆಯ ಮಾಹಿತಿ ನೀಡಿಲ್ಲ. ಇದು ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದಿದ್ದಾರೆ. ಇದೇ ವೇಳೆ ಅವರು ಟ್ವಿಟರ್ ಬ್ಲಾಕ್ ಆದ ಬಳಿಕದ ಹಾಗೂ ಮರು ಸಕ್ರಿಯಗೊಂಡ ಬಳಿಕದ ಸ್ಕ್ರೀನ್ ಶಾಟ್‌ ಕೂಡಾ ಶೇರ್ ಮಾಡಿಕೊಂಡಿದ್ದಾರೆ.

Scroll to load tweet…

ಮತ್ತೆ ಬ್ಲಾಕ್ ಮಾಡ್ತೇವೆ, ಟ್ವಿಟರ್ ವಾರ್ನಿಂಗ್

ಅಕೌಂಟ್‌ ಮತ್ತೆ ಸ್ಕ್ರಿಯಗೊಂಡ ಬಳಿಕವೂ ಟ್ವಿಟರ್ ರವಿ ಶಂಕರ್ ಪ್ರಸಾದ್‌ರವರಿಗೆ ಎಚ್ಚರಿಕೆ ನೀಡಿದೆ. ಅಲ್ಲದೇ ಮುಂದೆ ಅವರ ಖಾತೆ ವಿರುದ್ಧ ಒಂದೇ ಒಂದು ನೋಟಿಸ್ ಸಿಕ್ಕರೂ ಮತ್ತೆ ಖಾತೆ ಬ್ಲಾಕ್ ಅಥವಾ ನಿಷ್ಕ್ರಿಯಗೊಳಿಸುವುದಾಗಿ ತಿಳಿಸಿದೆ. 

ಕೂನಲ್ಲಿ ರವಿ ಶಂಕರ್ ಸಂದೇಶ:

ಶುಕ್ರವಾರದಂದು ರವಿ ಶಂಕರ್ ಪ್ರಸಾದ್ ತಮ್ಮ ಟ್ವಿಟರ್ ಹಾಗೂ ಕೂನಲ್ಲಿ 'ಗೆಳೆಯರೇ ಇವತ್ತು ವಿಶೇಷ ಘಟನೆ ನಡೆದಿದೆ. ಟ್ವಿಟರ್ ಸುಮಾರು ಒಂದು ತಾಸು ನನ್ನ ಖಾತೆ ಬಳಕೆಗೆ ಕಡಿವಾಣ ಹಾಕಿತ್ತು. ಅಮೆರಿಕಾದ ಕಾನೂನಿನ ಡಿಜಿಟಲ್ ಮಿಲೇನಿಯಂ ಕಾಪಿರೈಟ್ ಆಕ್ಟ್‌ ಉಲ್ಲಂಘಿಸಿರುವ ಆರೋಪ ಮಾಡಿದೆ. ಟ್ವಿಟರ್‌ನ ಈ ವರ್ತನೆ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡುವುದಿಲ್ಲ ಎಂಬುವುದನ್ನು ತೋರಿಸುತ್ತದೆ. ತೋರಿಕೆಗಷ್ಟೇ ತಾವು ಸ್ವಾತಂತ್ರ್ಯ ನೀಡುತ್ತೇವೆ ಎನ್ನುತ್ತದೆ, ಆದರೆ ವಾಸ್ತವವಾಗಿ ಹಾಗೆ ಮಾಡುವುದಿಲ್ಲ. ಅವರು ಎಳೆದ ಲಕ್ಷ್ಮಣ ರೇಖೆ ದಾಟಿದರೆ ಅವರಿಗಿಷಟ್ ಬಂದಂತೆ ವರ್ತಿಸುತ್ತಾರೆ. ನಿಮ್ಮ ಖಾತೆಯನ್ನು ತೆಗೆದು ಹಾಕುತ್ತಾರೆ' ಎಂದಿದ್ದಾರೆ.