ಅಮೆರಿಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧದ ಟೀಕೆಯನ್ನು ಮುಂದುವರೆಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಮೋದಿ ಕಾರಿನ ಕನ್ನಡಿ ಮೂಲಕ ಹಿಂಬದಿಗೆ ನೋಡುತ್ತಾ ಕಾರು ಚಲಾಯಿಸುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

ನ್ಯೂಯಾರ್ಕ್: ಅಮೆರಿಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧದ ಟೀಕೆಯನ್ನು ಮುಂದುವರೆಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಮೋದಿ ಕಾರಿನ ಕನ್ನಡಿ ಮೂಲಕ ಹಿಂಬದಿಗೆ ನೋಡುತ್ತಾ ಕಾರು ಚಲಾಯಿಸುತ್ತಿದ್ದಾರೆ. ಹಾಗಾಗಿಯೇ ದೇಶದಲ್ಲಿ ಒಂದರ ನಂತರ ಇನ್ನೊಂದು ಅಪಘಾತ ಸಂಭವಿಸುತ್ತಿದೆ ಎಂದು ಚಾಟಿ ಬೀಸಿ​ದ್ದಾ​ರೆ.

ಅಮೆರಿದಲ್ಲಿ (America) ಸಾಗರೋತ್ತರ ಕಾಂಗ್ರೆಸ್‌ ನಡೆ​ಸಿದ ಕಾರ್ಯ​ಕ್ರ​ಮ​ದಲ್ಲಿ ಮಾತನಾಡಿದ ಆವರು, ‘ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಭವಿಷ್ಯದ ಬಗ್ಗೆ ಯೋಚಿಸುವುದಕ್ಕೆ ಬರುವುದಿಲ್ಲ. ಅವರು ಅಸಮರ್ಥರು. ನೀವು ಏನೇ ಕೇಳಿದರೂ ಅವರು ಹಿಂದಕ್ಕೆ ನೋಡುತ್ತಾರೆ. ಯಾರಾದರೂ ಹಿಂದಕ್ಕೆ ನೋಡುತ್ತಾ ಕಾರು ಓಡಿಸಿದರೆ ಅದು, ಒಂದರ ಬಳಿಕ ಮತ್ತೊಂದು ಅಪಘಾತಕ್ಕೆ ತುತ್ತಾಗುತ್ತಲೇ ಇರುತ್ತದೆ. ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನೇ ಮಾಡುತ್ತಿದ್ದಾರೆ. ಅಪಘಾತವಾದ ಬಳಿಕವೂ ಅದು ಏಕಾಯಿತು ಎಂದು ಅವರಿಗೆ ಅರಿವಾಗುತ್ತಿಲ್ಲ. ಇದೇ ಯೋಚನೆಗಳನ್ನು ಬಿಜೆಪಿ (BJP) ಮತ್ತು ಆರ್‌ಎಸ್‌ಎಸ್‌ (RSS) ಕೂಡ ಮಾಡುತ್ತವೆ’ ಎಂದು ಹೇಳಿದರು.

Watch: ರಾಹುಲ್‌ ಗಾಂಧಿ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆಗೆ ಅವಮಾನ!

ಇದೇ ವೇಳೆ ಒಡಿಶಾ ದುರಂತದ (Odisha Triple train tragedy) ಬಗ್ಗೆ ಸರ್ಕಾರವನ್ನು ದೂಷಿಸಿದ ಅವರು, ‘ಈ ಅಪಘಾತದ ಬಗ್ಗೆ ಕೇಳಿದರೆ 50 ವರ್ಷಗಳ ಹಿಂದೆ ಕಾಂಗ್ರೆಸ್‌ (Congress) ಸಹ ಇದನ್ನೇ ಮಾಡಿತ್ತು ಎಂದು ಹೇಳುತ್ತಾರೆ. ಏನೇ ಕೇಳಿದರೂ ಅವರ ತಕ್ಷಣದ ಪ್ರತಿಕ್ರಿಯೆ ಹಿಂದೆ ನೋಡುವುದೇ ಆಗಿರುತ್ತದೆ. ನೀವು ಅವರ ಸಚಿವರ, ಪ್ರಧಾನಿಯ ಮಾತನ್ನು ಕೇಳಿ, ಅವರು ಎಂದಿಗೂ ಭವಿಷ್ಯದ ಕುರಿತಾಗಿ ಮಾತನಾಡುವುದಿಲ್ಲ. ಯಾವಾಗಲೂ ಹಿಂದೆ ನಡೆದಿರುವುದನ್ನೇ ನೋಡುತ್ತಾರೆ ಮತ್ತು ಅವರಿಗೆ ಬೈಯುತ್ತಾ ಕಾಲ ಕಳೆಯುತ್ತಾರೆ’ ಎಂದು ಅವರು ಟೀಕಿಸಿದರು.

ಮೋದಿಗೆ ತಾನೇ ದೇವರೆಂಬ ಭ್ರಮೆ: ಮತ್ತೆ ವಿದೇಶದಲ್ಲಿ ರಾಹುಲ್‌ ಗಾಂಧಿ ವಿವಾದ

ಈ ಹಿಂದೆಯೂ ಮೋದಿ ಬಗ್ಗೆ ಅಮೆರಿಕಾದಲ್ಲಿ ರಾಹುಲ್ ಟೀಕೆ ಮಾಡಿದ್ದರು. ಜಗತ್ತಿನಲ್ಲಿ ‘ದೇವರಿಗಿಂತ ಹೆಚ್ಚು ತನಗೆ ಗೊತ್ತು’ ಎಂಬ ಭ್ರಮೆಯಲ್ಲಿ ಕೆಲವರು ಇದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಇಂಥ ವ್ಯಕ್ತಿಗಳಲ್ಲಿ ಒಬ್ಬರು’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದರು. 10 ದಿನಗಳ ಅಮೆರಿಕ ಪ್ರವಾಸದಲ್ಲಿರುವ ರಾಹುಲ್‌, ಅಮೆರಿಕದ ಸಾಗರೋತ್ತರ ಭಾರತೀಯ ಕಾಂಗ್ರೆಸ್‌ ಸಾಂತಾ ಕ್ಲಾರಾದಲ್ಲಿ ಹಮ್ಮಿಕೊಂಡಿದ್ದ ‘ಮೊಹಬ್ಬತ್‌ ಕಿ ದುಕಾನ್‌’ (ಪ್ರೀತಿಯ ಅಂಗಡಿ) ಸಂವಾದದಲ್ಲಿ ಮಾತನಾಡಿದ್ದರು.

ಹಾಗೂ ಮೋದಿ ವಿರುದ್ಧ ವ್ಯಂಗ್ಯಭರಿತ ವಾಗ್ದಾಳಿ ನಡೆಸಿದರು. ಇದಕ್ಕೆ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್‌ ಜೋಶಿ ತಿರುಗೇಟು ನೀಡಿದ್ದು, ‘ರಾಹುಲ್‌ ‘ನಕಲಿ ಗಾಂಧಿ’. ಏನೂ ಗೊತ್ತಿಲ್ಲದ ವ್ಯಕ್ತಿಗೆ ಉದಾಹರಣೆ ಎಂದರೆ ರಾಹುಲ್‌ ಗಾಂಧಿ, ಆದರೂ ಎಲ್ಲರದಲ್ಲೂ ಅವರು ತಜ್ಞರಾಗಿಬಿಡುತ್ತಾರೆ’ ಎಂದು ಟೀಕಿಸಿದ್ದಾರೆ.

ಸಾಮಾನ್ಯ ವೀಸಾ: ಅಮೆರಿಕ ಏರ್‌ಪೋರ್ಟ್‌ನಲ್ಲಿ 2 ತಾಸು ಕಾದ ರಾಹುಲ್‌!

ರಾಹುಲ್‌ ಹೇಳಿದ್ದೇನು?: ಕೆಲವೊಬ್ಬರು ತಮಗೆ ಎಲ್ಲವೂ ತಿಳಿದಿದೆ ಎಂದು ಭಾವಿಸುತ್ತಾರೆ. ಇಂಥವರು ಇತಿಹಾಸವನ್ನು ಇತಿಹಾಸಕಾರರಿಗೆ, ವಿಜ್ಞಾನವನ್ನು ವಿಜ್ಞಾನಿಗಳಿಗೆ, ಯುದ್ಧ ಕಲೆಯನ್ನು ಸೇನಾನಿಗಳಿಗೆ ಮನವರಿಕೆ ಮಾಡಿಕೊಡಲು ಯತ್ನಿಸುತ್ತಾರೆ ಎಂದು ಮೋದಿ ವಿರುದ್ಧ ರಾಹುಲ್‌ ಪರೋಕ್ಷವಾಗಿ ಚಾಟಿ ಬೀಸಿದರು. ‘ಜಗತ್ತು ತುಂಬಾ ದೊಡ್ಡದಾಗಿದೆ. ಹೀಗಾಗಿ ವ್ಯಕ್ತಿಗೆ ಎಲ್ಲವನ್ನೂ ತಿಳಿದುಕೊಳ್ಳಲು ಆಗದು. ಆದರೆ ಎಲ್ಲವೂ ತನಗೆ ತಿಳಿದಿದೆ ಎಂಬ ಭ್ರಮೆಯಲ್ಲಿ ಕೆಲವರು ಇರುತ್ತಾರೆ. ಇದೊಂಥರಾ ರೋಗ. ಇಂಥವರು ದೇವರಿಗಿಂತ ಹೆಚ್ಚು ತನಗೆ ಗೊತ್ತು ಎಂದು ಭಾವಿಸಿರುತ್ತಾರೆ. 

ಇಂಥವರು ದೇವರ ಎದುರಿಗೇ ಕುಳಿತು ಏನಾಗುತ್ತಿದೆ ಎಂಬುದನ್ನು ಆತನಿಗೆ ವಿವರಿಸುತ್ತಾರೆ. ನೀವು ಮೋದಿಯನ್ನು ದೇವರೊಂದಿಗೆ ಕೂರಿಸಿದರೆ, ‘ಬ್ರಹ್ಮಾಂಡವು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ನಾನು ಏನನ್ನು ಸೃಷ್ಟಿಸಿದ್ದೇನೆ?’ ಎಂಬುದರ ಕುರಿತು ದೇವರೇ ಗೊಂದಲಕ್ಕೊಳಗಾಗುತ್ತಾನೆ. ಅಷ್ಟರ ಮಟ್ಟಿಗೆ ಮೋದಿ ಮಾತುನಿಂದ ದೇವರು ಕೂಡ ವಿಚಲಿತನಾಗುತ್ತಾನೆ’ ಎಂದು ನಗೆಗಡಲಿನ ಮಧ್ಯೆ ಹೇಳಿದರು.