ದೇಶದ ಬಾಹ್ಯಾಕಾಶ ವಲಯವನ್ನು ಹಂತಹಂತವಾಗಿ ಖಾಸಗಿ ವಲಯಕ್ಕೂ ಮುಕ್ತಗೊಳಿಸುತ್ತಿರುವ ಇಸ್ರೋ, ಇದೀಗ ತನ್ನ ಅಭಿವೃದ್ಧಿಪಡಿಸಿದ್ದ ಎಸ್‌ಎಸ್‌ಎಲ್‌ವಿ (ಸ್ಮಾಲ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ರಾಕೆಟ್ ಅನ್ನು ಪೂರ್ಣ ಪ್ರಮಾಣದಲ್ಲಿ ಖಾಸಗಿ ವಲಯಕ್ಕೆ ಹಸ್ತಾಂತರಿಸಲು ನಿರ್ಧರಿಸಿದೆ.
ನವದೆಹಲಿ: ದೇಶದ ಬಾಹ್ಯಾಕಾಶ ವಲಯವನ್ನು ಹಂತಹಂತವಾಗಿ ಖಾಸಗಿ ವಲಯಕ್ಕೂ ಮುಕ್ತಗೊಳಿಸುತ್ತಿರುವ ಇಸ್ರೋ, ಇದೀಗ ತನ್ನ ಅಭಿವೃದ್ಧಿಪಡಿಸಿದ್ದ ಎಸ್‌ಎಸ್‌ಎಲ್‌ವಿ (ಸ್ಮಾಲ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ರಾಕೆಟ್ ಅನ್ನು ಪೂರ್ಣ ಪ್ರಮಾಣದಲ್ಲಿ ಖಾಸಗಿ ವಲಯಕ್ಕೆ ಹಸ್ತಾಂತರಿಸಲು ನಿರ್ಧರಿಸಿದೆ. ಇದಕ್ಕಾಗಿ ಹರಾಜು ಪ್ರಕ್ರಿಯೆ ನಡೆಸಲಿದ್ದು, ಅತಿ ಹೆಚ್ಚು ಬೆಲೆ ನೀಡುವ ಕಂಪನಿ ಈ ರಾಕೆಟ್ ಪಡೆದುಕೊಳ್ಳಲಿದೆ. ನಾವು ಎಸ್‌ಎಸ್‌ಎಲ್‌ವಿಯನ್ನು ಸಂಪೂರ್ಣವಾಗಿ ಖಾಸಗಿಗೆ ನೀಡುತ್ತಿದ್ದೇವೆ. ಕೇವಲ ಉತ್ಪಾದನೆ ಮಾತ್ರವಲ್ಲ. ಸಂಪೂರ್ಣ ತಂತ್ರಜ್ಞಾನವನ್ನು ನೀಡಲಿದ್ದೇವೆ ಎಂದು ಇಸ್ರೋದ (ISRO) ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ನಡೆದಿದ್ದ ಎಸ್‌ಎಸ್‌ಎಲ್‌ವಿ (SSLV) ಮೊದಲ ಉಡಾವಣೆ ವಿಫಲವಾಗಿತ್ತು. ಇದಾದ ಬಳಿಕ ರಾಕೆಟ್‌ನ ಲೋಪಪತ್ತೆ ಹಚ್ಚಿ ಸರಿಪಡಿಸಿದ್ದ ಇಸ್ರೋ, ಫೆಬ್ರವರಿಯಲ್ಲಿ ನಡೆದ ಉಡಾವಣೆಯಲ್ಲಿ ಇಸ್ರೋದ ಇಒಎಸ್-07 ಮತ್ತು ಅಮೆರಿಕ ಮೂಲಕ ಅಂಟಾರಿಸ್ ಮತ್ತು ಚೆನ್ನೈ ಮೂಲದ ಸ್ಪೇಸ್ ಕಿಡ್ಸ್ ಅಜಾದಿಸ್ಯಾಟ್-2 ಉಪಗ್ರಹಗಳನ್ನು ಈ ರಾಕೆಟ್ ಯಶಸ್ವಿಯಾಗಿ ಕಕ್ಷೆಗೆ ತಲುಪಿಸಿತ್ತು. ಎಸ್‌ಎಲ್‌ಎಲ್‌ವಿ ರಾಕೆಟ್‌ಗಳು 500 ಕೆ.ಜಿ.ವರೆಗೆ ತೂಗುವ ಉಪಗ್ರಹಗಳನ್ನು ಕೆಳಮಟ್ಟದ ಕಕ್ಷೆಗೆ ತಲುಪಿಸಬಲ್ಲದು. ಜೊತೆಗೆ 10 ಕೇಜಿಯ ನ್ಯಾನೋ ಮತ್ತು 100 ಕೇಜಿವರೆಗೆ ತೂಗುವ ಮೈಕ್ರೋ ಉಪಗ್ರಹಗಳನ್ನು ಮೇಲಿನ ಹಂತದ ಕಕ್ಷೆಗೆ ಉಡ್ಡಯನ ಮಾಡಬಲ್ಲದು.
Chandrayaan-3: ಜುಲೈ 13ಕ್ಕೆ ಭಾರತದ ಚಂದ್ರಯಾನ!
ಇಸ್ರೋದಿಂದ ರಾಕೆಟ್ ಖರೀದಿಸುವ ಖಾಸಗಿ ಕಂಪನಿಗಳು, ಬೇಡಿಕೆ ಮೇರೆಗೆ ಉಪಗ್ರಹಗಳನ್ನು ಹಾರಿಸಬಹುದು. ಇದರಿಂದಾಗಿ ಸಣ್ಣ ಉಪಗ್ರಹ ಮಾಡಬಯಸುವವರು, ಇಸ್ರೋದ ಹಾರಿಬಿಡುವ ದೊಡ್ಡ ರಾಕೆಟ್‌ಗಳ ಸಮಯಕ್ಕಾಗಿ ಕಾಯಬೇಕಾದ ಪ್ರಮೇಯ ತಪ್ಪಲಿದೆ.
