ವಿರಾಟ್ ಕೊಹ್ಲಿ ದಾಖಲೆ ಮುರಿದ ಇಸ್ರೋ, ಚಂದ್ರಯಾನ-3ಗೆ ಸಿಕ್ಕಿತು ಮತ್ತೊಂದು ಹಿರಿಮೆ!
ಚಂದ್ರಯಾನ-3 ಕುರಿತಾಗಿ ಇಸ್ರೋ ಮಾಡಿದ ಟ್ವೀಟ್ ನಿರೀಕ್ಷೆಯಂತೆಯೇ ಭಾರತದ ಅತ್ಯಂತ ಜನಪ್ರಿಯ ಟ್ವೀಟ್ ಆಗಿದೆ. 56 ಮಿಲಿಯನ್ ವೀಕ್ಷಣೆ ಕಂಡಿರುವ ಈ ಟ್ವೀಟ್ ಗರಿಷ್ಠ ಲೈಕ್ ಪಡೆದುಕೊಂಡ ಭಾರತದ ಟ್ವೀಟ್ ಎನಿಸಿದೆ.
ಬೆಂಗಳೂರು (ಆ.29): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವವನ್ನು ಮುಟ್ಟುವ ಮೂಲಕ ಹಲವಾರು ದಾಖಲೆಗಳನ್ನು ನಿರ್ಮಾಣ ಮಾಡಿತು. ಅಮೆರಿಕ, ರಷ್ಯಾ ಹಾಗೂ ಚೀನಾದ ಬಳಿಕ ಚಂದ್ರನ ನೆಲ ಮುಟ್ಟಿದ ವಿಶ್ವದ ನಾಲ್ಕನೇ ದೇಶ ಎನಿಸಿಕೊಂಡ ಭಾರತ, ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಮಾಡಿದ ವಿಶ್ವದ ಮೊಟ್ಟಮೊದಲ ದೇಶ ಎನಿಸಿಕೊಂಡಿತು. ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತದ ವಿಕ್ರಮ್ ಹಾಗೂ ಪ್ರಗ್ಯಾನ್ ರೋವರ್ ಹೊರತಾಗಿ ಉಳಿದ ಯಾವ ದೇಶಗಳ ಲ್ಯಾಂಡರ್, ರೋವರ್ ಕೂಡ ಅಲ್ಲಿಲ್ಲ. ಚಂದ್ರಯಾನ-3ಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ ಆದ ಬಳಿಕ ಇಸ್ರೋ ತನ್ನ ಅಧಿಕೃತ ಖಾತೆಯಿಂದ ಒಂದು ಟ್ವೀಟ್ ಮಾಡಿತ್ತು. 'ಚಂದ್ರಯಾನ-3 ಮಿಷನ್: ಇಂಡಿಯಾ ನಾನು ನನ್ನ ಗಮ್ಯ ಸ್ಥಾನ ತಲುಪಿದ್ದೇನೆ. ಅದರೊಂದಿಗೆ ನೀನೂ ಕೂಡ ಇಲ್ಲಿಗೆ ತಲುಪಿದ್ದೀಯ' ಚಂದ್ರಯಾನ-3 ಚಂದ್ರನ ಮೇಲೆ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡ್ ಆಗಿದೆ, ಅಭಿನಂದನೆಗಳು ಭಾರತ!' ಎಂದು ಆಗಸ್ಟ್ 23ರ ಸಂಜೆ 6 ಗಂಟೆ 4 ನಿಮಿಷಕ್ಕೆ ಟ್ವೀಟ್ ಮಾಡಿತ್ತು. ಸರಿಯಾಗಿ ಇದೇ ಸಮಯಕ್ಕೆ ವಿಕ್ರಮ್ ಲ್ಯಾಂಡರ್, ಚಂದ್ರನ ನೆಲ ಮುಟ್ಟಿತ್ತು. ಈಗ ಈ ಟ್ವೀಟ್‌ಗೆ 857.5K ಲೈಕ್ಸ್‌ಗಳು ಪಡೆದಿಕೊಂಡಿದೆ.
ಇದು ಈಗ ಭಾರತದಿಂದ ಗರಿಷ್ಠ ಲೈಕ್ಸ್ ಪಡೆದುಕೊಂಡ ಟ್ವೀಟ್ ಆಗಿದೆ. ಈ ಟ್ವೀಟ್ ಎಷ್ಟು ಪಾಪ್ಯುಲರ್ ಆಗಿದೆ ಎಂದರೆ, ಇಲ್ಲಿಯವರೆಗೂ 56 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಅದರೊಂದಿಗೆ ಭಾರತದಿಂದ ಗರಿಷ್ಠ ಲೈಕ್ ಪಡೆದುಕೊಂಡ ಟ್ವೀಟ್ ಎನಿಸುವ ಮೂಲಕ ವಿರಾಟ್ ಕೊಹ್ಲಿ ಅವರ ಟ್ವೀಟ್ ದಾಖಲೆಯನ್ನು ಮುರಿದಿದೆ. 2022ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಮಾಡಿದ್ದ ಟ್ವೀಟ್‌ಗೆ ಈವರೆಗೂ 796.9K ಲೈಕ್ಸ್ ಪಡೆದುಕೊಂಡಿದೆ. ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಐತಿಹಾಸಿಕ 82 ರನ್ ಬಾರಿಸಿದ್ದರು. ಅದರ ಬೆನ್ನಲ್ಲಿಯೇ, 'ಸ್ಪೆಷಲ್ ಗೆಲುವು. ದಾಖಲೆಯ ಪ್ರಮಾಣದಲ್ಲಿ ಸೇರಿದ್ದ ಎಲ್ಲಾ ನಮ್ಮ ಅಭಿಮಾನಿಗಳಿಗೆ ಥ್ಯಾಂಕ್ ಯು' ಎಂದು ವಿರಾಟ್ ಕೊಹ್ಲಿ ಬರೆದಿದ್ದರು. ಅದರೊಂದಿಗೆ ಪಂದ್ಯದ ನಾಲ್ಕು ಚಿತ್ರಗಳನ್ನೂ ಕೂಡ ಕೊಹ್ಲಿ ಹಂಚಿಕೊಂಡಿದ್ದರು.
ವಿರಾಟ್ ಕೊಹ್ಲಿ ಅಂದಾಜು ಒಂದು ವರ್ಷ ಹಿಂದೆ ಮಾಡಿರುವ ಟ್ವೀಟ್‌ಗೆ ಅಂದಾಜು 797K ಲೈಕ್ಸ್ ಬಂದಿದ್ದದರೆ, ಇಸ್ರೋ ಮಾಡಿರುವ ಟ್ವೀಟ್ ಈಗಾಗಲೇ 850K ಗಡಿ ದಾಟಿದ್ದು, ಶೀಘ್ರದಲ್ಲಿಯೇ 1 ಮಿಲಿಯನ್ ಗಡಿ ಮುಟ್ಟುವ ಸಾಧ್ಯತೆ ಇದೆ. 2011ರಲ್ಲಿ ಭಾರತ ತಂಡ ವಿಶ್ವಕಪ್ ಗೆದ್ದ ಬಳಿಕ, ಇಡೀ ದೇಶ ಒಟ್ಟಾಗಿ ಸಂಭ್ರಮಿಸಿದ್ದ ಇನ್ನೊಂದು ಸಂದರ್ಭ ಎಂದರೆ, ಅದು ಇಸ್ರೋದ ಚಂದ್ರಯಾನ-3 ಮೂನ್ ಲ್ಯಾಂಡಿಂಗ್ ಎನ್ನುವುದು ಹೆಮ್ಮೆಯ ವಿಚಾರ.
ಚಂದ್ರನ ಮೇಲೆ ಭಾರತ ಲ್ಯಾಂಡ್ ಆದ ಬೆನ್ನಲ್ಲಿಯೇ ಎಲ್ಲರೂ ಸೋಶಿಯಲ್ ಮೀಡಿಯಾದಲ್ಲಿ ಇಸ್ರೋದ ಪೇಜ್ ಮೇಲೆ ಅಧಿಕೃತ ಘೋಷಣೆಗಾಗಿ ಕಣ್ಣಿಟ್ಟಿದ್ದರು. ಯಾವಾಗ ಇಸ್ರೋ ಅಧಿಕೃತವಾಗಿ ಸಾಫ್ಟ್ ಲ್ಯಾಂಡ್ ಮಾಡಿದ ಟ್ವೀಟ್ ಮಾಡಿತೋ, ಅಥ್ಲೀಟ್‌ಗಳು, ಮಾಧ್ಯಮದವರು, ರಾಜಕಾರಣಿಗಳು, ಸೆಲೆಬ್ರಿಟಿಗಳು ಇಸ್ರೋದ ಟ್ವೀಟ್‌ಗೆ ಲೈಕ್ ಮೇಲೆ ಲೈಕ್ ಒತ್ತಿದ್ದರು.
Chandrayaan-3: ಚಂದ್ರನ ಮೇಲೆ ಪ್ರಗ್ಯಾನ್ ರೋವರ್‌ಗೆ ಎದುರಾದ ದೊಡ್ಡ ಕುಳಿ, ಹೊಸ ಮಾರ್ಗ ನೀಡಿದ ಇಸ್ರೋ!
ಇನ್ನು 2022ರ ಅಕ್ಟೋಬರ್ 23 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಭಾರತದ ಗೆಲುವಿಗೆ ಪಾಕಿಸ್ತಾನ 160 ರನ್ ಗುರಿ ನೀಡಿತ್ತು. ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ ಅಜೇಯ 82 ರನ್ ಸಿಡಿಸುವ ಮೂಲಕ ಭಾರತ ತಂಡಕ್ಕೆ ನಾಲ್ಕು ವಿಕೆಟ್‌ಗಳ ಅಮೂಲ್ಯ ಗೆಲುವು ನೀಡಿದ್ದರು.
ಸೂರ್ಯಶಿಖಾರಿಗೆ ಮಹೂರ್ತ ಫಿಕ್ಸ್, ಸೆ.2ಕ್ಕೆ ಆದಿತ್ಯ ಎಲ್-1 ಉಡಾವಣೆ: ಇಸ್ರೋ ಅಧಿಕೃತ ಟ್ವೀಟ್