ಪತಿ ಜೊತೆ ವಿಡಿಯೋ ಕಾಲ್‌ನಲ್ಲಿರುವಾಗಲೇ ಭಾರತೀಯ ಮಹಿಳೆ ಮೇಲೆ ಹಮಾಸ್ ಉಗ್ರರ ದಾಳಿ!
7 ವರ್ಷದಿಂದ ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮಹಿಳೆ, ಪತಿ ಹಾಗೂ ಮಕ್ಕಳ ಜೊತೆ ವಿಡಿಯೋ ಕಾಲ್‌ನಲ್ಲಿರುವಾಗಲೇ ಹಮಾಸ್ ಉಗ್ರರ ದಾಳಿಯಾಗಿದೆ. ಭೀಕರ ಸ್ಫೋಟ, ಗುಂಡಿನ ಶಬ್ದ ಭಾರತದಲ್ಲಿರುವ ಪತಿಗೆ ಕೇಳಿಸಿದೆ. ಕಲವೇ ಕ್ಷಣದಲ್ಲಿ ಫೋನ್ ಸಂಪರ್ಕ ಕಡಿದುಕೊಂಡಿದೆ. ಇಸ್ರೇಲ್ ಭೀಕರತೆ ಆತಂಕವನ್ನು ಭಾರತೀಯ ಮಹಿಳೆ ಕುಟುಂಬಸ್ಥರು ನೋವಿನಿಂದಲೇ ಹಂಚಿಕೊಂಡಿದ್ದಾರೆ.
ಜೆರುಸಲೇಮ್(ಅ.09) ಇಸ್ರೇಲ್ ಮೇಲಿನ ಹಮಾಸ್ ಉಗ್ರ ದಾಳಿಯ ವಿಡಿಯೋಗಳು ಬೆಚ್ಚಿಬೀಳಿಸುವಂತಿದೆ. ಸಿಕ್ಕ ಸಿಕ್ಕವರ ಮೇಲೆ ಉಗ್ರರು ನಡೆಸಿದ ದಾಳಿ, ಪೈಶಾಚಿಕ ಕೃತ್ಯಕ್ಕೆ ಮನಕುಲವೇ ತಲೆ ತಗ್ಗಿಸುವಂತಾಗಿದೆ. ಉಗ್ರರ ದಾಳಿಯಿಂದ ಭಾರತದ ಆತಂಕ ಹೆಚ್ಚಾಗಿದೆ. 18 ಸಾವಿರಕ್ಕೂ ಹೆಚ್ಚು ಭಾರತೀಯರು ಇಸ್ರೇಲ್‌ನಲ್ಲಿ ನೆಲೆಸಿದ್ದಾರೆ. ಭಾರತೀಯರ ಸುರಕ್ಷತೆಗೆ ಕೇಂದ್ರ ವಿದೇಶಾಂಗ ಸಚಿವಾಲಯ ಕ್ರಮ ಕೈಗೊಳ್ಳುತ್ತಿದೆ. ಆದರೆ ಯುದ್ಧದ ಪರಿಸ್ಥಿತಿ ಇರುವುದರಿಂದ ನೇರವಾಗಿ ಕಾರ್ಯಾಚರಣೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಸಿಕ್ಕ ಸಿಕ್ಕವರ ಮೇಲೆ ದಾಳಿಯಾಗುತ್ತಿದೆ. ಈ ನಡುವೆ ಭಾರತೀಯ ಮಹಿಳೆ ಮೇಲೂ ದಾಳಿಯಾಗಿದೆ. ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿರುವ ಕೇರಳ ಮಹಿಳೆ ತನ್ನ ಪತಿ ಹಾಗೂ ಮಕ್ಕಳ ಜೊತೆ ವಿಡಿಯೋ ಕಾಲ್‌ನಲ್ಲಿರುವಾಗಲೇ ಹಮಾಸ್ ಉಗ್ರರು ದಾಳಿ ನಡೆಸಿದ್ದಾರೆ.
41 ವರ್ಷದ ಶೀಜಾ ಆನಂದ್ ಕಳೆದ 7 ವರ್ಷದಿಂದ ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಶೀಜಾ ಆನಂದ್ ಪತಿ ಹಾಗೂ ಮಕ್ಕಳು ಕೇರಳದಲ್ಲಿ ನೆಲಸಿದ್ದಾರೆ. ಶನಿವಾರ ಬೆಳಗ್ಗೆ ಇಸ್ರೇಲ್ ಮೇಲೆ ಏಕಾಏಕಿ ಹಮಾಸ್ ಉಗ್ರರ ದಾಳಿಯಾಗಿದೆ. ಇಸ್ರೇಲ್‌ನ ಹಲವು ಭಾಗಕ್ಕೆ ಹಮಾಸ್ ಉಗ್ರರು ನುಗ್ಗಿ ಮಹಿಳೆ, ಮಕ್ಕಳು ಸೇರಿದಂತೆ ನಾಗರೀಕರ ಮೇಲೆ ಗುಂಡಿನ ಮಳೆ ಸುರಿಸಿದ್ದಾರೆ. ಬೆತ್ತಲೇ ಮರೆವಣಿಗೆ ಮಾಡಿದ್ದಾರೆ. ಶವಗಳ ಪರೇಡ್ ಮಾಡಿದ್ದಾರೆ. ಈ ವೇಳೆ ಕುಟುಂಬಕ್ಕೆ ಕರೆ ಮಾಡಿದ ಶೀಜಾ ಆನಂದ್ ತಾನು ಸುರಕ್ಷಿತವಾಗಿರುವಾದಾಗಿ ತಿಳಿಸಿದ್ದಾರೆ.
ಹಮಾಸ್ ಉಗ್ರರ ವಿರುದ್ದ ಸತತ ದಾಳಿ, ಗಾಜಾದ ಐತಿಹಾಸಿಕ ಮಸೀದಿ ಧ್ವಂಸಗೊಳಿಸಿದ ಇಸ್ರೇಲ್!
ಶೀಜಾ ಆನಂದ್ ಪತಿ, ಮಕ್ಕಳು ಹಾಗೂ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಕಾರಣ ಶೀಜಾ ಸುರಕ್ಷಿತ ತಾಣದಲ್ಲಿದ್ದಾರೆ ಅನ್ನೋ ಮಾಹಿತಿಯಿಂದ ಆತಂಕ ದೂರವಾಗಿದೆ. ಕೆಲ ಹೊತ್ತಲ್ಲೇ ಶೀಜಾ ಮತ್ತೆ ಪತಿಗೆ ವಿಡಿಯೋ ಕಾಲ್ ಮಾಡಿದ್ದಾರೆ. ಅಕ್ಕ ಪಕ್ಕದಲ್ಲಿ ಹಮಾಸ್ ಉಗ್ರರು ದಾಳಿ ಮಾಡಿದ್ದಾರೆ ಎಂದು ಶೀಜಾ ಹೇಳುತ್ತಿರುವಾಗಲೇ ಬಾಂಬ್ ಸ್ಫೋಟ, ಗುಂಡಿನ ಶಬ್ದಗಳು ಕೇಳಿಸತೊಡಗಿದೆ.
ಇತ್ತ ಶೀಜಾ ಆನಂದ್ ಫೋನ್ ದೂರಕ್ಕೆ ಚಿಮ್ಮುತ್ತಿರುವ ದೃಶ್ಯ ಕಾಣಿಸಿದೆ. ಬಳಿಕ ಸಂಪರ್ಕ ಕಡಿತಗೊಂಡಿದೆ. ಪತ್ನಿಗೆ ಏನಾಗಿದೆ ಅನ್ನೋ ಯಾವುದೇ ಸುಳಿತು ಕುಟುಂಬಕ್ಕೆ ಸಿಗಲಿಲ್ಲ. ಶೀಜಾ ಫೋನ್ ಸ್ವಿಚ್ ಆಫ್ ಆಗಿದೆ. ಇತರರನ್ನು ಸಂಪರ್ಕಿಸಲು ಸಾಧ್ಯವಾಗದೇ ಇಡೀ ರಾತ್ರಿ ಕುಟುಂಬ ಪರದಾಡಿದೆ. ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಇತ್ತ ಶೀಜಾ ಜೊತೆಗೆ ಕೆಲಸ ಮಾಡುತ್ತಿದ್ದ ಕೆಲವರಿಗೆ ಕರೆ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಸಂಪರ್ಕಕ್ಕೆ ಸಿಗಲಿಲ್ಲ. ದಿನವಿಡಿ ಆತಂಕದಲ್ಲೇ ಕಳೆದಿದ್ದಾರೆ. ಮರುದಿನ ಶೀಜಾ ಸಹದ್ಯೋಗಿಗಳು ಕರೆ ಮಾಡಿದ್ದಾರೆ. ಹಮಾಸ್ ಉಗ್ರರ ದಾಳಿ ವೇಳೆ ಶೀಜಾ ಗಾಯಗೊಂಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೀಜಾಗೆ ಸರ್ಜರಿ ಅಗತ್ಯವಿರುವ ಕಾರಣ ಬೇರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಕೈ, ಕಾಲು ಹಾಗೂ ಬೆನ್ನು ಮೂಳೆ ಮುರಿತಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.
ಹಮಾಸ್ ಉಗ್ರ ದಾಳಿ ಖಂಡಿಸಿದ ಪ್ರಧಾನಿ ಮೋದಿ , ಇಸ್ರೇಲ್ ಬೆಂಬಲಕ್ಕೆ ನಿಂತ ಭಾರತ!
ಆಸ್ಪತ್ರೆ ಬೆಡ್ ಮೇಲಿನಿಂದಲೇ ಸಹದ್ಯೋಗಿಗಳು ಫೋನ್ ಮೂಲಕ ಕುಟುಂಬಸ್ಥರ ಜೊತೆ ಮಾತನಾಡಿದ ಶೀಜಾ, ನಾನು ಕ್ಷೇಮವಾಗಿದ್ದೇನೆ, ದಾಳಿ ವೇಳೆ ಗಾಯವಾಗಿದೆ ಎಂದಿದ್ದಾರೆ.