ನವದೆಹಲಿ[ಜ.30]: ‘ಪುರುಷರ ರೀತಿಯಲ್ಲೇ ಮಸೀದಿ ಪ್ರವೇಶಿಸಿ ಪ್ರಾರ್ಥನೆ (ನಮಾಜ್‌) ಸಲ್ಲಿಸಲು ಮಹಿಳೆಯರಿಗೂ ಅನುಮತಿ ಇದೆ’ ಎಂದು ಮುಸ್ಲಿಂ ಧರ್ಮದಲ್ಲಿನ ನಿಯಮಾವಳಿಗಳನ್ನು ನಿರ್ಣಯಿಸುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಸರ್ವೋಚ್ಚ ನ್ಯಾಯಾಲಯದ ಮುಂದೆ ಬುಧವಾರ ಪ್ರಮಾಣಪತ್ರ ಸಲ್ಲಿಸಿದೆ.

ಅಲ್ಲದೆ, ‘ಮುಸ್ಲಿಂ ಮಹಿಳೆಯರು ಮಸೀದಿ ಪ್ರವೇಶಿಸಬಾರದು ಎಂದು ಹೊರಡಿಸಲಾಗುವ ಫತ್ವಾಗಳನ್ನು ಕಡೆಗಣಿಸಬಹುದು’ ಎಂದೂ ಅದು ಹೇಳಿದೆ.

ಮದುವೆ ಮನೆಯಿಂದ ಹಿಂದೂ ಯುವತಿ ಅಪಹರಿಸಿ ಮತಾಂತರ!

ಯಾಸ್ಮೀನ್‌ ಜುಬೇರ್‌ ಅಹ್ಮದ್‌ ಪೀರ್‌ಜಾದೆ ಎಂಬ ಮಹಿಳೆ, ‘ಮಸೀದಿಗಳಲ್ಲಿ ಮಹಿಳೆಯರ ಪ್ರವೇಶಕ್ಕೂ ಅನುವು ಮಾಡಿಕೊಡಬೇಕು’ ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಶಬರಿಮಲೆ ಅಯ್ಯಪ್ಪ ದೇವಾಲಯದ ಮಹಿಳಾ ಪ್ರವೇಶ ವಿವಾದ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಮಹಿಳಾ ತಾರತಮ್ಯದ ಕುರಿತ ಅರ್ಜಿಗಳ ಜತೆಗೇ ಸುಪ್ರೀಂ ಕೋರ್ಟ್‌ನ 9 ಸದಸ್ಯರ ಸಾಂವಿಧಾನಿಕ ಪೀಠ ನಡೆಸುತ್ತಿದೆ.

ಈ ಪೀಠದ ಮುಂದೆ ಎಐಎಂಪಿಎಲ್‌ಬಿ ತನ್ನ ಪ್ರತಿಕ್ರಿಯೆ ಸಲ್ಲಿಸಿ, ‘ಧಾರ್ಮಿಕ ಗ್ರಂಥಗಳನ್ನು ಹಾಗೂ ಇಸ್ಲಾಂ ಧರ್ಮದ ನಂಬಿಕೆಗಳನ್ನು ಗಮನಿಸಿದಾಗ ಮಸೀದಿ ಪ್ರವೇಶಿಸಿ ಮಹಿಳೆಯರು ನಮಾಜ್‌ ನಡೆಸುವುದಕ್ಕೆ ಅನುಮತಿ ಇದೆ. ಹೀಗಾಗಿ ಮಹಿಳೆಯು ಮಸೀದಿ ಪ್ರವೇಶಿಸಲು ಯಾವುದೇ ಅಡ್ಡಿಯಿಲ್ಲ. ತನ್ನ ಹಕ್ಕು ಚಲಾಯಿಸಿವುದು ಆಕೆಗೆ ಬಿಟ್ಟವಿಚಾರ’ ಎಂದು ಹೇಳಿದೆ.

ಅಲ್ಲದೆ, ‘ಮಹಿಳೆಯರಿಗೆ ಮನೆಯಲ್ಲೂ ನಮಾಜ್‌ ಮಾಡಲು ಅವಕಾಶಗಳಿವೆ’ ಎಂದು ಅದು ತಿಳಿಸಿದೆ.

ಮೂಕ ಯುವಕನ ಹಸ್ತಾಂತರ ವಿಫಲ: ಭಜರಂಗಿ ಭಾಯಿಜಾನ್‌ ನಿರಾಸೆಯಿಂದ ವಾಪಾಸ್‌!

‘ಆದರೆ ಮಸೀದಿಗಳು ಖಾಸಗಿಯಾಗಿ ನಿರ್ವಹಿಸಲ್ಪಡುತ್ತಿದ್ದು, ಮುತುವಲ್ಲಿಗಳಿಂದ ನಿಯಂತ್ರಿಸಲ್ಪಡುತ್ತವೆ. ಮುತುವಲ್ಲಿಗಳಿಗೆ ಎಐಎಂಪಿಎಲ್‌ಬಿ ತನ್ನ ಅಭಿಪ್ರಾಯಗಳನ್ನು ಮಾತ್ರ ತಿಳಿಸಬಹುದು. ಆದೇಶಿಸುವಂತಿಲ್ಲ’ ಎಂದಿರುವ ಅದು, ‘ಧಾರ್ಮಿಕ ನಂಬಿಕೆಗಳ ವಿಚಾರದಲ್ಲಿ ಕೋರ್ಟು ಮಧ್ಯಪ್ರವೇಶಿಸುವುದು ಸರಿಯಲ್ಲ’ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದೆ.

‘ಮಸೀದಿಗೆ ಪ್ರವೇಶ ನಿರಾಕರಣೆಯಿಂದಾಗಿ ಹಲವು ಮಹಿಳೆಯರಿಗೆ ತೊಂದರೆಯುಂಟಾಗಿದ್ದು, ಅವರು ನ್ಯಾಯಾಲಯಕ್ಕೆ ಬರುವಷ್ಟುಶಕ್ತರಾಗಿಲ್ಲ. ಮಹಿಳೆಯರಿಗೆ ಪ್ರವೇಶ ನಿರಾಕರಿಸುವುದು ಸಂವಿಧಾನ ಬಾಹಿರ. ಧರ್ಮ, ಜಾತಿ ಹಾಗೂ ಲಿಂಗ ತಾರತಮ್ಯ ಮಾಡಿ, ಸಂವಿಧಾನ ನೀಡಿರುವ ಮೂಲಭೂತ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ’ ಯಾಸ್ಮೀನ್‌ ಪೀರಜಾದೆ ವಾದಿಸಿದ್ದರು.