ನವದೆಹಲಿ [ಫೆ.29]: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ (ಸಿಎಎ) ಪರ ಮತ್ತು ವಿರೋಧ ಹೋರಾಟ ಕೋಮು ಹಿಂಸೆಯಾಗಿ ಪರಿವರ್ತನೆಗೊಂಡು 40ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಬೆನ್ನಲ್ಲೇ, ಈ ಘಟನೆಯನ್ನು ತನ್ನ ಜಿಹಾದಿ ಕೃತ್ಯಗಳಿಗೆ ಬಳಸಿಕೊಳ್ಳಲು ಐಸಿಸ್‌ ಉಗ್ರ ಸಂಘಟನೆ ಸಂಚು ರೂಪಿಸಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. 

ದೆಹಲಿ ಹಿಂಸಾಚಾರದ ದೃಶ್ಯಗಳನ್ನು ತನ್ನ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ಐಸಿಸ್‌ ಸಂಘಟನೆ, ತನ್ನ ಹೋರಾಟದಲ್ಲಿ ಕೈಜೋಡಿಸುವಂತೆ ಮುಸ್ಲಿಮರಿಗೆ ಕರೆ ನೀಡಿದೆ. ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಉಗ್ರ ಸಂಘಟನೆಯ ಈ ಕೃತ್ಯ, ಬೂದಿ ಮುಚ್ಚಿದ ಕೆಂಡದಂತಿರುವ ದೆಹಲಿಯಲ್ಲಿ ಮತ್ತೆ ಯಾವುದೇ ಸಮಯದಲ್ಲಿ ಹಿಂಸಾಚಾರದ ಹೊಸ ಭೀತಿ ಹುಟ್ಟುಹಾಕಿದೆ.

ಸರ್ಜಿಕಲ್ ಹೀರೋ ಅಖಾಡಕ್ಕಿಳಿದ ಕೆಲವೇ ಗಂಟೆಗಳಲ್ಲಿ ದಂಗೆ ಸ್ಥಬ್ಧ! ಮಾಡಿದ ಮಾಸ್ಟರ್ ಪ್ಲಾನ್ ಏನು

ಜಾಗತಿಕ ಉಗ್ರ ಸಂಘಟನೆಗಳ ಆನ್‌ಲೈನ್‌ ಚಟುವಟಿಕೆಗಳ ಮೇಲೆ ಕಣ್ಗಾವಲು ಇಡುವ ಅಮೆರಿಕ ಮೂಲದ ‘ಸೈಟ್‌’ ಎಂಬ ಆನ್‌ಲೈನ್‌ ಗುಪ್ತಚರ ಸಂಸ್ಥೆ ಬಿಡುಗಡೆ ಮಾಡಿರುವ ಮಾಹಿತಿ ಅನ್ವಯ, ಭಾರತೀಯ ಉಪಖಂಡ ಕೇಂದ್ರೀಕೃತವಾಗಿರುವ ಐಸಿಸ್‌ ನಂಟು ಹೊಂದಿರುವ ಮಾಧ್ಯಮ ತಾಣವೊಂದರಲ್ಲಿ ಇತ್ತೀಚಿನ ದೆಹಲಿ ಹಿಂಸಾಚಾರದ ಫೋಟೋಗಳನ್ನು ಹರಿಯಬಿಡಲಾಗಿದೆ. ರಾಯಿಟ​ರ್‍ಸ್ ಸುದ್ದಿಸಂಸ್ಥೆಯ ಛಾಯಾಗ್ರಾಹಕರೊಬ್ಬರು ಸೆರೆ ಹಿಡಿದಿರುವ ಫೋಟೋವನ್ನು ಐಸಿಸ್‌ ಉಗ್ರ ಸಂಘಟನೆ ತನ್ನ ದುಷ್ಕೃತ್ಯಕ್ಕೆ ಬಳಸಿಕೊಳ್ಳುವ ಯತ್ನ ಮಾಡಿದೆ. ಫೋಟೋದ ಕೆಳಗೆ ದೆಹಲಿಯಲ್ಲಿ ಸಿಎಎ ಪರ ಬೆಂಬಲಿಗರು ಮುಸ್ಲಿಂ ವ್ಯಕ್ತಿಯನ್ನು ಥಳಿಸುತ್ತಿರುವ ದೃಶ್ಯ ಎಂದು ಕ್ಯಾಪ್ಷನ್‌ ನೀಡಲಾಗಿದೆ. ಜೊತೆಗೆ ನಮ್ಮ ಈ ಹೋರಾಟದಲ್ಲಿ ನೀವು ಕೈಜೋಡಿಸಿ ಎಂದು ಮುಸ್ಲಿಮರಿಗೆ ಕರೆ ಕೊಡಲಾಗಿದೆ.

ಐಸಿಸ್‌ ಉಗ್ರ ಸಂಘಟನೆ ಭಾರತದಲ್ಲಿ ಬೇರೆ ಬೇರೆ ಸಂದರ್ಭದಲ್ಲಿ ನಡೆದ ಘಟನೆಗಳ ಫೋಟೋ, ವಿಡಿಯೋಗಳನ್ನು ತನ್ನ ಸಿದ್ಧಾಂತ ಹರಡಲು ಬಳಸಿಕೊಳ್ಳುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಹೀಗೆಯೇ ಫೋಟೋ ಮತ್ತು ವಿಡಿಯೋಗಳನ್ನು ಬಳಸಿಕೊಂಡು ಜಾಗತಿಕ ಮಟ್ಟದಲ್ಲಿ ಮುಸ್ಲಿಮರನ್ನು ಭಾರತದ ವಿರುದ್ಧ ಎತ್ತಿಕಟ್ಟುವ ಯತ್ನ ಮಾಡಿತ್ತು.