Asianet Suvarna News Asianet Suvarna News

ಚಲಿಸುತ್ತಿದ್ದ ಆಟೋದ ಮೇಲೆ ಬಿದ್ದ ಕಬ್ಬಿಣದ ರಾಡ್‌: ಮಹಿಳೆ ಮಗು ಸಾವು

ಚಲಿಸುತ್ತಿದ್ದ ಆಟೋ ಮೇಲೆ ಕಬ್ಬಿಣದ ರಾಡ್ ಬಿದ್ದು, ಮಹಿಳೆ ಹಾಗೂ ಮಗು ಸಾವನ್ನಪ್ಪಿದ ದಾರುಣ ಘಟನೆ ಮುಂಬೈನ ಉಪನಗರ ಜೋಗೇಶ್ವರಿ ಬಳಿ ಶನಿವಾರ ಸಂಜೆ ನಡೆದಿದೆ.

Iron rod from under construction building fell on moving auto in Mumbai Woman and child killed akb
Author
First Published Mar 12, 2023, 12:55 PM IST

ಮುಂಬೈ: ಚಲಿಸುತ್ತಿದ್ದ ಆಟೋ ಮೇಲೆ ಕಬ್ಬಿಣದ ರಾಡ್ ಬಿದ್ದು, ಮಹಿಳೆ ಹಾಗೂ ಮಗು ಸಾವನ್ನಪ್ಪಿದ ದಾರುಣ ಘಟನೆ ಮುಂಬೈನ ಉಪನಗರ ಜೋಗೇಶ್ವರಿ ಬಳಿ ಶನಿವಾರ ಸಂಜೆ ನಡೆದಿದೆ. ವೆಸ್ಟರ್ನ್‌ ಎಕ್ಸ್‌ಪ್ರೆಸ್‌  ಹೈವೇ ಸಮೀಪದ  ಶಲ್ಯಾಕ್‌ ಆಸ್ಪತ್ರೆ ಸಮೀಪ ಸಂಜೆ 5.45ರ ಸುಮಾರಿಗೆ ಈ ದುರಂತ ಸಂಭವಿಸಿದೆ. 28 ವರ್ಷ ಪ್ರಾಯದ ಶಮಾ ಭಾನು ಆಸೀಫ್‌ ಶೇಕ್‌ (Shama Bano Asif Shaikh) ಹಾಗೂ 9 ವರ್ಷ ಪ್ರಾಯದ ಆಯತ್ ಅಸೀಫ್‌  ಶೇಕ್‌ (Ayat Asif Shaikh) ಈ ದುರಂತದಲ್ಲಿ ಮೃತರಾದ ನತದೃಷ್ಟರು. 

ಇವರು ಚಲಿಸುತ್ತಿದ್ದ ಆಟೋದ ಮೇಲೆ ನಿರ್ಮಾಣ ಹಂತದ ಕಟ್ಟಡದ 7ನೇ ಮಹಡಿಯಿಂದ ಬೃಹತ್ ಗಾತ್ರದ ಕಬ್ಬಿಣದ ರಾಡ್ ಬಿದ್ದಿದ್ದರಿಂದ ಈ ದುರಂತ ಸಂಭವಿಸಿದೆ.  ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ವತಿಯಿಂದ ನಡೆಯುತ್ತಿದ್ದ ಸ್ಲಂ ಪುನರ್ವಸತಿ ಪ್ರಾಧಿಕಾರ (SRA) ಯೋಜನೆಯಡಿ 14 ಅಂತಸ್ಥಿನ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಮಹಿಳೆ ಹಾಗೂ ಮಗು ಆಟೋದಲ್ಲಿ ಪ್ರಯಾಣಿಸುವ ವೇಳೆ ಈ ನಿರ್ಮಾಣ ಹಂತದ ಕಟ್ಟಡದ 7ನೇಮಹಡಿಯಿಂದ ಬೃಹತ್ ಗಾತ್ರದ ಕಬ್ಬಿಣದ ರಾಡ್ ಬಿದ್ದು ಈ ದುರಂತ ಸಂಭವಿಸಿದೆ ಎಂದು ಬಿಎಂಸಿ  ಅಧಿಕಾರಿ ತಿಳಿಸಿದ್ದಾರೆ.

ದಾವಣಗೆರೆ: ಮೆಟ್ರೋ ಪಿಲ್ಲರ್ ದುರಂತ, ಸಾವಿನಲ್ಲಿ ಒಂದಾದ ತಾಯಿ-ಮಗು ಬೇರೆ ಬೇರೆಯಾಗಿ ಅಂತ್ಯಕ್ರಿಯೆ

ಕೂಡಲೇ ಅಲ್ಲಿ ಸಾಗುತ್ತಿದ್ದ ವ್ಯಕ್ತಿಯೊಬ್ಬರು ನಾಗರಿಕ ಸಹಾಯವಾಣಿಗೆ (civic helpline) ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ನಂತರ  ಮಹಿಳೆ ಹಾಗೂ ಮಗುವನ್ನು ಸಮೀಪದ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಸಾಗಿಸಲಾಯಿತು. ಆದರೆ ಅಷ್ಟರಲ್ಲಿ ಮಹಿಳೆಯ ಪ್ರಾಣಪಕ್ಷಿ ಹಾರಿ ಹೋಗಿತ್ತು. ಆಸ್ಪತ್ರೆಯ ವೈದ್ಯರು ಆಕೆ ಆಗಮಿಸುವ ವೇಳೆಗಾಗಲೇ ಪ್ರಾಣ ಬಿಟ್ಟಿದ್ದಾರೆ ಎಂದು ಘೋಷಿಸಿದರು. ನಂತರ ಬಾಲಕಿಯನ್ನು ಅಲ್ಲಿಂದ ಅಂಧೇರಿ (Andheri) ಬಳಿ ಇರುವ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ದುರಂತ ಎಂದರೆ ಅಲ್ಲಿಗೆ ಕರೆದೊಯ್ಯುವ ವೇಳೆ ಬಾಲಕಿ ಜೀವವೂ ಹೊರಟು ಹೋಗಿದೆ, ಆಸ್ಪತ್ರೆ ತಲುಪುವ ಮೊದಲೇ ಬಾಲಕಿ ಪ್ರಾಣ ಬಿಟ್ಟಿದ್ದಾಳೆ ಎಂದು ಕೋಕಿಲಾಬೆನ್ ಆಸ್ಪತ್ರೆ (Kokilaben Hospital) ವೈದ್ಯರು ಘೋಷಿಸಿದರು. 

ಗಮನಾರ್ಹವೆಂದರೆ, ಕಳೆದ ಗುರುವಾರ (ಮಾ.9)ವಷ್ಟೇ ಬಾಂಬೆ ಹೈಕೋರ್ಟ್ ಎತ್ತರದ ಕಟ್ಟಡಗಳ ನಿರ್ಮಾಣ ವೇಳೆ ಕ್ರೇನ್‌ಗಳ ಬಳಕೆಗೆ ಸುರಕ್ಷತಾ ಮಾರ್ಗಸೂಚಿಗಳನ್ನು ರೂಪಿಸುವಂತೆ ಬಿಎಂಸಿಗೆ ಸೂಚಿಸಿತ್ತು.  ನ್ಯಾಯಮೂರ್ತಿಗಳಾದ ಜಿ ಎಸ್ ಕುಲಕರ್ಣಿ ( G S Kulkarni) ಮತ್ತು ಆರ್ ಎನ್ ಲಡ್ಡಾ (R N Laddha) ಅವರ ವಿಭಾಗೀಯ ಪೀಠವು ನೀಡಿದ ಆದೇಶದಲ್ಲಿ ಬಿಎಂಸಿಯು ನಿರ್ಮಾಣ ಸ್ಥಳಗಳಲ್ಲಿನ ಸುರಕ್ಷತಾ ಅವಶ್ಯಕತೆಗಳ ಬಗ್ಗೆ ವಿಶೇಷ ಗಮನ ಹರಿಸಲು ಇದು ಉತ್ತಮ ಸಮಯ ಎಂದು ಹೇಳಿತ್ತು. 

ಮೆಟ್ರೋ ಪಿಲ್ಲರ್‌ ಬಿದ್ದು ಇಬ್ಬರ ಸಾವು, ಬಿಎಂಆರ್‌ಸಿಎಲ್‌, ಗುತ್ತಿಗೆದಾರರ ವಿರುದ್ಧ ಪ್ರಕರಣ!

ಕಳೆದ ತಿಂಗಳು ಫೆಬ್ರವರಿ 14 ರಂದು, ಸೆಂಟ್ರಲ್ ಮುಂಬೈನ ವರ್ಲಿಯಲ್ಲಿ (Worli) ನಿರ್ಮಾಣ ಹಂತದಲ್ಲಿರುವ ಫೋರ್ ಸೀಸನ್ಸ್ ಪ್ರೈವೇಟ್ ರೆಸಿಡೆನ್ಸಸ್ ಪ್ರಾಜೆಕ್ಟ್‌ನ 52 ನೇ ಮಹಡಿಯಿಂದ ದೊಡ್ಡ ಸಿಮೆಂಟ್ ಬ್ಲಾಕ್ ಕುಸಿದು ಬಿದ್ದ ಪರಿಣಾಮ ಆವರಣದ ಹೊರಗೆ ನಿಂತಿದ್ದ ಇಬ್ಬರು ಸಾವನ್ನಪ್ಪಿದ್ದರು. ಈ ಘಟನೆಯ ಬಳಿಕ ಡೆವಲಪರ್‌ ಸರಿಯಾದ ಸುರಕ್ಷತಾ ಕಾಳಜಿ ವಹಿಸಿಲ್ಲ ಎಂದು ಆರೋಪಿಸಿ ಸಮೀಪದ ನಿವಾಸಿಗಳು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು  ವಿಚಾರಣೆಗೆ ಕೈಗೆತ್ತಿಕೊಂಡ ಹೈಕೋರ್ಟ್ ಪೀಠ ಬಿಎಂಸಿಗೆ ಸುರಕ್ಷತಾ ಕ್ರಮಗಳ ಬಗ್ಗೆ ನಿಯಮ ರೂಪಿಸುವಂತೆ ಆದೇಶ ನೀಡಿತ್ತು. ಆದರೆ ಈ ಆದೇಶ ನೀಡಿ ವಾರ ಕಳೆಯುವ ಮೊದಲೇ ಮತ್ತೊಂದು ದುರಂತ ನಡೆದಿದೆ. 

ಸ್ವತಂತ್ರವಾಗಿ ಓಡಾಡುವುದು ಮನುಷ್ಯನ ಹಕ್ಕು, ಕೆಲವು ನಿಜವಾಗಿಯೂ ನಿರ್ಮಾಣ ಸ್ಥಳಗಳಾಗಿರದ ಸ್ಥಳಗಳಲ್ಲಿ ಜನ ಅವಘಡಗಳಿಂದ ಸಾವನ್ನಪ್ಪಿದರೆ ಅಥವಾ ಗಾಯಗೊಳ್ಳುವ ಭಯದಿಂದ ಓಡಾಡುವಂತಾದರೆ ಅದು ನಿಜವಾಗಿಯೂ ಒಬ್ಬರ ಜೀವನದ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತೆ ಎಂಬುದನ್ನು ನಾವು ಧೃಡವಾಗಿ ನಂಬುತ್ತೇವೆ ಎಂದು ಹೈಕೋರ್ಟ್ ತೀರ್ಪಿನ ವೇಳೆ ಹೇಳಿತ್ತು.

Follow Us:
Download App:
  • android
  • ios