ದೀಪಾವಳಿಗೆ ಊರಿಗೆ ತೆರಳುತ್ತಿದ್ದೀರಾ? ರೈಲ್ವೇ ಟಿಕೆಟ್ ಬುಕ್ ಮಾಡಲು ಸಾಧ್ಯವಾಗದೇ ಪರದಾಟ, ಭಾರತೀಯ ರೈಲ್ವೇ ವೆಬ್‌ಸೈಟ್ ಹಾಗೂ ಆ್ಯಪ್ ಡೌನ್ ಆಗಿದೆ. ಟಿಕೆಟ್ ಸಿಗದೆ ಜನರು ಕಂಗಾಲಾಗಿದ್ದಾರೆ. ಈಗ ಟಿಕೆಟ್ ಪಡೆಯುವುದು ಹೇಗೆ?
ನವದೆಹಲಿ (ಅ.17) ದೀಪಾವಳಿ ಹಬ್ಬ ಕುಟುಂಬದ ಜೊತೆ ಆಚರಿಸಲು ಹಲವರು ತಮ್ಮ ತಮ್ಮ ಊರಿಗೆ ತೆರಳುತ್ತಿದ್ದಾರೆ. ಪ್ರತಿ ಬಾರಿ ಹಬ್ಬದ ಸಂದರ್ಭದಲ್ಲಿ ರೈಲ್ವೇ, ಬಸ್ ಸೇರಿದಂತೆ ಎಲ್ಲಾ ಸಾರಿಗೆ ವಾಹನಗಳು ತುಂಬಿ ತುಳುಕುತ್ತದೆ. ಈ ಬಾರಿ ವೀಕೆಂಡ್‌ನಿಂದಲೇ ಹಬ್ಬದ ಸಂಭ್ರಮ ಆರಂಭಗೊಂಡಿರುವ ಕಾರಣ ಊರಿಗೆ ತೆರಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇಂದು ಭಾರತೀಯ ರೈಲ್ವೇ ಮೂಲಕ ಪ್ರಯಾಣಕ್ಕೆ ಮುಂದಾದ ಪ್ರಯಾಣಿಕರಿಗೆ ಹಿನ್ನಡೆಯಾಗಿದೆ. ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ರೈಲು ಟಿಕೆಟ್ ಬುಕಿಂಗ್ ಮಾಡಲು ಮುಂದಾಗಿರುವ ಕಾರಣ ಭಾರತೀಯ ರೈಲ್ವೇ ವೆಬ್‌ಸೈಟ್ ಹಾಗೂ ಆ್ಯಪ್ ಸರ್ವರ್ ಡೌನ್ ಆಗಿ ಸಮಸ್ಯೆಯಾಗಿದೆ. ಹೀಗಾಗಿ ಟಿಕೆಟ್ ಬುಕಿಂಗ್ ಮಾಡಲು ಸಾಧ್ಯವಾಗದೇ ಪರದಾಡುವಂತಾಗಿದೆ.
ತತ್ಕಾಲ್ ಮೂಲಕ ಟಿಕೆಟ್ ಮಾಡಲು ಹೊರಟ ಪ್ರಯಾಣಿಕರಿಗೆ ಶಾಕ್
ಅಂತಿಮ ಕ್ಷಣದಲ್ಲಿ ದೀಪಾವಳಿ ಹಬ್ಬಕ್ಕೆ ಊರಿಗೆ ತೆರಳಲು ಪ್ಲಾನ್ ಮಾಡಿದ ಪ್ರಯಾಣಿಕರಿಗೆ ಹಿನ್ನಡೆಯಾಗಿದೆ. ತತ್ಕಾಲ್ ಮೂಲಕ ರೈಲ್ವೇ ಟಿಕೆಟ್ ಬುಕಿಂಗ್ ಮಾಡಲು ಸಾಧ್ಯವಾಗಿಲ್ಲ. ಸರ್ವರ್ ಡೌನ್ ಆಗಿರುವ ಕಾರಣ IRCTC ವೆಬ್‌ಸೈಟ್ ಹಾಗೂ ಆ್ಯಪ್ ಎರಡೂ ಕೂಡ ಡೌನ್ ಆಗಿದೆ. ಟಿಕೆಟ್ ಸಿಗದೆ ರೈಲ್ವೇ ನಿಲ್ದಾಣಗಳಲ್ಲಿ ಟಿಕೆಟ್ ಪಡೆಯಲು ಭಾರಿ ಜನಸಂದಣಿ ಸೃಷ್ಟಿಾಯಾಗಿದೆ.
ರೈಲ್ವೇ ಇಲಾಖೆಯಿಂದ ಸ್ಪಷ್ಟನೆ
ರೈಲ್ವೇ ಟಿಕೆಟ್ ಬುಕಿಂಗ್ ಮಾಡಲು ಸಾಧ್ಯವಾಗದೇ ಪ್ರಯಾಣಿಕರು ಪರದಾಡುತ್ತಿದ್ದಂತೆ ಭಾರತೀಯ ರೈಲ್ವೇ ಈ ಕುರಿತು ಸ್ಪಷ್ಟನೆ ನೀಡಿದೆ. ತಾಂತ್ರಿಕ ಸಮಸ್ಯೆಯಿಂದ ಸಮಸ್ಯೆ ಎದುರಾಗಿದೆ. ಕೆಲವೇ ಗಂಟೆಗಳಲ್ಲಿ ಪ್ರಯಾಣಿಕರು ಯಾವುದೇ ಅಡಚಣೆ ಇಲ್ಲದೆ ಟಿಕೆಟ್ ಬುಕಿಂಗ್ ಮಾಡುಲ ಸಾಧ್ಯವಾಗಲಿದೆ. ತಾಂತ್ರಿಕ ಸಿಬ್ಬಂದಿ ವರ್ಗ ಈ ಸಮಸ್ಯೆಯನ್ನು ಬಗೆಹರಿಸುತ್ತಿದೆ. ರೈಲ್ವೇ ನಿಲ್ದಾಣಗಳ ಕೇಂದ್ರಗಳಲ್ಲಿ ಟಿಕೆಟ್ ಬುಕಿಂಗ್ ಮಾಡಿ ಸಹಕರಿಸಬೇಕಾಗಿ ಕೋರಿದೆ.
ಬೆಂಗಳೂರಿನಿಂದ ವಿಶೇಷ ರೈಲು
ದೀಪಾವಳಿ ಹಬ್ಬಕ್ಕೆ ಊರಿಗೆ ತೆರಳಲು ಬೆಂಗಳೂರಿನಿಂದ ಹಲವು ವಿಶೇಷ ರೈಲು ಬಿಡಲಾಗಿದೆ. ಮಂಗಳೂರು, ಹುಬ್ಬಳ್ಳಿ, ಗೋವಾ, ಕೊಲ್ಲಂ ಸೇರಿದಂತೆ ಹಲವು ಮಾರ್ಗಗಳಲ್ಲಿ ರೈಲು ಸಂಚಾರ ನಡೆಯುತ್ತಿದೆ. ದೀಪಾವಳಿ ವಿಶೇಷ ರೈಲು ಹಲವು ಭಾಗಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಈ ಮೂಲಕ ಜನದಟ್ಟಣೆ ಕಡಿಮೆ ಮಾಡಲು, ಜನರಿಗೆ ಅನುಕೂಲವಾಗುವಂತೆ ಹೆಚ್ಚುವರಿ ರೈಲು ನೀಡಲಾಗಿದೆ. ದೀಪಾವಳಿ ಹಬ್ಬಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ರೈಲನ್ನೇ ಅವಲಂಬಿಸುವ ಕಾರಣ ಹಬ್ಬದ ವಿಶೇಷವಾಗಿ 7,000 ಹೆಚ್ಚುವರಿ ರೈಲು ಬಿಡಲಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರತಿ ದಿನ 2 ಲಕ್ಷ ಹೆಚ್ಚುವರಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ.
