Bengaluru-mubai new superfast Train: ಬೆಂಗಳೂರು ಮುಂಬೈ ನಡುವೆ ಸೂಪರ್‌ಫಾಸ್ಟ್‌ ರೈಲು ಸಂಚಾರಕ್ಕೆ ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ. ಇದು 30 ವರ್ಷಗಳ ಹಳೆಯ ಬೇಡಿಕೆ ಈಡೇರಿ  ಪರ್ಯಾಯವಾಗಿಪ್ರಸ್ತುತ 24 ಗಂಟೆ ತೆಗೆದುಕೊಳ್ಳುವ ಉದ್ಯಾನ ಎಕ್ಸ್‌ಪ್ರೆಸ್‌ಗೆದೆ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲ

ಬೆಂಗಳೂರು (ಸೆ.28): ರಾಜಧಾನಿ ಬೆಂಗಳೂರು ಹಾಗೂ ಮುಂಬೈ ನಡುವೆ ಮತ್ತೊಂದು ಸೂಪರ್‌ಫಾಸ್ಟ್‌ ರೈಲು ಸಂಚಾರಕ್ಕೆ ರೈಲ್ವೆ ಸಚಿವಾಲಯ ಸಮ್ಮತಿಸಿದೆ. ಇದರೊಂದಿಗೆ ಉಭಯ ನಗರಗಳ ಜನರ 30 ವರ್ಷಗಳ ಬೇಡಿಕೆ ಈಡೇರಿದಂತಾಗಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

ಶೀಘ್ರ ಉಭಯ ನಗರಗಳ ನಡುವೆ ಸೂಪರ್‌ ಫಾಸ್ಟ್‌ ರೈಲು ಸಂಚಾರ ಆರಂಭಿಸಲಾಗುವುದು. ಈ ನಗರಗಳ ಸ್ಟೇಷನ್‌ಗಳ ಸಾಮರ್ಥ್ಯ ಹೆಚ್ಚಳದ ಪರಿಣಾಮ ಈ ರೈಲುಗಳು ಸಂಚಾರ ಸಾಧ್ಯವಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಹೇಳಿದ್ದಾರೆಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

ಉಭಯ ನಗರಗಳು ಅತ್ಯಂತ ಪ್ರಮುಖ ಆರ್ಥಿಕ ಕೇಂದ್ರಗಳಾಗಿದ್ದು, ಸದ್ಯ ಈ ಎರಡು ನಗರಗಳ ನಡುವೆ ಉದ್ಯಾನ ಎಕ್ಸ್‌ಪ್ರೆಸ್‌ ರೈಲು ಸಂಚಾರವಿದ್ದು, 24 ಗಂಟೆ ಪ್ರಯಾಣ ಮಾಡಬೇಕಾಗಿದೆ. ಉಭಯ ನಗರಗಳು ಸಾಕಷ್ಟು ಬೆಳೆದಿದ್ದರೂ ಕೇವಲ ಒಂದು ರೈಲು ಸೇವೆ ಮಾತ್ರ ಇತ್ತು. ಕಳೆದ ವರ್ಷವೊಂದರಲ್ಲೇ ಉಭಯ ನಗರಗಳ ನಡುವೆ 26 ಲಕ್ಷ ಜನ ವಿಮಾನ ಪ್ರಯಾಣ ಮಾಡಿದ್ದಾರೆ. ಹೊಸ ರೈಲು ಸೇವೆಯಿಂದ ಪ್ರಯಾಣ ಲಕ್ಷಾಂತರ ಜನರಿಗೆ ಅನುಕೂಲಕರವಾಗಲಿದೆ ಎಂದು ಬೆಂಗಳೂರು ದಕ್ಷಿಣ ಸಂಸದರೂ ಆಗಿರುವ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸಿದ್ದಾರೆ.

ಹೊಸ ರೈಲು ಘೋಷಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಹಾಗೂ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ತೇಜಸ್ವಿ ಸೂರ್ಯ ಧನ್ಯವಾದ ತಿಳಿಸಿದ್ದಾರೆ.