ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತದ ನಂತರ ರೈಲ್ವೆ ಪ್ರಯಾಣವು ಅಸುರಕ್ಷಿತ ಎನ್ನುವ ಭಾವನೆ ಜನರಲ್ಲಿ ಮನೆ ಮಾಡಿದೆ ಎಂದು ಕಾಂಗ್ರೆಸ್ ಹೇಳಿತ್ತು. ಇದಕ್ಕಾಗಿ ಪ್ರಯಾಣಿಕರು ತಮ್ಮ ರೈಲು ಪ್ರಯಾಣದ ಟಿಕೆಟ್ಅನ್ನು ಕ್ಯಾನ್ಸಲ್ ಮಾಡುತ್ತಿದ್ದಾರೆ ಎಂದು ವಾದ ಮಾಡಿತ್ತು. ಆದರೆ, ಐಆರ್‌ಸಿಟಿಸಿ ಕಾಂಗ್ರೆಸ್‌ನ ಹೇಳಿಕೆಯನ್ನು ತಿರಸ್ಕರಿಸಿದೆ.
ನವದೆಹಲಿ (ಜೂ.6): ಒಡಿಶಾದಲ್ಲಿ ಸಂಭವಿಸಿದಭೀಕರ ರೈಲು ದುರಂತವನ್ನು ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ದೃಷ್ಟಿಯಲ್ಲಿ ಸುಳ್ಳು ಆಪಾದನೆ ಮಾಡಿದ್ದ ಕಾಂಗ್ರೆಸ್‌ಗೆ ಮುಖಭಂಗವಾಗಿದೆ. ಒಡಿಶಾದಲ್ಲಿ ಸಂಭವಿಸಿದ ದುರಂತದ ಬಳಿಕ ರೈಲು ಪ್ರಯಾಣ ಅಸುರಕ್ಷಿತ ಎನ್ನುವ ಭಾವನೆ ಜನರಲ್ಲಿ ಮನೆ ಮಾಡಿದೆ ಎಂದಿದ್ದ ಕಾಂಗ್ರೆಸ್, ರೈಲ್ವೆ ಟಿಕೆಟ್ ಕ್ಯಾನ್ಸಲೇಷನ್‌ನಲ್ಲಿ ದೊಡ್ಡ ಪ್ರಮಾಣದ ಏರಿಕೆಯಾಗಿದೆ ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿತ್ತು. ಆದರೆ, ಕಾಂಗ್ರೆಸ್‌ನ ಈ ವಾದವನ್ನು ಭಾರತೀಯ ರೈಲ್ವೆಯ ಟಿಕೆಟ್ ಮ್ಯಾನೇಜಿಂಗ್‌ನ ಏಕೈಕ ವೆಬ್‌ಸೈಟ್ ಆಗಿರುವ ಐಆರ್‌ಸಿಟಿಸಿ (ಇಂಡಿಯನ್ ರೈಲ್ವೇಸ್ ಕೇಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್) ನಿರಾಕರಿಸಿದೆ. ದೇಶದಲ್ಲಿ ರೈಲ್ವೆಯ ಟಿಕೆಟ್ ರದ್ದತಿ ಪ್ರಮಾಣ ಈ ಘಟೆಯ ಬಳಿಕ ಏರಿಕೆಯಾಗಿಲ್ಲ. ಬದಲಾಗಿ ಇಳಿಕೆಯಾಗಿದೆ ಎಂದಿರುವ ಐಆರ್‌ಸಿಟಿಸಿ ಎಷ್ಟು ಪ್ರಮಾಣದ ಟಿಕೆಟ್ ರದ್ದತಿ ಇಳಿಕೆಯಾಗಿದೆ ಎನ್ನುವ ಮಾಹಿತಿಯನ್ನೂ ಟ್ವೀಟ್‌ನಲ್ಲಿ ನೀಡಿದೆ.
ಕಾಂಗ್ರೆಸ್ ಪಕ್ಷ ತನ್ನ ಟ್ವೀಟ್‌ನಲ್ಲಿ, 'ಇಂತಹ ರೈಲು ಅಪಘಾತ ಹಿಂದೆಂದೂ ಸಂಭವಿಸಿರಲಿಲ್ಲ. ನೂರಾರು ಜನರು ಪ್ರಾಣ ಕಳೆದುಕೊಂಡರು ಮತ್ತು ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡರು. ಈ ಘಟನೆ ಎಲ್ಲರಿಗೂ ನೋವುಂಟು ಮಾಡಿದೆ. ಅಪಘಾತದ ನಂತರ ಸಾವಿರಾರು ಜನರು ತಮ್ಮ ಟಿಕೆಟ್‌ಗಳನ್ನು ರದ್ದುಗೊಳಿಸಿದ್ದಾರೆ. ರೈಲಿನಲ್ಲಿ ಪ್ರಯಾಣ ಮಾಡುವುದು ಇನ್ನು ಮುಂದೆ ಸುರಕ್ಷಿತವಲ್ಲ ಎಂದು ಅವರು ಭಾವಿಸಿದ್ದಾರೆ' ಎಂದು ಬರೆದುಕೊಂಡಿತ್ತು.
ಕಾಂಗ್ರೆಸ್ ವಾದ ತಿರಸ್ಕರಿಸಿದ ಐಆರ್‌ಸಿಟಿಸಿ: ಕಾಂಗ್ರೆಸ್ ಹೇಳಿಕೆಯನ್ನು ತಿರಸ್ಕರಿಸಿದ ಐಆರ್‌ಸಿಟಿಸಿ, ಕಾಂಗ್ರೆಸ್ ತನ್ನ ಲೆಕ್ಕಾಚಾರವನ್ನು ತಪ್ಪಾಗಿ ಮಾಡಿಕೊಂಡಿದೆ. ರೈಲ್ವೆ ಟಿಕೆಟ್ ರದ್ದತಿ ಪ್ರಮಾಣದಲ್ಲಿ ಹೆಚ್ಚಾಗಿಲ್ಲ. ಆದರೆ, ಮತ್ತಷ್ಟು ಕಡಿಮೆಯಾಗಿದೆ. 2023ರ ಜೂನ್ 1 ರಂದು ಜನ 7.7 ಲಕ್ಷ ಟಿಕೆಟ್‌ಗಳನ್ನು ರದ್ದು ಮಾಡಿದ್ದರೆ, ಅದೇ 2023ರ ಜೂನ್ 3 ರಂದು ಈ ಪ್ರಮಾಣ 7.5 ಲಕ್ಷಕ್ಕೆ ಇಳಿದಿದೆ ಎಂದು ಮಾಹಿತಿ ನೀಡಿದೆ.
'ಕವಚ್' ಯೋಜನೆಗೆ ನೀಡಿದ್ದ 469 ಕೋಟಿಯಲ್ಲಿ ನಯಾಪೈಸೆಯೂ ವೆಚ್ಚವಾಗಿಲ್ಲ!
ಒಡಿಶಾ ರೈಲು ಅಪಘಾತದ ನಂತರ ಮೃತ ದೇಹಗಳ ಗುರುತು ಪ್ರಕ್ರಿಯೆ ಚುರುಕು:ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಒಟ್ಟು 275 ಜನರು ಸಾವನ್ನಪ್ಪಿದ್ದಾರೆ. 1100 ಮಂದಿ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೈಲ್ವೆ ಅಧಿಕಾರಿಗಳ ಪ್ರಕಾರ, ಸುಮಾರು 101 ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ. ಇದಕ್ಕಾಗಿ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಭುವನೇಶ್ವರದಲ್ಲಿ 193 ಶವಗಳನ್ನು ಇರಿಸಲಾಗಿದ್ದು, 80 ಮೃತದೇಹಗಳನ್ನು ಗುರುತಿಸಲಾಗಿದೆ. 55 ಮೃತದೇಹಗಳನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ರೈಲ್ವೆ ಸಹಾಯವಾಣಿ ಸಂಖ್ಯೆಗಳನ್ನು ನೀಡಿದ್ದು, ಜನರು ತಮ್ಮ ಜನರನ್ನು ಪರಿಶೀಲಿಸುತ್ತಿದ್ದಾರೆ. ಗುರುತಿಸಲಾದ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೆ ಪ್ರಯಾಣಿಕರಿಗೆ ಕೇವಲ 35 ಪೈಸೆಗೆ ಸಿಗುತ್ತೆ 10 ಲಕ್ಷ ರೂ. ವಿಮೆ, ಖರೀದಿ ಹೇಗೆ? ಇಲ್ಲಿದೆ ಮಾಹಿತಿ
