ಟೆಹ್ರಾನ್(ಜು.15)‌: ಅಷ್ಘಾನಿಸ್ತಾನದ ಗಣಿ ಸಂಪದ್ಭಿರಿತ ಹಜಿಘಾಕ್‌- ಝಹೆದಾನ್‌ ಮತ್ತು ಇರಾನ್‌ನ ಚಬಹಾರ್‌ ಬಂದರಿನ ನಡುವೆ ಸಂಪರ್ಕ ಕಲ್ಪಿಸುವ ರೈಲ್ವೆ ಯೋಜನೆಯನ್ನು ಭಾರತದ ನೆರವು ಇಲ್ಲದೆಯೇ ಜಾರಿಗೊಳಿಸಲು ಇರಾನ್‌ ಸರ್ಕಾರ ಮುಂದಾಗಿದೆ.

ಭಾರತ-ಇರಾನ್‌- ಅಷ್ಘಾನಿಸ್ತಾನದ ನಡುವೆ ಯೋಜನೆ ಜಾರಿ ಸಂಬಂಧ 2016ರಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಆದರೆ ಯೋಜನೆಗೆ ಭಾರತ ಹಣಕಾಸು ನೆರವು ನೀಡಲು ವಿಳಂಬವಾಗಿದ್ದರಿಂದ, ಭಾರತವನ್ನು ಕೈ ಬಿಡಲಾಗಿದೆ ಎಂದು ಇರಾನ್‌ ಹೇಳಿದೆ. ಇದೇ ವೇಳೆ ಯೋಜನೆಯ ಭಾಗವಾಗಲು ಭಾರತಕ್ಕೆ ಇನ್ನೂ ಅವಕಾಶ ಇದೆ ಎಂದು ಸ್ಪಷ್ಟಪಡಿಸಿದೆ.

ಗಲ್ವಾನ್‌ನಲ್ಲಿ ಹತ ತನ್ನ ಯೋಧರ ಅಂತ್ಯಸಂಸ್ಕಾರಕ್ಕೂ ಚೀನಾ ಕ್ಯಾತೆ!

ಇರಾನ್‌ನ ಪರಮಾಣು ಯೋಜನೆ ಜಾರಿ ವಿರೋಧಿ ಅದರ ಮೇಲೆ ಅಮೆರಿಕ ದಿಗ್ಭಂಧನ ಹೇರಿತ್ತು. ಪರಿಣಾಮ ಭಾರತ ಯೋಜನೆಗೆ ಹಣ ಬಿಡುಗಡೆ ಮಾಡುವುದಕ್ಕೆ ವಿಳಂಬ ಮಾಡಿತ್ತು. ಆದರೆ ಇರಾನ್‌ ಹಾಗೂ ಚೀನಾ ನಡುವೆ 3 ಸಾವಿರ ಕೋಟಿ ಮೌಲ್ಯದ ವ್ಯಾಪಾರ, ರಕ್ಷಣಾ ಒಪ್ಪಂದಕ್ಕೆ ಸಹಿ ಬಿದ್ದ ಬೆನ್ನಲ್ಲೇ, ಇರಾನ್‌ ಈ ಘೋಷಣೆ ಮಾಡಿರುವುದು ಮಹತ್ವ ಪಡೆದಿದೆ.

ಏಷ್ಯಾದಲ್ಲೇ ಅತ್ಯಂತ ಹೆಚ್ಚು ಕಬ್ಬಿಣದ ಅದಿರಿನ ಸಂಪತ್ತು ಹೊಂದಿರುವ ಅಷ್ಘಾನಿಸ್ತಾನದ ಹಜಿಘಾಕ್‌ ಪ್ರಾಂತ್ಯದಲ್ಲಿ 7 ಗಣಿಗಳನ್ನು ಭಾರತದ ಕಂಪನಿಗಳು ಗುತ್ತಿಗೆ ಪಡೆದುಕೊಂಡಿದ್ದವು. ರೈಲ್ವೆ ಮಾರ್ಗ ನಿರ್ಮಾಣವಾಗಿದ್ದರೆ ಭಾರತೀಯ ಕಂಪನಿಗಳಿಗೆ ಅದಿರು ಸಾಗಣೆಗೆ ನೆರವಾಗುತ್ತಿತ್ತು.