Asianet Suvarna News Asianet Suvarna News

'ನೀವು ನಿಜವಾದ ಫೈಟರ್‌ ಎಂದಿದ್ದರು ಮೋದಿ' ಸುಮಲತಾ ಮನದಾಳ

ನೀವು ನಿಜವಾದ ಫೈಟರ್‌ ಎಂದಿದ್ದರು ನರೇಂದ್ರ ಮೋದಿ/ ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ ಹೇಳಿದ ಕುತೂಹಲಕರ ಸಂಗತಿಗಳು/ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಸಂಸದೆ ಸುಮಲತಾ ಮಾತು

interview-with- Mandya mp-Sumalatha Ambareesh-on-pm-narendra-modi-govt-2-completing-year
Author
Bengaluru, First Published May 30, 2020, 4:27 PM IST

ಕೆ.ಎನ್‌.ರವಿ

ರಾಜಕೀಯ ಮತ್ತು ರಾಜಕಾರಣ ನಂಗೆ ಎರಡೂ ಹೊಸದು. ಮಂಡ್ಯ ಜನ ನನ್ನನ್ನು ಸಂಸದೆಯಾಗಿ ಆಯ್ಕೆ ಮಾಡುವ ಸಂದರ್ಭ ಬರುತ್ತದೆ ಎನ್ನುವುದನ್ನು ನಾನು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ಮಂಡ್ಯದ ಜನರು ಅಂಬರೀಷ್‌ ಮೇಲೆ ಇಟ್ಟಿದ್ದ ಪ್ರೀತಿ, ಅಭಿಮಾನವೇ ನಂಗೆ ವರದಾನ. ಎಲ್ಲದಕ್ಕಿಂತಲೂ ಹೆಚ್ಚಾಗಿ ಜಿಲ್ಲೆಯ ಜನರ ಸ್ವಾಭಿಮಾನ ನನ್ನನ್ನು ಈ ಸ್ಥಾನಕ್ಕೆ ತಂದು ಕುಳ್ಳಿರಿಸಿದೆ. ಅದೇ ನನ್ನ ಭಾಗ್ಯ.

ಹೀಗೆ ಹೇಳಿದ್ದು ಮಂಡ್ಯ ಲೋಕಸಭಾ ಕ್ಷೇತ್ರದ ಸದಸ್ಯೆ ಸುಮಲತಾ ಅಂಬರೀಷ್‌. ಅವರು ಸಂಸದೆಯಾಗಿ 1 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕನ್ನಡ ಪ್ರಭದೊಂದಿಗೆ ತಮ್ಮ ಅನುಭವವನ್ನು ಹೇಳಿಕೊಂಡರು. ಅವರು ಹೇಳಿದ ಸಂಗತಿಗಳು ಇಲ್ಲಿವೆ

ಮಂಡ್ಯದ ಜನರ ಋುಣ ಇದೆ
ನನ್ನ ಚುನಾವಣೆಯ ದಿನಗಳನ್ನು ನೆನಪಿಸಿಕೊಂಡರೆ ಈಗಲೂ ನಂಗೆ ರೋಮಾಂಚನವಾಗುತ್ತದೆ. ನಾನು ಏಕಾಂಗಿ. ನನ್ನ ಬಳಿ ಹಣ ಇರಲಿಲ್ಲ. ಪ್ರಮುಖ ರಾಜಕೀಯ ಪಕ್ಷ ಮತ್ತು ರಾಜಕಾರಣಿಗಳ ಬೆಂಬಲವಂತೂ ಇರಲೇ ಇಲ್ಲ. ಪ್ರಧಾನ ಮಂತ್ರಿಗಳು ಮೈಸೂರಿನ ಪ್ರಚಾರ ಭಾಷಣ ಮಾಡುವಾಗ ಅಂಬರೀಷ್‌ ಮತ್ತು ನನ್ನ ಹೆಸರು ಹೇಳಿದ್ದು ನಂಗೆ ಸ್ವಲ್ವ ನೆರವಾಯಿತು. ಮಂಡ್ಯದ ಜನರ ಋುಣ ಮತ್ತು ಜವಾಬ್ದಾರಿ ನನ್ನ ಮೇಲೆ ಇದೆ. ಅದನ್ನು ನಾನು ಯಾವತ್ತೂ ಮರೆಯುವುದಿಲ್ಲ. ಆದರೆ ಒಂದಂತೂ ಸತ್ಯ ಹುಸಿ ಭರವಸೆಗಳನ್ನು ಕೊಟ್ಟು ಜನರನು ನಂಬಿಸುವುದಿಲ್ಲ. ಅಂಬರೀಷ್‌ ಕೇವಲ ಚಿತ್ರ ನಟರು ಮಾತ್ರ ಆಗಿರಲಿಲ್ಲ. ಸಂಸದರಾಗಿದ್ದರು. ಶಾಸಕರಾಗಿ ಮಂತ್ರಿಗಳಾಗಿದ್ದರು. ಹೀಗಾಗಿ ನಂಗೆ ರಾಜಕೀಯ ವ್ಯಕ್ತಿಗಳು ಪರಿಚಯವಿತ್ತು. 2013ರಿಂದ ನಾನು ರಾಜಕೀಯ ಮತ್ತು ರಾಜಕಾರಣವನ್ನು ಹತ್ತಿರದಿಂದ ನೋಡಲು ಶುರು ಮಾಡಿದೆ. ಆಗ ಮಂಡ್ಯದಲ್ಲಿ ಅಂಬರೀಷ್‌ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಆ ವೇಳೆ ನಾನು ಸಕ್ರಿಯವಾಗಿ ಇದ್ದುಕೊಂಡು ಎಲ್ಲವನೂ ತಿಳಿದುಕೊಳ್ಳುವ ಪ್ರಯತ್ನ ಮಾಡಿದೆ. ಅದು ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಗೆ ಅನುಕೂಲವಾಯಿತು.

ಸಂಕಷ್ಟ ಕಾಲಕ್ಕೆ ಸಿಕ್ಕ ಅತಿಮಾನುಷ ನಾಯಕ ಮೋದಿ

ನೀವು ನಿಜವಾದ ಫೈಟರ್‌ ಎಂದಿದ್ದರು ಮೋದಿ
ನಾನು ಹೇಳಿ, ಕೇಳಿ ಪಕ್ಷೇತರಳಾಗಿ ಆಯ್ಕೆಯಾದ ಸಂಸದೆ. ಮೊದಲ ಬಾರಿ ಸಂಸತ್‌ ಮೆಟ್ಟಿಲು ತುಳಿದಾಗ ನಂಗೆ ಎಲ್ಲರೂ ನೀವು ಯಾವ ಪಕ್ಷದಿಂದ ಗೆದ್ದಿದ್ದೀರಿ ಎಂದು ಪ್ರಶ್ನೆ ಮಾಡಿದರು. ಇಲ್ಲ. ನಾನು ಪಕ್ಷೇತರಳಾಗಿ ಆಯ್ಕೆಯಾಗಿದ್ದೇನೆ ಎಂದಾಗ ಶಭಾಷ್‌ ಎಂದು ಆಶ್ಚರ್ಯ ವ್ಯಕ್ತಪಡಿಸಿದವರೇ ಹೆಚ್ಚು. ಈ ಕ್ರೆಡಿಟ್‌ ಎಲ್ಲಾ ಮಂಡ್ಯದ ಜನರಿಗೆ ಸಲ್ಲಬೇಕು. ನಾನು ಪ್ರಧಾನ ಮಂತ್ರಿ ಮೋದಿಯವರನ್ನು ಮೂರು-ನಾಲ್ಕು ಬಾರಿ ಭೇಟಿ ಮಾಡುವ ಅವಕಾಶ ಸಿಕ್ಕಿತು. ಒಂದು ಬಾರಿ ನಾನೇ ನೇರವಾಗಿ ಪ್ರಧಾನ ಮಂತ್ರಿಗಳ ಕಚೇರಿಯಲ್ಲಿ ಪ್ರಧಾನಿಯವರನ್ನು ಭೇಟಿ ಮಾಡಿದೆ. ತುಂಬಾ ಆತ್ಮೀಯವಾಗಿ ಸ್ವಾಗತಿಸಿದರು.

‘ನಂಗೆ ಮಂಡ್ಯ ಕ್ಷೇತ್ರದ ಫಲಿತಾಂಶದ ಬಗ್ಗೆ ತೀರಾ ಆಸಕ್ತಿ ಇತ್ತು’ ಎಂದು ಪ್ರಧಾನಿ ಮಂತ್ರಿಗಳು ಮಾತು ಆರಂಭಿಸಿದರು. ‘ಸರ್‌, ನಾನೇ ನಿಮಗೆ ಥ್ಯಾಂಕ್ಸ್‌ ಹೇಳಬೇಕು ಎಂದೆ. ಯಾಕೆ ನಂಗೆ ಥ್ಯಾಂಕ್ಸ್‌’ ಎಂದು ಮರು ಪ್ರಶ್ನೆ ಮಾಡಿದರು. ‘ಸರ್‌, ನೀವು ಮೈಸೂರಿನಲ್ಲಿ ನನ್ನ ಹಾಗೂ ಅಂಬರೀಷ್‌ ಹೆಸರು ಹೇಳಿ ಭಾಷಣ ಮಾಡಿ, ಬೆಂಬಲ ನೀಡಿದ್ದಕ್ಕೆ’ ಎಂದು ನಾನು ಹೇಳಿದೆ.

ಅದಕ್ಕೆ ಅವರು, ‘ನಾನು ಏನೂ ಮಾಡಿಲ್ಲ. ನೀವು ನಿಜವಾದ ಫೈಟರ್‌(ಹೋರಾಟಗಾರ್ತಿ)’ ಎಂದು ಪ್ರೋತ್ಸಾಹ ಮಾತುಗಳನ್ನು ಹೇಳಿದಾಗ ನಾನು ಒಂದು ಕ್ಷಣ ಮೂಕ ವಿಸ್ಮಿತಳಾದೆ.

ಮೋದಿ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಏನು ಹೇಳುತ್ತಾರೆ?

ನಂಗೆ ಸಾಕಷ್ಟುಸವಾಲುಗಳಿವೆ
ನನಗೆ ಕ್ಷೇತ್ರದಲ್ಲಿ ಸಾಕಷ್ಟುಸವಾಲುಗಳಿವೆ. ಹಾಗೆ ಕನಸುಗಳು ಇವೆ. ಅಂಬರೀಷ್‌ ಅವರ ಆಶಯಗಳನ್ನು ನನಸು ಮಾಡಬೇಕು ಎಂಬ ಸದಾಶಯ ನನ್ನದು. ಮಂಡ್ಯ ಸಂಸತ್‌ ಕ್ಷೇತ್ರದಲ್ಲಿ ಸಾಕಷ್ಟುಸಮಸ್ಯೆಗಳನ್ನು ನಿವಾರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಿ ಮಂಡ್ಯಕ್ಕೆ ರಿಂಗ್‌ ರೋಡ್‌ ವರ್ತುಲ ರಸ್ತೆ ನಿರ್ಮಾಣಕ್ಕೆ ಚಾಲನೆ ಕೊಡಬೇಕು ಎಂದು ಪ್ರಸ್ತಾವನೆ ಸಲ್ಲಿಸಿದ್ದೇನೆ. ಕೇಂದ್ರ ರೈಲ್ವೆ ಸಚಿವರನ್ನು ಭೇಟಿ ಮಾಡಿ ಮೈಸೂರು, ಬೆಂಗಳೂರು ನಡುವೆ ಮಹಿಳಾ ಬೋಗಿಯೊಂದನ್ನು ಪ್ರತ್ಯೇಕವಾಗಿ ಅಳವಡಿಸುವ ಬಹುದಿನದ ಬೇಡಿಕೆ ಈಡೇರಿಸಿದ್ದೇನೆ.

ಕೊರೋನಾ ವೈರಸ್‌ ದಾಳಿಯಿಂದಾಗಿ ಇಡೀ ದೇಶ ಮಾತ್ರವಲ್ಲ. ಪ್ರಪಂಚವೇ ಅಲ್ಲೋಲಕಲ್ಲೋಲವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದನ್ನು ಸಮರ್ಥವಾಗಿ ಎದುರಿಸಬೇಕಿದೆ. ಜನರ ಮತ್ತು ಜನ ಪ್ರತಿನಿಧಿಗಳ ಸಹಕಾರ ಅಗತ್ಯವಾಗಿದೆ. ದೇಶ ಮತ್ತು ರಾಜ್ಯದ ಆರ್ಥಿಕ ಸ್ಥಿತಿ ಕೊರೋನಾ ದಾಳಿಯಿಂದ ಕುಸಿದು ಹೋಗಿದೆ. ಹೀಗಾಗಿ ಮುಂದಿನ 2 ವರ್ಷಗಳ ಕಾಲ ಸಂಸದರ ನಿಧಿ ನೀಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಅದನ್ನು ರದ್ದು ಮಾಡಲಾಗಿದೆ. ಹೀಗಾಗಿ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಸ್ವಲ್ಪ ತೊಡಕಾಗಬಹುದು. ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗಬಹುದು ಎಂಬ ಆಶಾ ಭಾವನೆ ನನ್ನದು.

ಸಂಸದರ ಆದರ್ಶ ಗ್ರಾಮವಾಗಿ ಬೆಸಗರಹಳ್ಳಿ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ನಿಧಿಯ ಮೊದಲ ಕಂತಿನಲ್ಲಿ ಒಂದಷ್ಟುಅನುದಾನ ನೀಡಿದ್ದೇನೆ. ಮಂಡ್ಯ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ 50 ಲಕ್ಷ ರು.ಗಳನ್ನು ವೆಂಟಿಲೇಟರ್‌ ಖರೀದಿಗಾಗಿ ನೀಡಲಾಗಿದೆ. ಉಳಿದಂತೆ ನಿಧಿಯನ್ನು 8 ವಿಧಾನಸಭಾ ಕ್ಷೇತ್ರಗಳಿಗೆ ಆದ್ಯತೆ ಮೇಲೆ ಅಭಿವೃದ್ಧಿ ಕೆಲಸಗಳಿಗೆ ನೀಡಲಾಗಿದೆ.

ಮಂಡ್ಯದ ಮೈಶುಗರ್‌ ಸಕ್ಕರೆ ಕಾರ್ಖಾನೆ ರೈತರ ಜೀವನ ನಾಡಿ. ಕಾರ್ಖಾನೆ ಉಳಿಯಬೇಕು. ರೈತರ ಹಿತರಕ್ಷಣೆ ಕಾಪಾಡಬೇಕು. ನನ್ನ ಮೂಲ ಉದ್ದೇಶ ರೈತರು ಬೆಳೆದ ಕಬ್ಬನ್ನು ಸಮಯಕ್ಕೆ ಸರಿಯಾಗಿ ಕಟಾವು ಮಾಡಿ ಸೂಕ್ತ ಬೆಲೆಗೆ ಖರೀದಿಸಿ ಹಣ ಮರು ಪಾವತಿ ಮಾಡಬೇಕು. ಈ ನಿಟ್ಟಿನಲ್ಲಿ ನನ್ನ ಹೋರಾಟವಿದೆ. ಸರ್ಕಾರ ಕಾರ್ಖಾನೆಯನ್ನು ಮುನ್ನಡೆಸಿದರೆ ಒಳ್ಳೆಯದು ಅಥವಾ ಖಾಸಗಿಯವರಿಗೆ ವಹಿಸಿ ಸರ್ಕಾರದ ಉಸ್ತುವಾರಿಯಲ್ಲಿ ಮುನ್ನೆಡೆಸಿಕೊಂಡು ಹೋದರೆ ಅದನ್ನು ಕೂಡ ಸ್ವಾಗತಿಸುತ್ತೇನೆ. ಕಾರ್ಖಾನೆ ವಿಚಾರದಲ್ಲಿ ವೈಯಕ್ತಿಕ ನಿರ್ಧಾರ, ಆಶಯಗಳು ಯಾವುದು ಇಲ್ಲ.

ಮಂಡ್ಯ ಲೋಕಸಭಾ ಕ್ಷೇತ್ರದ ಮತದಾರರು ನನಗೆ ಅವಕಾಶ ಕೊಟ್ಟಿದ್ದಾರೆ. ಜನರ ಎಲ್ಲ ಆಶೋತ್ತರಗಳಿಗೆ ಸ್ಪಂದಿಸುವುದು ಒಬ್ಬ ಸಂಸದೆಯಾಗಿ ಕಷ್ಟವಾಗುತ್ತದೆ. ಆದರೆ, ನನ್ನ ವ್ಯಾಪ್ತಿಯಲ್ಲಿ ಆಗುವ ಎಲ್ಲಾ ಕೆಲಸಗಳನ್ನು ಪ್ರಾಮಾಣಿಕವಾಗಿ ಅಧಿಕಾರಿಗಳ ಮೂಲಕ ಮಾಡಿಸುವುದು ನನ್ನ ಉದ್ದೇಶ.

Follow Us:
Download App:
  • android
  • ios