ಸಲಹೆ ಕೇಳಿಯೇ ತೀರ್ಮಾನ ತಗೊಳ್ತಾರೆ: 6 ವರ್ಷದಿಂದ ಮೋದಿ ಜೊತೆಗಿರೋ ಸದಾನಂದ ಗೌಡ ಮುಕ್ತ ಮಾತು

ರಾಜ್ಯದಿಂದ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರುವವರ ಪೈಕಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆರು ವರ್ಷಗಳ ಕಾಲವೂ ಜತೆ ಜತೆಗೆ ಹೆಜ್ಜೆ ಹಾಕಿದ್ದಾರೆ. ಮೋದಿ ಅವರ ಆಡಳಿತ ವೈಖರಿಯನ್ನು ಹತ್ತಿರದಿಂದ ಬಲ್ಲವರು. ಸದಾನಂದಗೌಡರು ಮೋದಿ ಮತ್ತು ಸರ್ಕಾರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

Interview with Minister of Chemicals and Fertilizers dv sadananda gowda on PM Narendra Modi govt 2 completing year

ರಾಜ್ಯದಿಂದ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರುವವರ ಪೈಕಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆರು ವರ್ಷಗಳ ಕಾಲವೂ ಜತೆ ಜತೆಗೆ ಹೆಜ್ಜೆ ಹಾಕಿದ್ದಾರೆ. ಮೋದಿ ಅವರ ಆಡಳಿತ ವೈಖರಿಯನ್ನು ಹತ್ತಿರದಿಂದ ಬಲ್ಲವರು. ಎರಡನೇ ಅವಧಿಯ ಕೇಂದ್ರ ಸರ್ಕಾರ ತನ್ನ ಮೊದಲ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಸದಾನಂದಗೌಡರು ಮೋದಿ ಮತ್ತು ಸರ್ಕಾರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.Interview with Minister of Chemicals and Fertilizers dv sadananda gowda on PM Narendra Modi govt 2 completing year

* ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಅವಧಿ ಮತ್ತು ಎರಡನೇ ಅವಧಿಯೊಂದು ವರ್ಷದ ಆಡಳಿತವಧಿಯಲ್ಲಿನ ವ್ಯತ್ಯಾಸ ಏನು?

ಮೊದಲ ಐದು ವರ್ಷದ ಮುಂದುವರಿದ ಭಾಗ ಎರಡನೇಯದು ಎಂದು ಭಾವಿಸಿದ್ದೇನೆ. ಮೊದಲ ಎರಡು ವರ್ಷ ಹಿಂದಿನ ಸರ್ಕಾರ ಮಾಡಿರುವುದನ್ನು ಸರಿ ಹಾದಿಗೆ ತರುವ ಪ್ರಯತ್ನ ಮಾಡಲಾಯಿತು. ನಂತರ ಹೊಸ ವ್ಯವಸ್ಥೆಯನ್ನು ಜೋಡಣೆ ಮಾಡುವ ಕೆಲಸ ಮಾಡಿದ್ದೇವೆ. ಹಂತ ಹಂತವಾಗಿ ನಮ್ಮ ಕಾರ್ಯಗಳ ಬಗ್ಗೆ ಜನರ ಸ್ವೀಕಾರಾರ್ಹತೆಯನ್ನು ಪಡೆದುಕೊಂಡಿದ್ದೇವೆ. ಜನರಿಂದ ಮನ್ನಣೆ ಪಡೆಯುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ದಿವಂಗತ ಎ.ಬಿ.ವಾಜಪೇಯಿ ಸರ್ಕಾರ ಬಿಟ್ಟರೆ ದೇಶದ ಬಗ್ಗೆ, ಸಾಮಾನ್ಯ ಜನರ ನೋವು ತಿಳಿದುಕೊಂಡ ಸರ್ಕಾರ ಮೋದಿ ಅವರದ್ದಾಗಿದೆ. ಕಳೆದ ಬಾರಿಗಿಂತ ಹೆಚ್ಚು ಅಂತರದಲ್ಲಿ ಜನರಿಂದ ಆಶೀರ್ವಾದ ಪಡೆದುಕೊಂಡಿದ್ದೇವೆ. ಹಾಕಿರುವ ಪ್ಲಾಟ್‌ಫಾರಂ ಅನ್ನು ಮುಂದೆ ತೆಗೆದುಕೊಂಡು ಹೋಗುವ ಕೆಲಸ ಪ್ರಾರಂಭವಾಗಿದೆ.

* ಸರ್ಕಾರದ ಎರಡು ಅವಧಿಯಲ್ಲಿಯೂ ಸಚಿವರಾಗಿದ್ದೀರಿ. ಪ್ರಧಾನಿ ಮೋದಿ ಅವರಲ್ಲಿ ನಿಮಗೆ ಕಂಡ ವಿಶೇಷತೆ ಏನು?

ನಾನು 30 ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. ಅದರಲ್ಲಿ ಸುಮಾರು 26 ವರ್ಷಗಳ ಕಾಲ ಅಧಿಕಾರಯುತ ಸ್ಥಾನಗಳಲ್ಲಿದ್ದೇನೆ. ಶಾಸಕನಾಗಿ, ಸಂಸದನಾಗಿ, ಪಕ್ಷದ ರಾಜ್ಯಾಧ್ಯಕ್ಷನಾಗಿ, ಮುಖ್ಯಮಂತ್ರಿಯಾಗಿ ಬೇರೆ ಬೇರೆ ನಾಯಕರನ್ನು ಕಂಡಿದ್ದೇನೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ದೇಶವೇ ನನ್ನ ಮನೆ, ದೇಶದ ಜನರೇ ನನ್ನ ಕುಟುಂಬ ಎಂದು ಹೇಳುವ ಪರಿಕಲ್ಪನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಂತೆ ದೇಶ ಹಿತಕ್ಕಾಗಿಯೇ ಹುಟ್ಟಿರುವುದು ಮತ್ತು ಅದಕ್ಕಾಗಿ ಸಾಯುವುದು ಎಂಬ ಭಾವನೆಯನ್ನು ತೋರಿಸಿಕೊಟ್ಟವರು ಬೇರೆ ಯಾರು ಇಲ್ಲ. ಹಿಂದೆ 13 ದಿನದ ಆಡಳಿತಾವಧಿ ಮುಗಿದ ಬಳಿಕ ಅಂದಿನ ಪ್ರಧಾನಿ ವಾಜಪೇಯಿ ಅವರು ಭಾಷಣ ಮಾಡಿದ್ದರು. ಆಗ ರಾಜಕಾರಣ ಬರುತ್ತದೆ, ಹೊಗುತ್ತದೆ. ಅಧಿಕಾರವನ್ನು ಜನತೆ ಕೊಡುತ್ತಾರೆ, ತೆಗೆಯುತ್ತಾರೆ. ಆದರೆ, ಈ ದೇಶ ಶಾಶ್ವತವಾಗಿ ಉಳಿಯುತ್ತದೆ. ದೇಶದ ಭವಿಷ್ಯದ ಬಗ್ಗೆ ಚಿಂತನೆ ಮಾಡುವಂತಹದ್ದು ಒಬ್ಬ ಜನಪ್ರತಿನಿಧಿಯ ಕೆಲಸವಾಗಬೇಕು. ಈಗ ಅಧಿಕಾರದಲ್ಲಿದ್ದೇನೆ, ಅಧಿಕಾರವನ್ನು ಸಂತೋಷವಾಗಿ ಬಿಟ್ಟು ಹೋಗುತ್ತೇನೆ. ರಾಷ್ಟ್ರದ ಹಿತಕ್ಕಾಗಿ ಈ ಸ್ಥಿತಿ ನಿರ್ಮಾಣವಾಗಿದೆ ಎಂದು ಭಾವಿಸುತ್ತೇನೆ ಎಂದಿದ್ದರು. ಅದೇ ಧಾಟಿಯಲ್ಲಿ ಮೋದಿ ಇದ್ದಾರೆ.

* ಸಚಿವ ಸಂಪುಟ ಸಭೆಯಲ್ಲಿ ಮೋದಿ ನಡೆ ಸಾಮಾನ್ಯವಾಗಿ ಹೇಗಿರುತ್ತದೆ?

ಪ್ರತಿ ಅಜೆಂಡಾದಲ್ಲಿ ಯಾರು ಬೇಕಾದರೂ ಸಲಹೆ ನೀಡಬಹುದು. ಸಂಪುಟ ಸಭೆಯ ಕಾರ್ಯದರ್ಶಿ ಅಜೆಂಡಾ ವಿವರಣೆ ನೀಡಿದ ಬಳಿಕ ಪ್ರಧಾನಮಂತ್ರಿಗಳು ಸಂಬಂಧಪಟ್ಟಸಚಿವರನ್ನು ಯಾವ ಕಾರಣಕ್ಕಾಗಿ ಆ ಅಜೆಂಡಾ ತರಲಾಗಿದೆ, ಅದರ ಬಗ್ಗೆ ವಿವರಣೆ ನೀಡುವಂತೆ ಕೇಳುತ್ತಾರೆ. ಸಚಿವರು ಅರ್ಥಮಾಡಿಕೊಂಡ ಬಳಿಕ ಯಾರಾದರೂ ಸಲಹೆ ನೀಡುವುದಾದರೆ ನೀಡಬಹುದು. ನಂತರ ತೀರ್ಮಾನ ಕೈಗೊಳ್ಳಲಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ ಆರ್ಥಪೂರ್ಣವಾಗುವಂತೆ ನಡೆದುಕೊಳ್ಳುತ್ತಾರೆ. ಅಲ್ಲಿ ಅಭಿಪ್ರಾಯಗಳಿಗೂ ಮನ್ನಣೆ ಇರಲಿದ್ದು, ಎಲ್ಲವನ್ನೂ ತಾಳ್ಮೆಯಿಂದ ಕೇಳುತ್ತಾರೆ. ಅಜೆಂಡಾ ಮುಗಿದ ಬಳಿಕ ಅರ್ಧಗಂಟೆ ಕಾಲ ಯಾರು ಬೇಕಾದರೂ ತಮ್ಮ ಅಭಿಪ್ರಾಯಗಳನ್ನು ಕೇಳಬಹುದು. ಮುಕ್ತವಾಗಿ ಹೇಳುವ ಅವಕಾಶ ಇರುತ್ತದೆ.

'ತೆಗಳುವವರೆಲ್ಲಾ ಮೋದಿಗೆ ರಾಜಮಾರ್ಗ ನಿರ್ಮಿಸಿ ಕೊಟ್ಟಿದ್ರು'..! ಪ್ರಧಾನಿ ಬಗ್ಗೆ ವಾಗ್ಮಿ ಸೂಲಿಬೆಲೆ ಮಾತು

* ಮೋದಿ ಯಾರಿಗೂ ಮಾತನಾಡಲು ಬಿಡದೆ ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ ಎಂಬುದು ಪ್ರತಿಪಕ್ಷಗಳ ಆರೋಪ?

ಅದೆಲ್ಲ ಸುಳ್ಳು. ಕಳೆದ ಆರು ವರ್ಷಗಳಿಂದ ಅವರೊಂದಿಗೆ ಸಚಿವನಾಗಿ ಕೆಲಸ ಮಾಡುತ್ತಿದ್ದೇನೆ. ಈ ಆರು ವರ್ಷದ ಅವಧಿಯಲ್ಲಿ ನಾನು ಕಂಡಂತೆ ಎಲ್ಲರನ್ನೂ, ಎಲ್ಲವನ್ನೂ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಕೆಲಸ ಮುಗಿದ ಬಳಿಕ ಹೊರಗಿನ ಜನರಿಗೆ ಹೇಗೆ ಹೇಳಬೇಕು ಎಂಬುದರ ಬಗ್ಗೆ ತಿಳಿಸಿ ಹೇಳುತ್ತಾರೆ. ಆ ರೀತಿ ರಾಜನೀತಿಯನ್ನು ಹೊಂದಿದ್ದಾರೆ. ನಮ್ಮ ನಾಯಕರು ಎಂದು ಹೊಗಳಿಕೆ ಮಾಡುವುದಿಲ್ಲ.

* ಮೋದಿ ಅವರು ಪ್ರಾದೇಶಿಕತೆಗಿಂತ ರಾಷ್ಟ್ರೀಯವಾದಕ್ಕೆ ಹೆಚ್ಚು ಒತ್ತು ನೀಡುತ್ತಾರೆ ಎಂಬ ಮಾತುಗಳಿವೆ. ಅದು ನಿಜನಾ?

ಇಲ್ಲ.. ಇಲ್ಲ.. ಹಾಗೇನು ಇಲ್ಲ. ಅವರಲ್ಲಿ ಒಂದು ಭಾವ ಇದೆ. ಅದು ರಾಷ್ಟ್ರೀಯತೆ ಶಬ್ದಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಅರ್ಥ ಇರಬೇಕು ಎಂಬುದು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇಡೀ ದೇಶ ಅಭಿವೃದ್ಧಿ ಎಂದರೆ ದೇಶದ ಎಲ್ಲಾ ರಾಜ್ಯಗಳು ಅಭಿವೃದ್ಧಿಯಾಗಬೇಕು. ಯಾವುದಾದರೂ ಸಣ್ಣ ರಾಜ್ಯಗಳು ಸಹ ಅಭಿವೃದ್ಧಿಯಾಗದಿದ್ದರೆ ದೇಶ ಅಭಿವೃದ್ಧಿಯಾಗಿದೆ ಎಂಬ ಅರ್ಥವಲ್ಲ. ದೇಶದ 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಲ್ಲವು ಅಭಿವೃದ್ಧಿಯಾಗಬೇಕು ಎಂಬ ದೊಡ್ಡ ಅಭಿಲಾಷೆ ಇಟ್ಟುಕೊಂಡಿದ್ದಾರೆ. ಬಿಜೆಪಿಯೇತರ ಸರ್ಕಾರ ಇರುವ ಕೇರಳ, ಪಶ್ಚಿಮ ಬಂಗಾಳ, ರಾಜಸ್ಥಾನ, ತಮಿಳುನಾಡು, ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯದಲ್ಲಿ ಅಭಿವೃದ್ಧಿಗೆ ಒತ್ತು ನೀಡುತ್ತಾರೆ. ರಾಜಕಾರಣದಲ್ಲಿ ರಾಜನೀತಿಗಳು ವ್ಯತ್ಯಾಸ ಇರಬಹುದು. 14ನೇ ಹಣಕಾಸು ಆಯೋಗದವರೆಗೆ ರಾಜ್ಯಗಳಿಗೆ ಶೇ.32ರಷ್ಟುಡೆವ್ಯೂಲಷನ್‌ ಫಂಡ್‌ ಇತ್ತು. ಇದು ಸರಿಯಲ್ಲ ಮತ್ತು ರಾಜ್ಯಕ್ಕೆ ಹೆಚ್ಚಿನ ಅಧಿಕಾರ ಇರಬೇಕು ಎಂಬ ಕಾರಣಕ್ಕಾಗಿ ಶೇ.42ರಷ್ಟುಡೆವ್ಯೂಲಷನ್‌ ಫಂಡ್‌ ಹೆಚ್ಚಳ ಮಾಡಲಾಗಿದೆ. ಕೊರೋನಾ ಸೋಂಕು ಹಬ್ಬಿದ ಬಳಿಕ ಅದನ್ನು ನಿಯಂತ್ರಿಸಲು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮುಕ್ತ ಅವಕಾಶ ನೀಡಲಾಗಿದೆ. ವಿಶೇಷವಾಗಿ ಬಿಜೆಪಿಯೇತರ ರಾಜ್ಯಗಳಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಹೆಚ್ಚಿನ ಅವಕಾಶ ನೀಡಲಾಗಿದೆ. ರಾಷ್ಟ್ರೀಯ ಹಿತದೃಷ್ಟಿಯನ್ನು ನೋಡುವಾಗ ಸ್ವಲ್ಪ ರಾಜ್ಯಗಳಿಗೆ ಸ್ವಲ್ಪ ವ್ಯತ್ಯಾಸ ಆಗಬಹುದು. ಆದರೆ, ಕೋಆಪರೇಟಿವ್‌ ಫೆಡರಲಿಸಂ ಎನ್ನುವ ಶಬ್ದಕ್ಕೆ ಅರ್ಥ ಬರುವಂತೆ ನಡೆದುಕೊಳ್ಳುತ್ತಿದ್ದಾರೆ.

* ರಾಜ್ಯಕ್ಕೆ ನೆರೆ ಪರಿಹಾರ ನೀಡುವಲ್ಲಿ ತಡವಾಯಿತು ಮತ್ತು ಆರಂಭದಲ್ಲಿ ರಾಜ್ಯಕ್ಕೆ ಪರಿಹಾರ ನೀಡುವಲ್ಲಿ ಕ್ಯಾರೆ ಎನ್ನಲಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು?

ನೆರೆ ಪರಿಹಾರ ವಿಚಾರದಲ್ಲಿ ಅತ್ಯಂತ ಹೆಚ್ಚು ಅನುದಾನ ಪಡೆದುಕೊಂಡವರು ನಾವು. ಮಹಾರಾಷ್ಟ್ರದಲ್ಲಿ ನಮ್ಮ ಪಕ್ಷದ ಆಡಳಿತ ಇದ್ದಾಗಲೂ ಅವರಿಗಿಂತ ನಮಗೆ ಹೆಚ್ಚು ಸಿಕ್ಕಿದೆ. ಪ್ರಾಥಮಿಕ ಹಂತದಲ್ಲಿ ಕೇಂದ್ರ ತಂಡಗಳು ಬಂದು ಪರಿಶೀಲನೆ ನಡೆಸುವ ವೇಳೆ ಸ್ವಲ್ಪ ಮಟ್ಟಿನ ಹಿನ್ನಡೆಯಾಗಿರಬಹುದು. ಕಾರಣ ಆಗ ರಕ್ಷಣೆ ಕಾರ್ಯ ನಡೆಯುತ್ತಿತ್ತು. ನಿರಾಶ್ರಿತರಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು. ನೆರೆ ನಿಂತ ಮೇಲೆ ಪುನರ್‌ ವಸತಿ, ಅಗತ್ಯ ಸೌಲಭ್ಯಗಳನ್ನು ಅನುಷ್ಠಾನ ಮಾಡಬೇಕಾಗಿರುತ್ತದೆ. ಪರಿಶೀಲನೆ ಬಳಿಕ ಅನುದಾನ ನೀಡಲಾಗುತ್ತದೆ. ಪ್ರಾರಂಭಿಕ ಹಂತದಲ್ಲಿ ಹಣ ನೀಡಿದರೆ ದುರುಪಯೋಗವಾಗುವ ಸಾಧ್ಯತೆ ಇದೆ ಎಂದು ಅನುದಾನ ನೀಡಿರಲಿಲ್ಲ. ನಂತರ ರಾಜ್ಯಕ್ಕೆ ಅಗತ್ಯ ಅನುದಾನ ನೀಡಲಾಗಿದೆ.

* ಜಿಎಸ್‌ಟಿ ಪರಿಹಾರ ವಿಚಾರದಲ್ಲಿ ರಾಜ್ಯಕ್ಕೆ ಕಡಿಮೆ ನೀಡಿರುವುದು ಮತ್ತು ಆ ಅನುದಾನ ನೀಡಿರುವುದರಲ್ಲಿ ವಿಳಂಬವಾಗಿದೆ ಎಂಬ ಆಪಾದನೆಯಿದೆ?

ಜಿಎಸ್‌ಟಿಯಲ್ಲಿ ಸಮಿತಿಯೊಂದು ಇದೆ. ಕೇಂದ್ರದ ಹಣಕಾಸು ಸಚಿವರು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಎಲ್ಲಾ ರಾಜ್ಯಗಳ ಹಣಕಾಸು ಸಚಿವರು ಸಮಿತಿಯ ಸದಸ್ಯರು ಆಗಿರುತ್ತಾರೆ. ಸಮಿತಿಯಲ್ಲಾಗುವ ತೀರ್ಮಾನದಂತೆ ಮುಂದಿನ ಹೆಜ್ಜೆ ಇಡಲಾಗುತ್ತದೆ. ಸಮಿತಿಯು ಸ್ವಾಯತ್ತ ಸಂಸ್ಥೆಯಾಗಿದೆ. ಕೇಂದ್ರ ಸರ್ಕಾರ ಅದರ ಮೇಲೆ ದಾಳಿ ಮಾಡಲಾಗುವುದಿಲ್ಲ. ಸಮಿತಿ ನೀಡುವ ಸಲಹೆಗಳ ಮೇಲೆ ನಡವಳಿಗಳು ನಡೆಯಲಿವೆ. ಜಿಎಸ್‌ಟಿ ಸಂಗ್ರಹವಾದ ಮೇಲೆ ಡೆವ್ಯೂಲೂಷನ್‌ ಮಾಡಲಾಗುತ್ತದೆ. ಇದರ ಜತೆಗೆ 15ನೇ ಹಣಕಾಸು ಆಯೋಗ ಅನುದಾನ ಹಂಚಿಕೆ ಮಾಡಲಿದ್ದು, ಜನಸಂಖ್ಯಾ ಆಧಾರದ ಮೇಲೆ ಹಂಚಿಕೆಯಾಗಲಿದೆ. ಕರ್ನಾಟಕ, ಕೇರಳ ರಾಜ್ಯದಲ್ಲಿ ಜನಸಂಖ್ಯೆ ಕಡಿಮೆ. ಎಲ್ಲೆಲ್ಲಿ ಕಡಿಮೆಯಾಗಿದೆಯೋ ಅಲ್ಲಿ ಶೇಕಡವಾರು ಕಡಿಮೆಯಾಗಿರುತ್ತದೆ.

* ಆದರೆ, ಅದನ್ನು ರಾಜ್ಯದ ಜನತೆಗೆ ತಿಳಿಸುವ ವಿಷಯದಲ್ಲಿ ಸರ್ಕಾರ ವಿಫಲವಾಗಿದೆ ಎನ್ನಿಸುತ್ತಿಲ್ಲವೇ?

ಆಯಾ ರಾಜ್ಯದ ಮುಖ್ಯಮಂತ್ರಿಗಳು ಬೇರೆ ಬೇರೆ ರೀತಿಯಲ್ಲಿ ಬಿಂಬಿಸುತ್ತಾರೆ. ರಾಜ್ಯದ ಹಿತಾಸಕ್ತಿಯಿಂದ ಹಲವು ಬಾರಿ ಹಲವು ವಿಚಾರಗಳನ್ನು ಉಲ್ಲೇಖ ಮಾಡಬೇಕಾಗುತ್ತದೆ. ರಾಜ್ಯದಿಂದ ಹಣಕಾಸು ಸಚಿವರಲ್ಲಿ ನಿಯೋಗವೊಂದನ್ನು ತೆಗೆದುಕೊಂಡು ಹೋಗಿ ರಾಜ್ಯಕ್ಕೆ ಬೇರೆಯೇ ಆದ ಜಿಎಸ್‌ಟಿ ಮೊತ್ತ ಕೇಳಿದ್ದೇವೆ. ಸುಮಾರು 4 ಸಾವಿರ ಕೋಟಿ ರು. ನಷ್ಟುರಾಜ್ಯಕ್ಕೆ ನೀಡಬೇಕು ಎಂದು ಮನವಿ ಮಾಡಲಾಗಿದೆ. ಸ್ವಲ್ಪ ವ್ಯತ್ಯಾಸವಾಗಿರಬಹುದು. ಇಲ್ಲ ಎನ್ನುತ್ತಿಲ್ಲ. ಅಲ್ಲದೇ, ತಡವಾಗಿರಲೂಬಹುದು. ರಾಜ್ಯಕ್ಕೆ ನೀಡುವಾಗ ಕೆಲವು ಸಮಸ್ಯೆಯಾಗಿರಬಹುದು. ಆದರೆ, ಆಯವುದೇ ಸಂದರ್ಭದಲ್ಲಿಯೂ ರಾಜ್ಯಕ್ಕೆ ಮೋದಿ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಮಾಡುವ ಮಾತಿಲ್ಲ. ದೇಶ ಅಭಿವೃದ್ಧಿಯಾಗಬೇಕಾದರೆ ಎಲ್ಲಾ ರಾಜ್ಯಗಳು ಬೆಳವಣಿಗೆಯಾಗಬೇಕು ಎಂಬ ಪರಿಕಲ್ಪನೆಯನ್ನಿಟ್ಟುಕೊಂಡು ಕಾರ್ಯ ನಿರ್ವಹಿಸಲಾಗುತ್ತಿದೆ. ಒಂದು ವೇಳೆ ಹಾಗೆ ಮಾಡುವುದಾದರೆ ಡೆವ್ಯೂಲಷನ್‌ ಫಂಡ್‌ ಶೇ.10ರಷ್ಟುಹೆಚ್ಚಳ ಮಾಡುವ ಅಗತ್ಯವೇ ಇರಲಿಲ್ಲ.

* ರಾಜ್ಯ ಬಿಜೆಪಿಯಿಂದ 25 ಸಂಸದರು ಆಯ್ಕೆಯಾಗಿರುವುದು ದಾಖಲೆ. ಮೂವರು ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಆದರೂ ರಾಜ್ಯಕ್ಕೆ ಸಿಗಬೇಕಾದ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂಬ ದೂರು ಇದೆಯಲ್ಲ?

ಎಲ್ಲವನ್ನು ಮೊದಲ ಹಂತದಲ್ಲಿಯೇ ಮಾಡಬೇಕು ಎಂಬುದು ಜನರ ನಿರೀಕ್ಷೆ ಸಾಮಾನ್ಯ. ಒಂದು ವೇಳೆ ಹಾಗೆ ಆಗಿದ್ದಿದ್ದರೆ ಅತೃಪ್ತಿ ಹೊರಹಾಕುವುದು ಸ್ವಾಭಾವಿಕ. ಪ್ರತಿಯೊಂದಕ್ಕೂ 25 ಸಂಸದರು ಇದ್ದಾರೆ ಎಂದು ಹೇಳುತ್ತಾರೆ. ರಾಜ್ಯಕ್ಕೆ ಏನು ಮಾಡಬೇಕೊ ಅದನ್ನು ಮಾಡುತ್ತಿದ್ದೇವೆ. ಮೈತ್ರಿ ಸರ್ಕಾರದ ವೇಳೆ ಡಿ.ಕೆ.ಶಿವಕುಮಾರ್‌ ಅವರು ಜಲಸಂಪನ್ಮೂಲ ಸಚಿವರಾಗಿದ್ದ ವೇಳೆ ಎಲ್ಲ ಸಂಸದರ ನಿಯೋಗ ಕರೆದುಕೊಂಡು ಹೋಗಿದ್ದೆ. ಅಲ್ಲದೇ, ಕೃಷ್ಣಬೈರೇಗೌಡ ಅವರು ಕೃಷಿ ಸಚಿವರಾಗಿದ್ದ ವೇಳೆಯಲ್ಲಿಯೂ ರಾಜ್ಯದ ಬೇಡಿಕೆ ಈಡೇರಿಸುವ ಸಂಬಂಧ ನಿಯೋಗ ಕರೆದೊಯ್ಯಲಾಗಿತ್ತು. ಕೆಲವು ಸಂದರ್ಭದಲ್ಲಿ ತಪ್ಪುಗಳು ಆಗಿರಬಹುದು. ಆದರೆ, ವಿಫಲವಾಗಿಲ್ಲ. ರಾಜ್ಯಕ್ಕೆ ಅನ್ಯಾಯವಾಗಿಲ್ಲ. ಮುಂದೆಯೂ ಅನ್ಯಾಯವಾಗಲು ಬಿಡುವುದಿಲ್ಲ.

Interview with Minister of Chemicals and Fertilizers dv sadananda gowda on PM Narendra Modi govt 2 completing year

* ಬಿಜೆಪಿಯ ಸಂಸದರಿಗೆ ಮೋದಿ ಮುಂದೆ ಹೋಗಿ ಮಾತನಾಡುವ ಧೈರ್ಯ ಇಲ್ಲ ಎಂದು ರಾಜ್ಯದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆಗಾಗ ಲೇವಡಿ ಮಾಡುತ್ತಾರೆ?

ನಾವು ಯಾವುದಕ್ಕೆ ಮಾತನಾಡಬೇಕೊ ಅದಕ್ಕೆ ಮಾತನಾಡುತ್ತೇವೆ. ಮೋದಿ ಅವರಿಗೆ ಬೇರೆಯ ಕೆಲಸವೂ ಇದೆ. ದಿನನಿತ್ಯ ರಾಜ್ಯದ ಬಗ್ಗೆಯೇ ನೋಡುವ ಕೆಲಸವಲ್ಲ. ಜಾಗತಿಕವಾಗಿ ಅತ್ಯಂತ ಪ್ರಭಾವಿ ನಾಯಕ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ಕೇಂದ್ರ ಸಚಿವ ಹರ್ಷವರ್ಧನ್‌ ಅವರು ನಿಯೋಜನೆಗೊಂಡಿದ್ದಾರೆ. ಇದು ಭಾರತದ ಪ್ರಾಮುಖ್ಯತೆ ತೋರಿಸುತ್ತದೆ. ಕೊರೋನಾ ವೇಳೆ ಇಡೀ ಜಗತ್ತಿನಲ್ಲಿ ಬಲಾಢ್ಯ ರಾಷ್ಟ್ರಗಳಿಗಿಂತ ಅರ್ಥಪೂರ್ಣವಾಗಿ ಭಾರತ ಕೆಲಸ ಮಾಡಿದೆ.

* ನಿಮ್ಮ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳೇನು?

ನನ್ನ ಇಲಾಖೆಯಲ್ಲಿ ಔಷಧ ವಿಚಾರದಲ್ಲಿ ಹಲವು ಸುಧಾರಣೆ ತರಲಾಗಿದೆ. ಹೈಡ್ರೋಕ್ಲೊರೋಫಿನ್‌ ಮಾತ್ರೆಗಳನ್ನು ಅಮೆರಿಕ, ಫ್ರಾನ್ಸ್‌, ಜರ್ಮನ್‌ ಸೇರಿದಂತೆ ಹಲವು ಬಲಿಷ್ಠ ರಾಷ್ಟ್ರಗಳಿಗೆ ರಫ್ತು ಮಾಡಲಾಗಿದೆ. ಇದರ ಬಗ್ಗೆ ಅಮೆರಿಕದ ಅಧ್ಯಕ್ಷರೇ ಹೇಳಿದ್ದಾರೆ. ಹೊಸ ವ್ಯವಸ್ಥೆಯ ಕಡೆಗೆ ಹೋಗುವುದರಲ್ಲಿ ಮುಂಚೂಣಿಯಲ್ಲಿದ್ದೇವೆ. ಎಪಿಐ ಮತ್ತು ಕೆಎಸ್‌ಎಂ ಎರಡನ್ನು ಭಾರತದಲ್ಲಿ ಉತ್ಪಾದಿಸಲು 5 ಅತ್ಯುತ್ತಮ ಫಾಮ್‌ರ್‍ ಪಾರ್ಕ್ ಮತ್ತು 5 ಮೆಡಿಕಲ್‌ ಡಿವೈಸ್‌ಗಳ ದೊಡ್ಡ ಪಾರ್ಕ್ ಅನ್ನು 14 ಸಾವಿರ ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುವುದು. ಈ ಹಿಂದೆ ಇಂತಹ ಕೆಲಸ ಮಾಡಿದ್ದಾರೆ ಚೀನಾದಿಂದ ಔಷಧಿಗಳಿಗಾಗಿ ಭಿಕ್ಷೆ ಬೇಡುವ ಅಗತ್ಯ ಇರಲಿಲ್ಲ. ನನ್ನ ಇಲಾಖೆಯಲ್ಲಿ ಶೇ.70ರಷ್ಟುದೇಶದಲ್ಲಿ ರಸಗೊಬ್ಬರ ಉತ್ಪನ್ನವಾಗುತ್ತಿದ್ದು, ಶೇ.30ರಷ್ಟುಆಮದು ಮಾಡಿಕೊಳ್ಳಲಾಗುತ್ತಿದೆ. ಪ್ರಧಾನಿಯವರು ಆಮದು ಮಾಡಲೇಬಾರದು ಎಂಬ ಅಭಿಪ್ರಾಯ ಹೊಂದಿದ್ದಾರೆ. ಯೂರಿಯಾ ಸರಿಯಾಗಿ ಸದ್ಬಳಕೆಯಾಗುತ್ತಿರಲಿಲ್ಲ. ಅದರ ಸದ್ಬಳಕೆಗಾಗಿ ಹಿಂದೆ ಸಚಿವರಾಗಿದ್ದ ಅನಂತಕುಮಾರ್‌ ಅವರ ಪ್ರಯತ್ನದಿಂದ ಬೇವಿನ ಲೇಪನ ಮಾಡಲಾಯಿತು. ಈಗ ನಾನು ಡ್ಯಾಶ್‌ ಕೋಡ್‌ ಮಾಡಿದ್ದೇನೆ. ಇದರಿಂದ ಯಾವ ಕಾರ್ಖಾನೆಯಲ್ಲಿ ಎಷ್ಟುಯೂರಿಯಾ ಉತ್ಪನ್ನವಾಗುತ್ತಿದೆ? ಯಾವ ರೈಲಿನಲ್ಲಿ ಯಾವ ಯೂರಿಯಾ ಹೋಗುತ್ತದೆ? ಯಾವ ರಾಜ್ಯದಲ್ಲಿ ಎಷ್ಟುಸಂಗ್ರಹ ಇದೆ ಎಂಬುದೆಲ್ಲವನ್ನೂ ಪಾರದರ್ಶಕವಾಗಿ ಮತ್ತು ಕುಳಿತಲ್ಲಿಯೇ ಮಾಹಿತಿ ಪಡೆಯಬಹುದಾಗಿದೆ.

* ಲಾಕ್‌ಡೌನ್‌ನಿಂದ ತೀವ್ರ ನಷ್ಟವಾಗಿರುವ ಹಿನ್ನೆಲೆಯಲ್ಲಿ ಕೇಂದ್ರವು ಘೋಷಿಸಿರುವ 20 ಲಕ್ಷ ಕೋಟಿ ರು.ಗಳ ಪ್ಯಾಕೇಜ್‌ ಒಂದು ಸುಳ್ಳಿನ ಕಂತೆ, ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗಲಿದೆ ಎಂದು ಪ್ರತಿಪಕ್ಷಗಳ ಮುಖಂಡರು ಆರೋಪಿಸಿದ್ದಾರೆ?

ಅವರಿಗೆ ದುಡ್ಡು ಯಾವಾಗ ಬರುತ್ತದೆ, ಒಂದಷ್ಟುಕೊಳ್ಳೆ ಹೊಡೆಯಬೇಕು ಎಂದು ಕಾಯುತ್ತಿರುತ್ತಾರೆ. ಆದರೆ, ಎಂಎಸ್‌ಎಂಇಗಳು ತುಂಬಾ ಸಂತಸ ವ್ಯಕ್ತಪಡಿಸಿವೆ. ಯಾವುದೇ ಬ್ಯಾಂಕ್‌ಗೆ ಹೋದರು ಎಂಎಸ್‌ಎಂಇಗೆ ಅಗತ್ಯ ನೆರವು ಲಭಿಸುತ್ತದೆ. ಅಗತ್ಯ ಅನುದಾನ ನೀಡಿ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೇರಳ ರಾಜ್ಯದ ಜತೆಗೆ ನನಗೆ ಕೈಗಾರಿಕೆ ಕ್ಷೇತ್ರದ ಹೊಣೆಗಾರಿಕೆ ನೀಡಲಾಗಿದೆ. ಪಂಜಾಬ್‌ ರಾಜ್ಯದ ಕೈಗಾರಿಕೆ ಸಚಿವರನ್ನು ಹೊರತುಪಡಿಸಿದರೆ ಇನ್ನುಳಿದ ಎಲ್ಲಾ ರಾಜ್ಯಗಳ ಕೈಗಾರಿಕೆ ಸಚಿವರೊಂದಿಗೆ ಮೂರು ಬಾರಿ ಸಭೆ ನಡೆಸಿದ್ದೇನೆ. ಎಲ್ಲ ಸಚಿವರು, ಎಂಎಸ್‌ಎಸ್‌ಇಗಳು ಸಂತಸ ವ್ಯಕ್ತಪಡಿಸಿರುವ ಬಗ್ಗೆ ತಿಳಿಸಿದ್ದಾರೆ. ಮತ್ತಷ್ಟುವೇಗ ನೀಡುವಂತೆ ಸಲಹೆ ನೀಡಿದ್ದಾರೆ.

Latest Videos
Follow Us:
Download App:
  • android
  • ios