ಕೊರೋನಾದಂಥ ಸಂದಿಗ್ಧ ಸಮಯದಲ್ಲೂ ಮೋದಿ ಅವರ ಜನಪ್ರಿಯತೆ ಹೆಚ್ಚಾಗಿದೆ. ಮುಂದಿನ 4 ವರ್ಷವೂ ಅವರ ಪಾಲಿಗೆ ಸವಾಲಿನದ್ದೇ. ಆದರೆ ಮೋದಿ ಕೈಚೆಲ್ಲುವಂಥವರಲ್ಲ. ಅವರು ಸಮರ್ಥ ನಾಯಕನಂತೆ ಪ್ರತಿಕ್ಷಣವೂ ಕದನಕ್ಕೆ ಸಿದ್ಧರಾಗಿ ನಿಲ್ಲುತ್ತಾರೆ, ಗೆದ್ದು ಬರುತ್ತಾರೆ. ಅವರ ಗೆಲುವಿನ ವಿಶ್ವಾಸವೇ ಭಾರತವನ್ನು ಅನೇಕರ ಪಾಲಿಗೆ ಜೀವಂತವಾಗಿರಿಸಿದೆ ಎನ್ನುತ್ತಾರೆ ವಾಗ್ಮಿ, ಚಿಂತಕ ಚಕ್ರವರ್ತಿ ಸೂಲಿಬೆಲೆ.

ಆ ದಿನಗಳನ್ನು ಮರೆಯೋದು ಸಾಧ್ಯವೇ ಇಲ್ಲ. ಗುಜರಾತಿನ ಮುಖ್ಯಮಂತ್ರಿ ಭಾಜಪದ ಪ್ರಧಾನಮಂತ್ರಿ ಅಭ್ಯರ್ಥಿಯಾಗುತ್ತಾರೆ ಎಂಬ ಗಾಳಿಸುದ್ದಿಯೇ ಮಿಂಚಿನ ಸಂಚಾರ ಉಂಟುಮಾಡಿತ್ತು. ಗೋಧ್ರಾ ದುರಂತದ ನಂತರ ಅವರ ಹೆಸರನ್ನು ಹಾಳುಮಾಡಲು ಪ್ರಯತ್ನಿಸಿದಷ್ಟೂಆ ಮನುಷ್ಯ ಅಗಾಧವಾಗಿ ಬೆಳೆದು ನಿಲ್ಲುತ್ತಲೇ ಹೋಗಿದ್ದ. ಮಾನವ ಮಾನಸಿಕತೆಯೇ ಹಾಗೆ. ಯಾರಾದರೂ ತುಂಬ ಹೊಗಳುತ್ತಿದ್ದರೆ ಈತ ದ್ವೇಷಿಸುತ್ತಾನೆ, ವ್ಯವಸ್ಥಿತವಾಗಿ ತೆಗಳುತ್ತಿದ್ದರೆ ಬಲವಾಗಿ ಜೊತೆಗೆ ನಿಂತುಬಿಡುತ್ತಾನೆ. ತೆಗಳುವವರೆಲ್ಲಾ ನರೇಂದ್ರ ಮೋದಿಯವರಿಗೆ ರಾಜಮಾರ್ಗವನ್ನೇ ನಿರ್ಮಿಸಿಕೊಟ್ಟಿದ್ದರು. ಅಂದಿನ ಪರಿಸ್ಥಿತಿಯೂ ಹಾಗೇ ಇತ್ತು. ಭಾಜಪದ ಅಭ್ಯರ್ಥಿ ಅಡ್ವಾಣಿಯಾಗುತ್ತಾರೆಂದು ಮುಂಚೆಯೇ ನಿರ್ಧರಿಸಿದ್ದ ಕಾಂಗ್ರೆಸ್‌, ಪ್ರಣಬ್‌ ಮುಖರ್ಜಿಯಿಂದ ರಾಹುಲ್‌ಗೆ ತೊಂದರೆಯಾಗಬಾರದೆಂದು ಅವರನ್ನು ರಾಷ್ಟ್ರಪತಿ ಪದವಿಗೇರಿಸಿಬಿಟ್ಟಿತ್ತು.

ಸಾಕಾಗಿತ್ತು ಕುಟುಂಬ ರಾಜಕಾರಣ

ಕಾಂಗ್ರೆಸ್ಸಿನ ಹತ್ತು ವರ್ಷಗಳ ಆಳ್ವಿಕೆಯಲ್ಲಿ ಭ್ರಷ್ಟಾಚಾರದ ತೀವ್ರತೆ ಎಷ್ಟಿತ್ತೆಂದರೆ ಜನ ಬೇಸತ್ತು ಸಮರ್ಥ ನಿರ್ಣಯಗಳನ್ನು ತೆಗೆದುಕೊಳ್ಳಬಲ್ಲ ನಾಯಕನಿಗಾಗಿ ಅರಸುತ್ತಲಿದ್ದರು. ಸ್ವತಃ ಕಾಂಗ್ರೆಸ್‌ ಕುಟುಂಬ ರಾಜಕಾರಣದ ಕಪಿಮುಷ್ಟಿಗೆ ಸಿಲುಕಿ ಕಾರ್ಯಕರ್ತರ ಮಟ್ಟದಲ್ಲಿ ಬೇಗುದಿ ಕಣ್ಣಿಗೆ ಕಾಣದಂತೆ ಹರಡುತ್ತಲಿತ್ತು. ಇನ್ನು ಎಲ್ಲಕ್ಕೂ ಕಿರೀಟಪ್ರಾಯವಾಗಿ ಹಿಂದುಗಳನ್ನು ತುಚ್ಛೀಕರಿಸಿ ಮುಸಲ್ಮಾನರನ್ನು ಓಲೈಸುವ ಕಾಂಗ್ರೆಸ್ಸಿನ ರಾಜಕಾರಣ ಬಹುಸಂಖ್ಯಾತರಿಗೆ ಸಾಕು ಸಾಕೆನಿಸಿಬಿಟ್ಟಿತ್ತು. ಸರಿಯಾದ ಸಮಯಕ್ಕೆ ಮೋದಿ ಕಣ್ಣೆದುರಿಗೆ ಕಂಡರು. ಗುಜರಾತಿನಲ್ಲಿ ತಾವು ಮಾಡಿದ ಕೆಲಸವನ್ನು ದೇಶದೆದುರು ಸಮರ್ಥವಾಗಿ ಬಿಂಬಿಸಿದ್ದಲ್ಲದೇ ಸ್ವತಃ ಕೇಂದ್ರ ಸರ್ಕಾರದಿಂದಲೂ ಅಭಿನಂದನೆಗೆ ಪಾತ್ರರಾದರು. ಅಲ್ಲಿಗೆ ಸ್ವತಃ ಕಾಂಗ್ರೆಸ್‌ ತನ್ನ ಚರಮಗೀತೆಗೆ ಪಲ್ಲವಿಯನ್ನು ಹಾಡಿತ್ತು! ಮೊದಲ ಅವಧಿಯಲ್ಲಿ ಮೋದಿ ಪೂರ್ಣಪ್ರಮಾಣದ ಗೆಲುವು ಸಂಪಾದಿಸುತ್ತಾರೆಂದು ಭಾವಿಸುವುದು ಸಾಧ್ಯವೇ ಇರಲಿಲ್ಲ. ಅವರ ವ್ಯಕ್ತಿತ್ವಕ್ಕೆ, ಕರ್ತೃತ್ವಕ್ಕೆ, ಚರಿಷ್ಮಾಕ್ಕೆ ರಾಹುಲ್‌ ಯಾವ ದಿಕ್ಕಿನಿಂದ ಸಾಟಿಯಲ್ಲವೆಂದು ಗೊತ್ತಿದ್ದಾಗ್ಯೂ, ಮೋದಿ ಪೂರ್ಣ ಬಹುಮತ ಪಡೆದರೆ ದೇಶಬಿಟ್ಟು ಹೋಗುತ್ತೇನೆಂದು ದೇವೇಗೌಡರೇ ಹೇಳಿಕೆ ಕೊಟ್ಟುಬಿಟ್ಟಿದ್ದರು. ಮಾತಿಗೆ ತಕ್ಕಂತೆ ನಡೆದುಕೊಳ್ಳುವ ರೂಢಿ ಅವರಿಗಿಲ್ಲ ಎಂಬ ಕಾರಣಕ್ಕೆ ಇಂದೂ ಅವರು ಜೆಡಿಎಸ್‌ನ ಮುಖವಾಣಿಯಾಗಿ ನಿಂತಿದ್ದಾರೆ ಎಂಬುದನ್ನು ನಾವು ಮರೆಯುವಂತಿಲ್ಲ!

70 ವರ್ಷಗಳಿಂದ ಕಾದಿದ್ದರು

ಇರಲಿ, ಮೊದಲೈದು ವರ್ಷ ಮೋದಿ ತಮ್ಮನ್ನು ತಾವು ಜಾಗತಿಕ ನಾಯಕನಂತೆ ಬಿಂಬಿಸಿಕೊಂಡರು. ಜಗತ್ತಿನ ಅನೇಕ ರಾಷ್ಟ್ರಗಳಿಗೆ ಭಾರತದ ಸಾಂಸ್ಕೃತಿಕ ರಾಯಭಾರಿಯಂತೆ ಕಂಡುಬಂದರು. ಬೇರೆ-ಬೇರೆ ರಾಷ್ಟ್ರಗಳಲ್ಲಿರುವ ಭಾರತೀಯರನ್ನು ಇಲ್ಲಿನ ಇಡುಗಂಟೆಂಬಂತೆ ನೋಡಿದರಲ್ಲದೆ, ಆಯಾ ರಾಷ್ಟ್ರಗಳ ನಾಯಕರು ಏಕತ್ರಗೊಂಡ ಆ ಸಂಖ್ಯೆಯನ್ನು ಕಂಡು ಬೆಚ್ಚಿಬೀಳುವಂತೆ ನೋಡಿಕೊಂಡರು. ಡೇವಿಡ್‌ ಕ್ಯಾಮರೂನ್‌ನಿಂದ ಹಿಡಿದು ಡೊನಾಲ್ಡ್‌ ಟ್ರಂಪ್‌ವರೆಗೆ ಎಲ್ಲರೂ ಮೂಕವಿಸ್ಮಿತರೇ! ಅನೇಕ ಮುಸಲ್ಮಾನ್‌ ರಾಷ್ಟ್ರಗಳು ಭಾರತೀಯರ ಈ ಒಗ್ಗಟ್ಟನ್ನು ಕಂಡು ಬೆಚ್ಚಿಬಿದ್ದಿದ್ದಿದೆ. ಯೋಗವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಮೋದಿ ಕೊಂಡೊಯ್ದಾಗ ಪ್ರತಿಯೊಬ್ಬ ಭಾರತೀಯನೂ ಎದೆಯುಬ್ಬಿಸಿಕೊಂಡು ಬೀಗಿದ್ದ. ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಭಾರತವೇ ನಾಯಕತ್ವ ವಹಿಸಬೇಕೆಂದು ಜಗತ್ತು ಕೇಳಿಕೊಂಡಾಗಲೂ ನಮಗೆ ಹೆಮ್ಮೆ ಎನಿಸಿತ್ತು. ಸರ್ಜಿಕಲ್‌ ಸ್ಟೆ್ರೖಕ್‌, ಏರ್‌ಸ್ಟೆ್ರೖಕ್‌ಗಳು ಮುಲಾಜು ನೋಡುವ ರಾಷ್ಟ್ರವಲ್ಲ ಭಾರತ ಎಂಬುದನ್ನು ಜಗತ್ತಿನ ಮುಂದೆ ಸಾಬೀತುಪಡಿಸಿತ್ತು. ಯಾವುದಕ್ಕಾಗಿ 70 ವರ್ಷಗಳಿಂದ ಹಾತೊರೆದಿದ್ದೆವೋ ಮೋದಿ ಅದನ್ನು ಮೊದಲ ಅವಧಿಯ ಕಾಲಘಟ್ಟದಲ್ಲಿ ಮಾಡಿತೋರಿಸಿದ್ದರು.

ಮಂಕು ಬಡಿದಿತ್ತವರಿಗೆ

ಆಗ ತಾನೇ ಹತ್ತು ವರ್ಷಗಳ ಕಾಲ ನಿರ್ಣಯ ತೆಗೆದುಕೊಳ್ಳಲಾಗದೆ 10 ಜನಪಥ್‌ನತ್ತ ದೃಷ್ಟಿಹಾಕಿ ಕುಳಿತಿರುತ್ತಿದ್ದ ಮನಮೋಹನ್‌ ಸಿಂಗರನ್ನು ಭಾರತ ಕಂಡಿತ್ತು. ಈಗ ನೋಟ್‌ ಬ್ಯಾನಿನಂತಹ ಕಠಿಣ ನಿರ್ಣಯಗಳನ್ನೂ ಧೈರ್ಯವಾಗಿ ತೆಗೆದುಕೊಳ್ಳುವ ನಾಯಕನನ್ನು ಕಂಡು ಭಾರತ ನಿಸ್ಸಂಶಯವಾಗಿ ಬೀಗಿತ್ತು. ಐದು ವರ್ಷಗಳ ಅವಧಿ ಮುಗಿಸಿ ಮೋದಿ ಚುನಾವಣೆಗೆ ಹೊರಟಾಗ ಅತ್ತ ಆಂಧ್ರವೋ, ತೆಲಂಗಾಣವೋ ಅಥವಾ ಒರಿಸ್ಸಾವೋ ಸರ್ಕಾರವನ್ನು ನಿಯಂತ್ರಿಸುವ ಮಟ್ಟಿಗೆ ಬೆಳೆದಿರುತ್ತವೆ ಮತ್ತು ಪೂರ್ಣ ಬಹುಮತ ಮೋದಿಯವರಿಗೆ ಸಿಗುವುದು ಸಾಧ್ಯವೇ ಇಲ್ಲ ಎಂದು ಚುನಾವಣಾ ಪಂಡಿತರೂ ಲೆಕ್ಕಹಾಕುತ್ತಲೇ ಇದ್ದರು. ಮೋದಿ ಯಾರೂ ಊಹಿಸದ ರೀತಿಯಲ್ಲಿ 300ರ ಗಡಿಯನ್ನು ದಾಟಿ ಮೊದಲನೇ ಅವಧಿಗಿಂತಲೂ ಹೆಚ್ಚು ಸ್ಥಾನಗಳೊಂದಿಗೆ ಜಯಶಾಲಿಯಾಗಿದ್ದರು, ಅದೂ ಪ್ರತಿಪಕ್ಷಗಳೆಲ್ಲಾ ಒಗ್ಗಟ್ಟಾಗಿರುವಾಗ! ಅನೇಕ ಬುದ್ಧಿಜೀವಿಗಳಿಗೆ, ಎಡಪಂಥೀಯ ಚಿಂತಕರಿಗೆ, ಜೀವಪರ ಕಾಳಜಿಯನ್ನು ಹೊತ್ತು ಹೃದಯವಿದ್ರಾವಕವಾಗಿ ಮಾತನಾಡುತ್ತಿದ್ದವರಿಗೆಲ್ಲಾ ಮಂಕು ಬಡಿದುಹೋಗಿತ್ತು. ಕರ್ನಾಟಕದಲ್ಲಿ 25 ಸ್ಥಾನಗಳಿಸಿದ್ದು ನಿಸ್ಸಂಶಯವಾಗಿ ಪ್ರತಿಪಕ್ಷಗಳಿಗೆ ಎಚ್ಚರಿಕೆಯ ಗಂಟೆಯೇ. ಇವೆಲ್ಲಕ್ಕೂ ನಿನ್ನೆಗೆ ಒಂದು ವರ್ಷ ತುಂಬಿತು!

ಮೋದಿ ಶಿಸ್ತಿನ ಪ್ರತಿರೂಪ

ಈ 365 ದಿವಸಗಳಲ್ಲಿ ಮೋದಿ ತಮ್ಮನ್ನು ತಾವು ಸಮಾಜದ ಮುಂದೆ ಪ್ರಬಲ ನಾಯಕನಾಗಿ ಮರುಸ್ಥಾಪಿಸಿಕೊಂಡಿದ್ದಾರೆ. ಸಮರ್ಥ ನಾಯಕನೊಬ್ಬನಲ್ಲಿ ಇರಬೇಕಾದ ಗುಣಗಳೆಂದು ಯಾವುದನ್ನು ಹೇಳಲಾಗುತ್ತದೆಯೋ ಮೋದಿ ಅವೆಲ್ಲವನ್ನೂ ಹಂತ-ಹಂತವಾಗಿ ಆತ್ಮಸಾಥ್‌ಗೊಳಿಸಿಕೊಂಡಿದ್ದಾರೆ. ಸುನ್‌ ಜು ತನ್ನ ‘ಆರ್ಟ್‌ ಆಫ್‌ ವಾರ್‌’ನಲ್ಲಿ ಒಬ್ಬ ಸೇನಾ ನಾಯಕನಿಗಿರಬೇಕಾದ ಅನೇಕ ಲಕ್ಷಣಗಳಲ್ಲಿ ಶಿಸ್ತು ಮೊದಲನೆಯದ್ದು ಎನ್ನುತ್ತಾನೆ. ಮೋದಿ ಶಿಸ್ತಿನ ಪ್ರತಿರೂಪ. ಬೆಳಗಿನ ಯೋಗದಿಂದ ಹಿಡಿದು ಕಚೇರಿಯ ಕಾರ್ಯದವರೆಗೂ ಪ್ರತಿಯೊಂದರಲ್ಲೂ ಶಿಸ್ತು ಮೀರುವುದೇ ಇಲ್ಲ. ಅವರು ಹಾಕುವ ಬಟ್ಟೆಯ ಕುರಿತಂತೆಯೂ ಮೋದಿ ತೋರುವ ಎಚ್ಚರಿಕೆ ಇದೆಯಲ್ಲಾ ಅಭೂತಪೂರ್ವ. ಕೆಲವೊಮ್ಮೆ ಅದನ್ನು ಸೂಕ್ಷ್ಮವಾಗಿ ಗಮನಿಸಿದವರು ಮಾತ್ರ ಅರಿಯಬಲ್ಲರು. ಮೊನ್ನೆ ಪಶ್ಚಿಮ ಬಂಗಾಳಕ್ಕೆ ಹೋಗಿದ್ದರಲ್ಲಾ, ಅಂದು ಮೋದಿಯ ಹೆಗಲ ಮೇಲಿದ್ದ ಶಲ್ಯವನ್ನು ಗಮ್ಚಾ ಎನ್ನುತ್ತಾರೆ. ಈಶಾನ್ಯ ರಾಜ್ಯಗಳ ಸಂಸ್ಕೃತಿಯ ಪ್ರತೀಕ ಅದು. ಅತ್ತ ಹೋಗುವಾಗ ಮೋದಿ ಈ ಕುರಿತಂತೆ ಎಚ್ಚರಿಕೆ ವಹಿಸುವುದಿದೆಯಲ್ಲ ಬೇರೆ ಯಾವ ರಾಜಕಾರಣಿಗಳಲ್ಲಾದರೂ ಇದನ್ನು ಕಂಡಿದ್ದಿದೆಯೇನು? ತಮ್ಮ ಪ್ರತಿ ನಡೆ-ನುಡಿಯಲ್ಲೂ ಅರ್ಥ ಹೊಮ್ಮುವಂತೆ ನೋಡಿಕೊಳ್ಳುವ ಅಪರೂಪದ ಶಿಸ್ತು ಅವರದ್ದು. ಸುನ್‌ ಜು ತನ್ನ ಜೊತೆಯಲ್ಲಿರುವ ಜನರನ್ನು ಸರಿಯಾಗಿ ಸಂಭಾಳಿಸಬಲ್ಲವನು ಸಮರ್ಥ ನಾಯಕನೆನಿಸಿಕೊಳ್ಳುತ್ತಾನೆ ಎಂದು ಹೇಳುತ್ತಾನೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಕಡಿಮೆ ಸಂಖ್ಯೆಯ ಜನರನ್ನು ಸೂಕ್ತವಾಗಿ ನಿಭಾಯಿಸಿದವ, ಹೆಚ್ಚು ಜನರನ್ನು ಆರಾಮಾಗಿ ನಿಭಾಯಿಸುತ್ತಾನೆ.

'ನಮೋ ಪ್ರಧಾನಮಂತ್ರಿ ಆಗಿರೋದು ಅವರ ಪುಣ್ಯವಲ್ಲ, ಭಾರತದ ಪುಣ್ಯ'

ಮೋದಿ ಕಾರ‍್ಯಶೈಲಿಯೇ ಅನನ್ಯ

ಸಂಘಟನೆ ಕಲಿಸುವ ಪಾಠ ಇದು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೆಳಸ್ತರದಿಂದ ಬಂದಂತಹ ಮೋದಿ, ಪ್ರಧಾನಮಂತ್ರಿ ಕಚೇರಿಯನ್ನು ಹೇಗೆ ದುಡಿಸಿಕೊಂಡಿದ್ದಾರೆಂದರೆ ಪ್ರಧಾನಮಂತ್ರಿಗೊಂದು ಪತ್ರವನ್ನು ಕರ್ನಾಟಕದ ಹಳ್ಳಿಯ ಹೆಣ್ಣುಮಗುವೊಂದು ಬರೆದರೆ ಅದಕ್ಕೆ ದೆಹಲಿಯ ಈ ಕಚೇರಿ ತಕ್ಷಣ ಮತ್ತು ಸೂಕ್ತವಾಗಿ ಪ್ರತಿಸ್ಪಂದಿಸುತ್ತದೆ. ನಮ್ಮ ಮಂತ್ರಿಗಳಿಗೆ ಪತ್ರವಿರಲಿ, ಖುದ್ದು ಭೇಟಿ ಮಾಡಿದರೂ ಅವರಿಂದ ಪ್ರತಿಕ್ರಿಯೆ ನಿರೀಕ್ಷಿಸುವುದು ಸಾಧ್ಯವಿಲ್ಲ. ಅಧಿಕಾರಿಗಳನ್ನು ಮತ್ತು ಸಹೋದ್ಯೋಗಿಗಳನ್ನು ಮೋದಿ ದುಡಿಸಿಕೊಳ್ಳುವ ಶೈಲಿ ಅನನ್ಯವಾದ್ದು. ಆರ್ಟ್‌ ಆಫ್‌ ವಾರ್‌ ಹೇಳುತ್ತದೆ, ‘ಶತ್ರು ತಯಾರಾಗುವ ಮುನ್ನವೇ ತಾನು ಸಿದ್ಧನಾಗಿ ಯುದ್ಧಕ್ಕೆ ಹೊರಡುವವ ಗೆದ್ದುಬಿಡುತ್ತಾನೆ’ ಅಂತ. ಈ ದೃಷ್ಟಿಯಿಂದ ನೋಡುವುದಾದರೆ, ಮೋದಿ ಸರ್ವದಾ ಸನ್ನದ್ಧ. ಕಳೆದ ಒಂದು ವರ್ಷದಲ್ಲಿ ಅವರು ಮಾಡಿರುವ ಕೆಲಸಗಳನ್ನು ಒಮ್ಮೆ ಕಣ್ಣಾಡಿಸಿ ನೋಡಿ. ದೇಶ ಊಹಿಸುವ ಮುನ್ನವೇ ಆ ಕೆಲಸವನ್ನು ಮಾಡಿ ಮುಗಿಸಿರುವ ಸಾಧನೆ ಅವರದ್ದು. ತ್ರಿವಳಿ ತಲಾಖ್‌ ಅನ್ನು ಚರ್ಚೆಗೆ ಬಿಟ್ಟು ಇನ್ನು ಅದರಲ್ಲಿ ಸತ್ವವುಳಿದಿಲ್ಲವೆನಿಸಿದಾಗ ಅದನ್ನು ಕಿತ್ತು ಬಿಸಾಡಲಾಯ್ತು. ಕಾಶ್ಮೀರದಿಂದ 370ನೇ ವಿಧಿ ತೆಗೆಯಿರಿ ನೋಡೋಣ ಎಂದು ಧಿಮಾಕು ಕೊಚ್ಚುತ್ತಿದ್ದವರೆಲ್ಲಾ ಮುಂದೇನೆಂದು ಅರಿಯುವ ಮುನ್ನವೇ ಕಿತ್ತು ಬಿಸಾಡಿಬಿಟ್ಟರಲ್ಲಾ, ಊಹಿಸಲೂ ಸಾಧ್ಯವಾಗದು. ಶತ್ರುಗಳು ಅದನ್ನು ವಿರೋಧಿಸಿ ದೇಶವನ್ನು ದಂಗೆಯತ್ತ ತಳ್ಳಲು ತಯಾರಾಗುವ ಮುನ್ನವೇ ಆ ವಿಧಿಯನ್ನು ರದ್ದುಪಡಿಸಿದ್ದು ಐತಿಹಾಸಿಕ ಸಂಗತಿ! ಈ ನಿರ್ಣಯ ಕೈಗೊಳ್ಳುವಾಗ ಕಾಪಾಡಿಕೊಂಡ ಗೌಪ್ಯತೆ ಇಂದಿನ ದಿನಗಳಲ್ಲಿ ನಿಜಕ್ಕೂ ಊಹಿಸಲಸಾಧ್ಯವಾದದ್ದು. ಸುನ್‌ ಜು ಸ್ಪಷ್ಟವಾದ ದನಿಯಲ್ಲಿ ಹೇಳುತ್ತಾನೆ, ಸಮರ್ಥ ನಾಯಕ ಲಾಭ-ನಷ್ಟಗಳ್ನು ಅಳೆದು, ತೂಗಿ ಯೋಜನೆಗಳನ್ನು ರೂಪಿಸುತ್ತಾನೆ. ಮೋದಿಯವರು ಯಾವುದನ್ನೂ ಎರಡು ವರ್ಷದ ಗಳಿಕೆಗೋ, ಚುನಾವಣೆಯ ಲಾಭಕ್ಕೋ ಮಾಡಿದ್ದಿಲ್ಲ. ಸುದೀರ್ಘವಾಗಿ ಭಾರತಕ್ಕೆ ಉಪಯೋಗವಾಗಬಲ್ಲ ಯೋಜನೆಗಳನ್ನೇ ಜಾರಿಗೆ ತಂದಿರೋದು. ಮಧ್ಯವರ್ತಿಗಳ ಕಾಟ ತಪ್ಪಿಸಿ ಫಲಾನುಭವಿಗಳಿಗೆ ನೇರ ಹಣ ತಲುಪಿಸುವ ಅವರ ಯೋಜನೆಯಿಂದಾಗಿ ಕೊರೋನಾ ಹೊತ್ತಿನಲ್ಲೂ ಕೋಟ್ಯಂತರ ಜನರಿಗೆ ಸಮರ್ಪಕವಾಗಿ ಹಣ ತಲುಪಿಸಲು ಸಾಧ್ಯವಾಯ್ತು. ಹಣದುಬ್ಬರವನ್ನು ನಿಯಂತ್ರಿಸುವಲ್ಲಿ ಐದು ವರ್ಷಗಳಲ್ಲಿ ಮಾಡಿದ ಪ್ರಯತ್ನದಿಂದಾಗಿ ಈಗಲೂ ಜನ ಧಾನ್ಯ ಕೊಳ್ಳುವಲ್ಲಿ ಸಮಸ್ಯೆ ಕಾಣದಂತಾಯ್ತು. ಆರ್ಥಿಕ ಶಿಸ್ತು ಕಾಯ್ದುಕೊಂಡು ವಿದೇಶಿ ವಿನಿಮಯವನ್ನು ಉಳಿಸಿದುದರ ಪರಿಣಾಮವಾಗಿ ನಿರ್ದಾಕ್ಷಿಣ್ಯವಾದ ಕೆಲವು ನಿರ್ಣಯಗಳನ್ನು ಕೈಗೊಳ್ಳಲು ಈ ಕಠಿಣ ಪರಿಸ್ಥಿತಿಯಲ್ಲಿ ಅವಕಾಶ ದೊರೆಯಿತು. ಅನೇಕ ಬಾರಿ ಅವರ ಯೋಜನೆಗಳು ಆ ಹೊತ್ತಿನಲ್ಲಿ ಲಾಭದಾಯಕವೆನಿಸುವುದಿಲ್ಲ. ಆದರೆ ದೇಶದ ಒಟ್ಟಾರೆ ಬೆಳವಣಿಗೆಗೆ ಕಾಲಕ್ರಮದಲ್ಲಿ ಅದು ಅತ್ಯಗತ್ಯವೆನಿಸುತ್ತದೆ. ಮೋದಿಯ ಚಟುವಟಿಕೆಗಳು ಈಗ ಫಲ ಕೊಡುತ್ತಿರುವುದನ್ನು ನೋಡಿದಾಗ ಅದು ಖಾತ್ರಿಯಾಗುತ್ತಿದೆ ಅಷ್ಟೇ.

ಮೋದಿ ಗಳಿಸಿದ ವಿಶ್ವಾಸ

ಶ್ರೇಷ್ಠ ನಾಯಕ ಜನರ ಹೃದಯಗಳನ್ನು ತಟ್ಟುತ್ತಾನೆಂಬುದು ಚಾಣಕ್ಯನಿಂದ ಹಿಡಿದು ಸುನ್‌ ಜು ವರೆಗೆ ಎಲ್ಲರೂ ಒಪ್ಪುತ್ತಾರೆ. ತನ್ನ ಪ್ರಜೆಗಳೊಂದಿಗೆ ನ್ಯಾಯ-ಧರ್ಮ ಸಹಿತವಾಗಿ ಸೌಜನ್ಯಯುತವಾಗಿ ನಡೆದುಕೊಂಡವನು ಮತ್ತು ಅವರಲ್ಲಿ ಪೂರ್ಣ ವಿಶ್ವಾಸವನ್ನಿಟ್ಟವನು ಸದಾ ಗೆಲ್ಲುತ್ತಾನೆ ಎಂಬುದಕ್ಕೆ ಮೋದಿ ಸಮರ್ಥ ಉದಾಹರಣೆ. ಹಳೆಯದ್ದನ್ನೆಲ್ಲಾ ಬಿಡಿ, ಕೊರೋನಾ ಭಾರತಕ್ಕೆ ಅಪ್ಪಳಿಸಿದಾಗ ಜನರ ಮುಂದೆ ಬಂದು ನಿಂತ ಈ ದೇಶದ ಪ್ರಧಾನಿ, ಒಂದು ದಿನದ ಜನತಾ ಕಫ್ರ್ಯೂಗಾಗಿ ವಿನಂತಿಸಿಕೊಂಡಾಗ ಇಡೀ ದೇಶ ಸ್ತಬ್ಧವಾಗಿಬಿಡುತ್ತದಲ್ಲಾ ಅದು ಅಚ್ಚರಿಯಾಗುವ ಸಂಗತಿಯೇ. ಚಪ್ಪಾಳೆ ಹೊಡೆಯಿರಿ ಎಂದಾಗ ಚಪ್ಪಾಳೆ ಹೊಡೆಯುವುದು, ದೀಪ ಹಚ್ಚಿರೆಂದಾಗ ದೇಶದ ಅಷ್ಟೂಜನ ಜಾತಿ-ಮತ-ಪಂಥ-ಪಕ್ಷಗಳನ್ನು ಮರೆತು ಮನೆಯ ಹೊರಗೆ ಜಗತ್ತಿನ ಒಳಿತಿಗಾಗಿ ದೀಪ ಬೆಳಗುವುದು ಇದು ಭೂಪಟದ ಮೇಲಿನ ಅನೇಕ ರಾಷ್ಟ್ರಗಳಿಗೆ ಜೀರ್ಣವಾಗದ ತುತ್ತು. ಬೇರೆ ರಾಷ್ಟ್ರಗಳಿಗೆ ಬಿಡಿ. ಇಲ್ಲಿನ ಕಮ್ಯುನಿಸ್ಟರು ತಲೆ ಎತ್ತಲಾಗದ ಸ್ಥಿತಿ ತಲುಪಿದ್ದು ಅಂದೇ. ಭಿನ್ನ-ಭಿನ್ನ ಭಾಷೆಯ, ಸಂಸ್ಕೃತಿಯ, ವೇಷ-ಭೂಷಣಗಳ, ಊಟ-ತಿಂಡಿಗಳ ಹವ್ಯಾಸವಿರುವ ಈ ಭಾರತ ಒಂದಾಗಿ ನಿಲ್ಲುವ ಕಾಲ ಬರುವುದೇ ಇಲ್ಲ ಎಂದು ಅನೇಕ ದಶಕಗಳಿಂದ ಪಾಠ ಮಾಡುತ್ತಲೇ ಬಂದಿರುವ ಈ ಎಡಪಂಥೀಯ ಚಿಂತಕರು ದೀಪ ಬೆಳಗಲು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಭಾರತದ ಜನ ಒಟ್ಟಾಗಿದ್ದನ್ನು ನೋಡಿ ದಂಗುಬಡಿದುಹೋಗಿದ್ದಾರೆ! ಮೋದಿ ಜನರಲ್ಲಿ ಗಳಿಸಿರುವ ವಿಶ್ವಾಸ ಅಂಥದ್ದು.

ಕೈಚೆಲ್ಲಿ ಕೂರುವವರಲ್ಲ ಮೋದಿ

ಈಗಲೂ ಪ್ರತಿಪಕ್ಷಗಳು ವಲಸೆ ಕಾರ್ಮಿಕರ ವಿಚಾರದಲ್ಲಿ, ಕೋವಿಡ್‌ನ ಒಟ್ಟಾರೆ ನಿರ್ವಹಣೆಯ ವಿಚಾರದಲ್ಲಿ ಮೋದಿಯವರ ಮೇಲೆ ಗೂಬೆ ಕೂರಿಸಲು ಎಷ್ಟುಪ್ರಯತ್ನ ನಡೆಸಿದರೂ ಜನ ಮೋದಿಯವರನ್ನು ಬಿಟ್ಟುಕೊಡುವಂತೆ ಕಾಣುತ್ತಿಲ್ಲ. ಅವರ ಜನಪ್ರಿಯತೆ ಕೋವಿಡ್‌ನ ಬಳಿಕ ಮತ್ತೂ ಹೆಚ್ಚಾಗಿದೆ. ಈ ಒಂದು ವರ್ಷ ಅವರ ಪಾಲಿಗೆ ಸವಾಲಿನದ್ದೇ. ಕುಸಿಯುತ್ತಿದ್ದ ಆರ್ಥಿಕತೆ ಐದು ಟ್ರಿಲಿಯನ್‌ ಡಾಲರ್‌ಗಳ ಅವರ ಕನಸನ್ನು ಛಿದ್ರಗೊಳಿಸುತ್ತಿತ್ತು. ಅದೇ ಹೊತ್ತಿನಲ್ಲಿ ಅಪ್ಪಳಿಸಿದ ಕೊರೋನಾ ಮತ್ತಷ್ಟುಹಿನ್ನಡೆ ಉಂಟುಮಾಡಿತು. ಮುಂದಿನ ನಾಲ್ಕು ವರ್ಷಗಳು ಇದರ ಪ್ರಭಾವದಲ್ಲೇ ಕಳೆಯಬೇಕಾಗಿರುವಂಥದ್ದು. ಮೋದಿ ಕೈಚೆಲ್ಲುವಂಥವರಲ್ಲ. ಅವರು ಸಮರ್ಥ ನಾಯಕನಂತೆ ಪ್ರತಿಕ್ಷಣವೂ ಕದನಕ್ಕೆ ಸಿದ್ಧರಾಗಿ ನಿಲ್ಲುತ್ತಾರೆ, ಜೊತೆಗಾರರನ್ನು ಹುರಿದುಂಬಿಸುತ್ತಾರೆ, ಗೆದ್ದು ಬರುತ್ತಾರೆ. ಅವರ ಗೆಲುವಿನ ವಿಶ್ವಾಸವೇ ಭಾರತವನ್ನು ಅನೇಕರ ಪಾಲಿಗೆ ಜೀವಂತವಾಗಿರಿಸಿದೆ!